ನೆನಪಿನ ಬುತ್ತಿ ಬಿಚ್ಚಿಟ್ಟ ಕರಪತ್ರ
✍ ಶ್ರೀನಾಥ್ ಜೋಶಿ ಸಿದ್ದರ್
ನೆನಪುಗಳು ಎಂದೂ ಮಸುಕಾಗಲಾರವು, ಅದು ಕಾಲ ಕಾಲಕ್ಕೆ ಬದಲಾಗುವ ಪರಿಸ್ಥಿತಿಯಲ್ಲಿ ಮರೆಯಬಹುದೇ ವಿನಹ ಅಳಿಸಲು ಸಾಧ್ಯವಿಲ್ಲ. ನೆನಪುಗಳು ಮತ್ತೆ ಮರುಕಳಿಸು ಯಾವುದಾದರೊಂದು ಘಟನೆಗಳು ವ್ಯಕ್ತಿಗಳು, ವಸ್ತುಗಳು ಇದ್ದರೆ ಸಾಕು.. ನೆನಪಿನ ಬುತ್ತಿ ತಾನಾಗಿಯೇ ಬಿಚ್ಚಿಕೊಳ್ಳುತ್ತದೆ. ಆ ಬುತ್ತಿ ಎಂದೂ ಹಳಸುವುದಿಲ್ಲ, ಬದಲಿಗೆ ನೆನಪಿಸಿಕೊಂಡಾಗ ಹೊಸದೊಂದು ಪಾಕವೇ ಸಿದ್ದವಾಗಬಹುದು. ನಾವು ಮಾಡುವ ನೆನಪುಗಳು ನಮ್ಮ ಜೀವನದಲ್ಲಿ ಸಂತೋಷ ತರಬಹುದು, ಸೌಹಾರ್ದತೆ ಬೆಳೆಸಬಹುದು, ಸೌಜನ್ಯದ ಮುಗ್ಧತೆ ಮರುಕಳಿಸಬಹುದು.. ಇತ್ಯಾದಿ ಇತ್ಯಾದಿ...
ನಾನು ಕಂಡ ಪ್ರತಿಭೆಯ ಸಾಕಾರ ಮೂರ್ತಿಯಂತಿರುವ ಲೇಖಕ, ವಿಮರ್ಶಕ, ವಿದ್ವಾಂಸ ಪ್ರೊ. ಎನ್.ಎಸ್.ಶ್ರೀಧರ್ ಮೂರ್ತಿ ಅವರ ಜೊತೆ ಇದ್ದಾಗ ನೆನಪುಗಳು ಎನ್ನುವ ಬ್ರಹ್ಮಪದಾರ್ಥ ಆಗಾಗ ಸಿಗುತ್ತಲೇ ಹೋಗುತ್ತದೆ. ಈ ಬಾರಿ ನಡೆದಿದ್ದು ಅಂತಹದೇ ಫಟನೆ. ಅದರಿಂದ ನನ್ನ ಹುಡುಕಾಟದ ಬುದ್ದಿಗೆ ನೆನಪಿನ ಒರೆಹಚ್ಚಲು ಕಾರಣವಾಗಿತ್ತು. ಪ್ರೊ. ಶ್ರೀಧರ್ ಮೂರ್ತಿಗಳ ದಾಸ್ತಾನಿನಲ್ಲಿ ಒಂದು ಅಪರೂಪದ ಸಂಗ್ರಹವಿತ್ತು. ಅದಕ್ಕೆ ಸರಿ ಸುಮಾರು 85 ವರ್ಷವಾಗಿತ್ತು. ನೋಡುವುದಕ್ಕೆ ತೀರಾ ಜೀರ್ಣಾವಸ್ಥೆಯಲ್ಲಿದ್ದರೂ ಅದರೊಳಗೆ ಗಟ್ಟಿ ಜೀವ ಅಡಗಿತ್ತು.
