ಧಾರವಾಡ : ಸದ್ಯ ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಹಲವು ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳಾಗಿ ಘೋಷಿಸಲಾಗಿದೆ. ಧಾರವಾಡ ಜಿಲ್ಲೆ ಕೂಡ ಸಂಪೂರ್ಣ ಬರಪೀಡಿತ ಜಿಲ್ಲೆಯಾಗಿದ್ದು, ಗ್ರಾಮೀಣ ಭಾಗದ ಜನರಿಗೆ, ರೈತರಿಗೆ ಬರಗಾಲದ ಈ ಸಂದರ್ಭದಲ್ಲಿ ನರೇಗಾ ಯೋಜನೆ ಅವರ ಬದುಕಿಗೆ ಆಸರೆ ಆಗಿದೆ.
ಧಾರವಾಡ ಜಿಲ್ಲೆಯಲ್ಲಿ ಕೂಲಿ ಕೇಳಿ ಬರುವ ಎಲ್ಲಿರಿಗೂ ಅವರ ಊರಲ್ಲಿಯೇ ನರೇಗಾ ಯೋಜನೆ ಅಡಿಯಲ್ಲಿ ಉದ್ಯೋಗ ನೀಡಲಾಗುತ್ತಿದ್ದು, ಕಳೆದ ವರ್ಷದ ಗುರಿಯಲ್ಲಿ ಶೇ. 90 ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕಿ ಅಧಿಕಾರಿ ಸ್ವರೂಪ ಟಿ.ಕೆ. ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ, ಕೃಷಿಹೊಂಡ, ಕೃಷಿ ಬದು ನಿರ್ಮಾಣದ ಮೂಲಕ ಜಲಸಂರಕ್ಷಣೆ ಹಾಗೂ ರೈತರಿಗೆ ಸಂಪ್ರಾದಾಯಿಕ ಬೆಳೆಗಳ ಬದಲಿಗೆ ಪರ್ಯಾಯವಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಿ, ತೋಟಗಾರಿಕಾ ಬೆಳೆಗಳ ವಿಸ್ತರಣೆಗೆ ಆದ್ಯತೆಯನ್ನು ನೀಡಲಾಗಿದೆ ಎಂದಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಒಟ್ಟು 1.69 ಲಕ್ಷ ಉದ್ಯೋಗ ಚೀಟಿಗಳಿವೆ. ಇದರಲ್ಲಿ ಸುಮಾರು 81 ಸಾವಿರ ಉದ್ಯೋಗ ಚೀಟಿಗಳಿದ್ದು, 1.56 ಲಕ್ಷ ಜನ ಕೆಲಸಗಾರರಿದ್ದಾರೆ. 4.03 ಲಕ್ಷ ಕಾಮಗಾರಿಗಳನ್ನು ಗುರುತಿಸಲಾಗಿದೆ. 2023-24 ನೇ ಸಾಲಿನ ಆರ್ಥಿಕ ವರ್ಷದಲ್ಲಿ 23.34 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿತ್ತು. ಇದರಲ್ಲಿ ಶೇ. 89.77 ರಷ್ಟು ಗುರಿ ಸಾಧಿಸಲಾಗಿದೆ. ಮತ್ತು ಒಟ್ಟು 449 ಕುಟುಂಬಗಳಲ್ಲಿ 100 ಮಾನವ ದಿನಗಳ ಗುರಿಯನ್ನು ಸಾಧಿಸಿವೆ ಎಂದು ಮಾಹಿತಿ ನೀಡಿದ್ದಾರೆ.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ನಿರಂತರವಾಗಿ ಉದ್ಯೋಗ ಒದಗಿಸಲಾಗುತ್ತಿದೆ. ಕೂಲಿ ಆಧಾರಿತ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಂಡು ಹೆಚ್ಚಿನ ಜನರಿಗೆ ಸ್ಥಳಿಯವಾಗಿ ಉದ್ಯೋಗ ನೀಡಲಾಗುತ್ತಿದೆ. ವಿಶೇಷಚೇತನರು, ಮಹಿಳೆಯರು, ಹಿರಿಯ ನಾಗರೀಕರು, ಮತ್ತು ದುರ್ಬಲ ವರ್ಗದವರಿಗೆ ಆದ್ಯತೆ ಮೇರೆಗೆ ಉದ್ಯೋಗ ಚೀಟಿ ಮತ್ತು ಕೆಲಸ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ವಲಸೆ ಪ್ರಮಾಣ ತಗ್ಗಿಸಲು ನರೇಗಾ ಯೋಜನೆಯಡಿ 265 ವಿವಿಧ ವೈಯಕ್ತಿಕ ಮತ್ತು ಸಮುದಾಯ ಆಧಾರಿತ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಹೇಳಿದ್ದಾರೆ.
