Prashanth Hebbar | Bangalore

ಬರಹಗಾರನ ಬವಣೆ

28 Sep, 2023

ಯು.ಆರ್. ಅನಂತಮೂರ್ತಿ ಯವರ "ಪ್ರಜ‌್ಞೆ ಮತ್ತು ಪರಿಸರ" ಕೃತಿಯಲ್ಲಿ  ಬರುವ ಒಂದು ಲೇಖನದಲ್ಲಿ ಓರ್ವ ಬರಹಗಾರನಿಗೆ ಅಥವಾ ಬರಹಗಾರ್ತಿಗೆ  ತಾನು ಬರೆಯುವ ಸಾಹಿತ್ಯ ದ ಮೂಲ ಉದ್ದೇಶ ಏನಿರುತ್ತದೆ ಎನ್ನುವ ಪ್ರಶ್ನೆ ಗೆ ತಮ್ಮ ವ್ಯಾಖ್ಯಾನ ಕೊಡುತ್ತಾರೆ. ಅವರ ಕೊನೆಯ ನಿಲುವು, ಓರ್ವ ಸಾಹಿತ್ಯಕಾರ ಸ್ವತಂತ್ರವಾಗಿ ಅಂದರೆ ಯಾವುದೇ ತತ್ವದ ಅಥವಾ ಪಂಗಡದ ಒತ್ತಡವಿಲ್ಲದೇ ತನಗೆ ಆದ ಅನುಭವ ಅಥವಾ ತಾನು ಕಂಡ ಸತ್ಯವನ್ನು ಹೇಳಿಕೊಳ್ಳುವುದು. ಅಂತಹ ಕೃತಿ ಯಾರ ಉದ್ದೇಶಕ್ಕೂ ಅಥವಾ ಯಾವುದಾದರೊಂದು ತತ್ವದ ಪರವಾಗಿರಬೇಕು ಎಂಬ ನಿಯಮವಿಲ್ಲ. ಇದು ನಿಜವಾದ ಸಾಹಿತ್ಯ ಎನ್ನುತ್ತಾರೆ.

ಇದನ್ನು ಓದಿ ಅದರ ಬಗ್ಗೆ ಚಿಂತಿಸಿದಾಗ ನನಗೆ ನನ್ನ ಸ್ವಂತ ಅನುಭವದ ನೆನಪಾಯಿತು. ನಾನು ತೇಜಸ್ವಿಯವರ "ಕರ್ವಾಲೋ" ಓದಿದ ಹೊಸತರಲ್ಲಿ - ಆಗ ನಾನು ಕಾಲೇಜಿನಲ್ಲಿ ಓದುತ್ತಿದ್ದೆ - ನಮ್ಮ ಊರಿನ ನದಿಯ ಹತ್ತಿರ ಅಡಿಕೆ ತೊಟದಲ್ಲಿ "ಹಾರುವ ಹಲ್ಲಿ" ಯನ್ನು ನೋಡಿದಾಗ ಆದ ನನ್ನ ಅನುಭವ ಅವರ್ಣನೀಯ. ಅದನ್ನು ತೊರಿಸಿ ಹೇಳಿಕೊಳ್ಳಲು ನನ್ನೊಟ್ಟಿಗೆ ಯಾರೂ ಇರಲಿಲ್ಲ. ನಾನು ನನ್ನಷ್ಟಕ್ಕೆ ನಾನೇ ಕಣಿದು ಕುಪ್ಪಳಿಸಿದ್ದು ನೆನಪಿದೆ. ಎದೆಯಲ್ಲಿ ಡವಡವ, ಮೈಯೆಲ್ಲಾ ರೋಮಾಂಚನ. ಸುಮಾರು ಹೊತ್ತು ಹಾರುವ ಹಲ್ಲಿಯನ್ನು ನೊಡಿ ಅದು ಎಲ್ಲೋ ಹಾರಿ ಕಣ್ಮರೆಯಾಗುವ ತನಕ ಇದ್ದು ಮನೆಗೆ ಓಡಿದೆ. ಮನೆಯಲ್ಲಿ ಯಾರೂ ಇಲ್ಲ ಎಲ್ಲರೂ ಕೆಲಸದಲ್ಲಿ ಮಗ್ನರಾಗಿದ್ದಾರೆ. ನನಗೆ ಸಿಕ್ಕಿದ್ದು ನನ್ನ ಅಜ್ಜಿ. ಒರಳು ಕಲ್ಲಿನಲ್ಲಿ ಎಳ್ಳು ಬೆಲ್ಲ ತಿರುವಿ ನಮಗೆಲ್ಲರಿಗೂ ಪಾನಕ ಮಾಡುತಿದ್ದಾರೆ. ನಾನು ಹಾರುವ ಹಲ್ಲಿ ಇರುವುದನ್ನು ಅಜ್ಜಿಗೆ ಹೇಳಿದಾಗ ಅವರ ಪ್ರತಿಕ್ರಿಯೆ ನೋಡಿ ನನ್ನ ಉತ್ಸಾಹವೆಲ್ಲ ಟುಸ್ ಆಯಿತು. "ಹೌದು ತೋಟದಲ್ಲಿ ಏನೇನೋ ಬಗೆಯ ಜಂತುಗಳು ಇರುತ್ತೆ, ನೀನು ತುಂಬಾ ದೂರ ಹೋಗ ಬೇಡ ಮತ್ತೆ ಹಾವು ಗೀವು ಇದ್ದೀತು. ಇನ್ನು ಮುಂದಿನ ವಾರ ನೀನು ಬೆಂಗಳೂರಿಗೆ ವಾಪಸ್ಸು ಹೋಗಬೇಕು," ಅಂತ ನನ್ನ ಮೇಲಿನ ತಮ್ಮ ಅಕ್ಕರೆ ಸೂಸಿದರೇ ಹೊರತು ನಾನು ಅನುಭವಿಸಿದ ರೋಮಾಂಚನದ ಕ್ಷಣಗಳನ್ನು ಅವರೊಟ್ಟಿಗೆ ಹಂಚಿಕೊಳ್ಳುವ ಮೊದಲೇ, ನನಗೆ ಪಾನಕ ಕೊಟ್ಟು ಬೇರೆಯವರಿಗೂ ಕೊಡಲು ಹೋಗಿಬಿಟ್ಟರು. ಅಂತಹ ಸಂದರ್ಭವನ್ನು ಬರಹಗಾರನಾಗಿ ನಾನು ಕಂಡು ಅನುಭವಿಸಿದ ವಿಷಯವನ್ನು ಹೇಗೆ ಹಂಚಿಕೊಳ್ಳುವುದು. ನಾನು ಕಂಡದ್ದು ಹಾರುವ ಹಲ್ಲಿ ನಿಜ. ಅದು ಅಲ್ಲಿ ಸರ್ವೇ ಸಾಮಾನ್ಯವಾಗಿದ್ದಿರಬೇಕು. ಆದರೆ ನಾನು ಅನುಭವಿಸಿದ್ದು ಹಾರುವ ಹಲ್ಲಿಯನ್ನು ಕಾಣುವುದಕ್ಕೂ ಮಿಗಿಲಾದದ್ದು. ಹೇಗೆ ಕರ್ವಾಲೋ ಮನ್ವಂತರಗಳನ್ನು ಮೀರಿ ನಮ್ಮೀ ಜಗತ್ತಿನಲ್ಲಿ ಜೀವಂತವಾಗಿರುವ ಒಂದು ಸರೀಸೃಪದ ಜಾಡು ಹಿಡಿದು ಹೊಗುತ್ತಾರೋ ಹಾಗೆಯೇ ನಾನು ಆ ಅದ್ಭುತವನ್ನು ನನ್ನ ಕಣ್ಣೆದುರಲ್ಲೇ ನೋಡಿದಾಗ ನಾನೂ ಆ ಹಾರುವ ಹಲ್ಲಿಯೊಟ್ಟಿಗೆ ಮನ್ವಂತರಗಳಾಚೆಗಿನ ಜಗತ್ತಿಗೆ ಹೊಗಿದ್ದೆ.

