ಚಿತ್ರರಂಗದ ಹಿತರಕ್ಷಣೆಗೆ ಸಜ್ಜಾದ ಹಿರಿಯ ನಟಿ; ಚಿತ್ರರಂಗದ ಹಿತರಕ್ಷಣೆಗೆ ಡಾ. ಜಯಮಾಲ ಸಾರಥ್ಯ.
08 Feb, 2026
ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎನ್ನುವುದು ಅಪ್ರಸ್ತುತ ಎನ್ನುವ ಮಟ್ಟಿಗೆ ಮರೆಗೆ ಸರಿದು ಬಿಟ್ಟಿದೆ. ಸಿಂಗಲ್ ಸ್ಕೀನ್ ಥಿಯೇಟರ್ಗಳು ಮುಚ್ಚಲಾರಂಭಿಸಿದ ಮೇಲೆ ಪ್ರದರ್ಶಕ ವಲಯದ ಮೇಲೆ ವಾಣಿಜ್ಯಮಂಡಳಿಯ ಹಿಡಿತ ಕಮ್ಮಿಯಾಯಿತು. ನಿರ್ಮಾಪಕರು ವಾಣಿಜ್ಯ ಮಂಡಳಿಯ ನಿರ್ಧಾರಗಳನ್ನು ಧಿಕ್ಕರಿಸಲು ಆರಂಭಿಸಿದರು. ಪರ್ಯಾಯ ಮಂಡಳಿಗಳು ಆರಂಭವಾದವು. ಇಂತಹ ಹೊತ್ತಿನಲ್ಲಿ ವಾಣಿಜ್ಯ ಮಂಡಳಿಯ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆ ಪಡೆದಿದ್ದ ಡಾ.ಜಯಮಾಲಾ ಹದಿನೆಂಟು ವರ್ಷಗಳ ನಂತರ ಮತ್ತೆ ಅಧ್ಯಕ್ಷತೆಯ ಪಟ್ಟಕ್ಕೆ ಬಂದಿದ್ದಾರೆ. ಹಿಂದನ ಸಲ ಅವರು ಅಧ್ಯಕ್ಷರಾದಾಗ ಬಹಳ ಅರ್ಥಪೂರ್ಣವಾಗಿ ಕನ್ನಡ ಚಿತ್ರರಂಗದ ಅಮೃತೋತ್ಸವ ನಡೆಸಿದ ಕ್ರಮ ಎಲ್ಲರ ಮನದಲ್ಲಿಯೂ ಹಸಿರಾಗಿದೆ. ಮತ್ತೆ ಅಂತಹದೇ ಮಹತ್ತರ ಸಾಧನೆಯ ನಿರೀಕ್ಷೆಯಲ್ಲಿ ಕನ್ನಡ ಚಿತ್ರರಂಗವಿದೆ.
ಪಣಂಬೂರಿನ ಸಮೀಪ ಬದುಕನ್ನು ಆರಂಭಿಸಿ ಅಲ್ಲಿಂದ ನಿರಾಶ್ರಿತರಾಗಿ ಚಿಕ್ಕಮಗಳೂರಿಗೆ ಬಂದು ಬಡತನದಲ್ಲಿಯೇ ಬಾಲ್ಯವನ್ನು ಕಳೆದು ಅಲ್ಲಿಂದ ಮಂದೆ ಅವರು ಬದುಕನ್ನು ಕಟ್ಟಿ ಕೊಂಡ ರೀತಿಯೇ ಒಂದು ಸ್ಪೂರ್ತಿದಾಯಕ ಕಥೆಯಂತಿದೆ. ‘ಕಾಸ್ ದಾಯೆ ಕಂಡನೆ’ ಎಂಬ ತುಳು ಚಿತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಜಯಮಾಲಾ ಅವರಿಗೆ ಮುಂದೆ ಸಿಕ್ಕಿದ್ದು ‘ಬೂತಯ್ಯನ ಮಗ ಅಯ್ಯು’ ಚಿತ್ರದ ಪುಟ್ಟ ಪಾತ್ರ. ಅಲ್ಲಿಂದ ಮುಂದೆ ರಾಜ್ ಕುಮಾರ್ ಅವರ ಜೊತೆಗೆ ‘ಪ್ರೇಮದ ಕಾಣಿಕೆ’ಯಲ್ಲಿ ಅಭಿನಯಿಸುವ ಅವಕಾಶ.. ಇಲ್ಲಿಂದ ಮುಂದೆ ಚಿತ್ರರಂಗದಲ್ಲಿ ಅವರು ಬೆಳೆದ ರೀತಿಯ ಬಗ್ಗೆ ನಾನೇನು ಬರೆಯುವುದಿಲ್ಲ ಅದು ನಿಮಗೆಲ್ಲರಿಗೂ ಗೊತ್ತು.