ಆ ಕಾಲದಲ್ಲಿ ಸಂಚಾರ ವ್ಯವಸ್ಥೆ ಇನ್ನೂ ಆರಂಭಿಕ ಹಂತದಲ್ಲಿ ಇತ್ತು. ಆಗ ಸಂಚಾರಕ್ಕೆ ಪ್ರಧಾನವಾಗಿದ್ದಿದ್ದು ಎತ್ತಿನ ಗಾಡಿ ಅಥವಾ ಕುದುರೆ ಗಾಡಿಯೊಂದೇ. ಬಸ್ ಎನ್ನುವ ಪರಿಕಲ್ಪನೆಯೇ ರೂಪುಗೊಂಡಿರಲಿಲ್ಲ. ಮೋಟಾರ ವಾಹನ ಎನ್ನುವುದು, ಬಸ್‌ನ ಆರಂಭಿಕ ರೂಪ, ಅಷ್ಟೆಯಲ್ಲ ನಿಗದಿತ ಸಮಯಕ್ಕೆ ಒಂದು ಮೋಟಾರ್ ವಾಹನ ಬರುತ್ತದೆ ಎನ್ನುವ ಪರಿಕಲ್ಪನೆ ಕೂಡಾ ಹೊಸದಾಗಿದ್ದೆ. ಈ ಮಧ್ಯ ಪ್ರಚಾರದ ಕುರಿತು ಮಾಹಿತಿ ಇತ್ತಾದರೂ ಅದಕ್ಕೆ ಬಳಸಿಕೊಳ್ಳುತ್ತಿದ್ದು ಮೌಖಿಕ ಪ್ರಚಾರ, ಡಂಗುರ ಸಾರುವುದು ಇತ್ಯಾದಿ. ತಾಂಬೂಲ ವಿನಿಮಯ, ಹೇಳಿಕೆ ಪ್ರಚಾರ ಇತ್ಯಾದಿಗಳು. ಆದರೆ ಹ್ಯಾಂಡ್ ಬಿಲ್ ಮೂಲಕ ಪ್ರಚಾರಮಾಡುವುದು ಆಗ ಹೊಸ ವಿಚಾರ ಹೊಸದಾಗಿತ್ತು. ಆಗಿನ ಕಾಲಘಟ್ಟದಲ್ಲಿ ಸಾಕ್ಷರತೆಯ ಪ್ರಮಾಣವೂ ಸಾಕಷ್ಟು ಕಡಿಮೆ ಇತ್ತು ಎನ್ನುವುದನ್ನು ಇಲ್ಲಿ ಗಮನಿಸಲೇಬೇಕು. ಅದು ಆಧುನಿಕತೆಗೆ ಆಗಷ್ಟೇ ತೆರೆದುಕೊಳ್ಳುತ್ತಿರುವ ಕಾಲಘಟ್ಟವದು. 1939 ಜನವರಿ 1 ರಿಂದ ಆರಂಭಿಸಲಾಗುವ ಹೊಸ ಉದ್ಯಮದ ಮಾಹಿತಿಯನ್ನು ಆಗಿನ ಜಾಹಿರಾತು ಪತ್ರವೊಂದರಲ್ಲಿ ಅಡಗಿತ್ತು. ಇದನ್ನು 1938ರಲ್ಲಿ ಪ್ರಕಟಿಸಿದರು ಎನ್ನುವುದಕ್ಕೆ ಮತ್ತೆ ಸಾಕ್ಷಿ ಹುಡುಕಬೇಕಿರಲಿಲ್ಲ.
ಇಷ್ಟೆಲ್ಲಾ ಪೀಠಿಕೆಗೆ ಕಾರಣವಾಗಿದ್ದು ಶಿರಸಿಯಲ್ಲಿ ಪ್ರಕಟಿಸಲಾಗಿದ್ದ ಒಂದು ಕರ ಪತ್ರ..!
ಅದು ಸಾಮಾನ್ಯ ಕರಪತ್ರವೇ ಆಗಿರಬಹುದು. ಆದರೆ ಅದರಿಂದ ಮರುಕಳಿಸಿದ ನೆನಪುಗಳ ಸರಣಿ, ಸರಪಳಿಯಂತೆ ಬಿಚ್ಚಿಕೊಳ್ಳಲು ಶುರುವಿಟ್ಟವು. ಜೊತೆಗೆ ಕೆಲವು ಮಾಹಿತಿಯನ್ನು ಕಲೆ ಹಾಕುವ ತವಕಕ್ಕೆ ಕಾರಣವಾಯಿತು.
೧೯೩೯ರ ಜನೆವರಿ ೧ ರಿಂದ ಸೊರಬ ದಿಂದ ಯಲ್ಲಾಪುರದ ವರೆಗೆ ಮೋಟಾರ್ ವಾಹನದ ಸರ್ವೀಸ್ ಆರಂಭಿಸಲಾಗಿತ್ತು. 'ಶ್ರೀ ಮಾರಿಕಾಂಬಾ ಮೋಟಾರ್ ರೋಯಲ್ ಡೇಲಿ ಮೇಲ್ ಮೋಟಾರ್ ಸರ್ವಿಸ್' ಎನ್ನುವ ಸಾರಿಗೆ ಸಂಪರ್ಕ ಕಲ್ಪಿಸಲು ಖಾಸಗಿ ಸಂಸ್ಥೆಯೊಂದು ಹುಟ್ಟಿಕೊಂಡಿತ್ತು. ಸೊರಬದಿಂದ ಹೊರಟು, ಬನವಾಸಿ, ಶಿರಸಿ ಮಾರ್ಗವಾಗಿ ಯಲ್ಲಾಪುರಕ್ಕೆ ತಲುಪುವ ವಾಹನದ ವ್ಯವಸ್ಥೆ ಅದಾಗಿತ್ತು. ಆವತ್ತಿನ ಪರಿಸ್ಥಿತಿಗೆ ಹಾಗೂ ಪದ್ದತಿಗೆ ಅನುಗುಣವಾಗುವಂತೆ ಸಿದ್ದಪಡಿಸಲಾದ ಪ್ರಚಾರದ ಜಾಹಿರಾತು ಪತ್ರವದು.
ಈ ಹ್ಯಾಂಡ್ ಬಿಲ್‌ನಲ್ಲಿ ಜನರು ಬೇರೆ ಬೇರೆ ಊರುಗಳಿಗೆ ತೆರಳಲು ಸಾಕಷ್ಟು ಸಮಯ ವ್ಯಯವಾಗುತ್ತದೆ ಎನ್ನುವ ವಾಸ್ತವವನ್ನು ಪ್ರಕಟಿಸಿದ್ದಾರೆ. ಇನ್ನೂ 'ಶ್ರೀ ಮಾರಿಕಾಂಬಾ ಮೋಟಾರ್ ರೋಯಲ್ ಡೇಲಿ ಮೇಲ್ ಮೋಟಾರ್ ಸರ್ವಿಸ್' ಬಳಸುವುದರಿಂದ ಸಮಯ ಹಾಗೂ ಶ್ರಮದ ಉಳಿತಾಯವಾಗಲಿದೆ ಎನ್ನುವ ಸೂಕ್ಷ್ಮವನ್ನು ಹೇಳುವ ಪ್ರಯತ್ನ ನಡೆದಿದೆ. ಇದರೊಂದಿಗೆ ಪ್ರಯಾಣದ ಸಮಯ, ಮುಂದಿನ ಪ್ರಯಾಣಕ್ಕೆ ಆಗುವ ಅನುಕೂಲ ಇತ್ಯಾದಿಗಳನ್ನು ವಿವರಿಸಿದ್ದರು.
