

17ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ (BIFFES) ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡ 'ತೀರ್ಥರೂಪ ತಂದೆಯವರಿಗೆ' ಚಿತ್ರವು ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಅಭೂತಪೂರ್ವ ಮೆಚ್ಚುಗೆ ಗಳಿಸಿದೆ. ಜೈಚಾಮುಂಡೇಶ್ವರಿ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರವನ್ನು 'ಹೊಂದಿಸಿ ಬರೆಯಿರಿ' ಖ್ಯಾತಿಯ ರಾಮೇನಹಳ್ಳಿ ಜಗನ್ನಾಥ ನಿರ್ದೇಶಿಸಿದ್ದು, ಕೌಟುಂಬಿಕ ಮೌಲ್ಯಗಳ ಕುರಿತಾದ ಕಥೆಯು ನೋಡುಗರ ಮನ ಮುಟ್ಟಿದೆ.
ಚಿತ್ರದ ಪ್ರದರ್ಶನದ ನಂತರ ಚಿತ್ರತಂಡವು ಮಾಧ್ಯಮಗಳೊಂದಿಗೆ ಸಂವಾದ ನಡೆಸಿತು. ಹೊಸ ವರ್ಷದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಈಗ ಚಿತ್ರೋತ್ಸವದ ಸ್ಪರ್ಧಾ ಕಣದಲ್ಲೂ ತನ್ನ ಛಾಪು ಮೂಡಿಸಿದೆ. ಚಿತ್ರದಲ್ಲಿ ನಿಹಾರ್ ನಾಯಕನಾಗಿ ಪಾದಾರ್ಪಣೆ ಮಾಡಿದ್ದು, ಅವರಿಗೆ ಜೋಡಿಯಾಗಿ ರಚನಾ ಇಂದರ್ ನಟಿಸಿದ್ದಾರೆ. ಹಿರಿಯ ನಟಿ ಸಿತಾರಾ, ರಾಜೇಶ್ ನಟರಂಗ ಹಾಗೂ ಅಜಿತ್ ಹಂದೆ ಅವರ ಗಂಭೀರ ಅಭಿನಯ ಚಿತ್ರದ ತೂಕವನ್ನು ಹೆಚ್ಚಿಸಿದೆ. ವಿಶೇಷವಾಗಿ, "ಬಹಳ ದಿನಗಳ ನಂತರ ಒಂದು ಅಪ್ಪಟ ಕೌಟುಂಬಿಕ ಸಿನಿಮಾವನ್ನು ನೋಡಿದ ತೃಪ್ತಿ ಸಿಕ್ಕಿದೆ" ಎಂಬ ಅಭಿಪ್ರಾಯಗಳು ಚಿತ್ರೋತ್ಸವದ ಪ್ರೇಕ್ಷಕರಿಂದ ಕೇಳಿಬರುತ್ತಿವೆ.


ನಿರ್ದೇಶಕರು ಏನಂತಾರೆ? "ನಮ್ಮ ಸಿನಿಮಾ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನವಾಗಿರುವುದು ಬಹಳ ಹೆಮ್ಮೆಯ ಸಂಗತಿ. ಸಿನಿಮಾ ನೋಡಿದವರು 'ಕಣ್ಣು ತುಂಬಿ ಬಂತು, ಒಳ್ಳೆ ಸಿನಿಮಾ ನೋಡಿದೆವು' ಎಂದು ಹೇಳುತ್ತಿರುವುದು ನಿರ್ದೇಶಕನಾಗಿ ನನಗೆ ದೊಡ್ಡ ಗೌರವ ತಂದುಕೊಟ್ಟಿದೆ." — ರಾಮೇನಹಳ್ಳಿ ಜಗನ್ನಾಥ್, ನಿರ್ದೇಶಕರು |
|---|
Publisher: ಕನ್ನಡ ನಾಡು | Kannada Naadu