ಆದರೆ ಮುಂದಿನ ಕಥೆ ಮಹತ್ವದ್ದು. ಬಣ್ಣದ ಬದುಕು ಸಾಕು ಎನ್ನಿಸಿದಾಗ ಜಯಮಾಲಾ ನಿಂತು ಹೋಗಿದ್ದ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ರಾಜ್ಯಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿ ಪಡೆದು ‘ಕರ್ನಾಟಕ ರಾಜ್ಯ ನಿರಾಶ್ರಿತ ಮಹಿಳೆಯರ ಪುನರ್ವಸತಿ: ಆಡಳಿತಾತ್ಮಕ ಅಧ್ಯಯನ’ ಎನ್ನುವ ವಿಷಯದಲ್ಲಿ ಪಿ.ಎಚ್.ಡಿ ಪದವಿಗಾಗಿ ಅಧ್ಯಯನ ನಡೆಸಿದರು. ಸ್ವತ: ನಿರಾಶ್ರಿತ ಮಹಿಳೆಯಾಗಿದ್ದ ಜಯಮಾಲಾ ಅವರಿಗೆ ಇದು ಹೃದಯಕ್ಕೆ ಹತ್ತಿರವಾದ ವಿಷಯವಾಗಿತ್ತು. ಸಾಮಾನ್ಯವಾಗಿ ಪಿ.ಎಚ್.ಡಿಗೆ ಅಧ್ಯಯನ ಮಾಡುವವರು ಮೊದಲು ಸೈದ್ದಾಂತಿಕ ನೆಲಗಟ್ಟು ರೂಪಿಸಿ ಕೊಂಡು ನಂತರ ಅದಕ್ಕೆ ಪೂರಕ ಅಂಕಿ-ಅಂಶ ಹುಡುಕುತ್ತಾರೆ. ಜಯಮಾಲಾ ಹಾಗೆ ಮಾಡಲಿಲ್ಲ. ಆಲಮಟ್ಟಿ ಪ್ರದೇಶದ ನಿರಾಶ್ರಿತರನ್ನು ಗಮನದಲ್ಲಿ ಇಟ್ಟು ಕೊಂಡು ವ್ಯಾಪಕವಾಗಿ ಮಾಹಿತಿ ಸಂಗ್ರಹಿಸಿ ನಂತರ ಸಿದ್ದಾಂತ ರೂಪಿಸಿದರು. ನಮ್ಮ ನಿರಾಶ್ರಿತರ ಕುರಿತ ಯೋಜನೆಗಳೆಲ್ಲವೂ ಹೇಗೆ ಪುರುಷ ಪಾರಮ್ಯದಲ್ಲಿ ಸಿಕ್ಕಿ ಕೊಂಡಿವೆ, ಅಲ್ಲಿ ಮಹಿಳಾಪರ ಧ್ವನಿಗಳನ್ನು ಹೇಗೆ ಹತ್ತಿಕ್ಕಲಾಗಿದೆ ಎನ್ನುವುದನ್ನು ವಿವರವಾಗಿ ಪ್ರತಿಪಾದಿಸಿದರು. ಈ ದಿನಗಳಲ್ಲಿ ಅವರು ಅಧ್ಯಯನಕ್ಕೆ ಅವರು ವಹಿಸಿದ ಆಸಕ್ತಿ ಮತ್ತು ಬದ್ದತೆಯನ್ನು ನಾನು ಹತ್ತಿರದಿಂದ ಬಲ್ಲೆ. ನಿಸ್ಸಂಶಯವಾಗಿ ಇದು ನಾನು ಓದಿದ ಅತ್ಯುತ್ತಮ ಮಹಾಪ್ರಬಂಧಗಳಲ್ಲಿ ಒಂದು. ಇನ್ನೂ ಮುಖ್ಯವಾದ ಸಂಗತಿ ಎಂದರೆ ಡಾಕ್ಟರೇಟ್ ಪಡೆದ ನಂತರವೂ ಈ ಕ್ಷೇತ್ರದಲ್ಲಿ ತಮ್ಮ ಕಾರ್ಯ ಮುಂದುವರೆಸಿದ ಜಯಮಾಲಾ ನಿರಾಶ್ರಿತ ಮಹಿಳೆಯರ ಪುನರ್ವಸತಿ ಕುರಿತು ಇಂದಿಗೂ ಹಲವು ಯೋಜನೆಗಳನ್ನು ಮುಂದುವರೆಸುತ್ತಲೇ ಇದ್ದಾರೆ.