ಎಷ್ಟೋ ವರ್ಷಗಳ ನಂತರ ಮತ್ತೊಂದು ಅಚ್ಚರಿಗೆ ಸಾಕ್ಷಿಯಾದೆ. ಹಾರುವ ಅಳಿಲನ್ನು (Flying Squirrel) ನಾನು ಮೊದಲ ಬಾರಿಗೆ ಕಂಡದ್ದು ನಾನು ಕಾಲೇಜು ಮುಗಿಸಿ ಬೇಸಗೆಯ ರಜದ ಸಮಯದಲ್ಲಿ ವನ್ಯಜೀವಿ ಕ್ಯಾಂಪ್ ಒಂದಕ್ಕೆ ಹೊದಾಗ. ಬೆಳಗಿನ ಉಪಹಾರಕ್ಕೆಂದು ಕ್ಯಾಂಪ್ ನ ಅಂಗಳಕ್ಕೆ ಹೋದಾಗ ಅಲ್ಲಿಯೇ ಮರಗಳ ಮೇಲೆ ದೊಡ್ಡ ಬೆಕ್ಳಿನಂತಹ ಗಾತ್ರದ  ಪ್ರಾಣಿ ನೊಡಿ ಅವಾಕ್ಕದೆ. ದಪ್ಪನೆಯ ಮೈಕಟ್ಟು ಹೊಂದಿದ್ದು ಮೇಲ್ಮೈ ಕಂದು ಬಣ್ಣ, ಕೆಳಭಾಗ ಬಿಳಿಯಾಗಿ, ತನ್ನ ಉದ್ದನೆಯ ಬಾಲವನ್ನು ತಾನು ಕೂತ ರೆಂಭೆಯಿಂದ ಜೊತಾಡಿಸುತ್ತಾ, "ಬಾ ಇದನ್ನು ಹಿಡಿದುಕೊ ನೊಡೋಣ" ಎನ್ನವಂತಿತ್ತು.  ನನಗೆ ಆಶ್ಚರ್ಯವೂ, ದಿಗ್ಭ್ರಮೇ ಎರಡೂ ಆಗಿತ್ತು. ಎಂದೂ ಕಂಡಿರದ ಆ ಪ್ರಾಣಿಯನ್ನು ನೋಡುತ್ತಲೇ ಬೆಳಗ್ಗಿನ ಉಪಹಾರ ಮುಗಿಸಿ ಇನ್ನು ಸಾಕು ಎನ್ನುವಷ್ಟು ಹೊತ್ತು ಅದನ್ನು ನೋಡುತ್ತ ಕುಳಿತಿದ್ದೆ. ಈ ಜಾತಿಯ ಅಳಿಲು ಪಶ್ಚಿಮ ಘಟ್ಟದಲ್ಲಿ ಹಾಗೂ ಹಿಮಾಲಯದ ತಪ್ಪಲಿನ ಕಾಡುಗಳಲ್ಲಿ ವಾಸಿಸುತ್ತವೆ. ಇದು ಒಂದು ಮರದಿಂದ ಮತ್ತೊಂದಕ್ಕೆ ಹಾರುವಾಗ ತನ್ನ ಪಕ್ಕೆಗಳನ್ನು ಅಗಲಿಸಿ ತೇಲುತ್ತವೆ (ಹಾರುವ ಹಲ್ಲಿಯೂ ಇದೇ ರೀತಿ ಹಾರುವುದು). ಅದಕ್ಕಾಗಿ ಇದರ ಹೆಸರು ಹಾರುವ ಅಳಿಲು ಅಂತಲು ಇದೆ. ಈಗ ನನಗಾದ ಅಚ್ಚರಿಯ ವಿಷಯಕ್ಕೆ ಬರುತ್ತೇನೆ. ನನ್ನ ಹೆಂಡತಿಯ ಮೆನೆಗೆ ಹೋದಾಗ ನನ್ನ ಹೊಸ ಕ್ಯಾಮೆರಾದಿಂದ ಅದೂ ಇದೂ ಅಂತ ಫೋಟೋ ತೆಗೆಯುತ್ತಿರುವಾಗಲೇ ಹಲಸಿನ ಮಾರವೊಂದರ ಎಲೆಗಳ ಮರೆಯಲ್ಲಿ ನನ್ನ ಕಣ್ಣಿಗೆ ಹಾರುವ ಅಳಿಲು ಬಿತ್ತು. ಮೊದಲಿಗೆ ನಂಬಲಾಗಲಿಲ್ಲ. ನನ್ನ ಹೆಂಡತಿಯ ತವರು ಮನೆ ನನ್ನ ತಂದೆಯ ಮನೆಗೆ ಹತ್ತಿರ. ಆ ಜಾಗ ನನಗೆ ಬಹಳ ಪರಿಚಿತ. ಹಕ್ಕಿ-ಪಕ್ಷಿಗಳಲ್ಲಿ ಆಸಕ್ತಿ ಇರುವ ನನಗೆ ಅಲ್ಲಿ ಕಾಡು-ಮೇಡು ಸುತ್ತಿ ಅಭ್ಯಾಸ. ಒಮ್ಮೆಯೂ ಹಾರುವ ಅಳಿಲನ್ನು ನಾನು ಅಲ್ಲಿ ಕಂಡಿದ್ದಿಲ್ಲ. ನಾನು ಭರಭರನೆ  ಮತ್ತೊಮ್ಮೆ ಕ್ಯಾಮೆರಾ ಕಣ್ಣಿಂದ ಅದನ್ನು ಹತ್ತಿರ ಕಾಣುವಂತೆ ಮಾಡಿಕೊಂಡು ನೋಡಿದಾಗ ನನ್ನ ಸಂತೋಷಕ್ಕೆ ಎಲ್ಲೆ ಇರಲಿಲ್ಲ. ಕಾಡಿನಿಂದ ಆಚೆಗೆ ಇದನ್ನು ನೋಡಿ ಇದರೊಟ್ಟಿಗಿನ ನನ್ನ ಮೊದಲನೆಯ ಭೇಟಿ ನೆನಪಾಯಿತು. ಅಲ್ಲೇ ಇದ್ದ ಮನೆಯವರಿಗೆಲ್ಲಾ ತೊರಿಸಿದೆ. ಎಲ್ಲರಿಗೂ ನೋಡಿ ಆಶ್ಚರ್ಯವೂ ಸಂತೋಷವೂ ಆಯಿತು. ನನಗೆ ನಾನು ಕಂಡ ಅಚ್ಚರಿ ಬೇರೆಯವರಿಗೂ ಹಂಚಿಕೊಂಡು ಅವರ ಸಂತೋಷ ನೋಡಿ ಸಮಾಧಾನವೂ ಆಯಿತು. ಇದು ಒಂದು ಅನುಭವ. ಇದು ಹಾರುವ ಅಳಿಲು ನೋಡಿದ್ದಕ್ಕಿಂತ ಮೀರಿ ಇರುವ ಅನುಭವ. ಅದನ್ನು ಅಳೆಯಲಸಾಧ್ಯ. ಬರವಣಿಗೆಯಲ್ಲಿ ಸೆರೆ ಹಿಡಿಯಲಸಾಧ್ಯ. ಆದರೆ ಅದನ್ನು ನಾನು ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದು ನನ್ನ ಫೇಸ್ ಬುಕ್ ನಲ್ಲಿ ಶೇರ್ ಮಾಡಿದೆ. ಹಲವು ಅನಿಸಿಕೆಗಳು ಹಾಗೂ ಪ್ರತಿಕ್ರಿಯೆಗಳು ಬಂದುವು. ಅಲ್ಲಿಗೆ ಆ ನನ್ನ ಅನುಭವದ ಕಥೆ ಮುಗಿಯಿತು ಎಂದರೆ ತಪ್ಪು. ಕ್ಯಾಮೆರಾ ಏನೋ ಅದರ ಛಾಯಾಚಿತ್ರ ಸೆರೆ ಹಿಡಿದಿತ್ತು ಆದರೆ ನಾನು ಅನುಭವಿಸಿದ ಆ ಕ್ಷಣಗಳನ್ನು ಅದು ಸೆರೆ ಹಿಡಿಯಲಾಗಲಿಲ್ಲ.                     

