ಕನ್ನಡ ನಾಡು | Kannada Naadu

ಯಕ್ಷರಂಗದ ಘರಾನಾಗಳ ಅಧ್ಯಯನ ಆಗಬೇಕು ಎಂದಿದ್ದರು ಧಾರೇಶ್ವವರು..

25 Apr, 2024

         ರಂಗಮಂಚ ಎನ್ನುವುದು  ಚಲನಶೀಲವಾಗಿರಬೇಕು. ಇಲ್ಲಿ ನಿನ್ನೆಯಂತೆ ಇಂದು, ಇಂದಿನಂತೆ ನಾಳೆ ಇರಲೇ ಬಾರದು. ನಿತ್ಯವು ಹೊಸತನಕ್ಕೆ ತನ್ನನ್ನು ತಾನು ಹೊಂದಿಕೊಳ್ಳಬೇಕು. ಹಾಗಂತ ನಾವು ನಮ್ಮ ಪರಂಪರೆ, ಪದ್ಧತಿ, ಸಂಸ್ಕೃತಿ, ಸಂಸ್ಕಾರಗಳನ್ನು ಮರೆತು ವ್ಯವಹರಿಸಬಾರದು ಎಂದು ಹೇಳುತ್ತಲೇ, ಯಕ್ಷರಂಗಕ್ಕೆ ತಂತ್ರಗಾರಿಕೆಯ, ಜೊತೆ ಹೊಸತನವನ್ನು ಕೊಡುತ್ತ ಬಂದವರೇ ಯಕ್ಷ ರಂಗದ ಗಾನ ಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರರು..! 
          ನಾನು ಕಂಡ ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವ ಅವರದ್ದು. ಕಳೆದ 30 ವರ್ಷಗಳಿಂದ ನಾನು ಅವರನ್ನು ಬಲ್ಲೆ.  ಅದಕ್ಕೆ ಕಾರಣ ನನ್ನ ಆಸಕ್ತಿಯ ಕ್ಷೇತ್ರವಾದ ಯಕ್ಷಗಾನದಲ್ಲಿ ಅವರು ಮೇರು ನಕ್ಷತ್ರದಂತೆ ಮಿನುಗುತ್ತಿದ್ದರು.
ಯಕ್ಷಗಾನ ಕಲೆಯ ಉತ್ತರದ ಕೊನೆಯ ಜಿಲ್ಲೆ, ಕಾರವಾದಲ್ಲಿ, ಯಕ್ಷಗಾನ ಕಲೆ ಉಳಿಸಿ ಬೆಳೆಸಬೇಕು ಎನ್ನುವ ಮಹತ್ತ್ವ ದ ಆಸೆಯಿಂದ ಯಕ್ಷ ಸಂಘಟನೆಗಳನ್ನು ಮಾಡುತ್ತಿದ್ದ ಕಾಲವದು. ನಮ್ಮದೇ ಫ್ಯಾಮಿಲಿ ಟ್ರಸ್ಟ್‌ ಆಗಿರುವ  ʻಯಶಶ್ರೀ ಕಲಾಪ್ರತಿಭಾನ್ವೇಷಣಾ ಟ್ರಸ್ಟ್‌ʼ ಮೂಲಕ ಕಲಾವಿದರ, ವಿವಿಧ ಪ್ರತಿಭೆಗಳನ್ನು ಹುಡುಕಿ ಅವರಿಗೆ ವೇದಿಕೆಗಳನ್ನು ನೀಡುತ್ತ, ನಮ್ಮ ಕೈಲಾದ ಸಾಹಾಯವನ್ನು ಮಾಡುತ್ತಿದ್ದೆವು. ನನ್ನ ಚಿಕ್ಕಪ್ಪ ಅಮದಳ್ಳಿಯ ಶ್ರೀ ಪಾಂಡುರಂಗ ಜೋಶಿಯವರ ಅಧ್ಯಕ್ಷತೆಯ ಈ ಟ್ರಸ್ಟ್‌ನ ಮೂಲಕ, ಅವರ ಮಾರ್ಗದರ್ಶನದಲ್ಲಿ ವಿವಿಧ ಸ್ಪರ್ದೆಗಳು, ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದೆವು. ಅದರ ಹಿನ್ನೆಲೆಯಲ್ಲಿ 2000ರ ನವಂಬರ್‌ 9ರಂದು  ನಮ್ಮ ಸಂಸ್ಥೆಯಿಂದ ಹಮ್ಮಿಕೊಂಡ ʻದಶಕದ ಶ್ರೇಷ್ಟಗಾಯಕʼ   ಕಾರ್ಯಕ್ರಮಕ್ಕೆ ಪರ್ಡೂರು ಮೇಳದ ಯಕ್ಷಗಾನ ಪ್ರದರ್ಶನವನ್ನು ಮಾಡಿಸಲಾಗಿತ್ತು. ಅಮದಳ್ಳಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡೇರೆಯ ಆಟವನ್ನು ಫ್ರಿಯಾಗಿ ಪ್ರದರ್ಶನ ಮಾಡಿದ್ದು ಅದೇ ಮೊದಲು ಹಾಗೂ ಕೊನೆ ಎನ್ನಬಹುದು. 
