shrinath joshi | Knobly

ಜ್ಞಾನದ ವಲಸೆ..‌. ! ತಪ್ಪ್ಯಾರದ್ದು..?

03 Apr, 2024

ಜ್ಞಾನದ ವಲಸೆ..‌. !   ತಪ್ಪ್ಯಾರದ್ದು..?

 

 

ಶ್ರೀನಾಥ್ ಜೋಶಿ ಸಿದ್ದರ್.

       ಭಾರತೀಯ ಗುರು ಕುಲ ಪದ್ಧತಿ ಪ್ರಪಂಚಕ್ಕೆ ಮಾದರಿ. ಅದಕ್ಕೆ ಕಾರಣ ಗುರುಕುಲ ಪದ್ಧತಿಯಲ್ಲಿ  ಕಲಿಸುವ ಮತ್ತು ಕಲಿಯುವ ಶಿಕ್ಷಣ ಪರಿಣಾಮಕಾರಿಯಾಗುವುದಕ್ಕೆ ಮತ್ತು  ಸೂಕ್ತ ರೀತಿಯ ಪರಿಪೂರ್ಣ ವ್ಯಕ್ತಿತ್ವದ ನಿರೂಪಣೆಗೆ ಒತ್ತು ಕೊಡುವ ಶಿಕ್ಷಣ ಅದಾಗಿತ್ತು. ಅದಕ್ಕಾಗಿಯೇ ಗುರುಕುಲ ಪದ್ಧತಿಯನ್ನು ಭಾರತೀಯ ಶಿಕ್ಷಣ ಪದ್ಧತಿ ಎಂದು ಗುರುತಿಸಿಕೊಂಡಿದ್ದು ಅದನ್ನು ಸಾರ್ಥಕಮಾಡಲು ಅನೇಕ ಲಕ್ಷಣಗಳು ಹಾಗೂ ನಿಯಮಗಳು ಗುರುಕುಲ ಪದ್ಧತಿಯಲ್ಲಿ ಅಡಕವಾಗಿದ್ದವು. ಅಂಥಹ ಮಹತ್ವದ ನಿಯಮ ಮತ್ತು ಲಕ್ಷಣಗಳ ಕಾರಣಕ್ಕೆ ಭಾರತೀಯ ಕಲಿಕಾ ಪದ್ಧತಿಗೆ ಪ್ರಪಂಚದಲ್ಲಿ ಮಾನ್ಯತೆ ಇತ್ತು. ಭಾರತದ ಭದ್ರ ಬುನಾದಿಗೆ ಇಲ್ಲಿನ ಶಿಕ್ಷಣವೇ ಪ್ರಮುಖ ಕಾರಣ ಎನ್ನುವದನ್ನು ವಿದೇಶಿ ವಿದ್ವಾಂಸರು ಕಂಡುಕೊಂಡಿದ್ದರು. ನಮ್ಮ ದೇಶದ ಶಸ್ತ್ರ ಹಾಗೂ ಶಾಸ್ತ್ರ ವಿದ್ಯೆಯ ಜೊತೆ ಇಲ್ಲಿನ ಗಣಿತಶಾಸ್ತ್ರ, ಖಗೋಳಶಾಸ್ತ್ರ, ವ್ಯಾಕರಣಶಾಸ್ತ್ರ, ಜೋತಿಷ್ಯಶಾಸ್ತ್ರ, ಇತ್ಯಾದಿಗಳನ್ನು ಮೀರಿಸುವ ಪ್ರಮೇಯವೇ ಇರಲಿಲ್ಲ. ಪರಿಣಾಮ ನಮ್ಮದೇಶದ ಅನಾದಿಕಾದಿಂದಲೂ ಜಗತ್ತಿಗೆ ಮಾದಿರಿಯಾದ ವಿಶ್ವವಿಧ್ಯಾಲಯಗಳು ಇದ್ದವು ಎನ್ನುವುದು ನಮ್ಮ ಹೆಮ್ಮೆಯಾಗಿದೆ.

