ಕಾರವಾರ: ಜಾಗತಿಕ ಸರಬರಾಜು ವ್ಯವಸ್ಥೆಯ ಅತ್ಯಂತ ಪ್ರಮುಖ ಸಾಧನವಾಗಿರುವ ಜಲಸಾರಿಗೆಯನ್ನು ವ್ಯವಸ್ಥಿತ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಮೂಲಕ ದೇಶದ ಮತ್ತು ರಾಜ್ಯದ ಆರ್ಥಿಕ ಶಕ್ತಿ ಸದೃಢಗೊಳ್ಳಲು ಸಾಧ್ಯವಾಗಲಿದೆ ಎಂದು ಬಂದರು ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯರಾಮ್ ರಾಯಪುರ ಹೇಳಿದರು.
ಭಾರತದಲ್ಲಿ ಜಲಸಾರಿಗೆ ವ್ಯವಸ್ಥೆಯು ನಿಧಾನವಾಗಿ ಆರಂಭವಾದರೂ ಸಹ ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದ ಆರ್ಥಿಕ ವ್ಯವಸ್ಥೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಆಮದು ಮತ್ತು ರಫ್ತು ವಹಿವಾಟಿನಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಆದರೆ ದೇಶದಲ್ಲಿ ಜಲಸಾರಿಗೆ ವ್ಯವಸ್ಥೆಯ ಬೆಳವಣಿಗೆಗೆ ಇನ್ನೂ ವಿಫುಲ ಅವಕಾಶಗಳಿದ್ದು, ಇವುಗಳನ್ನು ಬಳಸಿಕೊಂಡಲ್ಲಿ ದೇಶದ ಆರ್ಥಿಕ ಬಲವರ್ಧನೆ ಇನ್ನಷ್ಟು ವೃದ್ಧಿಸಲಿದೆ ಎಂದರು.
ರಾಜ್ಯದಲ್ಲಿ ಕಾರವಾರ ಬಂದರು ಮೂಲಕ ಹೆಚ್ಚಿನ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಅವಕಾಶಗಳಿದ್ದು, ಈ ಬಂದರನ್ನು 5 ಹಂತದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಮುಂದಿನ 5 ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದ್ದು ಈಗಾಗಲೇ 8 ಮೀಟರ್ವರೆಗೆ ಡ್ರೆಜ್ಜಿಂಗ್ ನಡೆಸಲಾಗಿದೆ. ಅಲ್ಲದೇ ಕೇಣಿ ಬಂದರು, ಪಾವಿನಕುರ್ವಾ, ಮಂಕಿ ಹೊನ್ನಾವರ ಬಂದರುಗಳನ್ನೂ ಕೂಡಾ ಅಭಿವೃದ್ದಿಪಡಿಸಲಾಗುತ್ತಿದೆ ಎಂದರು.
ಕರ್ನಾಟಕ ನೇವಲ್ ಏರಿಯದ ಕಮಾಂಡಿಂಗ್ ಫ್ಲಾಗ್ ಆಫೀಸರ್ ರಿಯರ್ ಅಡ್ಮಿರಲ್ ಕೆ.ಎಂ. ರಾಮಕೃಷ್ಣನ್ ಮಾತನಾಡಿ, ಪ್ರಪಂಚದ ಶೇ.90 ರಷ್ಟು ಆರ್ಥಿಕ ಚಟುವಟಿಕೆ ನೌಕಾಯಾನದ ಮೂಲಕ ನಡೆಯುತ್ತಿದೆ. ಈ ವ್ಯವಸ್ಥೆ ಸುಗಮವಾಗಿ ನಡೆಯಲು ಅಂತಾರಾಷ್ಟ್ರೀಯ ಸಹಕಾರ ಅಗತ್ಯವಾಗಿದ್ದು, ಈ ಕುರಿತಂತೆ ನೇವಿಯಿಂದ ವಿವಿಧ ರಾಷ್ಟ್ರಗಳ ನಡುವೆ ಅಗತ್ಯ ಮಾಹಿತಿಗಳ ವಿನಿಮಯ ಮತ್ತು ಸಂಕಷ್ಟಕ್ಕೆ ಸಿಲುಕುವ ಹಡಗುಗಳು ಮತ್ತು ನೌಕಾ ಸಿಬ್ಬಂದಿಗಳ ರಕ್ಷಣೆಯನ್ನು ಮಾಡಲಾಗುತ್ತಿದೆ ಎಂದರು.
Publisher: ಕನ್ನಡ ನಾಡು | Kannada Naadu