            ಅಂದು ನಮ್ಮ ಕಾರ್ಯಕ್ರಮದಲ್ಲಿ ಗೆದ್ದವರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಿದ ಧಾರೇಶ್ವರರು ಗ್ರಾಮೀಣ ಪ್ರತಿಭೆಗಳ ಹುಡುಕಾಟ ಮಾಡುತ್ತಿದ್ದ ನಮ್ಮ ಕುಟುಂಬದ ಕಾರ್ಯದ ಬಗ್ಗೆ ಮಾತನಾಡಿದ್ದರು. ಜೊತೆಗೆ ಕಲೆಗೆ ಜಾತಿ, ನೀತಿ, ವಯಸ್ಸಿನ ಬೇಧ ಇರಲಾರದು. ಬಂಗಾರ ತಿಪ್ಪೆಯಲ್ಲಿ ಇದ್ದರೂ ಬಂಗಾರವೇ . ನಾನೆಲ್ಲಿದ್ದೇನೆ ಎಂದು ಯೋಚಿಸದೆ ತನ್ನಲ್ಲಿ ಇದ್ದ ಸಾಮರ್ಥ್ಯವನ್ನು ವರೆಗೆ ಹಚ್ಚುತ್ತಲೇ ಇರಬೇಕು ಎಂದು ಮಾರ್ಮಿಕವಾಗಿ ಮಾತನಾಡಿ ಜನರ ಮನಸ್ಸು ಗೆದ್ದಿದ್ದರು. ನಂತರ ಆ ವರ್ಷದ ಹೆಸರಾಂತ ಕಥಾನಕವಾದ ʻಶ್ರೀʼ ಅನ್ನು ಪ್ರದರ್ಶನ ಮಾಡಲಾಗಿತ್ತು. 