            ಜಗತ್ತಿನ ಆಧುನಿಕ ತತ್ತ್ವ ಚಿಂತಕರು ಭಾರತೀಯ ಶಿಕ್ಷಣ ಪದ್ಧತಿಯ ಸತ್ವವನ್ನು ಅರಿತು ಭಾರತದಲ್ಲಿ ಇರುವ  ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ವಿಶ್ವದಾಧ್ಯಂತ ಕೆಲವು ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದರು. ಆ ಮೂಲಕ ಪ್ರಾಚೀನ ಭಾರತದ ಶಿಕ್ಷಣ ಪದ್ಧತಿಯಲ್ಲಿರುವ ವಿದ್ಯಾರ್ಥಿಗಳನ್ನು ಆಧುನಿಕ ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸುವ ಮೂಲಕ ಪುನರುಜ್ಜೀವನಗೊಳಿಸುವ ಪ್ರಯತ್ನ ನಿರಂತರ ನಡೆಯುತ್ತಿದೆ. ನಮ್ಮ ಗುರುಕುಲ ಪದ್ಧತಿಯಲ್ಲಿ ಹೊಸ ಪಾಠ ಪ್ರಾರಂಭಕ್ಕೂ ಮುನ್ನ, ಹಿಂದಿನ ಪಾಠದ ಪುನರಾವಲೋಕನ ಮಾಡುತ್ತಿದ್ದರು. ಅದಕ್ಕಾಗಿ ಗುರುಗಳು ೧೦ ನಿಮಿಷ ಕಾಲ ಮಿಸಲಿಡುತ್ತಿದ್ದರು. ಇದರಿಂದಾಗಿ  ಹಿಂದಿನ ದಿನದ ಪಾಠ ಅರ್ಥವಾಗಿದೆಯೇ ಇಲ್ಲವೇ ಎನ್ನುವದುನ್ನು ಅರಿತುಕೊಳ್ಳುತ್ತಿದ್ದರು. ಈ ಮೂಲಕ ವಿದ್ಯಾರ್ಥಿಗಳ ಜ್ಞಾನ ಜೊತೆ ಪರೀಕ್ಷೆಯೂ  ನಡೆದುಹೊಗುತ್ತಿತ್ತು. ಈ ಪದ್ಧತಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆಯೋ ಇಲ್ಲವೋ ಎನ್ನುವುದು ಪ್ರತಿದಿನವೂ ಅಧ್ಯಾಪಕರಿಗೆ ತಿಳಿಯುತ್ತಿತ್ತು. ಈ ಶಿಕ್ಷಣ ಪದ್ಧತಿಯನ್ನು ಪ್ರಪಂಚದ ಬಹುತೇಕ ಶಿಕ್ಷಣ ತಜ್ಞರೂ ಸಹ ಒಪ್ಪಿಕೊಂಡಿದ್ದರು. ಹೀಗಾಗಿಯೇ ಹಿಂದೆ ಭಾರತಕ್ಕೆ ಶಿಕ್ಷಣ ಪಡೆಯಲೇಂದೆ ಎಷ್ದೆಷ್ಟೂ ವಿದೇಶಿಗರು ಭಾರತದಲ್ಲಿ ಠಿಕಾಣಿಮಾಡುತ್ತಿದ್ದರು.

