ಕನ್ನಡ ನಾಡು | Kannada Naadu

ಪ್ರತೀ ಐಡಿಯಾಗೂ ಒಂದು 'ಎಕ್ಸ್‌ಪೈರಿ ಡೇಟ್' ಇರುತ್ತದೆ: ನಿರ್ದೇಶಕ ಮಹೇಶ್ ನಾರಾಯಣನ್

01 Feb, 2026


ಬೆಂಗಳೂರು: "ಸಿನಿಮಾ ಎಂಬುದು ಕೇವಲ ಮನೋರಂಜನೆಯಲ್ಲ, ಅದು ನಿರ್ದೇಶಕನು ಸಮಾಜದ ಯಾವುದೋ ಒಂದು ವಿದ್ಯಮಾನಕ್ಕೆ ತೋರುವ ಪ್ರತಿರೋಧ," ಎಂದು ಖ್ಯಾತ ಮಲಯಾಳಂ ಚಲನಚಿತ್ರ ನಿರ್ದೇಶಕ ಮಹೇಶ್ ನಾರಾಯಣನ್ ಅಭಿಪ್ರಾಯಪಟ್ಟರು.

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ‘ರೀಥಿಂಕ್ ನರೇಟಿವ್’ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಟೇಕ್ ಆಫ್’, ‘ಸೀ ಯೂ ಸೂನ್’ ನಂತಹ ಯಶಸ್ವಿ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ಅವರು, ಸಿನಿಮಾ ನಿರ್ಮಾಣದ ಹಿಂದಿನ ಸತ್ಯ ಮತ್ತು ಸವಾಲುಗಳನ್ನು ಹಂಚಿಕೊಂಡರು.

  •  "ನನ್ನ ಬಹುತೇಕ ಸಿನಿಮಾಗಳಿಗೆ ದೇಶ-ವಿದೇಶಗಳಲ್ಲಿ ಸೆನ್ಸಾರ್ ಸಮಸ್ಯೆ ಎದುರಾಗಿದೆ. ಸಿನಿಮಾ ಮತ್ತು ರಾಜಕೀಯವನ್ನು ಬೇರೆ ಬೇರೆ ದೃಷ್ಟಿಕೋನದಿಂದ ನೋಡಬೇಕು. ನಿರ್ದೇಶಕರಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಪೂರ್ಣ ಸ್ವಾತಂತ್ರ್ಯವಿರಬೇಕು," ಎಂದು ಅವರು ಪ್ರತಿಪಾದಿಸಿದರು. ಈ ಸಂದರ್ಭದಲ್ಲಿ ಕರುಣಾನಿಧಿಯವರ ಉದಾಹರಣೆ ನೀಡಿದ ಅವರು, ಸಿನಿಮಾ ನೋಡಿ ಪಕ್ಷದವರು ದೂರ ಹೋಗುತ್ತಾರೆ ಎಂದರೆ ಅದು ಪಕ್ಷದ ದೌರ್ಬಲ್ಯವೇ ಹೊರತು ಸಿನಿಮಾದಲ್ಲ ಎಂದರು.

     "ನಾವು ಜಗತ್ತನ್ನು ನಮ್ಮದೇ ಆದ 'ಲೆನ್ಸ್' ಮೂಲಕ ನೋಡುತ್ತಿರುತ್ತೇವೆ. ವಿದೇಶಿ ಮಾಧ್ಯಮಗಳ ಕಣ್ಣಿನಿಂದ ಕಥೆಗಳನ್ನು ಅರ್ಥೈಸಿಕೊಳ್ಳುವ ಬದಲು, ವಾಸ್ತವವನ್ನು ಬೇರೆ ಆಯಾಮಗಳಿಂದ ನೋಡುವುದು ಕಲಿಯಬೇಕು," ಎಂದು ಇರಾನ್ ಚಿತ್ರೋತ್ಸವದ ಅನುಭವ ಹಂಚಿಕೊಂಡರು.

    "ಯಾವುದೇ ಐಡಿಯಾ ಶಾಶ್ವತವಲ್ಲ, ಅದಕ್ಕೂ ಒಂದು ಅಂತ್ಯವಿರುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ಚಿತ್ರಕಥೆಯನ್ನು ಮರುಪರಿಶೀಲಿಸಿ, ತಿದ್ದಬೇಕು. ಕಾಲಕ್ಕೆ ತಕ್ಕಂತೆ ಕಥೆ ಬೆಳೆಯಬೇಕು," ಎಂಬುದು ಅವರ ಬರವಣಿಗೆಯ ಸೂತ್ರ.


  •  "ಸಿನಿಮಾ ಎಂಬುದು ಅಂತಿಮವಾಗಿ ಒಂದು ಕಲ್ಪನೆ ಅಥವಾ ಸುಳ್ಳು. ಆದರೆ ಆ ಸುಳ್ಳು ವಾಸ್ತವಕ್ಕೆ ಅತ್ಯಂತ ಹತ್ತಿರವಾಗಿರಬೇಕು. ಘಟನೆಯ ಮೂಲಕ್ಕೆ ನಿಷ್ಠವಾಗಿರುವುದು ನನ್ನ ಆದ್ಯತೆ," ಎಂದು ಸಿನಿಮಾ ಮತ್ತು ವಾಸ್ತವದ ನಡುವಿನ ಗೆರೆಯನ್ನು ವಿವರಿಸಿದರು.

     ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಅವರಂತಹ ದಿಗ್ಗಜರನ್ನು 'ಪೇಟ್ರಿಯಾಟ್' ಚಿತ್ರಕ್ಕೆ ಆಯ್ಕೆ ಮಾಡಿದ್ದು ಅವರ ಸ್ಟಾರ್ ಇಮೇಜ್ ನೋಡಿ ಅಲ್ಲ, ಬದಲಾಗಿ ಅವರು ಆ ಪಾತ್ರಕ್ಕೆ ಸೂಕ್ತ ಎಂಬ ಕಾರಣಕ್ಕೆ. ಸೆಟ್‌ನಲ್ಲಿ ಅವರೆಲ್ಲರೂ ಕೇವಲ ಕಲಾವಿದರಂತೆ ಇರುತ್ತಾರೆ ಎಂದು ಶ್ಲಾಘಿಸಿದರು. ಬರವಣಿಗೆಯ ಬಗ್ಗೆ ಮಾತನಾಡುತ್ತಾ, "ನಾನು ಯಾವಾಗಲೂ ಸಿನಿಮಾದ ಕೊನೆಯ ದೃಶ್ಯ ಅಥವಾ ಇಮೇಜ್ ಅನ್ನು ಕಲ್ಪಿಸಿಕೊಂಡೇ ಬರವಣಿಗೆ ಆರಂಭಿಸುತ್ತೇನೆ. ಪ್ರೇಕ್ಷಕರು ಕಥೆಯಿಂದ ಎಲ್ಲೂ ವಿಮುಖರಾಗಬಾರದು ಎನ್ನುವುದೇ ನನ್ನ ಉದ್ದೇಶ," ಎಂದರು.


Publisher: ಕನ್ನಡ ನಾಡು | Kannada Naadu

Login to Give your comment
Powered by