  ಪೆರ್ಡೂರು ಮೇಳದ ಆಟವನ್ನು ಬಯಲಾಟವಾಗಿ ಪ್ರದರ್ಶನ ನೀಡುತ್ತಿರುವುದರಿಂದ ಮೇಳದ ಕೆಲವರು ಧಾರೇಶ್ವರರಿಗೆ ಇವತ್ತು ನೀವು ರೆಸ್ಟ್‌ ಮಾಡಿ ಎಂದು ಹೇಳಿದ್ದರು. ಕಾರಣ ಅವರಿಗೆ ನೆಗಡಿಯಾಗಿದ್ದರಿಂದ ಅವರ ಧ್ವನಿಯಲ್ಲಿ ಏರು ಪೇರು ಕಾಣಿಸಿಕೊಂಡಿತ್ತು.  ಅಂದು ಪ್ರರ್ಶನವಾಗುತ್ತಿದ್ದ ʻಶ್ರೀʼ ಎನ್ನುವುದು  ಹೊಸ ಪ್ರಸಂಗ ಬೇರೆ.. ಅಲ್ಲಿಯವರೆಗೆ ಕೆಲವೇ ಕೆಲವು ಪ್ರಯೋಗಗಳನ್ನು ಮಾಡಿದ್ದರು. ಜೊತೆಗೆ ಯಕ್ಷಗಾನದಲ್ಲಿ ಹೊಸ ತಂತ್ರಗಾರಿಕೆಗಳನ್ನು ಅಳವಡಿಸಿಕೊಂಡಿದ್ದರು. ಕಿಕ್ಕಿರದ ಜನರ ಮಧ್ಯ ಪ್ರಸಂಗ ಸಾಂಗವಾಗಿಯೇ ನಡೆಯುತ್ತಿತ್ತು. ಧಾರೇಶ್ವರ ಭಾಗವತರು ಸಮಯಕ್ಕೆ ಸರಿಯಾಗಿ ವೇದಿಕೆಗೆ ಬಂದಿರಲಿಲ್ಲ. ಜನರು ರೊಚ್ಚಿಗೆದ್ದರು. ವಾಸ್ತವದಲ್ಲಿ ಆರೋಗ್ಯ ಸರಿ ಇಲ್ಲದರಿಂದ ಸ್ವಲ್ಪ ಸಮಯ ರೆಸ್ಟ್‌ ಮಾಡಿದ್ದರು. ಜನರ ಕೂಗಾಟ ಹೆಚ್ಚಾಗುತ್ತಿದ್ದಂತೆ ಮೇಳದ ಒಬ್ಬ ಪ್ರಮುಖ ಕಲಾವಿದ ವೇದಿಕೆಯಿಂದ ಜನರಿಗೆ ಬೈದು ಬಿಟ್ಟಿದ್ದರು. ಆರೋಗ್ಯ ಸರಿ ಇಲ್ಲದಿದ್ದರೆ ಅದ್ಯಾಗೆ ಹಾಡ್ತಾರೆ. ಪುಕ್ಕಟೆ ಆಟ ನೋಡುವುವವರು ಹೀಗೆ ಗಲಾಟೆ ಮಾಡಬಾರದು ಎಂದು ಹೇಳಿ ಬಿಟ್ಟದರು. 
            ಕಾರ್ಯಕ್ರಮ ಸಂಘಟಕರಾದ ನಮಗೆ, ಪ್ರೇಕ್ಷಕರನ್ನು ಸಮಾಧಾನ ಪಡೆಸುವಷ್ಟರಲ್ಲಿ ಸಾಕೊ ಸಾಕಾಯಿತು. ನಾನು ತಕ್ಷಣ ಚೌಕಿಗೆ ತೆರಳಿ ಪರಸ್ಥಿಯನ್ನು ಸುಬ್ರಹ್ಮಣ್ಯ ಧಾರೇಶ್ವರರಿಗೆ ತಿಳಿಸಿ ವೇದಿಕೆಗೆ ಬರುವಂತೆ ಮನವಿ ಮಾಡಿಕೊಂಡೆ. ಮನ್ನ ಮಾತಿಗೆ ಎರಡು ಮಾತನಾಡದೆ ವೇದಿಕೆ ಹತ್ತಿ ಕೆಲವು ಹಾಡುಗಳನ್ನು ಹೇಳಿದರು. ನಂತರ ನಾನೇ ಜನರಲ್ಲಿ ಮನವಿ ಮಾಡಿ ಕೈ ಮುಗಿದು ದಾರೇಶ್ವರರ ಆರೋಗ್ಯ ಸರಿ ಇಲ್ಲ. ನಾಳೆಯೂ ಅವರು ಹಾಡಬೇಕು ಎಂದರೆ ಇವತ್ತು ರೆಸ್ಟ್‌ ಮಾಡಲೇ ಬೇಕು. ಅದಕ್ಕೆ ನಾವೇಲ್ಲ ಸಹಕರಿಸೋಣ ಎಂದು ಕೈ ಮುಗಿದು ಬೇಡಿಕೊಂಡೆ. ಒಂದು ಹಂತದಲ್ಲಿ ಜನರು ಸಮಾಧಾನವಾದರು. ಆದರೆ ವೇದಿಕೆಯಲ್ಲಿ ಅಸಡ್ಡೆಯಾಗಿ ಮಾತನಾಡಿದ ಕಲಾವಿದ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು. ಅಂತೂ ಇಂತು ಯಕ್ಷಗಾನ ಮುಗಿಸಿ ಬೆಳಿಗ್ಗೆ ಮತ್ತೆ ಪಂಚಾಯಿತಿ ನಡೆಸಲಾಗಿತ್ತು. ಆಗಿದ್ದು ಆಯಿತು ಬಿಟ್ಟು ಬಿಡಿ ಎಂದಾಗ. ಊರ ಜನರು ಇನ್ನೂ ಮುಂದೆ ಈ ಮೇಳದವರು ನಮ್ಮೂರಿಗೆ ಬರುವುದೇ ಬೇಡ ಎಂದು ಅಲೀಖಿತ ಫರ್ಮಾನು ಹೊರಡಿಸಿಯೇ ಬಿಟ್ಟರು. 