ಈ ಪ್ರಚಾರ ಪತ್ರದಲ್ಲಿ ಒಂದು ಸ್ಪಷ್ಟವಾಗಿ ಬರೆದಿರುವ ಸಂಗತಿ ಎಂದರೆ ಸೊರಬಾ, ಬನವಾಸಿ, ಶಿರಸಿ, ಯಲ್ಲಾಪುರ ಮಾರ್ಗದಲ್ಲಿ ಯಾವುದೇ ಸಾರ್ವಜನಿಕರ ಪ್ರಯಾಣಕ್ಕೆ ಮೀಸಲಿರುವ ಸಂಚಾರದ ವ್ಯವಸ್ಥೆ ಇರಲಿಲ್ಲ. ಇದೇ ಮೊದಲ ಬಾರಿಗೆ 'ಶ್ರೀ ಮಾರಿಕಾಂಬಾ ಮೋಟಾರ್ ರೋಯಲ್ ಡೇಲಿ ಮೇಲ್ ಮೋಟಾರ್ ಸರ್ವಿಸ್' ನವರು ಈ ಸೇವೆ ಆರಂಭಿಸುತ್ತಿದೆ ಎನ್ನುವ ಮಾಹಿತಿಯನ್ನು ದಾಖಲಿಸಿದ್ದಾರೆ. ಪ್ರಯಾಣಿಕರಿಗೆ ಆಕರ್ಷಿಸುವ ಹಿನ್ನೆಲೆಯಲ್ಲಿ ಸೋವೀದರದಿಂದ (ಕೈಗೆಟಕುವ ದರದಲ್ಲಿ) ಪ್ರಯಾಣ ಮಾಡಬಹುದು ಎಂದು ಬರೆಯಲಾಗಿದೆ. ಇದರ ಜೊತೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಉಡುಪಿ, ಹುಬ್ಬಳ್ಳಿ, ಧಾರವಾಡ, ಬೆಳಗಾಂವ, ಕೊಲ್ಲಾಪುರ, ಆನವಟ್ಟಿ, ಶಿರಾಳಕೊಪ್ಪ, ಬ್ಯಾಡಗಿ ಕಡೆಗೆ ಹೋಗಲು ವಾಹನ ವ್ಯವಸ್ಥೆ ಸಿಗುವುದು ಎಂದು ಮುದ್ರಿಸಿದ್ದಾರೆ.
ಇಂತಹ ಕುತೂಹಲ ಭರಿತ ಆ ಕಾಲದ ಮಾಹಿತಿಯನ್ನು ಕಲೆ ಹಾಕುವಾಗ ಇದೇ ಕರಪತ್ರದ ಕೊನೆಯಲ್ಲಿ ಕಾಣುವ ಅಕ್ಷರ ಇನ್ನಷ್ಟು ನೆನಪುಗಳಿಗೆ ಕಾರಣವಾಗಿತ್ತು. ಶ್ರೀ ಲ.ನಾ.ಪ್ರೆಸ್ ಎನ್ನುವ ಲೈನ್ ಕಂಡಾಗ ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಮೊದಲು ಮುದ್ರಣಾಲಯ ಸ್ಥಾಪಿಸಿದ್ದು ಶ್ರೀ ದತ್ತೊಬರಾವ್ ಸುಬ್ಬರಾವ್ ತೂಕದಾರ ಮರಾಠೆ ಅವರು ಶ್ರೀ ಲಕ್ಷ್ಮೀ ನಾರಾಯಣ ಪ್ರೆಸ್ ಎನ್ನುವ ಹೆಸರಿನಲ್ಲಿ ಮುದ್ರಣಾಲಯ ನಡೆಸುತ್ತಿದ್ದರು. ಆಗ ಮೊಳೆ ಜೋಡಿಸಿ ಮುದ್ರಣ ಮಾಡುವ ವ್ಯವಸ್ಥೆ ಇತ್ತು. ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದ ಟ್ರಸ್ಟಿಗಳೂ ಆಗಿದ್ದ ದತ್ತೊಬರಾವ್ ತೂಕದಾರ ಮರಾಠೆ ಅವರು ಮುದ್ರಣ ಉದ್ಯಮಿಗಳಾದರೂ ಸಮಾಜ ಸೇವೆಯಲ್ಲಿ ತೊಡಗಿಕೊಂಡವರು. ಸ್ವತಂತ್ರ ಪೂರ್ವದಲ್ಲಿ ಆರಂಭಿಸಿದ ಈ ಪ್ರೆಸ್‌ನಲ್ಲಿ ಕೆಲವು ಮಹತ್ವದ ನಿರ್ಣಯಗಳು ಅಲ್ಲಿಯೇ ನಡೆಯುತ್ತಿದ್ದವು. ಸದಾ ಸಾಮಾಜಿಕ ಕಳಕಳಿಯನ್ನು ಹೊಂದಿದ ಮರಾಠೆ ಅವರು ಪ್ರಾಣಿಹತ್ಯೆಯನ್ನು ನಿಲ್ಲಿಸಬೇಕು ಎನ್ನುವ ಹೋರಾಟ ಮಾಡಿ ಮಾರಿಕಾಂಬಾ ದೇವಸ್ಥಾನದಲ್ಲಿ ಕೋಣದ ಬಲಿಕೊಡುವ ಪದ್ದತಿಯನ್ನು ನಿಲ್ಲಿಸಿದವರ ಪೈಕಿ ಶ್ರೀ ದತ್ತೊಬರಾವ್ ಅವರು ಈ ಕಾರ್ಯಕ್ಕೆ ಶ್ರೀಧರ ಸ್ವಾಮಿಗಳನ್ನು ಶಿರಸಿಗೆ ಕರೆಸಿಕೊಂಡಿದ್ದರು ಎನ್ನುವ ಮಾಹಿತಿ ಸಿಗುತ್ತದೆ.