ನರೇಗಾ ಕೃಷಿಹೊಂಡ, ಬದು ನಿರ್ಮಾಣ, ಕುರಿದೊಡ್ಡಿ, ದನದ ಕೊಟ್ಟಿಗೆ, ಇಂಗುಗುಂಡಿ, ತೋಟಗಾರಿಕೆ ಬೆಳೆ ವಿಸ್ತರಣೆ ಪೌಷ್ಠಿಕ ತೋಟ, ಎರೆಹುಳ ಗೊಬ್ಬರ ಘಟಕ ಮುಂತಾದ ವೈಯಕ್ತಿಕ ಕಾಮಗಾರಿಗಳನ್ನು ಮತ್ತು ಸಮಗ್ರ ಕೆರೆ ಅಭಿವೃದ್ಧಿ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವುದು, ಸಾರ್ವಜನಿಕ ನಾಲಾ ಹೂಳೆತ್ತುವುದು. ಶಾಲಾ ಕಂಪೌಂಡ್, ಶಾಲೆಯ ಆಟದ ಮೈದಾನ, ಸಂಪರ್ಕ ರಸ್ತೆ ಮತ್ತು ಗ್ರಾಮೀಣ ಸಂತೆ ಕಟ್ಟೆ ನಿರ್ಮಾಣದಂತ ಸಮುದಾಯ ಕಾಮಗಾರಿಗಳನ್ನು ಪ್ರೊತ್ಸಾಹಿಸಿ, ಅನುಷ್ಠಾನಗೊಳಿಸಲಾಗುತ್ತಿದೆ ಎಂದಿದ್ದಾರೆ. ಇದೇ ವೇಳೆ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ ಮಾತನಾಡಿ "ಜಿಲ್ಲೆಯಲ್ಲಿ ನರೇಗಾ ಯೋಜನೆ ಉತ್ತಮವಾಗಿ ಅನುಷ್ಠಾನಗೊಂಡಿದೆ. ಕೆರೆ ರಕ್ಷಣೆ, ಜಲರಕ್ಷಣೆ, ಆಹಾರ ಮತ್ತು ಆರ್ಥಿಕ ಬೆಳೆ ಬೆಳೆಯಲು ನರೇಗಾದಲ್ಲಿ ರೈತರಿಗೆ ಹೆಚ್ಚು ಪ್ರೇರಣೆ ನೀಡಲಾಗುತ್ತಿದೆ. ಸಾವಯುವ ಕೃಷಿ, ಹನಿನೀರಾವರಿ, ತುಂತುರು ನೀರಾವರಿಗೆ ಆದ್ಯತೆ ಕೊಡಲಾಗಿದೆ. ರೈತರನ್ನು ಆರ್ಥಿಕವಾಗಿ ಸಬಲರಾಗಲು ಮತ್ತು ಪ್ರತಿ ಅರ್ಹ ವ್ಯಕ್ತಿಗೆ ನರೇಗಾ ಕೂಲಿ ಕೊಡಲು ಕ್ರಮ ವಹಿಸಲಾಗಿದೆ. ಪ್ರಸಕ್ತ ವರ್ಷದ ಕ್ರೀಯಾಯೋಜನೆಯಲ್ಲಿ 328 ಕೆರೆಗಳನ್ನು ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ " ಎಂದು ಹೇಳಿದ್ದಾರೆ.
Publisher: ಕನ್ನಡ ನಾಡು | Kannada Naadu