            ಅದರಂತೆ ಮುಂದಿನ ಮೂರು ವರ್ಷಗಳ ಕಾಲ ಅಮದಳ್ಳಿ ಊರಿನಲ್ಲಿ ಪರ್ಡೂರು ಮೇಳದ ಯಕ್ಷಗಾನ ಪ್ರದರ್ಶನ ಮಾಡಲು ಅವಕಾಶವೇ ನೀಡಿರಲಿಲ್ಲ.  ಆಗ ನಾನು ರಾಜ್ಯದ ಪ್ರಮುಖ ಪತ್ರಿಕೆಯ ಉತ್ತರ ಕನ್ನಡ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕ ಧಾರೇಶ್ವರರಿಗೆ ನಾನು ಮಾತನಾಡಿಸಿದೆ. ಅವರು ತೀರಾ ಆತ್ಮಿಯಾಗಿ ಮಾತನಾಡಿ ನನ್ನಲ್ಲಿ ಒಂದು ಮನವಿ ಮಾಡಿಕೊಂಡರು. ಅಮದಳ್ಳಿಯ ಪ್ರಕರಣ ಅಲ್ಲಿಯ ಜನರು ಇನ್ನೂ ಮರೆತಿಲ್ಲ. ಅದನ್ನೊಂದು ಸರಿ ಮಾಡಿ ನಾವು ಅಲ್ಲಿ ಆಟ ಆಡಿಸುವಂತೆ ಮಾಡಲೇ ಬೇಕು. ಇದು ನಿನ್ನಿಂದ ಸಾಧ್ಯ ಏನಾದರೂ ಮಾಡು. ಎಲ್ಲಾ ಮೇಳಗಳ ಹೆಮ್ಮೆಯ ಊರು ಅದು. ವರ್ಷದಲ್ಲಿ ಒಮ್ಮೆಯಾದರೂ ಆ ಊರಲ್ಲಿ ಆಟವಾಡಿಸದಿದ್ದರೆ ಅದೇನೊ ಸಮಾಧಾನವೇ ಇರುವುದಿಲ್ಲ ಎಂದು ಹೇಳಿದ್ದರು. 
          ಯಕ್ಷಾಭಿಮಾನಿಗಳು ಇರುವ ಒಂದು ಊರನ್ನು ಕಡೆಗಾಣಿಸದೇ ಯಕ್ಷ ಪ್ರಯೋಗಗಳನ್ನು ಮಾಡಬೇಕು ಎನ್ನುವ ಅವರ ಯಕ್ಷ ತುಡಿತಕ್ಕೆ ನಾನು ಬೆರಗಾಗಿದ್ದೆ. ಆಯ್ತು ನನ್ನ ಪ್ರಯತ್ನ ಮಾಡುತ್ತೇನೆ ಎಂದು ಅಮದಳ್ಳಿಯ ಊರ ಮುಂಖಡರನ್ನು ಕಂಡು ಮಾತನಾಡಿದೆ. ಅದಕ್ಕೆ ಚಿಕ್ಕಪ್ಪ ಪಾಂಡುರಂಗ ಜೋಶಿ ಹಾಗೂ ದಿ. ನಾಗೇಶ ಗಾವಂಕರ್‌ ಅವರ ಸಹಾಯ ಪಡೆದುಕೊಂಡು ಊರಿನ ಯುವಕರನ್ನು ಸೇರಿಸಿ ಮಾತುಕತೆ ಮಾಡಲಾಗಿತ್ತು. ಆ ಸಂಧಾನ ಸಭೆಯಲ್ಲಿ ಧಾರೇಶ್ವರರು, ಮೇಳದ ಮ್ಯಾನೆಜರ್‌ ಹಾಗೂ ಇನ್ನೊಂದಿಬ್ಬರು ಬಂದ್ದಿದ್ದರು. ಅಷ್ಟೊತ್ತಿಗೆ ಊರವರ ಸಿಟ್ಟು ಮಾಯವಾಗಿತ್ತು. ಅಂದಿನಿಂದ ಇಂದಿನ ವರೆಗೆ ಅಮದಳ್ಳಿಯಲ್ಲಿ ಪೆರ್ಡೂರ ಸೇರಿದಂತೆ ಇತರ ಎಲ್ಲ ಮೇಳದ ಆಟಗಳು ಸಾಂಗವಾಗಿ ನಡೆಸುತ್ತಲೇ ಬರಲಾಗುತ್ತಿದೆ.



           ಸುಬ್ರಹ್ಮಣ್ಯ ಧಾರೇಶ್ವರರು ನಾನೂ ಯಾವಾಗಲೂ ಸಿಕ್ಕರೂ ಅಮದಳ್ಳಿಯ ಆ ಪ್ರಕರಣವನ್ನು ಮರೆಯಲು ಸಾಧ್ಯವೇ ಇಲ್ಲ ಮಾಹರಾಯ.. ಎಂದೇ ಮಾತು ಆರಂಭಿಸುತ್ತಿದ್ದರು.  ಮುಂದಿನ ದಿನಗಳಲ್ಲಿ ಅವರೊಂದಿಗಿನ ನನ್ನ ಒಡನಾಟ ಇನ್ನಷ್ಟು ಜಾಸ್ತಿಯಾಯಿತು. ಯಕ್ಷಗಾನದ ಬಗ್ಗೆ ಏನಾದರೂ ಬರೆಯಬೇಕು ಎಂದಾದಾಗ ಅವರೊಂದಿಗೆ ಚರ್ಚೆ ನಡೆಸುತ್ತಿದೆ. ಇತ್ತೀಚಿಗೆ ನಾನು ಬರೆದ ʻಮರಾಠಿ ರಂಗಭೂಮಿಗೆ ಯಕ್ಷಗಾನವೇ ಮೂಲʼ ಎನ್ನುವ ಲೇಖನ ಓದಿ ಫೊನ್‌ ಮಾಡಿದ್ದರು. ʻʻವಿಸ್ತಾರವಾದ ಅಧ್ಯಯನ  ಮಾಡಿ ಈ ವರದಿಯನ್ನು ಬರೆದಿದ್ದಿಯಾ.. ನಮ್ಮ ಯಕ್ಷಗಾನವನ್ನು ತಿಳಿದುಕೊಳ್ಳುವುದು ಇನ್ನೂ ಸಾಕಷ್ಟಿದೆ ಎನ್ನುವುದು ನಿನ್ನ ಲೇಖನದಿಂದ ಗೊತ್ತಾಗುತ್ತದೆ. ಇನ್ನೂ ಮರಾಠಿ, ಬಂಗಾಲಿ, ಪಂಜಾಬಿ ರಂಗ ಕಲೆಗೆ ಯಕ್ಷಗಾನವೇ ಮೂಲ ಎನ್ನುವುದು ನಮ್ಮ ಹೆಮ್ಮೆ. ಈ ಸಂಗತಿಯನ್ನು ಇತರ ಭಾಷೆಗಳಲ್ಲಿ ದಾಖಲಿಸಿದ್ದು ತಂದು ನಮ್ಮೆದುರಿಗೆ ಲೇಖನದ ರೂಪದಲ್ಲಿ ಇಟ್ಟಿದ್ದು ಖುಷಿಯಾಯ್ತುʼʼ ಎಂದರಿದ್ದು. 
