ಕನ್ನಡ ನಾಡು | Kannada Naadu

ಮಹಿಳಾ ಪ್ರಧಾನ ಚಿತ್ರಗಳೆಲ್ಲ ಮಹಿಳಾ ಪರ ಚಿತ್ರಗಳಾಗುವುದಿಲ್ಲ: ಸಂಧ್ಯಾರಾಣಿ

04 Feb, 2026



ಬೆಂಗಳೂರು :  ೧೭ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಅಂಗವಾಗಿ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ಸಿದ್ಧಲಿಂಗಯ್ಯ ನಿರ್ದೇಶನದ ‘ಹೇಮಾವತಿ’ ಚಿತ್ರದ ಕುರಿತ ಸಂವಾದದಲ್ಲಿ ಲೇಖಕಿ ಮತ್ತು ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ ಮಾತನಾಡಿ, ಮಹಿಳಾ ಪ್ರಧಾನ (female-centric) ಚಿತ್ರಗಳಿಗೂ ಮಹಿಳಾ ಪರ (pro-women) ಚಿತ್ರಗಳಿಗೂ ಸ್ಪಷ್ಟ ವ್ಯತ್ಯಾಸವಿದೆ ಎಂದು ಅಭಿಪ್ರಾಯಪಟ್ಟರು.


“ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳು ಮಹಿಳಾ ಪ್ರಧಾನವಾಗಿದ್ದರೂ, ಅವು ಮಹಿಳಾ ಪರ ಚಿತ್ರಗಳಾಗಿರಲಿಲ್ಲ. ಅವರ ಚಿತ್ರಗಳ ಮಹಿಳಾ ಪಾತ್ರಗಳು ಪುರುಷ ಮನೋಭಾವಕ್ಕೆ ಅನುಗುಣವಾಗಿ ರೂಪುಗೊಂಡಿದ್ದವು. ಮಹಿಳೆ ಸನಾತನ ಸಂಸ್ಕೃತಿಯ ಗಡಿಗಳೊಳಗೆ ಉಳಿದಾಗಲೇ ಜಯ ಸಿಗುತ್ತದೆ ಎಂಬ ಪ್ರತಿಪಾದನೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ, ಮಹಿಳಾ ಪ್ರಧಾನ ಚಿತ್ರಗಳೆಲ್ಲವೂ ಮಹಿಳಾ ಪರ ಚಿತ್ರಗಳಾಗುವುದಿಲ್ಲ” ಎಂದು ಅವರು ಹೇಳಿದರು.

ಸಂವಾದದಲ್ಲಿ ಭಾಗವಹಿಸಿದ ಹಿರಿಯ ಪತ್ರಕರ್ತ ಚ.ಹ. ರಘುನಾಥ, ‘ಹೇಮಾವತಿ’ ಚಿತ್ರವನ್ನು ಸಿದ್ಧಲಿಂಗಯ್ಯ ಅವರ ವಿಭಿನ್ನ ಕೃತಿಗಳಲ್ಲೊಂದು ಎಂದು ವಿಶ್ಲೇಷಿಸಿದರು. “ಬಂಗಾರದ ಮನುಷ್ಯ ಮತ್ತು ಬೂತಯ್ಯನ ಮಗ ಅಯ್ಯು ಚಿತ್ರಗಳ ನಂತರ, ಹೇಮಾವತಿ ಮೂಲಕ ಅವರು ಹೊಸ ಕಥನಶೈಲಿ ಮತ್ತು ಸವಾಲುಗಳನ್ನು ಸ್ವೀಕರಿಸಿದರು. ಚಿತ್ರದಲ್ಲಿ ರಾಮಾಯಣದ ನೇರ ಪ್ರಸ್ತಾಪವಿಲ್ಲದಿದ್ದರೂ, ಅದರ ಛಾಯೆ ಗೋಚರಿಸುತ್ತದೆ. ಇದು ಒಂದು ಊರಿನ ಕಥೆಯಲ್ಲ; ದೇಶದ ಎಲ್ಲೆಡೆ ಅನ್ವಯಿಸುವ ಸಾಮಾಜಿಕ ಕಥನ. ಕಥೆ ಸ್ವಾತಂತ್ರ್ಯಪೂರ್ವ ಹಿನ್ನೆಲೆಯದ್ದಾಗಿದ್ದರೂ, ಅದರ ವಿಷಯ ಇಂದಿಗೂ ಪ್ರಸ್ತುತ. ರಾಮಾಯಣದಲ್ಲಿ ಸೀತೆ ಅಗ್ನಿಪರೀಕ್ಷೆ ಎದುರಿಸಿದಂತೆ, ಇಲ್ಲಿ ಹೇಮಾವತಿ ಮತ್ತು ಚೆನ್ನಿ ಪಾತ್ರಗಳು ತಮ್ಮದೇ ರೀತಿಯಲ್ಲಿ ಕಠಿಣ ಪರೀಕ್ಷೆಗಳನ್ನು ಎದುರಿಸುತ್ತವೆ. ಇಂತಹ ಚಿತ್ರ ಇಂದಿನ ಸಂದರ್ಭದಲ್ಲಿ ನಿರ್ಮಾಣವಾದರೆ ಸೆನ್ಸಾರ್‌ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತಿತ್ತು” ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಸುನಂದಮ್ಮ ಮಾತನಾಡಿ, “ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳನ್ನು ಕೇವಲ ಸೌಂದರ್ಯಕ್ಕೆ ಸೀಮಿತಗೊಳಿಸಲಾಗುತ್ತಿತ್ತು. ಪ್ರತಿಭೆ, ಶಿಕ್ಷಣ, ಸೃಜನಶೀಲತೆ ಇದ್ದರೂ ಅವು ಪ್ರಾಥಮ್ಯ ಪಡೆಯುತ್ತಿರಲಿಲ್ಲ. ಈಗ ಪರಿಸ್ಥಿತಿ ನಿಧಾನವಾಗಿ ಬದಲಾಗುತ್ತಿದೆ” ಎಂದರು.

ಪತ್ರಕರ್ತೆ ಮಾನಸಾ ಚಂದ್ರಿಕಾ ಕಿರುತೆರೆಯ ಮಹಿಳಾ ಪ್ರಧಾನ ಧಾರಾವಾಹಿಗಳ ಕುರಿತು ಮಾತನಾಡಿ, “ಧಾರಾವಾಹಿಗಳಲ್ಲಿ ಮಹಿಳಾ ಪಾತ್ರಗಳು ಕೇಂದ್ರದಲ್ಲಿದ್ದರೂ, ಸಮಸ್ಯೆಗಳನ್ನು ಹೊರುತ್ತಿರುವವರೂ ಮಹಿಳೆಯರೇ ಆಗಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದಾಗ ಅವರಿಗೆ ವಿರೋಧದ ಹಣೆಪಟ್ಟಿ ಬೀಳುತ್ತದೆ. ಕುಟುಂಬ ಮತ್ತು ಸಮಾಜ ಎರಡರನ್ನೂ ಎದುರಿಸುವ ಸವಾಲುಗಳನ್ನು ಮಹಿಳೆ ಎದುರಿಸಬೇಕಾಗುತ್ತದೆ” ಎಂದು ಹೇಳಿದರು.

ಈ ಸಂವಾದವನ್ನು ಹಿರಿಯ ಪತ್ರಕರ್ತೆ ಭಾರತಿ ಹೆಗಡೆ ನಡೆಸಿಕೊಟ್ಟರು.

Publisher: ಕನ್ನಡ ನಾಡು | Kannada Naadu

Login to Give your comment
Powered by