ಕನ್ನಡ ನಾಡು | Kannada Naadu

ಅನ್ನದ ಭಾಷೆಯಾಗುವತ್ತ ಕನ್ನಡ.. 

17 Apr, 2024


ಬೆಂಗಳೂರು : ಕನ್ನಡ ಭಾಷೆ ಅನ್ನದ ಭಾಷೆಯಾಗಬೇಕು ಎನ್ನುವ ಕನಸು ನನಸು ಮಾಡುವ ಮೊದಲ ಪ್ರಯತ್ನಕ್ಕೆ ಶ್ರೀಕಾರ ದಕ್ಕಿದೆ. ತಾಂತ್ರಿಕ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಇಂಜಿನಿಯರಿಂಗ್ ತರಗತಿಗಳ ಬೋಧನಾ ಪ್ರಕ್ರಿಯೆಗೆ ಕನ್ನಡವನ್ನು ಬಳಸುವಂತೆ ಎಐಸಿಟಿಇ ನಿರ್ದೇಶನ ನೀಡಿದೆ. ಅವಶ್ಯಕತೆ ಇದ್ದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಾದೇಶಿಕ ಭಾಷೆಗಳಲ್ಲಿಯೇ ಚರ್ಚೆ ಮಾಡಬೇಕು, ಶೈಕ್ಷಣಿಕ ಸಂವಾದ ನಡೆಸಬೇಕು ಎಂದು ಸುತ್ತೋಲೆ ಹೊರಡಿಸಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆ ಇತ್ತೀಚೆಗೆ ಬಿಇ ಪ್ರಶ್ನೆ ಪತ್ರಿಕೆಗಳನ್ನು ಕನ್ನಡದಲ್ಲಿಯೂ ನೀಡುವಂತೆ ಕನ್ನಡ ಪರ ಹೋರಾಟಗಾರರು ಸಂಘ ಸಂಸ್ಥೆಗಳು ಸೇರಿ ಸರಕಾರಕ್ಕೆ ಆಗ್ರಹ ಮಾಡುತ್ತಲೆ ಇದ್ದವು. ಪರಿಣಾಮ ಈಗ ವಿವಿಗಳಿಗೆ, ಕಾಲೇಜುಗಳಿಗೆ ಕನ್ನಡ ಬಳಕೆ ಮಾಡಬೇಕು ಎಂಬ ನಿರ್ದೇಶನ ನೀಡಲಾಗಿದೆ. ಪ್ರಸ್ತುತ ನಿರ್ದೇಶನ ನೀಡಿ ಹೊರಡಿಸಿರುವ  ಸುತ್ತೋಲೆ ಅತೀ ಮಹತ್ವದ್ದು ಎಂದು ಕನ್ನಡಿಗರು ಅಭಿಪ್ರಾಯ ಪಡುತ್ತಿದ್ದಾರೆ.  


ಎನ್‌ ಇ ಪಿ 2020 ರಿಂದ ಪ್ರಾದೇಶಿಕ  ಭಾಷೆಗಳಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಶಿಕ್ಷಣದಲ್ಲಿ ಮಾಧ್ಯಮವಾಗಿ ಪ್ರಾದೇಶಿಕ ಭಾಷೆಗಳನ್ನು ಬಳಸಲು ಉತ್ತೇಜನ ನೀಡುತ್ತದೆ. ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳ ಮಾತೃಭಾಷೆಯಲ್ಲಿ ಒದಗಿಸಲು ಶ್ರಮಿಸುವಂತೆ ಸೂಚನೆ ನೀಡಲಾಗಿದೆ. ಇದೇ ನೀತಿಯ ಅನುಷ್ಠಾನದ ಭಾಗವಾಗಿಯೇ ಎಐಸಿಟಿಇ ದೇಶದ ಕೆಲವು ರಾಜ್ಯಗಳ ಭಾಷೆಯಲ್ಲಿ ಶಿಕ್ಷಣ ನೀಡಲು ಅನುಮತಿ ನೀಡಿದೆ. ಇದಕ್ಕಾಗಿ ಹೆಚ್ಚುವರಿ ಸೀಟುಗಳನ್ನು ಮಂಜೂರು ಮಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ತಾಂತ್ರಿಕ ಶಿಕ್ಷಣ ಕೋರ್ಸ್‌ಗಳ ಪರೀಕ್ಷೆಗೆ ಇಂಗ್ಲಿಷ್ ಜೊತೆಗೆ ಕನ್ನಡದಲ್ಲೂ ಪ್ರಶ್ನೆ ಪತ್ರಿಕೆಗಳನ್ನು ನೀಡಬೇಕು ಎಂದಿತ್ತು. ಇದರ ಹಿಂದೆಯೇ ಈ ಒಂದು ಆದೇಶ ಪ್ರಕಟಿಸಲಾಗಿದೆ.

ವೈವಿಧ್ಯಮಯ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯ ಭಾರತದಲ್ಲಿ ಭಾಷೆಯು ಸಂವಹನ ಇತರ ಸಂವಹನ ಸಾಧನಕ್ಕಿಂತ ಮಿಗಿಲಾದುದು.  ಅದು ನಮ್ಮ ಅಸ್ತಿತ್ವದ ಕುರುಹು. ಸ್ವಾಭಿಮಾನದಿಂದ ತಮ್ಮ ತಮ್ಮ  ಸಮುದಾಯದೊಂದಿಗೆ ಬೆಸೆದು , ಬೆರೆತುಕೊಳ್ಳುವ ಮಹತ್ವವೂ ತಾಯಿ ಭಾಷೆಗೆ ಇದೆ. 

       ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಹಾಗೂ ಹಲವು ಉಪಕ್ರಮಗಳಿಂದಾಗಿ ಕಲಿಕೆ ಹಾಗೂ ಬೋಧನೆಯಲ್ಲಿ ಮಾತೃಭಾಷೆಯ ಬಳಕೆ ಮಾಡಲಿದೆ. ಅದಕ್ಕಾಗಿ  ಶೈಕ್ಷಣಿಕ ಸಾಮಾಗ್ರಿಗಳನ್ನು ಸಿದ್ಧಪಡಿಸಲು, ಶಿಕ್ಷಣವನ್ನು ಕ್ರಾಂತಿಕಾರಿಯಾದ  ವಿಧಾನವೆಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆ ಅಭಿಪ್ರಾಯ ಪಟ್ಟಿದೆ. ಬೇರೆ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದದ ಕೋಟ್ಯಂತರ ಜನರು ಸಹ ಕಲಿಕೆಯಲ್ಲಿ ಪ್ರಾವಿಣ್ಯತೆ ಹೊಂದಬೇಕು. ಜೊತೆ ಈ ಬದಲಾವಣೆಯಿಂದ ಭಾರತದ ಪ್ರಾದೇಶಿಕ ಭಾಷೆಗಳು ಸಂವಹನದ ಸಾಧನಗಳಾಗಿವೆ ಎಂಬುದನ್ನ ಒತ್ತಿ ಹೇಳಿದೆ.

ಮಾತೃಭಾಷೆಯಲ್ಲಿ ಶಿಕ್ಷಣ ಮತ್ತು ಕಲಿಕೆ ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ, ಎಂಬುದು ವಿವಿಧ ಆಯಾಮಗಳಿಂದ ಸಾಬೀತು ಮಾಡಲಾಗಿದೆ. ತಾವು ಹೆಚ್ಚು ಅರ್ಥಮಾಡಿಕೊಳ್ಳಬಲ್ಲ ಭಾಷೆಯಲ್ಲಿ ಬೋಧಿಸಿದಾಗ ಮಕ್ಕಳು ಇನ್ನಷ್ಟು ಉತ್ತಮವಾಗಿ ಕಲಿಯುತ್ತಾರೆ ಎಂಬ ವಾಸ್ತವಿಕತೆಗೆ ಹತ್ತಿರವಾದ ವಾದವನ್ನು ಸಂಸ್ಥೆಗಳು ಮಂಡಿಸಿದ್ದವು. 


ಭಾರತೀಯ ಭಾಷೆಗಳಲ್ಲಿ ಬೋಧಿಸುವುದರಿಂದ ಶಿಕ್ಷಣವು ದ್ವಂದ್ವ ರಹಿತವಾಗಿರುತ್ತದೆ. ಅಲ್ಲದೇ ಕಲಿಕೆ ಎನ್ನುವುದು ತನ್ನ ತನದೊಂದಿಗೆ ,  ಸಾಂಸ್ಕೃತಿಕವಾಗಿ ಒಳಗೊಂಡಂತಾಗುತ್ತದೆ. ಎಲ್ಲ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆ ಕಾಪಾಡಿಕೊಳ್ಳಬಹುದು. ವಿದ್ಯಾರ್ಥಿ ಕೇಂದ್ರಿತ ಈ ಕ್ರಮದಿಂದಾಗಿ ಕಲಿಕಾರ್ಥಿಗಳು ಬೋಧಕರ ನಡುವೆ ಮಾಹಿತಿಯ ವಿನಿಮಯ ಸುಲಭವಾಗುತ್ತದೆ. ತಜ್ಞರ ನಡುವೆಯೂ ಸಂವಹನ ಸುಲಭವಾಗುತ್ತದೆ. ಈ ಕಾರಣದಿಂದಾಗಿ ವಿದ್ಯಾರ್ಥಿಗಳೊಂದಿಗೆ ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸುವಂತೆ ಬೋಧಕ ವರ್ಗಕ್ಕೆ ಸೂಚಿಸಬೇಕೆಂದು ಎಐಸಿಟಿಇ ಹೊರಡಿಸಿರುವ ಸುತ್ತೋಲೆಯ ತಾತ್ಪರ್ಯವಾಗಿದೆ. 
     ಪ್ರಸ್ತುತ ಈ ಆದೇಶವನ್ನು ತಾಂತ್ರಿಕ ವಿಶ್ವವಿದ್ಯಾಲಯಗಳ ಕುಲಪತಿಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಹಾಗೂ ಸ್ವಾಯತ್ತ ಸಂಸ್ಥೆಗಳ ನಿರ್ದೇಶಕರಿಗೆ ನೀಡಲಾಗಿದೆ. ಇದರಿಂದಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆ (AICTE) ಯ ಕ್ರಮವನ್ನು ಸಾರ್ವತ್ರಿಕ ಸ್ವಾಗತಕ್ಕೆಕಾರಣವಾಗಿದೆ.

ಆರಂಭದಿಂದಲೂ  ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಇಂಗ್ಲಿಷ್ ಜೊತೆಗೆ ಕನ್ನಡದಲ್ಲೂ ಒದಗಿಸಬೇಕು ಎಂದು ಕನ್ನಡಪರ ಹೊರಾಟಗಾರರು ಅಗ್ರಹಿಸುತ್ತಲೇ ಇದ್ದರು. ಇನ್ನು ಮುಂದೆ  ಶಿಕ್ಷಣ ಸಂಸ್ಥೆಗಳು, ಕಾಲೇಜುಗಳು, ವಿವಿಗಳು ಕನ್ನಡಕ್ಕೆ ಆಧ್ಯತೆ ನೀಡುವ ನಿರ್ದೇಶನವನ್ನು ಪಾಲಿಸಬೇಕಾಗಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by