  ಸಾಧ್ಯವಾದರೆ ಯಕ್ಷಗಾನದಲ್ಲಿ ಇರುವ ಕೆಲವು ಅಪರೂಪದ ಪದ್ಧತಿಗಳ (ಘರಾನೆಗಳ) ಬಗ್ಗೆ ಬರೆ. ಅದಕ್ಕೆ ಅವರು ನೀಡಿದ್ದ ಉದಾರಣೆ ಹಾಸಗ್ಯಾರ ಮನೆತನದ ಯಕ್ಷಗಾನ ಪದ್ಧತಿ, ಇಡುಗುಂಜಿ ಪದ್ಧತಿ, ಬಡಾ ಬಡಗು ಪದ್ಧತಿ, ಘಟ್ಟದ ಮೇಲಿನ ಪದ್ಧತಿ ಹೀಗೆ ಬೇರೆ ಬೇರೆ ಪದ್ಧತಿಗಳು ಇದ್ದುವು. ಅವೆಲ್ಲವೂ ಯಕ್ಷಗಾನವೇ ಆಗಿದ್ದರೂ ಕೆಲವು ನಡೆಗಳು ಬೇರೆಯಾಗಿದ್ದವು. ಆದರೆ ಈಗ ಎಲ್ಲವೂ ಒಂದಾಗಿ ಬಿಟ್ಟಿದೆ. ಆ ಕುರಿತು ಅಧ್ಯಯನ ನಡೆಸಿ ಒಂದು ಲೇಖನ ಮಾಡು ಎಂದು ಹೇಳಿದ್ದರು. 
          ಈಗ ಎಲ್ಲವೂ ನನ್ನ ಪಾಲಿಗೆ ನೆನಪು ಮಾತ್ರ.  ಸಿಕ್ಕಾಗ ಸಮಯ ಇತ್ತು ಎಂದರೆ ಹಳೆಯ ಕಥೆಗಳನ್ನು ಹೇಳುತ್ತಿದ್ದ ಅವರು ಗೋರ್ಕಣದಲ್ಲಿ ಭಜನೆ ಮಾಡಲು ಕಲಿತುಕೊಂಡ ಒಂದೆರಡು ರಾಗಗಳಿಂದ ಗಾನ ಮಾಂತ್ರಿಕನಾಗಿ, ಕರಾವಳಿ ಭಾಗದ ಸುಪ್ರಸಿದ್ಧ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರು ಎಂದು ಗುರುತಿಸಿಕೊಂಡಿದ್ದರು. 
       46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು ಪೆರ್ಡೂರು, ಅಮೃತೇಶ್ವರಿ ಮೇಳ, ಹಿರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿದ್ದರು. ಬಡಗು ತಿಟ್ಟಿನ ಜನಪ್ರಿಯ ಮೇಳವಾಗಿರುವ ಪೆರ್ಡೂರು ಮೇಳವೊಂದರಲ್ಲೇ 28 ವರ್ಷಗಳ ಕಾಲ ತಿರುಗಾಟ ನಡೆಸಿದ್ದರು. ಯಕ್ಷಗಾನ ರಂಗದ ಮೇರು ಭಾಗವತರಾದ ನಾರಣಪ್ಪ ಉಪ್ಪೂರರು ಯಕ್ಷರಂಗಕ್ಕೆ ನೀಡಿದ ಅಪರೂಪದ ಕೊಡುಗೆಯಾಗಿ ಯಕ್ಷಲೋಕವನ್ನು ಆಳಿದರು.