ಇಲ್ಲಿ ಹಾರುವ ಹಲ್ಲಿ ಅಥವಾ ಹಾರುವ ಅಳಿಲು ಕಂಡದ್ದಕ್ಕಿಂತ ಅದರೊಟ್ಟಿಗೆ ನಾನು ಕಟ್ಟಿದ ಕನಸಿನಾ ಲೋಕ ಮುಖ್ಯ ಮತ್ತು ನಾನು ಸಮಯವೆಂಬ ಗಾಲಿಯನ್ನು ಹಿಂದಕ್ಕೆ ನೂಕಿ ಆ ನನ್ನ ವನ್ಯಜೀವಿ ಕ್ಯಾಂಪ್ ಗೆ ಕ್ಷಣಮಾತ್ರದಲ್ಲಿ ಹಾರಿದ್ದು ಮುಖ್ಯ. ಹಲ್ಲಿ ಮತ್ತು ಅಳಿಲು ಬರೀ ನೆಪ ಮಾತ್ರ. ಇನ್ನೇನು ವಿಸ್ಮಯಗಳು ಕಣ್ಣೆದುರಿಗೆ ಬರುತ್ತವೆಯೋ ಎಂಬ ಕುತೂಹಲ ಒಂದು ಕಡೆಯಾದರೆ, ಈ ಕ್ಷಣವನ್ನು ಹೇಗೆ ಹಂಚಿಕೊಳ್ಳಲಿ ಎನ್ನುವ ಮರುಗ ಇನ್ನೊಂದೆಡೆ. ಹಾಗೆ ನೋಡಿದರೆ, ಇಷ್ಟು ವಿಸ್ತೃತವಾಗಿ ಇದರ ಬಗ್ಗೆ ಹೇಳುತ್ತಿರುವುದು ಈಗಲೇ. ಈ ಘಟನೆ ಹೇಳುವಾಗಲೆಲ್ಲಾ ನಾನು ಕಂಡ ಹಾರುವ ಹಲ್ಲಿ ಬಗ್ಗೆ ಹೇಳಿದ್ದೆನೇ ಹೋರತು ನಾನು ಅನುಭವಿಸಿದ ಆ ಕ್ಷಣಗಳ ವಿವರಣೆಯಲ್ಲ. ಅದು ಮನಸ್ಸಿಗೂ ಬರುತ್ತಿರಲಿಲ್ಲ. ಈಗ ಬರೆಯುವಾಗ ನಾನು ಆ ದಿನ ಅಪರಾಹ್ನದ ಹೊತ್ತಿಗೆ ಆ ನದೀ ತೀರದ ಆ ತೋಟಕ್ಕೆ ಅಶರೀರವಾಗಿ ಪ್ರವೆಶಿಸಿದ್ದೆ. ಒಂದು "ಟೈಮ್ ಮೆಶಿನ್" ನಲ್ಲಿ ಹೋದಂತೆ. ಆ ಒಂದೆರಡು ಗಂಟೆಯ ಘಟನೆಗಳನ್ನು ಮೆಲುಕು ಹಾಕುತ್ತಾ ನಾನು ಅಂದಿನ ಆ ಘಳಿಗೆಯಲ್ಲಿ ನೆಲೆಸಿದೆ.

