ಕನ್ನಡ ನಾಡು | Kannada Naadu

ಸಂಕಲನಕ್ಕೆ ತಂತ್ರಜ್ಞಾನಕ್ಕಿಂತ ‘ಮಾನವ ಸಂವೇದನೆ’ಯೇ ಮುಖ್ಯ

31 Jan, 2026


ಬೆಂಗಳೂರು : "ಸಿನಿಮಾ ಎಂಬುದು ಕೇವಲ ದೃಶ್ಯಗಳ ಸರಣಿಯಲ್ಲ, ಅದೊಂದು ಭಾವನೆಗಳ ಮಹಾಪೂರ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಕೃತಕ ಬುದ್ಧಿಮತ್ತೆ (AI) ಎಷ್ಟೇ ಚತುರವಾಗಿದ್ದರೂ, ಒಬ್ಬ ಸಂಕಲನಕಾರನ ಕಲಾತ್ಮಕ ಅಂತಃಪ್ರಜ್ಞೆ ಮತ್ತು ಮಾನವ ಸಹಜ ಭಾವನೆಗಳನ್ನು ಮರುಸೃಷ್ಟಿಸಲು ಅದರಿಂದ ಸಾಧ್ಯವಿಲ್ಲ," ಎಂದು ಎಂಟು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತ ಸಂಕಲನಕಾರ ಶ್ರೀಕರ್ ಪ್ರಸಾದ್ ಮಾರ್ಮಿಕವಾಗಿ ನುಡಿದರು.

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (BIFFES) ಭಾಗವಾಗಿ ಆಯೋಜಿಸಲಾಗಿದ್ದ ‘ದಿ ಇನ್ವಿಸಿಬಲ್ ಆರ್ಟ್ ಆಫ್ ಎಡಿಟಿಂಗ್’ (The Invisible Art of Editing) ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಚಿತ್ರದ ಯಶಸ್ಸಿನ ಹಿಂದೆ ಅಡಗಿರುವ 'ಅದೃಶ್ಯ ಕಲೆ'ಯಾದ ಸಂಕಲನದ ಒಳಹರಿವುಗಳನ್ನು ಅವರು ಸಿನಿಕಲಾವಿದರ ಮುಂದೆ ಬಿಚ್ಚಿಟ್ಟರು.


ಸಂಕಲನಕಾರ ಚಿತ್ರದ ಮೊದಲ ಪ್ರೇಕ್ಷಕ!

ಶ್ರೀಕರ್ ಪ್ರಸಾದ್ ಅವರ ಕೆಲಸದ ಶೈಲಿಯೇ ವಿಭಿನ್ನ. ಅವರು ಚಿತ್ರೀಕರಣ ನಡೆಯುವ ಸ್ಥಳಕ್ಕೆ (Set) ಭೇಟಿ ನೀಡುವುದಿಲ್ಲ ಎಂಬ ಅಚ್ಚರಿಯ ವಿಷಯವನ್ನು ಹಂಚಿಕೊಂಡರು. "ಸೆಟ್‌ನಲ್ಲಿರುವ ಕಷ್ಟಗಳು, ಕಲಾವಿದರ ಶ್ರಮ ಅಥವಾ ಅಲ್ಲಿನ ವಾತಾವರಣದ ಪ್ರಭಾವ ನನ್ನ ಮೇಲೆ ಬೀರಬಾರದು ಎಂಬುದು ನನ್ನ ಉದ್ದೇಶ. ನಾನು ಒಬ್ಬ ಸಾಮಾನ್ಯ ಪ್ರೇಕ್ಷಕನಂತೆ ದೃಶ್ಯಗಳನ್ನು ನೋಡಲು ಬಯಸುತ್ತೇನೆ. ಆಗ ಮಾತ್ರ ಆ ದೃಶ್ಯವು ಸಿನಿಮಾದ ಓಟಕ್ಕೆ ಪೂರಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ವಸ್ತುನಿಷ್ಠವಾಗಿ ನಿರ್ಧರಿಸಲು ಸಾಧ್ಯ," ಎಂದು ಅವರು ವಿವರಿಸಿದರು.


ಸ್ಕ್ರಿಪ್ಟ್‌ನಿಂದ ಎಡಿಟಿಂಗ್ ಟೇಬಲ್‌ವರೆಗೆ..

ಸಂಕಲನಕಾರನ ಕೆಲಸ ಕೇವಲ ಚಿತ್ರೀಕರಣದ ನಂತರ ಶುರುವಾಗುವುದಿಲ್ಲ; ಅದು ಚಿತ್ರಕಥೆಯ ಮೊದಲ ಕರಡು ಸಿದ್ಧವಾದಾಗಲೇ ಆರಂಭವಾಗುತ್ತದೆ ಎಂಬುದು ಅವರ ಅನುಭವದ ಮಾತು.

