ಕನ್ನಡ ನಾಡು | Kannada Naadu

ಹೃದಯ ಮತ್ತು ವಿವೇಕದ ಸಂಗಮವೇ ಬೇಂದ್ರೆ ಕಾವ್ಯ: ಡಾ. ಜಿ.ಬಿ. ಹರೀಶ

03 Feb, 2026


ಬೆಂಗಳೂರು: "ಕಾವ್ಯದ ಮೂಲಕವೇ ಯೋಗಸಾಧನೆ ಮಾಡಿ ಸಾಕ್ಷಾತ್ಕಾರ ಪಡೆದವರು ವರಕವಿ ದ.ರಾ. ಬೇಂದ್ರೆ. ಅವರ ಸಾಹಿತ್ಯವು ಕೇವಲ ಅಕ್ಷರಗಳಲ್ಲ, ಅದು ಹೃದಯ ಮತ್ತು ವಿವೇಕದ ಅದ್ಭುತ ಸಮೀಕರಣ," ಎಂದು ಖ್ಯಾತ ಕವಿ ಹಾಗೂ ಕಾದಂಬರಿಕಾರ ಡಾ. ಜಿ.ಬಿ. ಹರೀಶ ಬಣ್ಣಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಂಗಳೂರು ಮಹಾನಗರ ವತಿಯಿಂದ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಿದ್ದ 'ನಾಕುತಂತಿ' ಕೃತಿಯ ಷಷ್ಟಿಪೂರ್ತಿ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.


ಸಾಹಿತ್ಯ ರಾಜಕೀಯದ ನಡುವೆ ಬೇಂದ್ರೆ: "ಬೇಂದ್ರೆಯವರು ಜಗತ್ತಿನ ಮತ್ತು ಜೀವನದ ಮೇಷ್ಟ್ರು. ಸಣ್ಣ ಪ್ರಬಂಧ ಬರೆಯುವವರಿಗೂ ಅವರು ಬದುಕಿನ ಪಾಠ ಕಲಿಸಿದ್ದಾರೆ. ಅವರ ಮಾತು ನಿಷ್ಠುರವಾಗಿದ್ದರೂ ಮನಸ್ಸಿನಲ್ಲಿ ಕಹಿ ಇರಲಿಲ್ಲ. ಆದರೆ, ಕನ್ನಡ ಸಾಹಿತ್ಯ ವಿಮರ್ಶಕರು ಬೇಂದ್ರೆಯವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಅವರು ಇನ್ನೂ ಬರೆಯುವ ಸಾಮರ್ಥ್ಯ ಹೊಂದಿದ್ದಾಗಲೇ ಸಾಹಿತ್ಯದ ರಾಜಕೀಯ ಅವರನ್ನು ಪೆವಿಲಿಯನ್‌ಗೆ ಕಳುಹಿಸಿತು," ಎಂದು ಹರೀಶ ವಿಷಾದ ವ್ಯಕ್ತಪಡಿಸಿದರು.

ನಾದ, ವೇದ ಮತ್ತು ಸಂಖ್ಯೆ: ಬೇಂದ್ರೆಯವರ ಬದುಕನ್ನು ನಾದ, ವೇದ ಮತ್ತು ಸಂಖ್ಯೆ ಎಂಬ ಮೂರು ಮಜಲುಗಳಲ್ಲಿ ನೋಡಬಹುದು. ಆರಂಭದಲ್ಲಿ ನಾದದ ಮೂಲಕ ಕವಿತೆ ಬರೆದವರು, ನಂತರ ವೇದಗಳ ಕಡೆಗೆ ಹೊರಳಿದರು. ವೇದಕಾಲದಿಂದ ಕುಮಾರವ್ಯಾಸನವರೆಗಿನ ಕಾವ್ಯ ಕಂದಕವನ್ನು ಬೇಂದ್ರೆ ತುಂಬಿದರು. ಕೊನೆಯ ದಿನಗಳಲ್ಲಿ ಗಣಿತ ಮತ್ತು ಸಂಖ್ಯೆಗಳ ಮೂಲಕ ಸಾಕ್ಷಾತ್ಕಾರ ಹುಡುಕಿದ ಸಿದ್ಧಪುರುಷ ಅವರು ಎಂದು ವಿವರಿಸಿದರು.

ಬೆಂದರೆ ಮಾತ್ರ ಬೇಂದ್ರೆ: 'ಥಟ್ ಅಂತ ಹೇಳಿ' ಖ್ಯಾತಿಯ ಡಾ. ನಾ. ಸೋಮೇಶ್ವರ ಅವರು ಬೇಂದ್ರೆ ಕುರಿತು ಸ್ವಾರಸ್ಯಕರ ರಸಪ್ರಶ್ನೆ ನಡೆಸಿಕೊಟ್ಟರು. "ಜೀವನದಲ್ಲಿ ಬೆಂದವರು ಮಾತ್ರ ಬೇಂದ್ರೆ ಆಗಲು ಸಾಧ್ಯ. ಅನೇಕ ಸಂಕಷ್ಟಗಳನ್ನು ಅನುಭವಿಸಿದ ಅವರ ಬದುಕು ನಮಗೆ ಪಾಠ," ಎಂದರು. ಅಬಾಸಾಪ ಅಧ್ಯಕ್ಷ ಎಂ.ಎಸ್. ನರಸಿಂಹಮೂರ್ತಿ ಮಾತನಾಡಿ, ಬೇಂದ್ರೆಯವರ ನಿಸ್ವಾರ್ಥ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಲಾವಿದ ರಘುಮೂರ್ತಿ ಅವರು ರಾಗಸಂಯೋಜಿಸಿದ 'ಪ್ರಬುದ್ಧ' ಮತ್ತು 'ಚೈತನ್ಯದ ಪೂಜೆ' ಕವನಗಳ ಗಾಯನ ನಡೆಯಿತು. ವೇದಿಕೆಯಲ್ಲಿ ಅಬಾಸಾಪ ರಾಷ್ಟ್ರೀಯ ಕಾರ್ಯದರ್ಶಿ ಎಸ್.ಎಸ್. ನರೇಂದ್ರಕುಮಾರ್, ಭ.ರಾ. ವಿಜಯ್ ಕುಮಾರ್ ಉಪಸ್ಥಿತರಿದ್ದರು.



ವಿಶ್ವವಿದ್ಯಾಲಯಗಳಲ್ಲಿ ಜ್ಞಾನವಿಲ್ಲ!

"ವಿಶ್ವವಿದ್ಯಾಲಯದಲ್ಲಿ ಇರುವವರು ಬೇರೆ ಯಾರನ್ನೂ ಮೇಷ್ಟ್ರು ಎಂದು ಪರಿಗಣಿಸುವುದಿಲ್ಲ. ನಿಜ ಹೇಳಬೇಕೆಂದರೆ ಇಂದಿನ ವಿಶ್ವವಿದ್ಯಾಲಯಗಳಲ್ಲಿ ಜ್ಞಾನವೇ ಇಲ್ಲ. ಈ ಸವಾಲನ್ನು ನಾನು ಅನೇಕ ಬಾರಿ ಹಾಕಿದ್ದೇನೆ, ಚರ್ಚೆಗೂ ಸಿದ್ಧನಿದ್ದೇನೆ. ಆದರೆ ಇದುವರೆಗೆ ಯಾರೂ ಈ ಸವಾಲು ಸ್ವೀಕರಿಸಿಲ್ಲ." 

- ಡಾ. ಜಿ.ಬಿ. ಹರೀಶ

Publisher: ಕನ್ನಡ ನಾಡು | Kannada Naadu

Login to Give your comment
Powered by