ಬೆಂಗಳೂರು : ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹೆಸರು ಕೇಳಿದ ತಕ್ಷಣ ಬಾಯಲ್ಲಿ ಎಂಥವರಿಗೂ ನೀರು ಬರುತ್ತದೆ. ಅವರಿಗಾಗಿಯೇ ಮಾವಿನ ಸುಗ್ಗಿ ಆರಂಭವಾಗಿದೆ. ಮಾರುಕಟ್ಟೆಗೆ ಬಗೆ ಬಗೆಯ ಮಾವಿನ ಹಣ್ಣು ಬರಲು ಆರಂಭವಾಗಿದೆ. ಹಣ್ಣುಗಳ ರಾಜನ ಪ್ರಿಯರಿಗಾಗಿಯೇ ಅಂಚೆ ಇಲಾಖೆ ಸೇವೆಗೆ ಸಿದ್ಧವಾಗಿದೆ.
ಪ್ರತಿ ವರ್ಷದಂತೆಯೇ ಈ ಬಾರಿಯೂ ಅಂಚೆ ಇಲಾಖೆ ಮಾವಿನ ಹಣ್ಣನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಸಿದ್ಧವಾಗಿದೆ. ಕರ್ನಾಟಕದ ಅಂಚೆ ಇಲಾಖೆಯು ವಿವಿಧ ಮಾವು ಬೆಳೆಗಾರರು ಮತ್ತು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್‌ನೊಂದಿಗೆ ಜಂಟಿಯಾಗಿ ಮಾವಿನ ಹಣ್ಣುಗಳ ಡೋರ್ ಡೆಲಿವರಿ ಸೇವೆ ಆರಂಭಿಸಿದೆ.
2019 ರಿಂದ ಅಂಚೆ ಇಲಾಖೆಯು ಮಾವಿನ ಸೀಸನ್‌ನಲ್ಲಿ ಮನೆ ಬಾಗಿಲಿಗೆ ಹಣ್ಣುಗಳನ್ನು ತಲುಪಿಸುವ ಸೇವೆ ನೀಡಿತ್ತಿದೆ. ಇಲ್ಲಿಯವರೆಗೆ ಇಲಾಖೆಯು ಒಟ್ಟು 3.15 ಲಕ್ಷ ಕೆಜಿ ತೂಕದ 92,265 ಮಾವಿನ ಹಣ್ಣುಗಳ ಪಾರ್ಸೆಲ್‌ಗಳನ್ನು ತಲುಪಿಸಿದೆ. ಇದರಿಂದ ಬರೋಬ್ಬರಿ 74,59,265 ರೂಪಾಯಿ ಆದಾಯವನ್ನು ಗಳಿಸಿದೆ. ಮಾವುಗಳನ್ನು ರೈತರು 3 ಕೆಜಿ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಿ ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್ (ಜಿಪಿಒ) ಗೆ ತರುತ್ತಾರೆ. ಬಾಕ್ಸ್‌ಗಳನ್ನು ವ್ಯಾಪಾರದ ಪಾರ್ಸೆಲ್‌ಗಳಾಗಿ ಕಾಯ್ದಿರಿಸಲಾಗುತ್ತದೆ. ಅದೇ ದಿನ ಅಥವಾ ಮರುದಿನ ಪೋಸ್ಟ್‌ಮ್ಯಾನ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಹಣ್ಣಿನ ಬಾಕ್ಸ್‌ಗಳನ್ನು ತಲುಪಿಸಲಾಗುತ್ತದೆ.
"ಈ ಒಪ್ಪಂದದಿಂದ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ರೈತರು ಉತ್ತಮ ಬೆಲೆಯನ್ನು ಪಡೆಯುತ್ತಾರೆ. ಗ್ರಾಹಕರು ತಮ್ಮ ಮನೆ ಬಾಗಿಲಿಗೆ ಅಂಚೆ ಇಲಾಖೆಯ ಮೂಲಕ ಉತ್ತಮ ಗುಣಮಟ್ಟದ ತಾಜಾ ಮಾವಿನಹಣ್ಣುಗಳನ್ನು ಪಡೆಯುತ್ತಾರೆ" ಎಂದು ಮಾವಿನ ಹಣ್ಣಿನ ಸೇವೆ ಬಗ್ಗೆ ಇಲಾಖೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ. ಮಾವಿನ ಹಣ್ಣು ಬುಕ್ ಮಾಡುವುದು ಹೇಗೆ? ತಾಜಾ ಮಾವಿನ ಹಣ್ಣುಗಳನ್ನು ಖರೀದಿಸುವ ಗ್ರಾಹಗಕರು www.karsirimangoes.karnataka.gov.in ಅಥವಾ www.kolaramangoes.com. ಪೋರ್ಟಲ್‌ಗಳ ಮೂಲಕ ಮಾವಿನ ಹಣ್ಣುಗಳನ್ನು ಆರ್ಡರ್ ಮಾಡಬಹುದಾಗಿದೆ. ಗ್ರಾಹಕರು ಕನಿಷ್ಠ ಮೂರು ಕೆ.ಜಿ ಹಣ್ಣುಗಳನ್ನು ಆರ್ಡರ್ ಮಾಡಬೇಕು. ಮೂರು ಕೆಜಿ ಬಾಕ್ಸ್ ಗೆ 850 ರೂಪಾಯಿ ಚಾರ್ಜ್ ಮಾಡಲಾಗುತ್ತಿದೆ.
ವೆಬ್‌ಸೈಟ್‌ಗೆ ಭೇಟಿ ನೀಡಿದ ಬಳಿಕ ಲಾಗಿನ್ ಆಗಿ ಮಾವಿನ ಹಣ್ಣನ್ನು ಸೆಲೆಕ್ಟ್ ಮಾಡಬೇಕು. ಅದರ ದರ ಎಲ್ಲವನ್ನು ಪರಿಶೀಲಿಸಿ ಆನ್‌ಲೈನ್‌ನಲ್ಲಿಯೇ ಹಣ ಪಾವತಿ ಮಾಡಿದರೇ ಒಂದೇ ದಿನದಲ್ಲಿ ಮಾವಿನಹಣ್ಣು ನಿಮ್ಮ ಮನೆ ಬಾಗಿಲಿಗೆ ಅಂಚೆ ಇಲಾಖೆ ಸಿಬ್ಬಂದಿ ತಲುಪಿಸುತ್ತಾರೆ.
Publisher: ಕನ್ನಡ ನಾಡು | Kannada Naadu