ಕನ್ನಡ ನಾಡು | Kannada Naadu

ಕಲ್ಕತ್ತಾ ಹೈಕೋರ್ಟ್‌ನ ಮಹತ್ವದ ತೀರ್ಪು...  24,640 ಬೋಧಕ ಮತ್ತು ಬೋಧಕೇತರ  ಸಿಬ್ಬಂದಿಗಳ ನೆಮಕ ಅಸಿಂಧು...

23 Apr, 2024

ಕಲ್ಕತ್ತಾ:  ಪಶ್ವಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸುಮಾರು 24,640 ಬೋಧಕ, ಬೋಧಕೇತರ ಸಿಬ್ಬಂದಿಗಳ ನೇಮಕದಲ್ಲಿ ಅಕ್ರಮವಾಗಿದೆ ಎನ್ನುವುದು ಖಾತ್ರಿಯಾಗಿರುವ ಕಾರಣಕ್ಕೆ ಕಲ್ಕತ್ತಾ ಹೈಕೋರ್ಟ್ ಎಲ್ಲ ನೇಮಕಾತಿಯನ್ನು  ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ.  ಅಲ್ಲದೆ, ಹೊಸ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ನ್ಯಾಯಪೀಠ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಈ ಆದೇಶವು ದೇಶದಲ್ಲಿ ಇತರ ಕಡೆಗಳಲ್ಲಿ ಆಗಿರುವ ಅಕ್ರಮ ನೇಮಕಾತಿ ಪ್ರಕರಣಗಳಿಗೆ ಮಾರ್ಗಸೂಚಿಯಾಗಲಿದೆ ಎನ್ನಲಾಗುತ್ತಿದೆ.  
           2016 ರ ಎಸ್‌ಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ  ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗಾಗಿ ಸುಮಾರು 24,640 ಬೋಧಕ ಮತ್ತು ಬೋಧಕೇತರ ಉದ್ಯೋಗಗಳನ್ನು ಪಶ್ವಿಮ ಬಂಗಾಳ ಸರಕಾರ ನೇಮಕ ಮಾಡಿಕೊಂಡಿತ್ತು. ಈ ಎಲ್ಲಾ ಸಿಬ್ಬಂದಿಗಳ ನೇಮಕ್ಕಾಗಿ ಲಂಚದ ವ್ಯವಹಾರ ನಡೆಸಲಾಗಿದೆ ಎನ್ನುವ ಮುಖ್ಯ ಆರೋಪದೊಂದಿಗೆ ತನಿಖೆ ಮುಂದುವರೆಸಲಾಗಿತ್ತು. ಈ ಕುರಿತು ಸಿಬಿಐ ತನಿಖೆ ನಡೆಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ತುಂಬಿದ OMR ಶೀಟ್‌ಗಳನ್ನು ಕೇಂದ್ರೀಯ ತನಿಖಾ ದಳವು ಸಂಪೂರ್ಣವಾಗಿ ಪರಿಶೀಲಿಸಿ ವಿಸ್ತ್ರತ ವರದಿಯನ್ನು ನೀಡಲಾಗಿತ್ತು. 
             ಪ್ರಸಕ್ತ ಪ್ರಕರಣದ ವಿಚಾರಣೆಯನ್ನು ನಡೆಸಿದ ಕಲ್ಕತ್ತಾ ಹೈ ಕೋರ್ಟ್‌ನ ನ್ಯಾಯಮೂರ್ತಿಗಳಾದ ʻನ್ಯಾ.ದೇಬಂಗ್ಸು ಬಸಾಕ್ ಮತ್ತು ನ್ಯಾ. ಎಂಡಿ ಶಬ್ಬರ್ ರಶೀದಿʼ ಅವರು ಇದ್ದ ವಿಭಾಗೀಯ ದ್ವಿ ಸದಸ್ಯರಿದ್ದ ಪೀಠವು 2016 ರ ಎಸ್‌ಎಸ್‌ಸಿ ನೇಮಕಾತಿಯ ಸಂಪೂರ್ಣ ವರದಿಯನ್ನು ಪರಿಶೀಲಿಸಿ, ವಿಚಾರಣೆ ನಡೆಸಿದೆ. ಜೊತೆಗೆ ತನಿಖಾ ಸಂಸ್ಥೆಗಳು ನೀಡಿದ ವರಧಿಯಲ್ಲಿ ಇರುವ ಒಎಂಆರ್ ಶೀಟ್‌ಗಳಲ್ಲಿ ಆಗಿರುವ ಅಕ್ರಮಗಳನ್ನು ಸಹ ಎತ್ತಿ ಹಿಡಿದು, 280 ಕ್ಕೂ ಹೆಚ್ಚು ಪುಟಗಳಿರುವ ತನ್ನ ಆದೇಶದಲ್ಲಿ ಎಲ್ಲ ನೇಮಕಾತಿಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.  
              ಜೊತೆಗೆ ಈ ನೇಮಕಾತಿ ಸಂಪೂರ್ಣ ಮೋಸದ ಸ್ವರೂಪದಿಂದ ಕೂಡಿದ್ದು ಇದು ಪೂರ್ಣ ಪ್ರಮಾಣದ "ಅಪರಾಧದ ಪ್ರಕ್ರಿಯೆ" ಎಂದು ಪರಿಗಣಿಸಬೇಕಾಗಿದೆ. ಆದ್ದರಿಂದ ಅಕ್ರಮವಾಗಿ ನೇಮಕಾತಿ ಪಡೆದ ಎಲ್ಲ 24,640ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ವಿರುದ್ದ ಕ್ರಿಮಿನಲ್‌ ಪ್ರಕರಣ ದಾಖಲಸಿ ಅವರು ಪಡೆದಿರುವ  ಎಲ್ಲಾ ವೇತನಗಳು ಮತ್ತು ಸೌಲಭ್ಯಗಳನ್ನು ಹಿಂದಿರುಗಿಸುವಂತೆ ಪೀಠವು ನಿರ್ದೇಶಿಸಿ ಆದೇಶ ನೀಡಿದೆ.