          ಈಗ ನಮ್ಮ ದೇಶದ ಪರಸ್ಥಿತಿ ತಲೆಕೆಳಗಾಗುತ್ತಿದೆ. ನಮ್ಮ ವಿದ್ಯಾರ್ಥಿಗಳು ದೇಶ ಬಿಟ್ಟು ವಿದೇಶದಲ್ಲಿ ಕಲಿಯುವುದರಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಅದಕ್ಕೆ ಕಾರಣ ನಮ್ಮ ದೇಶದಲ್ಲಿ ಆಧುನಿಕ ಶಿಕ್ಷಣ ಪದ್ದತಿ ಸುಧಾರಿಸಿದರು ಕೆಲವು ದೇಶದಲ್ಲಿ ನಮ್ಮಲ್ಲಿಯ ಶಿಕ್ಷಣ ಕ್ವಾಲಿಟಿಗಿಂತ ವಿದೇಶದಲ್ಲಿ ಉತ್ತಮ ಇದೆ ಎನ್ನುವ ಮಾತು ಕೇಳಿಬರುತ್ತಿದೆ. ಪ್ರತಿ ವರ್ಷವೂ ನಮ್ಮ ದೇಶದಿಂದ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಹೆಸರಿನಲ್ಲಿ ಅಮೆರಿಕ,ಇಂಗ್ಲೆಂಡ್, ಆಸ್ಟ್ರೇಲಿಯಾ,ಕೆನಡಾ,ಫ್ರಾನ್ಸ್ನಂತಹ ದೇಶದ ವಿಶ್ವವಿದ್ಯಾಲಯಗಳತ್ತ ಮುಖ ಮಾಡುತ್ತಿದ್ದಾರೆ. ಅಲ್ಲಿಯ ಥಳಕು ಬಳುಕಿನ ಜೀವನ, ಉತ್ತಮ ವಿದ್ಯಾಭ್ಯಾಸ ಕನಸು, ಉದ್ಯೋಗದ ಲಾಲಸೆ, ಪಾಲಕರ ಪ್ರತಿಷ್ಠೆ ಹೀಗೆ ಅನೇಕ ಕಾರಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳು ಶಿಕ್ಷಣದ ಹೆಸರಿನಲ್ಲಿ ವಿದೇಶಿ ವಿಮಾನ ಹತ್ತುತ್ತಾರೆ. ಇದಕ್ಕಾಗಿ ನಮ್ಮ ದೇಶದ ವಿದ್ಯಾರ್ಥಿಗಳಿಂದ ಸಾವಿರಾರು ಕೋಟಿ ಡಾಲರ್ ವೆಚ್ಚಮಾಡಲಾಗುತ್ತಿದೆ.

            2018 ರಲ್ಲಿ  ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನಕ್ಕೆ ಮಾಡಿರುವ  ವೆಚ್ಚ 30 ಶತಕೋಟಿ ಡಾಲರ್‌ಗಳು,ಅಂದು ಅದರ ಭಾರತಿಯ ಮೌಲ್ಯ 2.80 ಲಕ್ಷ ಕೋಟಿ ರೂ.  ಆ ವರ್ಷ ನಮ್ಮ ದೇಶದಲ್ಲಿರುವ ಎಂಟೂ ಐಐಟಿಗಳ ವಾರ್ಷಿಕ ಬಜೆಟ್ 13.9 ಸಾವಿರ ಕೋಟಿ ರೂ. ಎನ್ನುವುದನ್ನು ಗಮಸಬೇಕು.

       ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ  ವರದಿಯಪ್ರಕಾರ 2020ರಲ್ಲಿ 4.5 ಲಕ್ಷ , 2021 ರಲ್ಲಿ 4.4 ಲಕ್ಷ,  ಹಾಗೂ 2023ರಲ್ಲಿ 7.5 ಲಕ್ಷ ಭಾರತೀಯ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಿಗೆ ತೆರಳಿದ್ದಾರೆ ಎಂದು ಖಚಿತ ಪಡೆಸಿದ್ದಾರೆ. ಇದರ ಜೊತೆಗೆ ಮುಂದಿನ ಜಾಗತಿಕ ಶೈಕ್ಷಣಿಕ ವರ್ಷದಲ್ಲಿ ಅಂದಾಜು 18 ಲಕ್ಷಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ.  ಒಂದು ಅಂದಾಜಿನ ಪ್ರಕಾರ 2024 ರ ವೇಳೆಗೆ ವಿದೇಶಗಳಲ್ಲಿ ವ್ಯಾಸಂಗ ಮಾಡಲಿರುವ ವಿದ್ಯಾರ್ಥಿಗಳ ಸಂಖ್ಯೆ  18 ಲಕ್ಷ. ಈ 18 ಲಕ್ಷ ಭಾರತೀಯ ವಿದ್ಯಾರ್ಥಿಗಳು 80 ಶತಕೋಟಿ ಡಾಲರ್ ಗಳನ್ನು ವ್ಯಾಸಂಗಕ್ಕಾಗಿ ವ್ಯಯಿಸಲಿದ್ದಾರೆ. ಅದು ನಮ್ಮ ದೇಶದ ರೂಪಾಯಿ ಮೌಲ್ಯದಲ್ಲಿ ಬರೋಬ್ಬರಿ 6.55 ಲಕ್ಷ ಕೋಟಿ ರೂಪಾಯಿಗಳಾಗಲಿದೆ. ಇನ್ನೂ ಸೋಜಿಗವೆಂದರೆ 2023-24ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ಉನ್ನತ ಶಿಕ್ಷಣಕ್ಕಾಗಿ  ಮೀಸಲಿಟ್ಟಿರುವ ಅನುದಾನ  44.09 ಸಾವಿರ ಕೋಟಿ ರೂಪಾಯಿ

