ಬೆಂಗಳೂರು : ಮುನುಷ್ಯ ಬದುಕುವುದಕ್ಕೆ ಕೆಲವು ಮೂಲಭೂತ ಸೌಕರ್ಯಗಳ ಅನಿವಾರ್ಯತೆ ಇದೆ. ಅವುಗಳ ಪೈಕಿ ಗಾಳಿ, ನೀರು, ಬೆಳಕು ಇತ್ಯಾದಿ. ಇವೆಲ್ಲವನ್ನೂನಾವು ಪ್ರಕೃತಿಯಿಂದ ಖರ್ಚಿಲ್ಲದೆ ವ್ಯವಸ್ಥಿತವಾಗಿ ಪಡೆದುಕೊಳ್ಳುತ್ತಿದ್ದೇವೆ. ಆದರೆ ಪರಿಸ್ಥಿತಿ ಈಗ ಬದಲಾಗಿದೆ. ಪ್ರಾಕೃತಿಕವಾಗಿ ಸಿಗುವ ಮೂಲಭೂತ ಸೌಕರ್ಯಗಳನ್ನು ಬಳಸಿಕೊಳ್ಳಬೇಕು ಎಂದರೆ ಅದಕ್ಕೊಂದು ಇಂಧನ ಮೂಲದ ಅವಶ್ಯಕತೆ ಇದೆ. ಆ ಇಂಧನ ವಿದ್ಯುತ್, ತೈಲ, ಕಲ್ಲಿದ್ದಲ್ಲು , ಸೌರ ಶಕ್ತಿ ಹೀಗೆ ವಿವಿಧ ರೂಪಗಳಲ್ಲಿ ಬಳಸಿಕೊಳ್ಳುತ್ತಿದ್ದೆವೆ. ಪರಿಣಾಮ ಇಂದು ಇಂಧನ ಕ್ಷೇತ್ರವು ದೊಡ್ಡ ಉದ್ಯಮವಾಗಿ ಗುರುತಿಸಿಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ.
ʻಕೂತು ಉಂಡರೆ ಕುಡಿಕೆ ಹೊನ್ನು ಸಾಲದುʼ ಎನ್ನುವಂತೆ ಪ್ರಾಕೃತಿಕವಾಗಿ ಸಿಗುವ ಇಂಧನಗಳ ನಿರಂತರ ಬಳಕೆ, ಒಂದಲ್ಲ ಒಂದು ದಿನ ಕೊನೆಯಾಗಲೇ ಬೇಕಲ್ಲ..! ಇಂಧನ ಇಲ್ಲದೆ ಮನುಷ್ಯ ಬದುಕು ನಡೆಸಲು ಸಾಧ್ಯವೇ ಇಲ್ಲ. ಭೂಮಿಯ ಮೇಲೆ ಇರುವಂತಹ ಪೆಟ್ರೋಲ್, ಡೀಸೆಲ್, ಕಲ್ಲಿದ್ದಲು ಸೇರಿದಂತೆ ಹಲವು ರೀತಿಯ ಇಂಧನ ಮೂಲಗಳು ಕೊನೆಯ ಹಂತ ತಲುಪುತ್ತಿವೆ. ಪರಿಸ್ಥಿತಿ ಹೀಗಿರುವಾಗ ನವೀಕರಿಸಬಹುದಾದ ಇಂಧನಗಳ ಮೊರೆ ಹೊಗುವುದು ಅನಿವಾರ್ಯವಾಗಿದೆ. ಇಂಥಹ ಅನಿವಾರ್ಯತೆಯನ್ನು ಅದಾನಿ ಸಮೂಹ ಸಂಸ್ಥೆಗಳು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಿವೆ.
ದೇಶದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪಾರುಪತ್ಯ ಸಾಧಿಸಲು ಅದಾನಿ ಸಮೂಹ ಸಂಸ್ಥೆ ಚಿಂತನೆ ನಡೆಸುತ್ತಿದೆ. ಹೀಗಾಗಿ ಭಾರಿ ಪ್ರಮಾಣದ ಹೂಡಿಕೆಗೆ ಸಿದ್ಧತೆ ನಡೆಸಲಾಗಿದೆ. ಇದರ ಜೊತೆ ಅದಾನಿ ಸಮೂಹ ತನ್ನ ಒಡೆತನದ ಸೌರ ಮತ್ತು ಪವನ ವಿದ್ಯುತ್ ಘಟಕಗಳ ಸಾಮರ್ಥ್ಯ ಹೆಚ್ಚಿಸಲು ನಿರ್ಧರಿಸಿದೆ. ಈ ಕಾರಣಕ್ಕೆ ಮುಂದಿನ 7 ವರ್ಷದವರೆಗೆ ಒಟ್ಟು 2.3 ಲಕ್ಷ ಕೋಟಿ ರೂ. ಬಂಡವಾಳ ಹೂಡಲು ತೀರ್ಮಾನಿಸಿದೆ ಎನ್ನಲಾಗುತ್ತಿದೆ. ಭಾರತದ ಕೈಗಾರಿಕೆಗಳ ಬೆಳವಣಿಗೆ ಅತಿ ವೇಗವಾಗಿ ನಡೆಯುತ್ತಿದ್ದು, ಜನಸಂಖ್ಯೆಯೂ ಕೂಡ ಹೆಚ್ಚಾಗುತ್ತಿರುವುದು ಅದಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನವೀಕರಿಸ ಬಹುದಾದ ಇಂಧನ ಕ್ಷೇತ್ರದ ಬೆಳವಣಿಗೆ ಅನಿವಾರ್ಯ ಎನ್ನುವುದನ್ನು ಅರಿತು ಈ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.
