ಶ್ರೀನಾಥ್ ಜೋಶಿ ಸಿದ್ದರ
ಈ ಬಾರಿಯ ಬೇಸಿಗೆಯ ಅಬ್ಬರಕ್ಕೆ ದೇವರು ಸಹ ಕಂಗಾಲಾಗುವಂತಾಗಿದೆ. ಜಲ ಮೂಲಗಳು ಸೇರಿದಂತೆ ನದಿ ಪಾತ್ರಗಳೂ ಸಹ ಬರಿದಾಗಿವೆ. ನಾಡಿನ ಬಹುತೇಕ ಜೀವ ನಾಡಿಯಾದ ಎಲ್ಲ ನದಿಗಳ ಸ್ಥಿತಿಯೂ ಚಿಂತಾಜನಕವಾಗಿವೆ. ಇನ್ನೂ ನಾಡಿನ ಕರಾವಳಿ ಭಾಗ ಅಂದರೆ ಅದು ಪರಶುರಾಮ ಕ್ಷೇತ್ರ. ಇಲ್ಲಿ ಪ್ರಕೃತಿ ಎಂದೂ ಮುನಿಸಿಕೊಳ್ಳುವುದಿಲ್ಲ ಎನ್ನುವ ಮಾತಿದೆ. ಅಂತಹ ಕರಾವಳಿ ಭಾಗದಲ್ಲಿಯೇ ದೇವರಿಗೂ ನೀರಿಲ್ಲದ ಕಾಲ ಬಂದು ಬಿಟ್ಟಿದೆ.
ದಿನ ನಿತ್ಯವೂ ಭಕ್ತರಿಂದ ಕಿಕ್ಕಿರಿದು ಇರುವ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ, ಹೊರನಾಡು, ಕಟೀಲು, ಮಂದಾರ್ತಿ, ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ನೀರಿನ ಅಭಾವ ಕಂಡು ಬರುತ್ತಿದೆ. ಇನ್ನೂ ಕುಮಾರಧಾರಾ ನದಿಯನ್ನೆ ನಂಬಿದ್ದ ಪುತ್ತೂರಿನ ಮಹಾಲಿಂಗೇಶ್ವರನ ಕಥಯೂ ಇದಕ್ಕಿಂತ ಬಿನ್ನವಿಲ್ಲ. ಬಹುತೇಕ ಎಲ್ಲ ನದಿಗಳ ಒಳಹರಿವು ಸಂಪೂರ್ಣ ನಿಂತು ಹೋಗಿದೆ.
ಕುಮಾರಧಾರಾ ನದಿಯ ನೀರಿನ ಒಳ ಹರಿವು ಸಂಪೂರ್ಣ ತಗ್ಗಿದ್ದು, ಅಲ್ಲಲ್ಲಿಇರುವ ಹಳ್ಳಗಳಲ್ಲಿ, ಗುಂಡಿಗಳಲ್ಲಿ ಮಾತ್ರ ನೀರು ನಿಂತುಕೊಂಡಿದೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಭಕ್ತರು ಹಾಗೂ ದೇವಳದ ಆಡಳಿತ ಮಂಡಳಿಯವರು, ನದಿಯಲ್ಲಿ ನೀರಿಲ್ಲದಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಇದೇ ತಿಂಗಳ 18 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ವಾರ್ಷಿಕ ಅವಭೃತೋತ್ಸವ ನಡೆಯಲಿದೆ. ಅಂದು ಶ್ರೀ ದೇವರು