 
ಏನಿದು ಪ್ರಕರಣ..? 
 
            2016 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸುಮಾರು 24,640  ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕಿತ್ತು.  ಅದಕ್ಕಾಗಿ  23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಎಸ್ಎಲ್ಎಸಿ -2016 ಪರೀಕ್ಷೆಗೆ ಹಾಜರಾಗಿ ತಮ್ಮ ಅದೃಷ್ಟ ಪರೀಕ್ಷಿಸಿದ್ದರು.   ಆದರೆ ಆರಂಭಿಕ ಹಂತದಲ್ಲಿ  ಖಾಲಿ ಇದ್ದ ಹುದ್ದೆಗಳಿಗಿಂತ ಹೆಚ್ಚಾಗಿ, ಅಂದರೆ ಸುಮಾರು 25,753 ನೇಮಕಾತಿ ಪತ್ರಗಳನ್ನು ನೀಡಲಾಗಿದೆ ಎಂಬ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅನ್ಯಾಯಕ್ಕೆ ಒಳಗಾದ ಅರ್ಜಿದಾರರ ಪರ ವಕೀಲ ʻಫಿರ್ದೌಸ್ ಶಮೀಮ್ʼ ಅವರು ನ್ಯಾಯಾಲಯದಲ್ಲಿ ಪ್ರಕರಣದ ದಾಖಲಿಸಿದ್ದರು. ನೇಮಕಾತಿಗೆ ತಡೆಯಾಜ್ಷೆ ನೀಡಬೇಕು ಎಂದ ಅರ್ಜಿದಾರರ ಮನವಿಗೆ ನ್ಯಾಯಾಲಯ ಅಸ್ತು ಎಂದಿತ್ತು. ಈ ಪ್ರಕರಣವನ್ನು ಕೆಲವು ಮೇಲ್ಮನವಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.   
              ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕಲ್ಕತಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಚಿಸಿದ ವಿಭಾಗೀಯ ಪೀಠದಿಂದ  9, 10, 11 ಮತ್ತು 12 ನೇ ತರಗತಿಯ ಶಿಕ್ಷಕರ ಮತ್ತು ಗ್ರೂಪ್-ಸಿ ಮತ್ತು ಡಿ ಸಿಬ್ಬಂದಿಗಳ ನೇಮಕಾತಿಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದ ಹಲವಾರು ಅರ್ಜಿಗಳ ಹಾಗೂ ಮೇಲ್ಮನವಿಗಳ ವಿಚಾರಣೆಯನ್ನು ವಿಸ್ತೃತವಾಗಿ ಹೈಕೋರ್ಟ್‌ ನಡೆಸಿತ್ತು.  ಈ ವಿಷಯಗಳ ವಿಚಾರಣೆ ಮಾರ್ಚ್ 20 ರಂದು ಕೊನೆಗೊಂಡಿತು, ಆದರೆ ನ್ಯಾಯಪೀಠವು ಅಂತಿಮ ತೀರ್ಪನ್ನು ಕಾಯ್ದಿರಿಸಿತು.
              ಈ ಮಧ್ಯ ಎಸ್ಎಲ್ಎಸ್ಟಿ-2016ರಲ್ಲಿ ಹಾಜರಾಗಿ ಉದ್ಯೋಗ ಸಿಗದ ಕೆಲವು ಅಭ್ಯರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ʻನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯʼ ಅವರ ನೇತೃತ್ವದ ಏಕಸದಸ್ಯ ಪೀಠವು, ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ಆಗಿರುವುದನ್ನು ತನಿಖೆ ನಡೆಸುವಂತೆ ಸಿಬಿಐ ಆದೇಶಿಸಿತ್ತು. ಸಿಬಿಐ ಈ ಕುರಿತು ಸಮಗ್ರ ತನಿಖೆ ನಡೆಸಿ ತನ್ನ ವರದಿಯನ್ನು ಘನ ನ್ಯಾಯಾಯಕ್ಕೆ ನೀಡಿತ್ತು.  
                ಜೊತೆಗೆ ಇನ್ನೂ ಮಹತ್ವದ ನಡೆಯೆಂದರೆ ಹಗರಣ ನಡೆದಾಗ ಪಶ್ಚಿಮ ಬಂಗಾಳದ ಶಾಲಾ ಸೇವಾ ಆಯೋಗದಲ್ಲಿ (ಎಸ್ಎಸ್ಸಿ) ಜವಾಬ್ದಾರಿ ಸ್ಥಾನಗಳನ್ನು ಹೊಂದಿದ್ದ ಮಾಜಿ ರಾಜ್ಯ ಶಿಕ್ಷಣ ಸಚಿವ ʻಪಾರ್ಥ ಚಟರ್ಜಿʼ ಮತ್ತು  ಪಶ್ಚಿಮ ಬಂಗಾಳದ ಕೆಲವು ಹಿರಿಯ ಅಧಿಕಾರಿಗಳನ್ನು ಹಾಗೂ ಕಾರ್ಯಕರ್ತರನ್ನು ಕೇಂದ್ರ ತನಿಖಾ ಸಂಸ್ಥೆ ಬಂಧಿಸಿ ತನಿಖೆ ನಡೆಸಿತ್ತು.
 