ಮುಂದೆ ಜಯಮಾಲಾ ‘ತಾಯಿ ಸಾಹೇಬ’ ಮತ್ತು ‘ತುತ್ತೂರಿ’ ಎರಡು ಚಿತ್ರಗಳನ್ನು ನಿರ್ಮಿಸಿದರು. (ಈ ಹಿಂದೆಯೂ ಅವರು ಮೂರು ಚಿತ್ರಗಳನ್ನು ನಿರ್ಮಿಸಿದ್ದರು. ಆದರೆ ಅವು ವಾಣಿಜ್ಯಿಕ ಚಿತ್ರಗಳು) ಎರಡೂ ರಾಷ್ಟ್ರಪ್ರಶಸ್ತಿಗಳನ್ನು ಪಡೆದವು. ಅದರಲ್ಲಿಯೂ ತಾಯಿ ಸಾಹೇಬ ಸ್ವರ್ಣ ಕಮಲ ಸೇರಿದಂತೆ 24 ವಿವಿಧ ಪ್ರಶಸ್ತಿಗಳನ್ನು ಪಡೆದು ಕೊಂಡಿತು. ಜಯಮಾಲಾ ಅವರೇ ಕೂದಲೆಳೆಯಲ್ಲಿ ಶ್ರೇಷ್ಟನಟಿ ರಾಷ್ಟ್ರಪ್ರಶಸ್ತಿಯನ್ನು ತಪ್ಪಿಸಿ ಕೊಂಡರು.
ಮುಂದೆ ಜಯಮಾಲಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆಯಾದರು. ಅವರ ಅವಧಿಯಲ್ಲಿಯೇ ಕನ್ನಡ ಚಿತ್ರರಂಗದ ಅಮೃತೋತ್ಸವ ಬಂದಿತು. ಅದನ್ನು ಅವರು ಮಾದರಿ ಎನ್ನುವಂತೆ ನಡೆಸಿ ಕೊಟ್ಟರು. ಈ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪನವರ ಪ್ರಧಾನ ಸಂಪಾದಕತ್ವದಲ್ಲಿ ನಾವು ಕೇವಲ ಮೂರು ತಿಂಗಳಿನಲ್ಲಿ 75 ಪುಸ್ತಕಗಳನ್ನು ರೂಪಿಸಿದ ಅನುಭವವಂತೂ ಎಂದಿಗೂ ಮರೆಯುವಂತಹದಲ್ಲ. ವಿಚಾರ ಸಂಕಿರಣಗಳು, ಛಾಯಾಚಿತ್ರಗಳ ಪ್ರದರ್ಶನ, ಸಾಕ್ಷ್ಯಚಿತ್ರ, ಮನೋರಂಜನಾ ಕಾರ್ಯಕ್ರಮ ಎಲ್ಲವೂ ಒಂದಕ್ಕಿಂತ ಒಂದು ಸೊಗಸಾಗಿ ನಡೆಯಿತು.