ನದಿಗೆ ಹೋಗಿ ಅಭ್ಯಂಜನ ಮಾಡುವುದು ನಡೆದು ಬಂದ ಪದ್ಧತಿ. ಶ್ರೀ ಮಾಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಕೊನೆಯ ದಿನ ಅವಭೃತ (ಪುಣ್ಯ ಸ್ನಾನ) ಕ್ಕೆ ದೇವರು ಶಾಂತಿಗೋಡು ಗ್ರಾಮದ ಬೀರಂಗಿಲ (ವೀರಮಂಗಲ) ದಲ್ಲಿ ಇರುವ ಕುಮಾರಧಾರಾ ನದಿಗೆ ತೆರುಳುತ್ತದೆ. ವಾಸ್ತವದಲ್ಲಿಈ ವರ್ಷ ಅಲ್ಲಿಯ ಸ್ಥಿತಿ ಯೋಚನೆಗೂ ಮೀರಿದ್ದಾಗಿದೆ. ಬೀರಂಗಿಲ ಊರಿನಲ್ಲಿ ಇರುವ ದೇವರ ಜಳಕ ಗುಂಡಿಯಲ್ಲಿ ಸ್ವಲ್ಪವೇ ನೀರಿದ್ದು, ಆ ನೀರು ಏಪ್ರಿಲ್ 18ರ ಹೊತ್ತಿಗೆ ಇರುವುದೋ ಇಲ್ಲ ಈ ಬಿಸಿಲ ಝಳಕ್ಕೆ ಅಲ್ಪ ಸ್ವಲ್ಪ ಇದ್ದ ನೀರೂ ಸಹ ಆವಿಯಾಗಿ ಹೋಗುವುದೊ ಎನ್ನುವ ಕಳವಳ ಜನರಲ್ಲಿ ಮನೆ ಮಾಡಿದೆ.
ಈಗಾಗಲೇ ಪುತ್ತೂರು ದೇವಸ್ಥಾನ ಮಂಡಳಿಯವರು ಜಾತ್ರೆಯ ಸಿದ್ದತೆಗಳು ಭರದಿಂದ ಸಾಗುತ್ತಿದೆ. ಮಹಾಲಿಂಗೇಶ್ವರ ದೇವಳದಿಂದ 15 ಕಿ.ಮೀ. ದೂರದಲ್ಲಿರುವ ಬೀರಂಗಿಲ ಊರಿನ ನದಿಗೆ ತೆರಳಿ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತಕ್ಕಾಗಿ ಎಲ್ಲ ತಯಾರಿಗಳು ಆಗುತ್ತವೆ. ನದಿ ದಡದಲ್ಲಿ ಶ್ರೀ ದೇವರ ಕೊನೆಯ ಕಟ್ಟೆ ಪೂಜೆ ನಡೆಯುವ ವೃಕ್ಷ ಪೀಠವನ್ನು ಜಾತ್ರೆಯ ಹಿನ್ನೆಲೆಯಲ್ಲಿ ತಯಾರಿ ಮಾಡಲಾಗಿದೆ. ಕಟ್ಟೆಯಿಂದ ನದಿಯ ಜಳಕ ಗುಂಡಿಗೆ ಇಳಿದು ಹೋಗುವ ದಾರಿಯನ್ನು ಸರಿ ಮಾಡಲಾಗಿದೆ.
ಇಷ್ಟು ವರ್ಷ ನದಿಯ ನೀರಿ ಮಟ್ಟ ಈ ಹಂತಕ್ಕೆ ಇಳಿದಿರಲಿಲ್ಲ. ನಿತ್ಯವೂ ನೀರಿನ ಹರಿವು ತಕ್ಕ ಮಟ್ಟಿಗಾದರೂ ಇರುತ್ತಿತ್ತು. ಅದರ ಪರಿಣಾಮ ಶತಮಾನಗಳಿಂದ ನಡೆದು ಬಂದ ಪದ್ಧತಿಯಲ್ಲಿ ತುಸು ಬದಲಾವಣೆಗಳನ್ನು ತರುವ ಸಾಧ್ಯತೆಗಳು ಕಂಡು ಬರುತ್ತಿದೆ.
