ಕನ್ನಡ ನಾಡು | Kannada Naadu

ಪ್ರಶಸ್ತಿಗಳು ನೀಡುವವರ ಮತ್ತು ಪಡೆಯುವವರ ಹೊಣೆಗಾರಿಕೆ ಹೆಚ್ಚಿಸುತ್ತವೆ: ನಾಡೋಜ ಡಾ.ಮಹೇಶ ಜೋಶಿ

04 Apr, 2024

ಬೆಂಗಳೂರು: ಪ್ರಶಸ್ತಿಗಳು ಪಡೆಯುವವರ ಹೊಣೆಗಾರಿಕೆಯನ್ನು ಹೆಚ್ಚಿಸಿದಂತೆ ನೀಡುವವರ ಹೊಣೆಗಾರಿಕೆಯನ್ನೂ ಕೂಡ ಹೆಚ್ಚಿಸುತ್ತವೆ. ಕನ್ನಡ ಸಾಹಿತ್ಯ ಪರಿಷತ್ತು ತನ್ನ ದತ್ತಿ ಆಯ್ಕೆಯಲ್ಲಿ ಈ ಅಂಶವನ್ನು ಸದಾ ಗಮನದಲ್ಲಿಟ್ಟು ಕೊಂಡಿದ್ದು ಯಾವುದೇ ಅರ್ಜಿ, ಮರ್ಜಿಗಳಿಲ್ಲದೆ ಪಾರದರ್ಶಕವಾಗಿ ಇಲ್ಲಿ ಆಯ್ಕೆ ಮಾಡಲಾಗುತ್ತದೆ. ಅರ್ಹರಿಗೆ ಪ್ರಶಸ್ತಿಗಳು ದೊರೆದಾಗ ಅದರ ಮೌಲ್ಯ ಕೂಡ ಹೆಚ್ಚುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆದ  ಮೂರು ಪ್ರಮುಖ  ದತ್ತಿಗಳಾದ ಶ್ರೀ ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ, ಡಾ. ಹೆಚ್. ವಿಶ್ವನಾಥ್ ಮತ್ತು ಶ್ರೀಮತಿ ಎಂ. ಎಸ್. ಇಂದಿರಾ ದತ್ತಿ ಹಾಗೂ ಮಾಹಿತಿ ಹಕ್ಕು ತಜ್ಞ ಜೆ. ಎಂ. ರಾಜಶೇಖರ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಈಗ  ನೀಡಲಾಗುತ್ತಿರುವ ಮೂರು ದತ್ತಿ ಪ್ರಶಸ್ತಿಗಲೂ  ವಿಭಿನ್ನವಾಗಿರುವುದು ಒಂದು ವಿಶೇಷತೆ,  ವಚನ ಸಾಹಿತ್ಯ, ಶಿಕ್ಷಣ ಕ್ಷೇತ್ರ, ಮಾಹಿತಿ ಹಕ್ಕು ಕ್ಷೇತ್ರ, ದೃಷ್ಟಿ ವಿಶೇಷ ಚೇತನರ ಬರಹ  ಹೀಗೆ ಮಹತ್ವದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಈ ಪುರಸ್ಕಾರಗಳು ಸಲ್ಲುತ್ತಿದ್ದು ಇದಕ್ಕೆ ಸಾಂಸ್ಕೃತಿಕ ಮಹತ್ವವಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ವಿಶ್ಲೇಷಿಸಿದರು. ಮನುಷ್ಯನಿಗೆ ಒಳಗಣ್ಣು ಮತ್ತು ಹೊರಗಣ್ಣು ಎರಡೂ ಇರುತ್ತದೆ. ಕೆಲವರಿಗೆ ಹೊರಗಣ್ಣು ಸಮಸ್ಯೆಗೆ ಒಳಗಾದರೂ ಒಳಗಣ್ಣು ಪ್ರಖರವಾಗಿರುತ್ತದೆ. ಅಂತಹವರು ತಮ್ಮ ಸಾಮರ್ಥ್ಯ ತೋರಲು ಸಮಾಜದ ನೆರವು ಬೇಕು, ಸ್ವಾಮಿ ವಿವೇಕಾನಂದರು ಹೇಳುವಂತೆ,  ಭಗವಂತ ನಿಮಗೆ ಸೇವೆ ಸಲ್ಲಿಸಲು ಅವಕಾಶವನ್ನು ಕೊಟ್ಟಿದ್ದಾನೆ. ಹೀಗೆ ಸಮಾಜದ ಋಣ ತೀರಿಸುವುದೇ ಶ್ರೇಷ್ಠ ಪೂಜೆ ಎಂದು ನಾಡೋಜ ಡಾ.ಮಹೇಶ ಜೋಶಿ ಅಭಿಪ್ರಾಯ ಪಟ್ಟರು. 
ಮಾಹಿತಿ ಹಕ್ಕು ಕಾಯ್ದೆ ಬಂದ ಮೇಲೆ ಎಲ್ಲರಿಗೂ ಒಂದು ವರ ಸಿಕ್ಕ ಹಾಗೆ ಆಗಿದೆ. ಒಬ್ಬರು ತಮ್ಮ ಪಡಿತರ ಚೀಟಿ ಬರದೇ ಇರುವಾಗ ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಳಿದಾಗ ಪಡಿತರ ಚೀಟಿ ಬಂದು ಅವರಿಗೆ ತಲುಪಿದ್ದು ಉದಾಹರಣೆ ಇದೆ. ಇದು ಮಾಹಿತಿ ಹಕ್ಕು ಕಾಯ್ದೆಯ ಶಕ್ತಿ. ಸರ್ಕಾರದ ಸೌಲಭ್ಯವು ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿದೆಯಾ ಎಂದು ತಿಳಿದುಕೊಳ್ಳುವ ಸಾಮರ್ಥ್ಯವನ್ನು ಜನಸಾಮಾನ್ಯರಿಗೆ ಮಾಹಿತಿ ಹಕ್ಕು ಕಾಯ್ದೆ ಕೊಟ್ಟಿದೆ ಇದರ ಸದುಪಯೋಗವಾಗ ಬೇಕೆಂದು ನಾಡೋಜ ಡಾ.ಮಹೇಶ ಜೋಶಿ ಅಭಿಪ್ರಾಯಪಟ್ಟರು. 

