


ಬೆಂಗಳೂರು : ೧೭ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ನಿರ್ದೇಶಕ ಬಡಿಗೇರ್ ದೇವೇಂದ್ರ ಅವರ ‘ವನ್ಯಾ’ ಚಿತ್ರವು ಯಶಸ್ವಿಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ಪಲ್ಲವಿ ಅನಂತ್ ಪೂಮಗಾಮೆ ನಿರ್ಮಾಣದ ಈ ಚಿತ್ರವು ಈಗಾಗಲೇ ಹತ್ತಕ್ಕೂ ಹೆಚ್ಚು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದು, ಈಗ ತವರು ನೆಲದ ಚಿತ್ರೋತ್ಸವದಲ್ಲಿ ತೆರೆಕಂಡಿರುವುದು ಚಿತ್ರತಂಡಕ್ಕೆ ಹೆಚ್ಚಿನ ಸಂತಸ ತಂದಿದೆ. ಕಾಡಿನ ಪ್ರಾಮುಖ್ಯತೆ ಹಾಗೂ ನಗರದ ಜನರ ಹಸ್ತಕ್ಷೇಪದಿಂದ ಪ್ರಕೃತಿ ಮೇಲಾಗುತ್ತಿರುವ ಪರಿಣಾಮಗಳನ್ನು ಚಿತ್ರವು ಗಂಭೀರವಾಗಿ ಚರ್ಚಿಸುತ್ತದೆ.

ಚಿತ್ರ ಪ್ರದರ್ಶನದ ನಂತರ ಮಾತನಾಡಿದ ನಿರ್ದೇಶಕ ಬಡಿಗೇರ್ ದೇವೇಂದ್ರ ಅವರು, ನಗರದ ಜನರು ವಿಶ್ರಾಂತಿಗಾಗಿ ಕಾಡಿಗೆ ತೆರಳುತ್ತಿರುವುದು ಅಲ್ಲಿನ ಜೀವವೈವಿಧ್ಯಕ್ಕೆ ಹೇಗೆ ಮಾರಕವಾಗುತ್ತಿದೆ ಮತ್ತು ಕಾಡಿನ ಮೂಲ ನಿವಾಸಿಗಳು ಅನಿವಾರ್ಯವಾಗಿ ನಾಡಿನತ್ತ ಮುಖ ಮಾಡುತ್ತಿರುವ ವಾಸ್ತವವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ ಎಂದು ವಿವರಿಸಿದರು. ಹಿರಿಯ ನಟ ವೈಜನಾಥ ಬಿರಾದಾರ್ ಅವರು ಚಿತ್ರದಲ್ಲಿ ಕಾಡನ್ನು ಬಿಟ್ಟು ಬರಲೊಪ್ಪದ ವಯಸ್ಸಾದ ವ್ಯಕ್ತಿಯ ಭಾವನಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ನಟನಾ ಅನುಭವವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಅಶ್ವಿನ್ ಹಾಸನ್, ಯಶವಂತ್ ಹಾಗೂ ನಿರ್ಮಾಪಕಿ ಪಲ್ಲವಿ ಅನಂತ್ ಪೂಮಗಾಮೆ ಉಪಸ್ಥಿತರಿದ್ದು, ಬೆಂಗಳೂರು ಚಿತ್ರೋತ್ಸವದಂತಹ ದೊಡ್ಡ ವೇದಿಕೆಯಲ್ಲಿ ‘ವನ್ಯಾ’ ಪ್ರದರ್ಶನಗೊಂಡು ಸಿನಿಮಾ ಪ್ರಿಯರಿಂದ ದೊರೆತ ಸಕಾರಾತ್ಮಕ ಪ್ರತಿಕ್ರಿಯೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಪ್ರಕಾಶ್ ಬೆಳವಾಡಿ ಮತ್ತು ಮೇಘನಾ ಬೆಳವಾಡಿ ಅವರಂತಹ ಘನವೆತ್ತ ಕಲಾವಿದರ ಅಭಿನಯವಿರುವ ಈ ಚಿತ್ರವು ಪರಿಸರ ಕಾಳಜಿಯ ದೃಷ್ಟಿಯಿಂದ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
Publisher: ಕನ್ನಡ ನಾಡು | Kannada Naadu