ಕನ್ನಡ ನಾಡು | Kannada Naadu

ಮನಮೋಹನ್ ಸಿಂಗ್ ಅವರು ಅತ್ಯಂತ ದುರ್ಬಲ ಪ್ರಧಾನಿಯಾಗಿದ್ದರು: ಬಸವರಾಜ ಬೊಮ್ಮಾಯಿ

04 Apr, 2024

ಮನಮೋಹನ್ ಸಿಂಗ್ ಅವರು ಅತ್ಯಂತ ದುರ್ಬಲ ಪ್ರಧಾನಿಯಾಗಿದ್ದರು: ಬಸವರಾಜ ಬೊಮ್ಮಾಯಿ

ಕನ್ನಡನಾಡು ವರದಿ

ಹಾವೇರಿ: ಕೇಂದ್ರದಲ್ಲಿ ನರೇಂದ್ರ ಮೋದಿಯವರು ಬಂದ ಮೇಲೆ ಸಮ್ಮಿಶ್ರ ಸರ್ಕಾರದ ಕಾಲ ಮುಗಿದು ಹೋಗಿದೆ. ದೇಶದ ಅಭಿವೃದ್ಧಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಏಕ ಪಕ್ಷದ ಆಡಳಿತ ಒಳ್ಳೆಯದು ಎಂದು ದೇಶದ ಜನರು ತೀರ್ಮಾನಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಇಂದು ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಕುಡುಪಲಿ, ಕಡೂರು, ಬುಳ್ಳಾಪೂರ, ಹಳ್ಳೂರು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಪಧಾನಿ ನರೇಂದ್ರ ಮೋದಿಯವರು ಈ ಚುನಾವಣೆಯ ಕೇಂದ್ರಬಿಂದುವಾಗಿದ್ದಾರೆ. ಸಾಮಾನ್ಯವಾಗಿ ಎರಡು ವ್ಯಕ್ತಿತ್ವದ ನಡುವೆ ಚುನಾವಣೆಯಾಗುತ್ತದೆ. ಆದರೆ, ಇಲ್ಲಿ ನರೇಂದ್ರಮೋದಿ ಪರ ಹಾಗೂ ನರೇಂದ್ರ ಮೋದಿ ವಿರುದ್ಧ ಚುನಾವಣೆ ನಡೆಯುತ್ತಿದೆ. ದೇಶದಲ್ಲಿ ನರೇಂದ್ರ ಮೋದಿಯಂತಹ ವ್ಯಕ್ತಿತ್ವ ಬೇರೆ ಯಾರೂ ಇಲ್ಲ ಎಂದು ಹೇಳಿದರು.

ಲೋಕಸಭೆಯ 543 ಸ್ಥಾನದಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗದಿರುವ ಪಕ್ಷಗಳು ದೇಶ ಆಳುವ ಬಗ್ಗೆ ಮಾತನಾಡುತ್ತವೆ. ಹಿಂದೆ ಸಣ್ಣ ಸಣ್ಣ ಪಕ್ಷಗಳು ಸೇರಿ ಸರ್ಕಾರ ಆಳಿರುವುದನ್ನು ನೋಡಿದ್ದೇವೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರು ಬಂದ ಮೇಲೆ ಸಮ್ಮಿಶ್ರ ಸರ್ಕಾರದ ಕಾಲ ಮುಗಿದು ಹೋಗಿದೆ. ಇದು ದೇಶದ ಅಭಿವೃದ್ಧಿ ಮತ್ತು ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು. ಈ ಕೆಲಸವನ್ನು ದೇಶದ ಪ್ರಜೆಗಳು ಮಾಡುತ್ತಿದ್ದಾರೆ ಎಂದರು.