ಅಂದರೆ ಕೆಲವೊಮ್ಮೆ ನಮ್ಮೋಳಗಿನ ಭಾವನೆ ನಾವು ಕಂಡದ್ದನ್ನು ಮೀರಿರುತ್ತದೆ. ಇದು ಬರಹಗಾರರಿಗೆ ಸೀಮಿತವಲ್ಲ  ಎಲ್ಲರಿಗೂ ಆಗುವ ಅನುಭವ ಎಂದು ನನ್ನ ನಂಬಿಕೆ. ಬರಹಗಾರ ಆ ಭಾವನೆಯನ್ನು ಕವಿತೆಯ ರೂಪದಲ್ಲೋ ಅಥವಾ ಕಥಾ ರೂಪದಲ್ಲೋ ಓದುಗರಿಗೆ ರಂಜಿಸುವಂತೆ ಹೇಳಿಕೊಳ್ಳುತ್ತಾನೆ. ಬರಹಗಾರನ ಕೃತಿಯ ಉದ್ದೇಶ ತಾನು ಕಂಡು ಅನುಭವಿಸಿದ ಆ ಕ್ಷಣವನ್ನು ಮತ್ತೊಬ್ಬರಲ್ಲಿ ಹಂಚಿಕೊಂಡು ಅವರ ಅನಿಸಿಕೆ ಅಭಿಪ್ರಾಯಗಳನ್ನು ತನ್ನ ಅನುಭವಕ್ಕೆ ಓರೆ ಹಿಡಿದು ಆನಂದ ಪಡುವುದು. ಇಲ್ಲಿ ಎರಡು ವಿಷಯಗಳ ಉಲ್ಲೇಖವಿದೆ. ಒಂದು "ಉದ್ದೇಶ" ಮತ್ತೊಂದು "ಓದುಗರ ಅನಿಸಿಕೆ-ಅಭಿಪ್ರಾಯವನ್ನು ತನ್ನ ಅನುಭವಕ್ಕೆ ಓರೆ ಹಚ್ಚುವುದು".

ಮೊದಲನೆಯದು, ಅನಂತಮೂರ್ತಿಯವರು ಹೇಳಿದ ಹಾಗೆ ಸಾಹಿತಿಯ ಉದ್ದೇಶವನ್ನು ಕುರಿತದ್ದು. ಒಂದು ರೀತಿಯಲ್ಲಿ ನೋಡಿದರೆ ಯಾರ ಹಂಗೂ ಇಲ್ಲದೇ ಬರೆದ ಕೃತಿಯೇ ನಿಜವಾದ ಸಾಹಿತ್ಯ. ಇದು ಒದುಗರ ಪರ ಅಸಡ್ಡೆ ಎಂದಲ್ಲ. ಓದುಗರು ಓದದಿದ್ದರೆ ನಾವೆಷ್ಟು ಬರೆದರೇನು ಪ್ರಯೋಜನ. "ಯಾರ ಹಂಗೂ" ಇಲ್ಲದೇ ಅನ್ನುವುದು "ಯಾರಿಂದಲೂ ಅವರ ಅನಿಸಿಕೆ-ಅಭಿಪ್ರಾಯ ದ ಹೋರತು ಬೇರೇನನ್ನೂ ಬಯಸದೇ ಇರುವುದು" ಎಂದು ಅರ್ಥೈಸಿಕೊಳ್ಳಬೇಕು. ನಾನು ಬರೆದ ಕೃತಿಯಿಂದ ಒಂದು ದೊಡ್ಡ ಕ್ರಾಂತಿಯಾಗಬೇಕು, ಅಥವಾ ನಾನು ಬರೆದ ಕೃತಿಯಿಂದ ನನಗೆ ಏನಾದರೂ ಲಾಭ ದಕ್ಕೀತು ಎಂಬ ಹಂಬಲವಿರಬಾರದು. ಇದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತವೆ. ಅವುಗಳಲ್ಲಿ  ಒಂದು ಉದ್ದೇಶವಿಟ್ಟುಕೋಂಡು ಬರೆದ ಸಾಹಿತ್ಯ, ಸಾಹಿತ್ಯ ಯಾಕಾಗಲಾರದು ಎನ್ನುವುದು? ಒಂದು ತತ್ವವನ್ನು ಎತ್ತಿ ಹಿಡಿಯಲು ಬರೆದ ಸಾಹಿತ್ಯ ಆಥವಾ ಯವುದೋ ಪ್ರಶಸ್ತಿಯ ಮೇಲಿನ ಆಸೆಗೆ ಬರೆದ ಸಾಹಿತ್ಯ ಯಾ ಯಾವುದೋ ಲಾಭಕ್ಕಾಗಿ ಬರೆದ ಸಾಹಿತ್ಯ ಸಾಹಿತ್ಯವಾಗುವುದರಲ್ಲಿ ತಪ್ಪೇನಿದೆ? ಇದರ ವಿರುದ್ಧ ವಾದ ಮಾಡುವುದಾದರೆ :  ಯಾವಾಗ ಓರ್ವ ಸಾಹಿತಿ ಯವುದೋ ಒಂದು ಉದ್ದೇಶ ಮನಸ್ಸಿನಲ್ಲಿಟ್ಟುಕೋಂಡು ಒಂದು ಕೃತಿ ರಚನೆಗೆ ಮುಂದಾಗುತ್ತಾನೋ ಆ ಕ್ಷಣದಲ್ಲಿಯೇ ಆತನ ಕೃತಿಯಲ್ಲಿ ಆತನ ಉದ್ದೇಶದೆಡೆಯ ಒಲವು ಹೊಕ್ಕಿಬಿಡುತ್ತದೆ. ಅದು ಪ್ರಜ್ಙಾತೀತವಾಗಿ ಸಾಹಿತಿಯ ಅನುಭವ, ತಾನು ಕಾಣುವ ದೃಷ್ಯ, ಕೇಳುವ ಸತ್ಯ ಎಲ್ಲಕ್ಕೂ ಆತನ ಉದ್ದೇಶಿತ ಬಣ್ಣ ಬಳಿದುಬಿಡುತ್ತದೆ. ಇದನ್ನು "ಅಬ್ಸರ್ವರ್ಸ್ ಬಯ್ಯಾಸ್" ಎಂದು ಕರೆಯತ್ತಾರೆ. ಇಲ್ಲಿ ಲೇಖಕ, ಸಾಹಿತಿ, ಬರಹಗಾರನೇ "ಅಬ್ಸರ್ವರ್". ಅದೇ ಉದ್ದೇಶಪೂರ್ಣ ಸಾಹಿತ್ಯದ ಪರ ವಾದ ಮಾಡುವುದಾದರೆ : ಪ್ರತಿ ಕೃತಿಯಲ್ಲಿ -- ಅದು ಕವಿತೆ-ಕಾದಂಬರಿಯಾಗಲಿ ಅಥವಾ ನಾಟಕ-ಪ್ರಬಂಧವಾಗಲಿ -- ಉದ್ದೇಶವಿದ್ದೇ ಇರುತ್ತದೆ. ನಾವು ಕಂಡದ್ದು ಇತರರು ಕಂಡು ಸಂತೋಷಪಡುವುದನ್ನು ನೋಡುವುದೂ ಒಂದು ಉದ್ದೇಶವೇ. ಇದನ್ನು ಆಧುನಿಕ ಮನೊವೈಜ್ಙಾನದ ದೃಷ್ಟಿಯಿಂದ ಹೇಳುವುದಾದರೆ "We are influencing the behaviour of others through our every action and writing" ಅನ್ನಬಹುದು. ಹೀಗಾಗಿ ಉದ್ದೇಶವೇ ಇಲ್ಲದ ಕೃತಿಯಿಲ್ಲ ಎನ್ನಬಹುದು. ನಾನು ನನ್ನ ಬೇಸರ ಕಳೆಯಲು ಏನಾದರು ಗೀಚಿದರೆ ಅದು ನನ್ನ ಬೇಸರ ಕಳೆಯುವ ಉದ್ದೇಶವನ್ನು ಪೂರೈಸುತ್ತದೆ.

ಒಟ್ಟಿನಲ್ಲಿ ಕೃತಿಯೆಂಬುದು ಕರ್ತೃವಿನ ರಚನೆ. ಆ ರಚನೆಕಾರನ ಮನೊಧರ್ಮ ಆತನ ಕೃತಿಯಲ್ಲಿ ಕಾಣುವುದು ಅದರಲ್ಲೂ ಆತನ ಉದ್ದೇಶ ಕಾಣುವುದು ಸಹಜ. ಇನ್ನು ಓದುಗರ ಅನಿಸಿಕೆ-ಅಭಿಪ್ರಾಯಗಳು ಕೃತಿ ರಚನೆಯಾಗಿ ಅದು ತನ್ನದೇ ಆದ ನೆಲೆ ಕಂಡುಕೊಳ್ಳಲಿಕ್ಕೆ ಪ್ರಮುಖ ಪಾತ್ರವಹಿಸುತ್ತದೆ. ಅನಿಸಿಕೆ-ಅಭಿಪ್ರಾಯಗಳೇ ಮುಂದೆ ವಿಮರ್ಶೆಯಗಿ ಬಳೆಯುತ್ತದೆ.

ಹಾಗೆ ನೋಡಿದರೆ ಉದ್ದೇಶ-ಕೃತಿ-ಅನಿಸಿಕೆಗಳ ಈ ಸರಣಿ ಪೂರ್ಣಗೊಂಡಾಗಲೇ ಕೃತಿಯ ಉದ್ದೇಶ ಪೂರ್ಣಗೊಳ್ಳುವುದು. ಈ ಆಯಾಮದಲ್ಲಿ ನೊಡಿದರೆ ವಿಮರ್ಶೆಯೂ ಒಂದು ರಚನೆಯೇ. ಅದೂ ಒಂದು ಕೃತಿಯೇ. ಅದಕ್ಕೂ ಒಂದು ಉದ್ದೇಶವಿರುತ್ತದೆ. ಒಂದು ಕೃತಿಯನ್ನು ತಾನರಿತಂತೆ ತನ್ನದೇ ಭಾಷ್ಯದಲ್ಲಿ ರಚಿಸುತ್ತಾನೆ ವಿಮರ್ಶಕ. ಒಂದು ಕೃತಿಯ ಮೇಲಿನ ತನ್ನ ವಿಮರ್ಶೆ ಪ್ರಸ್ತುತ ಪಡಿಸಿ ಓದುಗರ ಮತ್ತು ವಿಮರ್ಶಿತ ಕೃತಿಯ ಕರ್ತೃವಿನ ಅನಿಸಿಕೆಗೆ ಕಾಯುತ್ತಾನೆ ವಿಮರ್ಶಕ.

ಹೀಗೆ ಸಾಹಿತ್ಯಲೋಕ ಬೆಳೆಯುತ್ತಾ ಹೊಗುತ್ತದೆ.

Publisher: Prashanth Hebbar | Bangalore

Login to Give your comment
Powered by