        ನಮ್ಮ ದೇಶದಲ್ಲಿ ಶೈಕ್ಷಣಿಕ ಪದ್ದತಿ ಸರಿ ಇಲ್ಲವೇ..?  ಯಾವ ಕಾರಣಕ್ಕೆ ವಿದೇಶದ ಅಧ್ಯಯನಕ್ಕೆ ಇಷ್ಟೊಂದು ಬೇಡಿಕೆ. ವಿದೇಶದಲ್ಲಿ ಕಲಿತು ದೇಶಕ್ಕೆ ಏನಾದರೂ ಕೊಡುಗೆ ನೀಡುವ ಕನಸನ್ನು ಇಟ್ಟುಕೊಂಡು ಇವರೆಲ್ಲಾ ವಿದ್ಯಾರ್ಜನೆಗೆ ಸೀಮೋಲ್ಲಂಘನ ಮಾಡುತ್ತಿದ್ದಾರಾ ಎನ್ನುವ ಮೂಲಭೂತ ಪ್ರಶ್ನೆಯೂ ಬರುತ್ತಿದೆ. ಒಂದು ಅಧ್ಯಯನದ ಪ್ರಕಾರ ವಿದೇಶದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳ ಪೈಕಿ ಶೇ. 70 ರಷ್ಟು ವಿದೇಶದಲ್ಲಿಯೇ ನೇಲೆನಿಂತಿದ್ದಾರೆ, ಇವರಲ್ಲಿ ಶೇ. 50 ರಷ್ಟು ಜನ ವಿದೇಶದಲ್ಲಿ ಇರುವವರೊಂದಿಗೆ ಮದುವೆಯಾಗಿ ಸೆಟ್ಲ್ ಆಗುತ್ತಾರೆ. ಶೇ. 18 ರಷ್ಟು ಜನರು ಭಾರತದಲ್ಲಿ ಇರುವ ವಿಚಾರ ಮಾಡುತ್ತ ವಿದೇಶದಲ್ಲಿ ನೆಲೆಸಿ ತಮ್ಮ ಇಳಿವಯಸ್ಸನ್ನು ನಮ್ಮ ದೇಶದಲ್ಲಿ ಕಳೆದ್ರಾಯ್ತು ಅಂದು ಕೊಂಡಿರ್ತಾರೆ. ಶೇ.7 ರಷ್ಟು ಜನ ತನ್ನ ದೇಶದಲ್ಲಿ ಏನಾದರೂ ಕೆಲಸ ಆಯ್ದುಕೊಂಡು ಮಾಡಬೇಕು ಎನ್ನುತ್ತಿರುತ್ತಾರೆ. ಅದಕ್ಕೆ ಅಂಥವರಿಗೆ ಇರುವ ಸ್ಥಳೀಯ ವೈಯಕ್ತಿಕ ಕಾರಣಗಳು. ಇನ್ನೂ ಮಿಕ್ಕ ಶೇ 10 ರಷ್ಟು ವಿದೇಶದಲ್ಲಿ ಕಲಿತವರು ಅವರ ಪೂರ್ವಿಕರು ನಡೆಸುವ ಉದ್ಯೋಗ ಮಾಡುತ್ತಾರೆ. ಇಲ್ಲಿ ಗಮನಸಿಬೇಕಾಗಿದ್ದು  ಸರಕಾರ ಮಟ್ಟದಲ್ಲಿ ಇದ್ದು ದೇಶ ಸೇವೆ ಮಾಡಬೇಕು ಎನ್ನುವವರು ಯಾರೋಬ್ನರೂ ಇಲ್ಲ. ಅಲ್ಲೊಬ್ಬರು ಇಲ್ಲೋಬ್ಬರು ರಾಜ ಕಾರಣಕ್ಕೆ ಬಂದವರನ್ನು ನೋಡಬಹುದು. ಅದಕ್ಕೂ ಅಂಥವರಿಗೆ ರಾಜಕೀಯದ ಹಿನ್ನೆಲೆ ಇದ್ದವರು ಮಾತ್ರ.