ನ್ಯಾಯಕ್ಕಾಗಿ ಕಾದವರ ಮೊಗದಲ್ಲಿ ಸಂತಸ
 
            ಹೈಕೋರ್ಟ್ ನೀಡಿರುವ ಈ ಆದೇಶದಿಂದ ಅನ್ಯಾಯಕ್ಕೊಳಗಾದವರ ಮುಖದಲ್ಲಿ ಸಂತಸ ಕಾಣುತ್ತಿದೆ. ನ್ಯಾಯಕ್ಕಾಗಿ ನ್ಯಾಯಾಲಯರ  ಆವರಣದ ಹೊರಗೆ ಕಾಯುತ್ತಿದ್ದ ನೂರಾರು ಶಾಲಾ ಉದ್ಯೋಗಾಕಾಂಕ್ಷಿಗಳು ಈಗ ಸಂತೋಷ ಪಡುತ್ತಿದ್ದಾರೆ.  ಇನ್ನೂ ಕೆಲವರು ತಮ್ಮ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ ಎಂದು  ಕಣ್ಣೀರು ಹಾಕುತ್ತಿದ್ದಾರೆ.
          ʻʻನಾವು ಈ ದಿನಕ್ಕಾಗಿ  ಕಾಯುತ್ತಿದ್ದೆವು.  ನಾವೆಲ್ಲಾ ಈ ಅಕ್ರಮ ವಿರೋಧಿಸಿ  ಬೀದಿ ಬೀದಿಗಳಲ್ಲಿ ನಾಯ್ಯಕ್ಕಾಗಿ  ಅನೇಕ ವರ್ಷಗಳ ಹೋರಾಟ ನಡೆಸಿದ್ದೇವೆ.  ಅಂತಿಮವಾಗಿ ನಮಗೆ ನ್ಯಾಯ ಸಿಕ್ಕಿದೆʼʼ ಎನ್ನುವ ಅಭಿಪ್ರಾಯವನ್ನು ಅನ್ಯಾಯಕ್ಕೊಳಗಾದವರು ವ್ಯಕ್ತಪಡಿಸುತ್ತಿದ್ದಾರೆ. 
            ʻʻ ಈ ನೇಮಕಾತಿ ಸಂಪೂರ್ಣ ಮೋಸದಿಂದ ಕೂಡಿದೆ ಎನ್ನುವ ಸತ್ಯವನ್ನು ಹೈ ಕೋರ್ಟ್‌ ಎತ್ತಿಹಿಡಿದಿದೆ. ಜೊತೆಗೆ  ಅಕ್ರಮವಾಗಿ ನೇಮಕಾತಿ ಪಡೆದ ಎಲ್ಲ 24,640ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ವಿರುದ್ದ ಕ್ರಿಮಿನಲ್‌ ಪ್ರಕರಣ ದಾಖಲಸಿ ಅವರು ಪಡೆದಿರುವ  ಎಲ್ಲಾ ವೇತನಗಳು ಮತ್ತು ಸೌಲತ್ತುಗಳನ್ನು ಹಿಂದಿರುಗಿಸುವಂತೆ ಪೀಠವು ನಿರ್ದೇಶಿಸಿ ಆದೇಶ ನೀಡಿರುವುದನ್ನು ಸ್ವಾಗತಿಸುತ್ತೇವೆʼʼ ಎಂದು ಹೇಳಿದ್ದಾರೆ.
 

Publisher: ಕನ್ನಡ ನಾಡು | Kannada Naadu

Login to Give your comment
Powered by