ಬೆಂಗಳೂರು : ವ್ಯಾಟಿಕನ್ ಮಾಧ್ಯಮದ 53ನೆಯ ಭಾಷೆಯಾಗಿ ಕನ್ನಡ ಸೇರ್ಪಡೆಯಾಗಿದ್ದು ಇನ್ನು ಮುಂದೆ ವ್ಯಾಟಿಕನ್ ನಗರದ ಸುದ್ದಿಗಳು ಕನ್ನಡದಲ್ಲಿ ಪ್ರಸಾರವಾಗಲಿವೆ ಎನ್ನುವ ಬೆಳವಣಿಗೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಸ್ವಾಗತಿಸಿದ್ದಾರೆ. ಇದಕ್ಕೆ ಕಾರಣವಾದ ವ್ಯಾಟಿಕನ್ ಸಂವಹನ ಪೀಠ ಮತ್ತು ಬೆಂಗಳೂರು ಮಹಾಧರ್ಮ ಕ್ಷೇತ್ರ ಎರಡರ ಸಹಯೋಗವನ್ನು ಅವರು ಶ್ಲಾಘಿಸಿದ್ದಾರೆ. ವ್ಯಾಟಿಕನ್ ಸುದ್ದಿಗಳು ಕನ್ನಡದಲ್ಲಿ ಪ್ರಸಾರವಾಗುವುದರಿಂದ ಕನ್ನಡಿಗರಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ವ್ಯಾಟಿಕನ್ ರೇಡಿಯೋ ಮತ್ತಿತರ ಸಮೂಹ ಮಾಧ್ಯಮಗಳಲ್ಲಿಯೂ ಕನ್ನಡ ಕೇಳಿ ಬರಲಿದೆ ಎನ್ನುವ ಸುದ್ದಿ ಸಂತೋಷವನ್ನು ಕೊಟ್ಟಿದೆ , ಈ ಮೂಲಕ ಕನ್ನಡಕ್ಕೆ ಜಾಗತಿಕ ವೇದಿಕೆ ದೊರಕಿದಂತಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳೆವಣಿಗೆಗೆ ಕ್ರೈಸ್ತರು ನೀಡಿರುವ ಕೊಡುಗೆ ಅಪಾರ, ಧರ್ಮ ಪ್ರಚಾರದ ಉದ್ದೇಶವನ್ನೇ ಮರೆತು ಅವರೆಲ್ಲರೂ ವಿವಿಧ ರೂಪದಲ್ಲಿ ನೀಡಿದ ಕೊಡುಗೆಗಳ ಮೂಲಕವೇ ಕನ್ನಡದ ಪರಂಪರೆ ಬೆಳೆದಿದೆ ಎಂದು ಇತಿಹಾಸವನ್ನು ನೆನಪು ಮಾಡಿಕೊಂಡ ನಾಡೋಜ ಡಾ.ಮಹೇಶ ಜೋಶಿಯವರು ಹರ್ಮನ್ ಮೊಗ್ಲಿಂಗ್ ‘ಮಂಗಳೂರು ಸಮಾಚಾರ’ದ ಮೂಲಕ ಕನ್ನಡದಲ್ಲಿ ಪತ್ರಿಕೋದ್ಯಮವನ್ನು ಆರಂಭಿಸಿದರೆ, ಕಿಟಲ್ ನಿಘಂಟನ್ನು ಕೊಡುಗೆಯಾಗಿ ನೀಡಿದರು, ಬೆಂಜಮಿನ್ ಲೂಯಿಸ್ ರೈಸ್ ಕನ್ನಡ ಶಾಸನಗಳ ಅಧ್ಯಯನವನ್ನು ನಡೆಸಿದರೆ ಇ.ಪಿ.ರೈಸ್ ಸಾಹಿತ್ಯ ಚರಿತ್ರೆಯನ್ನು ಬರೆದರು, ರಿಪ್ಪನ್, ಕರ್ಜನ್, ಕಬ್ಬನ್, ಮೇಖ್ರಿ ಮೊದಲಾದವರು ಆಡಳಿತಗಾರರಾಗಿ ಮಹತ್ವದ ಕೊಡುಗೆಯನ್ನು ನೀಡಿದರು. ಸರ್ ಥಾಮಸ್ ಮನ್ರೋ ಅವರಂತೂ ಮನ್ರಪ್ಪ/ ಮನ್ರೋ ಅಣ್ಣನಾಗಿ ಜನ ಸಾಮಾನ್ಯರ ಹೃದಯದಲ್ಲಿ ಸ್ಥಾನವನ್ನು ಪಡೆದರು. ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟ ಎಂಬ ಹೆಸರನ್ನು ಪಡೆಯುವಲ್ಲಿ ಎಲ್ಲಾ ಧರ್ಮೀಯರ ಕೊಡುಗೆಯೂ ಅಪಾರವಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ನಾಡೋಜ ಡಾ.ಮಹೇಶ ಜೋಶಿಯವರು ಈ ಬೆಳವಣಿಗೆಯನ್ನು ಪರಂಪರೆಯ ಮುಂದುವರಿಕೆ ಎಂದು ವಿಶ್ಲೇಷಿಸಿದ್ದಾರೆ
ಕನ್ನಡದಲ್ಲಿಯೇ ಕ್ತೈಸ್ತ ಪ್ರಾರ್ಥನೆಗಳು ನಡೆಯ ಬೇಕು ಎಂದು ಹೋರಾಟ ಮಾಡಿದ ಫಾದರ್ ಚಸರಾ ಎಂದೇ ಸಾಂಸ್ಕೃತಿಕ ವಲಯಗಳಲ್ಲಿ ಚಿರಪರಿಚಿತರಾದ ಫಾದರ್ ಚೌರಪ್ಪ ಸೆಲ್ವರಾಜ್ ಚರ್ಚ್ ಗಳಲ್ಲಿ ಕನ್ನಡದ ಬಳಕೆ ಮತ್ತು ಕನ್ನಡಿಗರಿಗೆ ದೊರಕಬೇಕಾದ ಸಾಮಾಜಿಕ ನ್ಯಾಯಕ್ಕಾಗಿ ಸುದೀರ್ಘ ಹೋರಾಟ ಮಾಡಿದರು. ಇದಕ್ಕೆ ಆರಂಭಿಕ ದಿನಗಳಿಂದಲೂ ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲವಾಗಿ ನಿಂತಿತ್ತು. ಈಗಲೂ ಕನ್ನಡ ಸಾಹಿತ್ಯ ಪರಿಷತ್ತಿನ ಅವರ ಹೆಸರಿನಲ್ಲಿ ಕನ್ನಡಪರ ಹೋರಾಟಗಾರರಿಗೆ ಮತ್ತು ಕ್ರೈಸ್ತ ಸಾಧಕರಿಗೆ ದತ್ತಿ ಪುರಸ್ಕಾರವನ್ನು ನೀಡುತ್ತಿದೆ ಎಂದು ನೆನಪು ಮಾಡಿ ಕೊಂಡಿರುವ ನಾಡೋಜ ಡಾ.ಮಹೇಶ ಜೋಶಿಯವರು ವಿಶ್ವ ಮಟ್ಟದಲ್ಲಿ ಹೀಗೆ ಕನ್ನಡ ಪ್ರತಿನಿಧೀಕರಣಗೊಳ್ಳುವ ಎಲ್ಲಾ ಅವಕಾಶಗಳನ್ನೂ ಕನ್ನಡಿಗರು ಬಳಸಿ ಕೊಳ್ಳ ಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
Publisher: ಕನ್ನಡ ನಾಡು | Kannada Naadu