ಬಸ್ ಕಂದಕಕ್ಕೆ ಉರುಳಿ 12 ಮಂದಿ ದುರ್ಮರಣ : ಪ್ರಧಾನಿ ಸೇರಿದಂತೆ ಗಣ್ಯರ ಸಂತಾಪ
10 Apr, 2024
ನವದೆಹಲಿ : ಚಲಿಸುತ್ತಿದ್ದ ಬಸ್‌ವೊಂದು ಕಂದಕಕ್ಕೆ ಉರುಳಿದ ಪರಿಣಾಮ ಖಾಸಗಿ ಕಂಪನಿಯ ಸುಮಾರು 12 ಮಂದಿ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ. ಒಟ್ಟು 14 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಮಂಗಳವಾರ ರಾತ್ರಿ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಕುಮ್ಹಾರಿ ಪ್ರದೇಶದಲ್ಲಿ ಬಸ್ ಅಪಘಾತ ಘಟನೆ ಜರುಗಿದೆ. ಈ ಬಸ್‌ನಲ್ಲಿ ಎಂದಿನಂತೆ ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಪ್ರಯಾಣಿಸುತ್ತಿದ್ದರು. ಬಸ್ ತುಂಬಾ ಕಾರ್ಮಿಕರೇ ತುಂಬಿ ಹೋಗಿದ್ದರು ಎಂದು ದುರ್ಗ್ ಜಿಲ್ಲಾಧಿಕಾರಿಗಳಾದ ರಿಚಾ ಪ್ರಕಾಶ್ ಚೌಧರಿ ಮಾಹಿತಿ ನೀಡಿದ್ದಾರೆ.
ಈ ಬಸ್ ಹೊರಡುವಾಗಿ ಕುಮ್ಹಾರಿ ಪ್ರದೇಶದಲ್ಲಿ 'ಮುರುಂ' ಮಣ್ಣಿನ ಗಣಿಯ ಹೊಂಡಕ್ಕೆ ಬಿದ್ದಿದೆ. ಪರಿಣಾಮ 12 ಕಾರ್ಮಿಕರು ಮೃತಪಟ್ಟಿದ್ದಾರೆ. 14 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಯಪುರದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದರ ಬಗ್ಗೆ ಪಿಟಿಐ ವರದಿ ಮಾಡಿದೆ.

ಗಾಯಗೊಂಡ ಎಲ್ಲ ಪ್ರಯಾಣಿಕರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಎಲ್ಲರಿಗೂ ಸಾಧ್ಯವಾದಷ್ಟು ಉತ್ತಮ ಆರೈಕೆ ಒದಗಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿಗಳಿಗೆ ವೈದ್ಯರು ಭರವಸೆ ನೀಡಿದ್ದಾರೆ.
ಈ ಬಸ್ ಅವಘಡ ಕುರಿತು ಪ್ರತಿಕ್ರಿಯಿಸಿರುವ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಖಾಸಗಿ ಸಂಸ್ಥೆಯ ಉದ್ಯೋಗಿಗಳಿಂದ ತುಂಬಿ ತುಳುಕುತ್ತಿದ್ದ ಬಸ್, ದುರ್ಗ್‌ನ ಕುಮ್ಹಾರಿ ಬಳಿ ಅಪಘಾತಕ್ಕೀಡಾದ ಸುದ್ದಿ ಅತೀವ ನೋವು ತಂದಿದೆ ಎಂದು ಕಂಬನಿ ಮಿಡಿದ್ದಾರೆ. ಅಗಲಿದ ಆತ್ಮಗಳಿಗೆ ದೇವರು ಶಾಂತಿ ಕರುಣಿಸಲಿ. ದುಃಖತಪ್ತ ಕುಟುಂಬಗಳಿಗೆ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ. ಗಾಯಗೊಂಡ ನೌಕರರ ಚಿಕಿತ್ಸೆಗೆ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಗಾಯಾಳು ಶೀಘ್ರ ಚೇತರಿಸಿಕೊಳ್ಳಲಿ ಎಂದಿದ್ದಾರೆ.
ಛತ್ತೀಸ್‌ಗಢ ರಾಜ್ಯದ ದುರ್ಗ್ ಜಿಲ್ಲೆ ವ್ಯಾಪ್ತಿಯಲ್ಲಿನ ಈ ಘಟನೆ ದೇಶವ್ಯಾಪ್ತಿ ಸುದ್ದಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದೌಪದಿ ಮುರ್ಮು ಅವರು ಸಂತಾಪ ಸೂಚಿಸಿದ್ದಾರೆ. ಇಲ್ಲಿ ಸಂಭವಿಸಿದ ಬಸ್ ಅಪಘಾತ ಅತ್ಯಂತ ದುಃಖಕರವಾಗಿದೆ. ಘಟನೆಯಲ್ಲಿ ಸಾವಿಗೀಡಾದ ಮೃತರಿಗೆ ನನ್ನ ಸಂತಾಪಗಳು. ಗಾಯಗೊಂಡವು ಆದಷ್ಟು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಛತ್ತೀಸ್‌ಗಢ ಸರ್ಕಾರದ ಮೇಲ್ವಿಚಾರಣೆಯಲ್ಲಿ ಸ್ಥಳೀಯ ಆಡಳಿತದಿಂದ ಸಂತ್ರಸ್ತರಿಗೆ ಸಾಧ್ಯವಿರುವ ಅಗತ್ಯ ಎಲ್ಲ ನೆರವು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ (ಎಕ್ಸ್) ಮೂಲಕ ಭರವಸೆ ವ್ಯಕ್ತಪಡಿಸಿದ್ದಾರೆ.
Publisher: ಕನ್ನಡ ನಾಡು | Kannada Naadu