ಈ ಹಿಂದೆ ಇಂತಹದ್ದೆ ಸಮಸ್ಯೆಗಳು ಕಂಡಾಗ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಉತ್ಸವದ ಸವಾರಿ ಪುತ್ತೂರಿನಿಂದ ಉಪ್ಪಿನಂಗಡಿ ರಸ್ತೆಯಲ್ಲಿಸಾಗಿ ಚಿಕ್ಕಮುಡ್ನೂರು ಗ್ರಾಮದ ಕೊನೆಯಲ್ಲಿ ಕಟಾರ ಪ್ರದೇಶದ ಕುಮಾರಧಾರ ನದಿಯಲ್ಲಿ ಪುಣ್ಯಸ್ನಾನ ನಡೆಸಲಾಗುತ್ತಿತ್ತು. ಕೆಲವು ವರ್ಷಾನಂತರ ಆ ಜಾಗದಲ್ಲಿಯೂ ನಿರಂತರ ನೀರಿನ ಸಮಸ್ಯೆ ಕಾಣಿಸಿಕೊಂಡ ಕಾರಣ ದೇವರ ಪುಣ್ಯ ಸ್ನಾನ ನಡೆಸುವ ಕ್ಷೇತ್ರದ ದಿಕ್ಕು ಬದಲಾಯಿಸಿ ದೇವರ ಸವಾರಿ ಹೋಗುವುದಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಅದಕ್ಕಾಗಿ ಪುರುಷರಕಟ್ಟೆ ಮೂಲಕ ಬೀರಂಗಿಲಕ್ಕೆ ತೆರಳಿ ಕುಮಾರಧಾರದಲ್ಲಿ ಅವಭೃತ ಸ್ನಾನ ನಡೆಸುವ ಪದ್ಧತಿಯನ್ನು ಜಾರಿಯಲ್ಲಿ ಇಟ್ಟುಕೊಳ್ಳಲಾಗಿತ್ತು.
ಕರಾವಳಿ ಭಾಗದ ದೇವಸ್ಥಾನಗಳಲ್ಲಿ ಜಾತ್ರೆಗಳು ತನ್ನದೇ ಆದ ಶಾಸ್ತ್ರ ಪದ್ಧತಿಗಳಂತೆ ನಡೆಯುತ್ತವೆ. ಜಾತ್ರೆಯ ಕೊನೆಯ ದಿನ ಅವಭೃತ ಸ್ನಾನದ ನಂತರವೇ ದೇವರು ಮರಳಿ ದೇವಸ್ಥಾನಕ್ಕೆ ಬರುವ ಪದ್ದತಿಗಳು ಇರುವುದು. ಈ ಪದ್ಧತಿಯನ್ನು ಆಚರಿಸುವ ಬಗೆಗಳು ಕೆಲವು ಕಡೆಗಳಲ್ಲಿ ವಿಭಿನ್ನವಾಗಿದ್ದರೂ ಈ ಶಾಸ್ತ್ರವನ್ನು ಎಲ್ಲಾ ದೇವಾಲಯಗಳಲ್ಲಿ ಚಾಚು ತಪ್ಪದೇ ನಡೆಸಿಕೊಂಡು ಬರುತ್ತವೆ. ಇದೇ ಕಾರಣಕ್ಕೆ ಆಯಾ ಸೀಮೆ ದೇವರು ಅಥವಾ ಗ್ರಾಮದ ದೇವರ ಅವಭೃತದ ಸವಾರಿಯ ದಾರಿ ನಿರ್ಧಾರ ಮಾಡಿರಲಾಗುತ್ತದೆ. ಉತ್ಸವದ ಕೊನೆಯ ಕಾಲದಲ್ಲಿ ಆಯಾ ಊರಿನಲ್ಲಿ ಹರಿಯುತ್ತಿರುವ ನದಿ, ಹಳ್ಳಗಳನ್ನು ಗುರುತಿಸಿಕೊಂಡು ಆ ಸಮಯದಲ್ಲಿ ಅಲ್ಲಿ ಯಾವ ಪ್ರಮಾಣದಲ್ಲಿ ನೀರು ಇರುತ್ತದೆ ಎನ್ನುವುದನ್ನು ಮನಗಂಡು ಈ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಇನ್ನೂ ಕೆಲವು ದೇವಸ್ಥಾನದ ಬಳಿ ಇರುವ ಕೆರೆಯಲ್ಲಿ ಅವಭೃತ ಸ್ನಾನ ಮಾಡುವ ರೂಢಿ ಜಾರಿಯಲ್ಲಿದೆ. ಇನ್ನೂ ಕೆಲವು ಕಡೆಗಳಲ್ಲಿ ದೇವರು ಸಮುದ್ರಕ್ಕೆ ತೆರಳಿ ಪುಣ್ಯಸ್ನಾನ ಮಾಡುವ ಪದ್ಧತಿಯೂ ಇದೆ.
