ಉಡುಪಿ : ಲೋಕಸಭಾ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ದಿನಕ್ಕೆ ರಂಗು ಪಡೆಯುತ್ತಿದೆ. ಕೇಂದ್ರ ಮೋದಿ ಸರ್ಕಾರದ ವಿರುದ್ಧ ಇಂಡಿಯಾ ಒಕ್ಕೂಟ ಹೆಸರಿನಲ್ಲಿ ವಿಪಕ್ಷಗಳೆಲ್ಲ ಒಗ್ಗೂಡಿವೆ. ಈ ಹಿಂದೆ ಇಂಡಿಯಾ ಒಕ್ಕೂಟ ಸೇರದ ಎಸ್‌ಡಿಪಿಐ ರಾಜ್ಯದ ಹತ್ತಕ್ಕಿಂತ ಹೆಚ್ಚು ಕಡೆ ಸ್ಪರ್ಧೆ ಮಾಡುವುದಾಗಿ ಘೋಷಿಸಿತ್ತು. ಮೊದಲ ಹಂತದ ನಾಮಪತ್ರ ಸಲ್ಲಿಕೆ ದಿನಾಂಕ ಮುಗಿದಿದ್ದು, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸ್ಪರ್ಧಾ ಕಣದಲ್ಲಿ ಇಲ್ಲ. ಇದರಿಂದ ಕಾಂಗ್ರೆಸ್‌ಗೆ ಸಹಕಾರಿಯಾಗಲಿದ್ದು, ಅಲ್ಪ ಸಂಖ್ಯಾತ ಮತದಾರರು ಒಂದೆಡೆಗೆ ಸೇರುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟ ದೇಶದಲ್ಲಿ ದಶಕಗಳ ಕಾಲ ಸರ್ಕಾರ ಮಾಡಿದೆ. ಈ ಆಡಳಿತವನ್ನು ಕೊನೆಗೊಳಿಸಬೇಕು, ಶತಾಯಗತಾಯ ಈ ಬಾರಿ ಗೆದ್ದು ಅಧಿಕಾರಕ್ಕೆ ಬರಬೇಕು ಎಂದು ಇಂಡಿಯಾ ಒಕ್ಕೂಟ ತೀರ್ಮಾನಿಸಿದೆ. ಎಸ್‌ಡಿಪಿಐ ಈ ಹಿಂದೆ ವಿಪಕ್ಷಗಳ ಒಕ್ಕೂಟದ ಒಳಗೆ ಇಲ್ಲದೆ ಸ್ವತಂತ್ರ್ಯವಾಗಿ ಸ್ಪರ್ಧಿಸುವ ಮುನ್ಸೂಚನೆ ಕೊಟ್ಟಿತ್ತು. ರಾಜ್ಯದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದೆ. ಎಸ್‌ಡಿಪಿಐ ಈವರೆಗೆ ನಾಮಪತ್ರ ಹಾಕಿಲ್ಲ. ಕರಾವಳಿ ಮೂರು ಜಿಲ್ಲೆಗಳು ಮಲೆನಾಡು ಮೈಸೂರು ಭಾಗದಲ್ಲಿ ಸಂಘಟನೆ ಗಟ್ಟಿ ಇರುವ ಕಡೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸ್ಪರ್ಧೆಯಿಂದ ಹಿಂದೆ ಸರಿದಿದೆ. ತಟಸ್ಥವಾಗುವ ಮೂಲಕ ಕಾಂಗ್ರೆಸ್‌ಗೆ ನೇರವಾಗಿ ಬೆಂಬಲ ನೀಡುವ ಸಂದೇಶ ರವಾನಿಸಿದೆ.
ಎಸ್‌ಡಿಪಿಐ ಈ ನಿರ್ಧಾರಕ್ಕೆ ಹಾಗೂ ಕ್ಷೇತ್ರದಲ್ಲಿ ಈ ಬೆಳವಣಿಗೆ ವಿರುದ್ಧ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿರುಗೇಟು ನೀಡಿದ್ದಾರೆ. ಪಿಎಫ್ ಐ ಕೆಎಫ್‌ಡಿ ಮೇಲಿನ ಕೇಸ್ ವಾಪಾಸ್ ತೆಗೆದುಕೊಂಡದ್ದ ಕಾಂಗ್ರೆಸ್‌ನ ಋಣವನ್ನು ಎಸ್‌ಡಿಪಿಐ ಪಕ್ಷ ತೀರಿಸುತ್ತಿದೆ. ಈ ಚುನಾವಣೆಯಲ್ಲಿ ಎಸ್‌ಡಿಪಿಐ ಕಾಂಗ್ರೆಸ್‌ಗೆ ಫಂಡಿಂಗ್ ಮಾಡುತ್ತಿದೆ. ಎಸ್‌ಡಿಪಿಐ ಪಾಕಿಸ್ತಾನದ ಪರ ಇರುವ ಪಕ್ಷ ಎಂದು ಆರೋಪಿಸಿದ್ದಾರೆ. ಎರಡನೇ ಹಂತದ ಚುನಾವಣಾ ನಾಮಪತ್ರ ಸಲ್ಲಿಕೆಯಲ್ಲಿ ಎಸ್‌ಡಿಪಿಐ ಉಮೇದುವಾರಿಕೆ ಸಲ್ಲಿಸುವ ಸಾಧ್ಯತೆ ತೀರ ಕಡಿಮೆ ಇದೆ. ತಟಸ್ಥವಾಗಿರುತ್ತದಾ? ನೇರವಾಗಿ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸುತ್ತಾ ಎಂಬ ಬಗ್ಗೆ ಕುತೂಹಲವಿದೆ. ಎಸ್‌ಡಿಪಿಐ ಸ್ಪರ್ಧೆ ಮಾಡದಿದ್ದರೆ ರಾಜ್ಯಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಲಾಭವಾಗಲಿದೆ.
Publisher: ಕನ್ನಡ ನಾಡು | Kannada Naadu