ಜನರ ಪ್ರೀತಿ ವಿಶ್ವಾಸವನ್ನು ಪಡೆಯಬೇಕೆಂದರೆ ಹಗಲುರಾತ್ರಿ ಜನರಿಗಾಗಿ ಕೆಲಸ ಮಾಡಬೇಕಾಗುತ್ತದೆ. ದೇಶ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮನ್ನಾಳುವ ಬ್ರಿಟೀಷರು ಮಾತ್ರ ನಮ್ಮ ವೈರಿಗಳಾಗಿದ್ದರು. ಆದರೆ, ಸ್ವಾತಂತ್ರ ಬಂದ ಮೇಲೆ ಬಡತನ, ಜನಸಂಖ್ಯೆ ನಮಗೆ ದೊಡ್ಡ ಸವಾಲಾಗಿದ್ದವು. ಜನಸಂಖ್ಯೆಯೇ ದೇಶಕ್ಕೆ ದೊಡ್ಡ ಶಾಪ ಎಂದು ವಿಶ್ಲೇಷಣೆ ಮಾಡಲಾಗುತ್ತಿತ್ತು. ಆದರೆ, ಮೋದಿಯವರು ಬಂದ ಮೇಲೆ ಜನಸಂಖ್ಯೆಯನ್ನೇ ಅಭಿವೃದ್ಧಿಯ ಏಣಿ ಮಾಡಿ ಶೇ 46 ರಷ್ಟಿರುವ ಯುವಕರನ್ನು ಬಳಸಿಕೊಂಡು ದೇಶದ ಅಭಿವೃದ್ಧಿ ಮಾಡುತ್ತಿದ್ದಾರೆ. ಇದು ನರೇಂದ್ರ ಮೋದಿಯವರ ತಾಕತ್ತು. ಸವಾಲನ್ನು ಮೆಟ್ಟಿಲಾಗಿ ಮಾಡಿಕೊಂಡು ಸವಾಲನ್ನು ಗೆಲುವಾಗಿ ಪರಿವರ್ತಿಸುವ ಶಕ್ತಿ ನರೇಂದ್ರ ಮೋದಿಯವರಿಗೆ ಇದೆ.

ಮನಮೋಹನ್ ಸಿಂಗ್ ದುರ್ಬಲ ಪಧಾನಿ

ಮೋದಿಯವರು ಬರುವ ಮೊದಲು ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು. ಆಗ ದೇಶದಲ್ಲಿ ಅತ್ಯಂತ ದುರ್ಬಲ ಸರ್ಕಾರ ಹಾಗೂ ದುರ್ಬಲ ಪಧಾನಿ ಇದ್ದರು. ಮನಮೋಹನ್ ‌ ಸಿಂಗ್ ಅವರು ರಿಮೋಟ್ ಕಂಟೋಲ್ ಪ್ರಧಾನಮಂತ್ರಿಯಾಗಿದ್ದರು. ಸೋನಿಯಾಗಾಂಧಿ ಮಾತು ಮೀರಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಸ್ವತಃ ರಾಹುಲ್ ಗಾಂಧಿ ಮನಮೋಹನ್ ಸಿಂಗ್ ಅವರಿಗೆ ಗೌರವ ಕೊಡುತ್ತಿರಲಿಲ್ಲ ಎಂದರು.

ಒಂದು ಸಾರಿ ಮನಮೋಹನ್ ಸಿಂಗ್ ಅವರು ಯಾವ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುತ್ತವೆಯೋ ಅಂತವರಿಗೆ ಚುನಾವಣೆಗೆ ಸ್ಪರ್ಧೆಗೆ ಅವಕಾಶ ನೀಡಬಾರದು ಎನ್ನುವ ಕಾನೂನು ತರಲು ಹೊರಟಿದ್ದರು. ಆಗ ರಾಹುಲ್ ಗಾಂಧಿಯವರು ವಿದೇಶದಲ್ಲಿದ್ದರು. ಅವರು ವಿಮಾನದಲ್ಲಿ ಬರುವಾಗ ಅವರಿಗೆ ವಿಧೇಯಕದ ಪ್ರತಿ ನೀಡಿದ್ದರು. ಅವರು ಅವರದೇ ಪಕ್ಷದ ಪ್ರಧಾನಿ ಜಾರಿಗೆ ತರಲು ಹೊರಟಿದ್ದ ಕಾನೂನು ಪ್ರತಿಯನ್ನು ಹರಿದು ಹಾಕಿದ್ದರು. ಯಾಕೆಂದರೆ ರಾಹುಲ್ ಗಾಂಧಿ ಅವರ ಕೈಯಲ್ಲಿ ಮನಮೋಹನ್ ಸಿಂಗ್ ಅವರ ರಿಮೋಟ್ ಕಂಟ್ರೋಲ್ ಇತ್ತು ಪ್ರಧಾನಿ ನರೇಂದ್ರ ಮೋದಿ  ರಿಮೋಟ್ ಕಂಟೋಲ್‌ನಲ್ಲಿ ಯಾವುದೇ ವ್ಯಕ್ತಿಯ ಕೈಯಲ್ಲಿ ಇಲ್ಲ. ಇಡಿ ದೇಶದ 130 ಕೋಟಿ ಜನರ ರಿಮೋಟ್ ಕಂಟ್ರೋಲ್‌ನಲ್ಲಿ ಇದ್ದಾರೆ ಎಂದು ಹೇಳಿದರು.

ಕೈಗಾರಿಕೆ ನೀರಾವರಿಗೆ ಯೋಜನೆ
ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ತರಲು ಶಿಕ್ಷಣ ಹಾಗೂ ಔದ್ಯೋಗಿಕ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗುವುದು. ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಈ ಕ್ಷೇತವನ್ನು ಸಮಗ್ರ ಅಭಿವೃದ್ಧಿ ಮಾಡಲು ತೀರ್ಮಾನಿಸಿದ್ದೇನೆ. ಅದಕ್ಕಾಗಿ ಎಲ್ಲರೂ ನರೇಂದ್ರ ಮೋದಿಯವರ ಕೈ ಬಲ ಪಡಿಸಲು ಕಮಲದ ಗುರುತಿಗೆ ಮತ ನೀಡಿ ತಮ್ಮನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. 
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು. 

 ಬಿಸಿಪಿ ಥ್ರಿ ಇನ್ ಒನ್ : ಬೊಮ್ಮಾಯಿ
ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅವರು ಪೊಲೀಸ್ ಅಧಿಕಾರಿಯಾಗಿ, ಸಿನೆಮಾ ನಟರಾಗಿ, ರಾಜಕಾರಣಿಯಾಗಿ ಥ್ರಿ ಇನ್ ಒನ್ ಮ್ಯಾನ್ ಆಗಿದ್ದಾರೆ. ಇದು ಅಷ್ಟು ಸುಲಭದ ಮಾತಲ್ಲ. ಒಬ್ಬ ಅಧಿಕಾರಿಯಾಗಿ ನೇಮಕ ಆಗುವುದೇ ಕಷ್ಟ ಅಂತದರಲ್ಲಿ ಪೊಲೀಸ್ ಅಧಿಕಾರಿಯಾಗಿ ನೇಮಕ ಆಗಿ ಕೆಲಸ ಮಾಡಿ, ಅಲ್ಲಿಂದ ಸಿನೆಮಾ ರಂಗ ಪ್ರವೇಶ ಮಾಡಿ, ಭಾವನಾತ್ಮಕ ಲೋಕಕ್ಕೆ ಹೋಗಿ ಅಲ್ಲಿಯೂ ಜನರ ಪ್ರೀತಿ ಗಳಿಸಿ, ಈಗ ರಾಜಕಾರಣಿಯಾಗಿ ಬಂದು ಎಲ್ಲರ ಎದುರು ನಿಂತಿದ್ದಾರೆ ಎಂದು ಹೇಳಿದರು.
ಅಧಿಕಾರ ಇಲ್ಲದಿದ್ದಾಗ ರೈತರ ಪರವಾಗಿ ಬರಗಾಲದ ಸಲುವಾಗಿ ಹೋರಾಟ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ತಾವು ಯಾವುದಕ್ಕೆ ಹೋರಾಟ ಮಾಡಿದ್ದರೋ, ಅದನ್ನು ಈಡೇರಿಸುವ ಕೆಲಸ ಮಾಡಿದ್ದಾರೆ ಎಂದು ಹೆಳಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by