ಅದಾನಿ ಸಮೂಹ ಸಂಸ್ಥೆಯ ಮುಂದಿನ ಹೆಜ್ಜೆ:
ಈಗಾಗಲೇ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಅನ್ನು ಪ್ರಾರಂಭಿಸುವ ಮೂಲಕ ಭಾರತದ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಸಂಸ್ಥೆಯನ್ನು ಸ್ಥಾಪಿಸಿದೆ. ಈ ಮೂಲಕ ತನ್ನ ಸಾಮರ್ಥ್ಯ ಮತ್ತು ಕಾರ್ಯ ದಕ್ಷತೆಯನ್ನು ಖಾತ್ರಿಪಡಿಸಿದೆ. ಗುಜರಾತ್ನ ಕಛ್ ಪ್ರದೇಶದ ಖಾವ್ಡಾದಲ್ಲಿ ಸೌರ ಹಾಗೂ ಪವನ ವಿದ್ಯುತ್ ಘಟಕವನ್ನು ಸಂಸ್ಥೆ ನಡೆಸುತ್ತಿದೆ. ಪ್ರಸ್ತುತ 2 ಗೀಗಾವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಈ ಸಾಮರ್ಥ್ಯವನ್ನ 30 ಗೀಗಾವಾಟ್ ಸಾಮರ್ಥ್ಯಕ್ಕೆ ಹೆಚ್ಚಿಸಲು ಸಂಸ್ಥೆ ನಿರ್ಧರಿಸಿದೆ. ಅದಕ್ಕಾಗಿ 1.5 ಲಕ್ಷ ಕೋಟಿ ರೂ. ಹೂಡಿಕೆಗೆ ಅದಾನಿ ಗ್ರೂಪ್ ಮುಂದಾಗಿದೆ.
ದೇಶದ ವಿವಿದೆಡೆ ಹೂಡಿಕೆಗೆ ಚಿಂತನೆ:
ಅದಾನಿ ಗ್ರೂಪ್, ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕಾಗಿ ದೇಶದ ವಿವಧ ಕಡೆಗಳಲ್ಲಿ ಸೂಮಾರು 50 ಸಾವಿರ ಕೋಟಿ ರೂ. ಬಂಡವಾಳ ಹೂಡಲು ತಿರ್ಮಾನಿಸಿದೆ. ಅವಶ್ಯಕತೆ ಇರುವಲ್ಲಿ 6 ರಿಂದ 7 ಗೀಗಾವಾಟ್ ಸಾಮರ್ಥ್ಯದ ಘಟಕಗಳ ಸ್ಥಾಪನೆಗೂ ಸಂಸ್ಥೆ ನಿರ್ಧಾರ ಕೈಗೊಂಡಿದೆ. ಅದಾನಿ ನ್ಯೂ ಇಂಡಸ್ಟ್ರೀಸ್ ಲಿಮಿಟೆಡ್, ಅದಾನಿ ಎಂಟರ್ಪ್ರೈಸಸ್ಗೆ ಆ ಎಲ್ಲಾ ಘಟಕಗಳು ಸೇರಲಿವೆ. ಇನ್ನು ಗುಜರಾತ್ನ ಮುಂದ್ರಾದಲ್ಲಿ ಸೌರ ಫಲಕಗಳು ಹಾಗೂ ವಿಂಡ್ ಟರ್ಬೈನ್ ತಯಾರಿಸುತ್ತಿದ್ದು ಇದರ ಸಾಮರ್ಥ್ಯದ ವಿಸ್ತರಣೆಗಾಗಿ 30 ಸಾವಿರ ಕೋಟಿ ರೂಪಾಯಿಗಳನ್ನು ಸಂಸ್ಥೆ ಹೂಡಿಕೆ ಮಾಡಲಿದೆ ಎನ್ನಲಾಗುತ್ತಿದೆ.
ಒಟ್ಟಾರೆಯಾಗಿ ದೇಶದ ಅಭಿವೃದ್ಧಿಗೆ ನವೀಕರಿಸಬಹುದಾದ ಇಂಧನ ಮೂಲ ಅನಿವಾರ್ಯ. ಈ ಸತ್ಯ ಅರಿತ ಅದಾನಿ ಗ್ರೂಪ್ ಇಂಧನ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಮೂಲಕ ದೇಶದಲ್ಲಿ ಹೊಸ ಔದ್ಯೋಗಿಕ ಕ್ರಾಂತಿಗೆ ಕಾರಣವಾಗಲಿದೆ. ಮುಂದಿನ ದಿನಗಳಲ್ಲಿ ನವೀಕರಿಸಬಹುದಾದ ಇಂಧನಕ್ಕೆ ಪ್ರಪಂಚ ಬದಲಾಗುವ ಕಾರಣ ಆ ಕ್ಷೇತ್ರದ ಅಭಿವೃದ್ಧಿಗೆ ವಿಶ್ವದ ಮುಂದುವರಿದ ದೇಶಗಳು ಸಾಕಷ್ಟು ಒಲವು ನೀಡುತ್ತಿವೆ. ಈ ಹಿನ್ನೆಲೆಯಲ್ಲಿಯೇ ಇಂಥದೊಂದು ಮಹತ್ವದ ನಿರ್ಧಾರಕ್ಕೆ ಅದಾನಿ ಸಮೂಹ ಸಂಸ್ಥೆಗಳು ಬಂದಿದೆ ಎನ್ನುವುದನ್ನು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.
Publisher: ಕನ್ನಡ ನಾಡು | Kannada Naadu