        ವಿದೇಶದ  ವ್ಯಾಸಂಗ ಅಷ್ಟೊಂದು ಸುಲಭವಲ್ಲ. ಅದು ತೀರಾ ದುಬಾರಿ ಕಲಿಕೆ. ಆದರೂ ವಿದೇಶಕ್ಕೆ  ತೆರಳಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿರುತ್ತಿದೆ. ಅದಕ್ಕೆ ಹತ್ತಾರು ಕಾರಣಗಳನ್ನು ಗುರುತಿಸಬಹುದು.  ಅವುಗಳಲ್ಲಿ ಪ್ರಮುಖವಾಗಿ ವಿದೇಶಿ ಶಿಕ್ಷಣಕ್ಕೆ  ಅಂತರರಾಷ್ಟ್ರೀಯ ಮಾನ್ಯತೆ  ಇರುವ ಗುಣಮಟ್ಟ.  ಉತ್ತಮ ಬದುಕು ರೂಪಿಸಿಕೊಳ್ಳವ ಭರವಸೆ.ಅತ್ಯುತ್ತಮ ಮೂಲ ಸೌಕರ್ಯಗಳು, ಪರಿಣಿತ ಅಧ್ಯಾಪಕರು ಲಭ್ಯ, ನಮ್ಮಲ್ಲಿ ಲಭ್ಯ ಇಲ್ಲದ ವಿಶಿಷ್ಟ ಕೋರ್ಸುಗಳು ಇರುವಿಕೆ, ವಿದ್ಯಾರ್ಥಿವೇತನ, ಆರ್ಥಿಕ ನೆರವಿನ ಅವಕಾಶಗಳು, ಶಿಕ್ಷಣದ ನಂತರ ಕೆಲ ಕಾಲ ವಿದೇಶದಲ್ಲಿಯೇ ಉಳಿದು ಕೆಲಸ ಮಾಡುವ ಅವಕಾಶ.  ಪ್ರಗತಿಪರ ಬಹುಸಂಸ್ಕೃತೀಯ ಪರಿಸರದ ವ್ಯಾಮೋಹ.  ಪಾಲಕರ ಪ್ರತಿಷ್ಠೆಗೆ ಮಕ್ಕಳನ್ನು ವಿದೇಶದಲ್ಲಿ ಅಧ್ಯಯನ ಮಾಡಿಸುತ್ತಾರೆ. ಹೀಗೆ ಹತ್ತಾರು ವಿಷಯಗಳ ಕಾರಣ ಅಧ್ಯಯನಕ್ಕೆ ವಿದೇಶಿ ವ್ಯಾಮೋಹ ಹುಟ್ಟಿಕೊಂಡಿದೆ.

           ವಿದೇಶಗಳಲ್ಲಿ ಇರುವ ಕೆಲವು ಕೋರ್ಸುಗಳು ನಮ್ಮಲ್ಲಿ ಇಲ್ಲದೇ ಇರಬಹುದು, ಆದರೆ ಇದ್ದ ಕೋರ್ಸುಗಳು ಬಹುತೇಕ ವಿದೇಶಿ ಶಿಕ್ಷಣಕ್ಕೆ ಸೆಡ್ಡು ಹೊಡೆಯುತ್ತವೆ. ಕಳೆದ ಕೆಲವು ದಶಕಗಳ ಹಿಂದೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಂತಹ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳು ಪ್ರಶಂಸನೀಯ ಕೆಲಸ ಮಾಡುತ್ತಿವೆ. ಪರಿಣಾಮವಾಗಿ ಮದ್ರಾಸ್, ದೆಹಲಿ, ಮುಂಬೈಗಳಲ್ಲಿ ಐಐಟಿ ಕೇಂದ್ರವಿದ್ದು ಇನ್ನೂ ತಮ್ಮ ತನವನ್ನು ಉಳಿಸಿಕೊಂಡು ಬಂದಿದೆ.  ಇಂತಹ ಸಂಸ್ಥೆಗಳಲ್ಲಿ ಕಲಿಯುವುದೇ   ಪ್ರತಿಷ್ಠೆಯ ಸಂಕೇತ. ಆದರೆ ಅಂತಹ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವುದು ಅಷ್ಟು ಸುಲಭವಲ್ಲ. ದೇಶದಲ್ಲಿರುವ 23 ಐಐಟಿ ಯಲ್ಲಿ ಪ್ರವೇಶ ಪಡೆಯಬೇಕು ಎಂದು  2022ರಲ್ಲಿ  9 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದರು. ಆ ಪೈಕಿ ಶೇ18 ರಷ್ಟು ಅಂದರೆ 16,290. ಜನರು  ಮಾತ್ರ ಪ್ರವೇಶ ಪಡೆದಿದ್ದರು.  ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಗೆ ಅಭ್ಯರ್ಥಿಗಳು ಬರೆಯುವ ಕ್ಯಾಟ್ ಪರೀಕ್ಷೆಯ ಕಥೆಯೂ ಇದೇ. ಅತ್ಯಂತ ಕಠಿಣ ಸ್ಪರ್ಧೆಯಿರುವುದರಿಂದ  ಈ ಪರೀಕ್ಷೆಗಳಲ್ಲಿ ಸಾವಿರಾರು ಪ್ರತಿಭಾವಂತರು ಆಯ್ಕೆಗೊಳ್ಳುತ್ತಿಲ್ಲ. 

        ಇನ್ನೊಂದು ದುರಂತ ಎಂದರೆ ಐಐಟಿ, ಐಐಎಂ ಇತ್ಯಾದಿಗಳ ಮಟ್ಟಕ್ಕೆ ತಮ್ಮ ಮೌಲ್ಯಗಳನ್ನು ಏರಿಸಿಕೊಳ್ಳುವ  ಉನ್ನತ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿಲ್ಲ.   ಶೈಕ್ಷಣಿಕ ಸಂಸ್ಥೆಗಳು  ಎಂಬುದು ಬರೀ ವೈಭವೋಪೇತವಾದ ಕ್ಯಾಂಪಸ್, ದುಬಾರಿ ಸೌಕರ್ಯಗಳು, ಕಲಾತ್ಮಕ ಲಾಂಛನ, ವೈಭವೋಪೇತ ಪ್ರಚಾರ ಸೇರಿದಂತೆ ನಿತ್ಯ ಗಮನಸೆಳೆಯುವ ಕಾರ್ಪೋರೆಟ್ ವ್ಯವಸ್ಥೆಯ ಸಂಸ್ಥೆಗಳು  ಯಾವತ್ತು ಭವಿಷ್ಯದ ವಿಶ್ವಾಸಾರ್ಹತೆ, ಶ್ರೇಷ್ಠತೆ, ಜ್ಞಾನಾರ್ಜನೆ ಮತ್ತು ನೈತಿಕತೆಯ ಕುರಿತು ತಲೆಕೆಡಿಸಿ ಕೊಂಡಿಲ್ಲ. ನಮ್ಮ ದೇಶದಲ್ಲಿ  ತಳಕು ಬಳಕಿನ ಭವ್ಯತೆ ಇರುವ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ, ಸಂಶೋಧನೆ, ಮೂಲಸೌಕರ್ಯ, ಸಂಪನ್ಮೂಲಗಳು ತೀವ್ರ ಕಳಪೆ ಮಟ್ಟದಲ್ಲಿ ಇರುತ್ತವೆ.  ಮಕ್ಕಳಿಗೆ ಉತ್ತಮ ಪ್ರಾಧ್ಯಾಪಕರು, ಸಂಶೋಧಕರರು,   ಸಂಶೋಧನಾಸಕ್ತ  ಸಂಶೋಧನಾ ಪ್ರಬಂಧಗಳ ವಿವರಗಳು  ಇತ್ಯಾದಿ ನಮ್ಮ  ದೇಶದಲ್ಲಿನ ವಿದ್ಯಾರ್ಥಿಗಳಿಗೆ ದೊರೆಯುವುದಿಲ್ಲ. ಜೊತೆಗೆ ನಮ್ಮಲ್ಲಿ ಶಿಕ್ಷಣ ಮುಗಿಸುವುದಕ್ಕೆ ಕಾಲಾವಕಾಶ ನಿಗದಿ ಮಾಡಲಾಗಿದೆ. ಅದೇ ವಿದೇಶದಲ್ಲಿ ಕಲಿಕೆಗೆ ಯಾವುದೇ ಕಾಲಮಿತಿಯಿಲ್ಲ ಬದಲಾಗಿ ಅನಿಯತವಾಗಿದ್ದು ತನ್ನ                            ಅನುಕೂಲಕ್ಕಅನುಸಾರವಾಗಿ ವ್ಯವಸ್ಥೆ ಮಾಡಿಕೊಳ್ಳಬಹುದು. ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಬಹುಪಾಲು  ರಾಜಕಾರಣಿಗಳ ಮಾಲೀಕತ್ವದಲ್ಲಿ ಇದ್ದು ಶಿಕ್ಷಣವನ್ನು ವ್ಯಾಪಾರೀಕರಣ ಮಾಡುವುದರಲ್ಲಿ ತೊಡಗಿಕೊಂಡಿವೆ. ನಮ್ಮ ಸಂಸ್ಥೆಗಳು ಭವ್ಯ ಭಾರತದ ಬುನಾದಿಯನ್ನು ಗಟ್ಟಿಮಾಡಬೇಕು ಎನ್ನುವ ಕುರಿತು ಎಂದೂ  ತಲೆಕೆಡಿಸಿಕೊಂಡಿದ್ದಿಲ್ಲ.

