


ಪಾಂಡವಪುರ : ಇಪ್ಪತ್ತು ಭಾಷೆಗಳಲ್ಲಿನ ಇಪ್ಪತ್ತು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಸಂಗ್ರಹಿಸಿ ‘ಪುಸ್ತಕ ಮನೆ’ ಎಂಬ ಅಪೂರ್ವ ಜ್ಞಾನ ಭಂಡಾರ ನಿರ್ಮಿಸಿರುವ ಪದ್ಮಶ್ರೀ ಪುರಸ್ಕೃತ ಎಂ. ಅಂಕೇಗೌಡ ಅವರ ಜೀವನಸಾಧನೆ ಇಂದಿನ ಯುವಪೀಳಿಗೆಗೆ ದಿಕ್ಕು ತೋರಿಸುವ ದೀಪವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಪ್ರಶಂಸಿಸಿದರು.
ಪಾಂಡವಪುರದ ಹರಳಹಳ್ಳಿಯಲ್ಲಿರುವ ಅಂಕೇಗೌಡರ ‘ಪುಸ್ತಕ ಮನೆ’ಯಲ್ಲಿ ನಡೆದ ಕಾರ್ಯಕ್ರಮದಲ್ಲಿ, 2026ನೇ ಸಾಲಿನ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಂಕೇಗೌಡರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಗೌರವ ಸಮರ್ಪಿಸಿ ಅವರು ಮಾತನಾಡಿದರು.

“ಪುಸ್ತಕ ಪ್ರೀತಿಯನ್ನು ಉತ್ತೇಜಿಸುವ ಉದ್ದೇಶದಿಂದ ‘ಮನೆಗೊಂದು ಗ್ರಂಥಾಲಯ’ ಯೋಜನೆಯನ್ನು ಪ್ರಾಧಿಕಾರ ಆರಂಭಿಸಿದೆ. ಆದರೆ ಅಂಕೇಗೌಡರ ಮನೆಯ ಗ್ರಂಥಾಲಯ ನಿಜಕ್ಕೂ ನಿಬ್ಬೆರಗಾಗಿಸುವಂತಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಪುಸ್ತಕಗಳನ್ನು ಒಬ್ಬ ವ್ಯಕ್ತಿ ತನ್ನ ಪರಿಶ್ರಮ ಮತ್ತು ಆಸಕ್ತಿಯಿಂದ ಸಂಗ್ರಹಿಸಿರುವುದು ಅಪರೂಪದ ಸಾಧನೆ. ಜ್ಞಾನದ ತಳಹದಿಯ ಮೇಲೆ ದೇವಾಲಯ ಕಟ್ಟುವುದು ಹೇಗೆ ಎಂಬುದನ್ನು ಅವರು ತೋರಿಸಿದ್ದಾರೆ,” ಎಂದು ಡಾ. ಮಾನಸ ಹೇಳಿದರು.

ಜನರು ತಮ್ಮ ಭಕ್ತಿಯ ಕಾಣಿಕೆಗಾಗಿ ಮಾಡುವ ಖರ್ಚಿನ ಕನಿಷ್ಠ ಶೇಕಡಾ 10ರಷ್ಟನ್ನಾದರೂ ಪುಸ್ತಕ ಖರೀದಿಗೆ ಬಳಕೆ ಮಾಡಿದರೆ ಪುಸ್ತಕ ಲೋಕದ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದೂ ಅವರು ಸಲಹೆ ನೀಡಿದರು. “ಅಂಕೇಗೌಡರ ಅಂತಿಮ ಕಾಲದಲ್ಲಿ ಯಾರು ಬರಲಿ ಬಿಡಲಿ, ಸರ್ಕಾರ ಅವರ ಮನೆ ಮುಂದೆ ಇರುತ್ತದೆ. ಅವರ ಸಾಧನೆಗೆ ಇದು ಸಲ್ಲುವ ಗೌರವ,” ಎಂದು ಹೇಳಿದರು.
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಅಂಕೇಗೌಡರು ತಮ್ಮ ಜೀವನದ ಹಾದಿಯನ್ನು ನೆನೆದು ಭಾವುಕರಾದರು. ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ದಿನಗಳಿಂದ ಆರಂಭವಾದ ತಮ್ಮ ಪ್ರಯಾಣ, ನಂತರ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ‘ಪುಸ್ತಕ ಮನೆ’ ಸ್ಥಾಪಿಸಿದ ಸಂದರ್ಭವನ್ನು ಅವರು ವಿವರಿಸಿದರು. “ಈ ಪುಸ್ತಕಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವುದೇ ನನ್ನ ದೊಡ್ಡ ಕನಸು. ಸಂಶೋಧನಾ ವಿದ್ಯಾರ್ಥಿಗಳು ಅಧ್ಯಯನ ಮಾಡಲು ಹಾಗೂ ತಂಗಲು ಕಟ್ಟಡವೊಂದರ ಅಗತ್ಯವಿದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಗ್ರಂಥಾಲಯ ಆಯುಕ್ತ ಹೆಚ್. ಬಸವರಾಜೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ. ಬಿ. ಕಿರಣ್ ಸಿಂಗ್, ಖ್ಯಾತ ಪತ್ರಕರ್ತ ಹಾಗೂ ಬರಹಗಾರ ರಾಜಶೇಖರ ಕದಂಬ, ರಾಮಣ್ಣ, ತಿಪ್ಪಣ್ಣ ಮತ್ತು ಶ್ರೀನಿವಾಸ ಕರಿಯಪ್ಪ ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu