


ಬೆಂಗಳೂರು: ಕರ್ನಾಟಕದ ಏಳಿಗೆಗಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸುವ ಜವಾಬ್ದಾರಿ ನಮ್ಮದಾಗಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ. ಹಿ. ಚಿ. ಬೋರಲಿಂಗಯ್ಯ ಅಭಿಪ್ರಾಯಪಟ್ಟರು.
ಫೆಬ್ರವರಿ 3, 2026ರಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾಂಸ್ಕೃತಿಕ ಕಲಾ ಕುಟೀರದ ವತಿಯಿಂದ ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವ. ಚ. ಚನ್ನೇಗೌಡ ರಚಿಸಿರುವ ‘ನಾಡು ಹಣತೆಗಳು’ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಈ ಕೃತಿಯಲ್ಲಿ ಬಸವಣ್ಣ, ಕುವೆಂಪು, ಡಾ. ಎಂ. ಚಿದಾನಂದಮೂರ್ತಿ, ಪ್ರೊ. ಎಲ್. ಎಸ್. ಶೇಷಗಿರಿ ರಾವ್, ಕಿ. ರಂ. ನಾಗರಾಜ್ ಸೇರಿದಂತೆ ಹಲವಾರು ಕನ್ನಡ ಸೇವಕರ ಸಾಧನೆಗಳನ್ನು ದಾಖಲಿಸಲಾಗಿದೆ. ಅವರ ಸೇವೆಯನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಈ ಕೃತಿ ವಿದ್ಯಾರ್ಥಿಗಳಿಗೆ ಹಾಗೂ ಕನ್ನಡಪರ ಹೋರಾಟಗಾರರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ ಎಂದು ಪ್ರೊ. ಬೋರಲಿಂಗಯ್ಯ ಹೇಳಿದರು.
ಲೇಖಕ ರಾ. ನಂ. ಚಂದ್ರಶೇಖರ ಮಾತನಾಡಿ, “ಕನ್ನಡಕ್ಕಾಗಿ ದುಡಿದವರ ಕುರಿತು ಕೃತಿಗಳು ಹೊರಬರದೆ ಹೋದರೆ ಅವರ ಸಾಧನೆಗಳು ಮುಂದಿನ ಪೀಳಿಗೆಗೆ ತಿಳಿಯುವುದಿಲ್ಲ. ವ. ಚ. ಚನ್ನೇಗೌಡರ ನಾಡು ಹಣತೆಗಳು ಕೃತಿಯಲ್ಲಿ ಸಾಧಕರ ಚಿತ್ರಣ ಸುಂದರವಾಗಿ ಮೂಡಿಬಂದಿದೆ. ಈ ರೀತಿಯ ಕೃತಿಗಳು ಇನ್ನಷ್ಟು ಬರಬೇಕು,” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಪ್ನ ಬುಕ್ ಹೌಸ್‌ನ ಆರ್. ದೊಡ್ಡೇಗೌಡ ವಹಿಸಿದ್ದರು. ಲೇಖಕ ವ. ಚ. ಚನ್ನೇಗೌಡ ಹಾಗೂ ಬಿ. ಎಂ. ಗಂಗಣ್ಣ ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu