ಕನ್ನಡ ನಾಡು | Kannada Naadu

ಶೀಘ್ರದಲ್ಲೇ ಬಜೆಟ್ ದಿನಾಂಕ ಘೋಷಣೆ; ಹೈಕಮಾಂಡ್ ತೀರ್ಮಾನಕ್ಕೆ ನಾನು, ಡಿ ಕೆ ಶಿವಕುಮಾರ್ ಬದ್ಧ: ಸಿಎಂ ಸಿದ್ದರಾಮಯ್ಯ

11 Feb, 2026


ಬೆಂಗಳೂರು: ರಾಜ್ಯದ ಜನರ ಕುತೂಹಲ ಕೆರಳಿಸಿರುವ ಆಯವ್ಯಯ (ಬಜೆಟ್) ಮಂಡನೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಜೆಟ್ ಸಿದ್ಧತೆಗೆ ಸಂಬಂಧಿಸಿದಂತೆ ಈಗಾಗಲೇ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆಗಳನ್ನು ನಡೆಸಲಾಗುತ್ತಿದೆ. ಇಲಾಖಾವಾರು ಸಭೆಗಳು ಮುಗಿದ ತಕ್ಷಣವೇ ದಿನಾಂಕವನ್ನು ಅಧಿಕೃತವಾಗಿ ನಿಗದಿಪಡಿಸಲಾಗುವುದು ಎಂದರು.

ಸ್ವಂತ ಖರ್ಚಿನಲ್ಲಿ ವಿದೇಶಕ್ಕೆ ಶಾಸಕರು: ಇದೇ ಸಂದರ್ಭದಲ್ಲಿ ಶಾಸಕರ ವಿದೇಶ ಪ್ರವಾಸದ ಕುರಿತ ವಿವಾದಕ್ಕೆ ತೆರೆ ಎಳೆದ ಸಿಎಂ, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ವಿದೇಶಕ್ಕೆ ತೆರಳುತ್ತಿರುವುದು ಅವರ ವೈಯಕ್ತಿಕ ನಿರ್ಧಾರ. ಈ ಪ್ರವಾಸಕ್ಕೆ ಸರ್ಕಾರದಿಂದ ಒಂದು ರೂಪಾಯಿ ವೆಚ್ಚ ಮಾಡುತ್ತಿಲ್ಲ, ಶಾಸಕರು ತಮ್ಮ ಸ್ವಂತ ಹಣದಿಂದಲೇ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ನಾಯಕತ್ವ ಬದಲಾವಣೆ ಚರ್ಚೆಗೆ ಬ್ರೇಕ್: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಿದ ಅವರು, "ಪತ್ರಕರ್ತರು ಪದೇ ಪದೇ ಇದೇ ವಿಷಯವನ್ನು ಕೆದಕುವ ಅಗತ್ಯವಿಲ್ಲ. ನಮ್ಮ ಪಕ್ಷಕ್ಕೆ ಹೈಕಮಾಂಡ್ ಎಂಬ ಸುಪ್ರೀಂ ಪವರ್ ಇದೆ. ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅದಕ್ಕೆ ತಲೆಬಾಗುತ್ತೇವೆ" ಎಂದು ಸ್ಪಷ್ಟಪಡಿಸುವ ಮೂಲಕ ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ಅಂತ್ಯ ಹಾಡುವ ಪ್ರಯತ್ನ ಮಾಡಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by