           1957ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಅವರು  ಎಲೆಕ್ಟ್ರಿಕ್ ಅಂಗಡಿ ಪ್ರಾರಂಭಿಸಿ, ನಾಟಕದ ಗೀಳು ಇರುವ ಧಾರೇಶ್ವರರು ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆ ಮಾಡುವ ಮೂಲಕ ಯಕ್ಷರಂಗದ ನಂಟು ಬೆಳೆಸಿಕೊಂಡಿದ್ದರು. ಖರ್ಚಿನ ಕಾಸಿಗಾಗಿ ಅಲ್ಲಿಇಲ್ಲಿ ಕದ್ದು ಮುಚ್ಚಿ ( ಭಾಗವತರ ಗಮನಕ್ಕೆ ಬಾರದಂತೆ) ಪ್ರಚಾರದ ಕೆಲಸವನ್ನು ಮಾಡಿದ್ದು ಉಂಟು.  
            ನಾರಣಪ್ಪ ಉಪ್ಪೂರರು ಸುಬ್ರಹ್ಮಣ್ಯ ಧಾರೇಶ್ವರ ರಂಗಸ್ಥಳಕ್ಕೆ ಕರೆತಂದ ನಂತರ ಅಲ್ಲಿಂದ ತಿರುಗಿ ಧಾರೇಶ್ವರರು ಅಲ್ಪಸಮಯದಲ್ಲೇ ಜನಪ್ರಿಯರಾದರು. ಪೌರಾಣಿಕ ಮಾತ್ರವಲ್ಲದೆ ಸಾಮಾಜಿಕ ಕಥಾಹಂದರವುಳ್ಳ ಪ್ರಸಂಗಳಲ್ಲಿ ಹೊಸತನದ ಪ್ರಯೋಗ ಮಾಡಿ ಯಶಸ್ವಿಯಾದರು. ಯಕ್ಷಗಾನದಲ್ಲಿ ಹೊಸ ಅಲೆ ಎಬ್ಬಿಸಿದ್ದ ಅಪ್ರತಿಮ ಭಾಗವತ ಕಾಳಿಂಗ ನಾವುಡರ ಅಗಲುವಿಕೆಯಿಂದ ಉಂಟಾಗಿದ್ದ ನಿರ್ವಾತವನ್ನು ತುಂಬುವಲ್ಲಿ ಸುಬ್ರಹ್ಮಣ್ಯ ಯಶಸ್ವಿಯಾಗಿದ್ದರು. ಅಚ್ಚರಿಯೆಂಬಂತೆ ಕೀರ್ತಿಯ ಉತ್ತುಂಗದಲ್ಲಿರುವಾಗಲೇ ಅವರು ನಿವೃತ್ತರಾಗಿದ್ದರು. ಪೆರ್ಡೂರು ಮೇಳದಿಂದ ನಿವೃತ್ತಿ ಪಡೆದ ಮೇಲೂ ಅತ್ಯಂತ ಬೇಡಿಕೆಯ ಭಾಗವತರಾಗಿದ್ದರು. 
          ಬಡಗು ತಿಟ್ಟು ಯಕ್ಷಗಾನದ ಖ್ಯಾತ ಭಾಗವತರಾಗಿದ್ದ ಅವರು, ಉಭಯ ತಿಟ್ಟುಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಸುಬ್ರಹ್ಮಣ್ಯ ಧಾರೇಶ್ವರರ ನೆನಪು ಯಕ್ಷರಂಗದೊಂದಿಗೆ ಅಜರಾಮರವಾಗಿ ಇರಲಿದೆ. ಅವರ ಸಂಘಟನಾ ಚತುರತೆ ಮತ್ತು ಕಲಾವಿದರನ್ನು ಬೆಳೆಸುವ ಪರಿ ಮುಂದಿನ ಎಲ್ಲ ಭಾಗವತರಿಗೆ ದಾರಿಯಾಗಲಿದೆ.



✍ ಶ್ರೀನಾಥ್ ಜೋಶಿ ಸಿದ್ದರ್
9060188081

Publisher: ಕನ್ನಡ ನಾಡು | Kannada Naadu

Login to Give your comment
Powered by