  • ಲಯ ಮತ್ತು ನಿರೂಪಣೆ: ಚಿತ್ರೀಕರಣದ ವೇಳೆ ಬಜೆಟ್ ಅಥವಾ ಸ್ಥಳದ ಲಭ್ಯತೆಗೆ ತಕ್ಕಂತೆ ಚಿತ್ರಕಥೆ ಬದಲಾಗಬಹುದು. ಆದರೆ, ಅಂತಿಮವಾಗಿ ಎಡಿಟಿಂಗ್ ಟೇಬಲ್ ಮೇಲೆ ಸಿನಿಮಾ ಒಂದು ನಿರ್ದಿಷ್ಟ ರೂಪ ಮತ್ತು ಲಯವನ್ನು ಪಡೆದುಕೊಳ್ಳುತ್ತದೆ.

  • ಮೈಕ್ರೋ ವರ್ಸಸ್ ಮ್ಯಾಕ್ರೋ: ಪ್ರತ್ಯೇಕವಾಗಿ ನೋಡಿದಾಗ ಅದ್ಭುತವಾಗಿ ಕಾಣುವ ದೃಶ್ಯವೂ ಇಡೀ ಸಿನಿಮಾದ ವೇಗಕ್ಕೆ ತಡೆಯೊಡ್ಡಬಹುದು. ಅಂತಹ ಸಂದರ್ಭದಲ್ಲಿ ಆ ದೃಶ್ಯವನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸುವ 'ಧೈರ್ಯ' ಸಂಕಲನಕಾರನಿಗೆ ಇರಬೇಕು. ಒಂದು ಸಣ್ಣ ತಪ್ಪು ದೃಶ್ಯವೂ ಪ್ರೇಕ್ಷಕ ಮತ್ತು ಸಿನಿಮಾದ ನಡುವಿನ ಕೊಂಡಿಯನ್ನು ಕಳಚಬಲ್ಲದು ಎಂದು ಅವರು ಎಚ್ಚರಿಸಿದರು.


AI ಮತ್ತು VFX: ಕಥೆಗೆ ಪೂರಕವಾಗಲಿ, ಮಾರಕವಾಗದಿರಲಿ

ಇಂದಿನ ದಿನಗಳಲ್ಲಿ ಚರ್ಚೆಯಾಗುತ್ತಿರುವ AI ತಂತ್ರಜ್ಞಾನದ ಕುರಿತು ಮಾತನಾಡಿದ ಅವರು, "AI ಕೇವಲ ದಕ್ಷತೆ ಹೆಚ್ಚಿಸುವ ಸಾಧನವಾಗಬಹುದೇ ಹೊರತು, ಸಂಕಲನದ ಜೀವಾಳವಾದ ಭಾವನಾತ್ಮಕ ಸೂಕ್ಷ್ಮತೆಯನ್ನು ನೀಡಲಾರದು. ದೃಶ್ಯ ಪರಿಣಾಮಗಳು (VFX) ಕಥೆಯನ್ನು ಬೆಂಬಲಿಸಬೇಕೇ ಹೊರತು, ಕಥೆಯನ್ನೇ ನುಂಗಿ ಹಾಕಬಾರದು," ಎಂದರು. ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ನಾವೆಲ್ಲರೂ ಅಪ್‌ಡೇಟ್ ಆಗಬೇಕು, ಆದರೆ ಸಿನಿಮಾದ ಮೂಲ ತತ್ವವಾದ 'ಮಾನವ ಸಂವೇದನೆ'ಯನ್ನು ಮರೆಯಬಾರದು ಎಂಬುದು ಅವರ ಆಶಯವಾಗಿತ್ತು.

ನಿರ್ಮಾಪಕ ಸಂದೀಪ್ ವಿಶ್ವನಾಥ್ ಅವರು ಈ ಆಪ್ತ ಸಂವಾದವನ್ನು ಅತ್ಯಂತ ಆಕರ್ಷಕವಾಗಿ ನಡೆಸಿಕೊಟ್ಟರು.


ಶ್ರೀಕರ್ ಪ್ರಸಾದ್ ಅವರ 'ಗುರುಮಂತ್ರ' "ಸಂಕಲನ ಎನ್ನುವುದು ಕತ್ತರಿ ಪ್ರಯೋಗವಲ್ಲ, ಅದು ಕಥೆಯನ್ನು ಕಟ್ಟಿಕೊಡುವ ಕಲೆ. ಲಯ (Rhythm) ತಪ್ಪಿದರೆ ಪ್ರೇಕ್ಷಕ ಸಿನಿಮಾ ಇಂದ ದೂರವಾಗುತ್ತಾನೆ. ಎಡಿಟಿಂಗ್ ರೂಮ್‌ನಲ್ಲಿ ನಾವು ಮಾಡುವ ಪ್ರತಿಯೊಂದು ಕಟ್ ಕೂಡ ಪ್ರೇಕ್ಷಕನ ಹೃದಯ ಮಿಡಿತಕ್ಕೆ ಪೂರಕವಾಗಿರಬೇಕು."

Publisher: ಕನ್ನಡ ನಾಡು | Kannada Naadu

Login to Give your comment
Powered by