ಶ್ರೀ ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂಜ್ಯ ಶ್ರೀ ಅಕ್ಕ ಡಾ. ಅನ್ನಪೂರ್ಣ ತಾಯಿಯವರು, ವಚನ ಸಾಹಿತ್ಯ ನಾಡಿಗೆ ಅಪಾರವಾದ ಕೊಡುಗೆಯನ್ನು ನೀಡಿದೆ. ನಾವು ವಚನ ಸಾಹಿತ್ಯಕ್ಕೆ ಮಾಡಿದ ಸೇವೆಯನ್ನು ಗಮನಿಸಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿಯನ್ನು ನೀಡಿದ್ದು ಸಂತೋಷ ತಂದಿದೆ. ವಚನವು ಬದುಕನ್ನು ಕಲಿಸುತ್ತದೆ ಎಂದು ಅಭಿಪ್ರಾಯಿಸಿದರು.ಶ್ರೀ ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ ಪ್ರಶಸ್ತಿಯನ್ನು ಸ್ವೀಕರಿಸಿದ ಮತ್ತೋರ್ವ ಪುರಸ್ಕೃತರಾದ ಶ್ರೀ ವೀರೇಂದ್ರ ದೊಡ್ಡಣ್ಣನವರ ಅವರು, ಕನ್ನಡ ಶಾಲೆಗಳು ಉಳಿಯಬೇಕು. ಅವುಗಳನ್ನು ಬೆಳೆಸುವ ಜವಾಬ್ದಾರಿ ನಮ್ಮದೇ ಎಂದು ಹೇಳಿದರು. ಡಾ. ಎಚ್. ವಿಶ್ವನಾಥ ಮತ್ತು ಶ್ರೀಮತಿ ಎಂ. ಎಸ್. ಇಂದಿರಾ ದತ್ತಿ ಪ್ರಶಸ್ತಿ ಸ್ವೀಕರಿದ ರಮಾ ಫಣಿಭಟ್ ಗೋಪಿ ಅವರು ಮಾತನಾಡುತ್ತಾ, ತಂತ್ರಜ್ಞಾನದಿಂದ ಸಾಹಿತ್ಯವನ್ನು ಓದಬಹುದು ಕೇಳಬಹುದು. ಅಷ್ಟು ತಂತ್ರಜ್ಞಾನ ಮುಂದುವರಿದಿದೆ. ಅದನ್ನು ಸರಿಯಾಗಿ ಸದ್ಭಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.ಮಾಹಿತಿ ಹಕ್ಕು ತಜ್ಞ ಶ್ರೀ ಜೆ.ಎಂ ರಾಜಶೇಖರ್ ದತ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಹಿತಿ ಹಕ್ಕು ತಜ್ಞರಾದ ಶ್ರೀ ವೈ. ಜಿ. ಮುರಳಿಧರನ್ ಅವರು ಕನ್ನಡದಲ್ಲಿ ಮಾಹಿತಿ ಹಕ್ಕು ಲೇಖನಗಳು ಹೆಚ್ಚು ಹೆಚ್ಚು ಬರಬೇಕು. ಮಾಹಿತಿ ಹಕ್ಕು ಕಾನೂನು ಬರಹಗಳು, ಪುಸ್ತಕಗಳು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಬರೆದು ಜನರಿಗೆ ಮುಟ್ಟಿಸಬೇಕೆಂದು ಹೇಳಿದರು.

ಪ್ರಶಸ್ತಿ ಪ್ರಧಾನ ಮಾಡಿದ ಪದ್ಮಶ್ರೀ ಪುರಸ್ಕೃತರಾದ ಡಾ. ಕೆ. ಎಸ್. ರಾಜಣ್ಣ ಅವರು, ದಿವ್ಯಾಂಗರ ಸಾಧನೆಯನ್ನು ಗುರುತಿಸಿ ಅವರಿಗೆ ಸನ್ಮಾನಿಸಿ, ಗೌರವ ಕೊಟ್ಟಿರುವುದು ತುಂಬಾ  ಉತ್ತಮ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಈ ಕಾರ್ಯ ಬೇರೆಯವರಿಗೂ ಮಾದರಿಯಾಗಲಿ ಎಂದು ಅಭಿಪ್ರಾಯ ಪಟ್ಟರು. ದತ್ತಿ ದಾನಿಗಳಾದ ಡಾ. ಎಚ್ ವಿಶ್ವನಾಥ, ಶ್ರೀ ಪಿ. ಮಹೇಶ್ ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು
  ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗ ಶೆಟ್ಟಿ ನಿರೂಪಣೆ ಮಾಡಿದರೆ ಇನ್ನೋರ್ವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು ಅವರು ವಂದಿಸಿದರು. ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. 

Publisher: ಕನ್ನಡ ನಾಡು | Kannada Naadu

Login to Give your comment
Powered by