‘ಲೈಂಗಿಕ ವೃತ್ತಿನಿರತರ ಸ್ಥಿತಿಗತಿ’ ಕುರಿತು ಅಧ್ಯಯನ ಸಮಿತಿಯ ಅಧ್ಯಕ್ಷರಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ನಿಗದಿತ ಸಮಯದಲ್ಲಿ ಮಹತ್ವದ ವರದಿಯನ್ನು ನೀಡಿದ ಹೆಗ್ಗಳಿಕೆ ಅವರದು. ಜಯಮಾಲಾ ಅವರ ವೃತ್ತಿ ಜೀವನದಲ್ಲಿ ಒಂದು ಆಯ್ಕೆ ಬಂದಿತು. ಚಲನಚಿತ್ರ ಅಕಾಡಮಿ ಅಧ್ಯಕ್ಷ ಸ್ಥಾನ ಅಥವಾ ವಿಧಾನ ಪರಿಷತ್ತಿನ ಸದಸ್ಯತ್ವ. ನಮ್ಮೆಲ್ಲರ ಒತ್ತಾಯವನ್ನು ಮೀರಿ ಅವರು ವಿಧಾನ ಪರಿಷತ್ ಸದಸ್ಯತ್ವವನ್ನು ಆಯ್ಕೆ ಮಾಡಿ ಕೊಂಡರು. ಇದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದರು, ಸಭಾ ನಾಯಕರೂ ಆದರು ಆದರೆ ಎಲ್ಲವೂ ಅಲ್ಪ ಕಾಲೀನವಾಯಿತು . ಅವರ ದಕ್ಷತೆ ತೋರುವ ಅವಕಾಶಗಳು ಸಿಗಲಿಲ್ಲ.ಜಯಮಾಲಾ ಇನ್ನೂ ಹತ್ತಾರು ಚಲನಚಿತ್ರ ಮತ್ತು ಸಾಮಾಜಿಕ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ, ಮಾಡುತ್ತಲೂ ಇದ್ದಾರೆ. ಕೆಲವು ಸಮಿತಿಗಳಲ್ಲಿ ಅವರ ಜೊತೆಗೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ಅವರು ಮಾಡಿ ಕೊಳ್ಳುತ್ತಿದ್ದ ಟಿಪ್ಪಣಿಗಳು, ವಿಷಯವನ್ನು ಪ್ರತಿಪಾದಿಸುತ್ತಿದ್ದ ರೀತಿ, ನಿಗದಿ ಪಡಿಸಿ ಕೊಳ್ಳುತ್ತಿದ್ದ ಸಮಯದ ಮಿತಿ ಇವೆಲ್ಲವುಗಳಿಂದ ನಾನು ಸಾಕಷ್ಟನ್ನು ಕಲಿತಿದ್ದೇನೆ.
ವೈಯಕ್ತಿಕವಾಗಿ ನನಗೆ, ಡಾ.ಜಯಮಾಲಾ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿಗಳನ್ನು ಕೊಟ್ಟು ಬೆಳೆಸಿದ್ದಾರೆ. ಗೆದ್ದಾಗ ಬೆನ್ನು ತಟ್ಟಿದ್ದಾರೆ, ತಪ್ಪಿದಾಗ ತಿದ್ದಿದ್ದಾರೆ, ಕೇಳಿದಾಗಲೆಲ್ಲ ಬಹಳ ಒಳ್ಳೆಯ ಲೇಖನಗಳನ್ನು ನೀಡಿದ್ದಾರೆ. ನಾನು ‘ಮಂಗಳ’ದಲ್ಲಿದ್ದಾಗ ಅವರು ನೀಡಿದ ‘ಬಡತನ ಬದುಕನ್ನು ಕಲಿಸಿತುʼ ನಾನು ಹೆಮ್ಮೆಯಿಂದ ಪ್ರಕಟಿಸಿದ ಶ್ರೇಷ್ಠ ಲೇಖನ. ಎಲ್ಲಕ್ಕಿಂತ ಮುಖ್ಯ, ಕಷ್ಟದ ದಿನಗಳಲ್ಲಿ ಹಿರಿಯಕ್ಕನಂತೆ ಸಮಾಧಾನ ಹೇಳಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಸದಾ ಕೃತಜ್ಞನಾಗಿದ್ದೇನೆ. ಜಯಮಾಲಾ ಚಿತ್ರರಂಗಕ್ಕೆ ಮತ್ತು ಸಮಾಜಕ್ಕೆ ಸಾಕಷ್ಟು ಕೊಟ್ಟಿದ್ದಾರೆ. ಈ ವಾಣಿಜ್ಯ ಮಂಡಳಿಯ ಅಧ್ಯಕ್ಷಸ್ಥಾನದಿಂದಲೂ ಈ ಕಾರಣದಿಂದಲೇ ಸಾಕಷ್ಟು ನಿರೀಕ್ಷೆಗಳಿವೆ.

-ಎನ್.ಎಸ್.ಶ್ರೀಧರ ಮೂರ್ತಿ
Publisher: ಕನ್ನಡ ನಾಡು | Kannada Naadu