ಈ ಬಾರಿಯ ನಡು ಬೇಸಿಗೆಯಲ್ಲಿ ನೀರಿನ ಅಭಾವ ಸದ್ಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ಸ್ವಾಮಿಗೆ ತಟ್ಟುವ ಲಕ್ಷಣಗಳು ಕಂಡು ಬರುತ್ತಿದೆ. ಪ್ರತೀ ವರ್ಷ ಜಾತ್ರೆಯ ಕೊನೆ ದಿನ ಸಂಜೆ ಶ್ರೀ ದೇವರ ಪೇಟೆ ಸವಾರಿ ದೇವಳದಿಂದ ಹೊರಟು ದಾರಿ ಮಧ್ಯೆ ಸುಮಾರು 20ಕ್ಕಿಂತಲೂ ಅಧಿಕ ಕಟ್ಟೆ ಪೂಜೆಗಳನ್ನು ಪಡೆದು, ನೂರಾರು ಆರತಿ, ಹಣ್ಣುಕಾಯಿ ಸೇವೆ ಸ್ವೀಕರಿಸುತ್ತಾ 15 ಕಿಲೋ ಮೀಟರ್ ದೂರ ಸಾಗಿ ಮರುದಿನ ಮುಂಜಾನೆ ಬೀರಂಗಿಲ ತಲುಪುತ್ತಾರೆ. ಅಲ್ಲಿ ಪುಣ್ಯಸ್ನಾನ ಪೂರೈಸಿ ಪುತ್ತೂರು ದೇಗುಲಕ್ಕೆ ಮರಳುತ್ತಾರೆ.
ಇಷ್ಟೊಂದು ದೊಡ್ಡ ಪರಂಪರೆಯ ಹಾಗೂ ಕಾರಣಿಕ ಸ್ಥಾನವಾಗಿರುವ ಶ್ರೀ ಮಾಹಾಲಿಂಗೇಶ್ವರನಿಗೆ ಸ್ನಾನಕ್ಕೆ ನೀರಿಲ್ಲ ಎನ್ನುವ ಕಾರಣ ಹುಲುಮಾನವರಾದ ನಾವು ತಲೆಕೆಡಿಸಿಕೊಳ್ಳವ ಸ್ಥಿತಿಗೆ ಬಂದಿದ್ದೇವೆ. ಲಯಕಾರಕನಾದ ಪರಶಿವನ ವ್ಯವಸ್ಥೆಗೆ ಪ್ರಕೃತಿಯೇ ನಿಂತಿದ್ದಾಳೆ, ಎನ್ನುವ ಮಾತು ವಾಸ್ತವದಲ್ಲಿ ಇದ್ದರೂ, ಈ ಬಾರಿ ಪೃಕೃತಿ ಜೀವ ಜಂತುಗಳ ವಿರುದ್ಧ ಕೋಪಿಸಿಕೊಳ್ಳುವುದರ ಜೊತೆ ಸ್ವತಃ ಪರಶಿವನ ಮೇಲೂ ಸಿಟ್ಟಾದಳೇ..? ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡದೇ ಇರಲಾರದು.
Publisher: shrinath joshi | Knobly