            ನಮ್ಮಲ್ಲಿ  ಉನ್ನತ ಶಿಕ್ಷಣ ಕ್ಷೇತ್ರ ಶೋಚನೀಯ ಪರಿಸ್ಥಿತಿಗೆ ತಲುಪಿದೆ ಎಂದು ಭಾರತ ಸರ್ಕಾರದ ಮಹಾಲೇಖಪಾಲರು ತಮ್ಮ ಹಲವಾರು ವರದಿಗಳಲ್ಲಿ, ಉಲ್ಲೇಖಿಸಿಸ್ದಾರೆ. ಬಹುತೇಕ  ವಿಶ್ವವಿದ್ಯಾಲಯಗಳಿಗೆ ಸ್ವಂತ ಕಟ್ಟಡವಿಲ್ಲ, ಪ್ರಯೋಗಶಾಲೆಯಿಲ್ಲ, ಯಾವ ಕೈಗಾರಿಕಾ ಸಂಸ್ಥೆಗಳೂ ಸಂಶೋಧನೆಯನ್ನು ಪ್ರಾಯೋಜಿಸಿಲ್ಲ.   ಆದರೂ ಸರ್ಕಾರ  ಶಿಕ್ಷಣ ಕ್ಷೇತ್ರಕ್ಕೆ ನೀಡುವ  ಅನುದಾನವನ್ನು ಜಿಡಿಪಿಯ ಶೇ 2.8 ರಿಂದ ಶೇ 2.9ಕ್ಕೆ, ಏರಿಸಿದ್ದಾರೆ.  ಅಂದರೆ ಶೇ 0.1 ರಷ್ಟು ಹೆಚ್ಚಿಸಿದೆ ಎನ್ನುವುದನ್ನು ಎಲ್ಲರೂ ಗಮನಿಸಬೇಕಾದ ಸಂಗತಿ.  ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಭಾರತದಲ್ಲಿಯೇ ಸಿಕ್ಕಾಗ ನಮ್ಮ ಮಕ್ಕಳು  ವಿದೇಶಕ್ಕೆ ಯಾಕೆ ಹೋಗಬೇಕು.  ದೇಶದ ಸಂಪತ್ತು ಹಾಗೂ ಬುದ್ಧಿಮತ್ತೆ  ಈ ಬಗ್ಗೆ  ಸರ್ಕಾರ ಚಿಂತನೆ ಮಾಡಬೇಕಿದೆ.

Publisher: shrinath joshi | Knobly

Login to Give your comment
Powered by