ಶ್ರೀ ದತ್ತೊಬರಾವ್ ಸುಬ್ಬರಾವ್ ತೂಕದಾರ ಮರಾಠೆ ಅವರು ಆರಂಭಿಸಿದ ಶ್ರೀ ಲಕ್ಷ್ಮೀ ನಾರಾಯಣ ಪ್ರಿಟಿಂಗ್ ಪ್ರೆಸ್ ಶಿರಸಿಯಲ್ಲಿ ಇಂದಿಗೂ ಜನಸೇವೆಯಲ್ಲಿ ತೊಡಗಿಕೊಂಡಿದೆ. ದತ್ತೊಬರಾವ್ ಅವರ ಮಗ ಸುರೇಶ ಮರಾಠೆ ಅವರು ಜನ ಸೇವೆ ಮಾಡುತ್ತಲೇ ಪ್ರೆಸ್‌ನ್ನು ಉತ್ತರ ಕನ್ನಡ ಜಿಲ್ಲೆಯ ಚಿಂತಕರ ಚಾವಡಿಯನ್ನಾಗಿಸಿದ್ದರು. ನಂತರ ಅವರ ಮೂರನೇ ತಲೆಮಾರಿನ ಸುಧೀರ ಮರಾಠೆ ಮತ್ತು ಸುಹಾಸ ಮರಾಠೆಯವರು ಸದ್ಯ ನಡೆಸಿಕೊಂಡು ಹೋಗುತ್ತಿದ್ದಾರೆ. ಆಗ ಜಿಲ್ಲೆಯ ಮಟ್ಟದಲ್ಲಿ ಮೊಟ್ಟಮೊದಲ ಪ್ರೆಸ್ ಎಂದು ಗುರುತಿಸಿಕೊಂಡ ಈ ಪ್ರೆಸ್ ಇಂದು ಜಿಲ್ಲೆಯಲ್ಲಿ ಅತೀ ದೊಡ್ಡ ಹಾಗೂ ಅತ್ಯಾಧುನಿಕ ಮುದ್ರಣಾಲಯ ಹೆಗ್ಗಳಿಕೆಯನ್ನು ಇನ್ನೂ ಕಾಯ್ದುಕೊಂಡಿದ್ದಾರೆ.
ಕೈಗೆ ಸಿಕ್ಕಿದ್ದು ಒಂದು ಬಣ್ಣ ಮಾಸಿದ, ಮುದುಡಿ ಮುಕ್ಕಾದ ೮೫ ವರ್ಷ ಹಳೆಯ ಕರಪತ್ರ. ಅದು ಅದೆಷ್ಟು ನೆನಪುಗಳನ್ನು ಬಿಚ್ಚಿಟ್ಟವು. ಆಗಿನ ಸ್ಥಿತಿಯನ್ನು , ಬರವಣಿಗೆಯ ಶೈಲಿಯನ್ನು, ಬಳಸುವ ಶಬ್ದವನ್ನು, ಜನರ ವ್ಯಾವಹಾರಿಕ ಓಡಾಟಗಳು ಇತ್ಯಾದಿಗಳನ್ನು ಸ್ಪಷ್ಟಪಡಿಸುತ್ತಿದ್ದೆ. ಇಂದಿಗೂ, ಅಂದಿಗೂ ಇರುವ ವ್ಯತ್ಯಾಸ ಕೇವಲ ಮಾತು ಶಬ್ದಗಳಿಗೆ ಮೀಸಲಿರದೆ, ಕಾಲಮಾನಕ್ಕೆ ತಕ್ಕ ವ್ಯವಸ್ಥೆ ಎನ್ನುವ ಮಾತಿಗೆ ಎರಡೆನಿಸದು.
Publisher: shrinath joshi | Knobly