


ಬೆಂಗಳೂರು : "ವಿಶ್ವವಿಖ್ಯಾತ ನಿರ್ದೇಶಕ ಆಂಡ್ರೆ ವಾಜ್ದಾ ಅವರು ಕೇವಲ ಸಿನೆಮಾ ಮೇಕರ್ ಆಗಿರಲಿಲ್ಲ, ಅವರು ಕಟ್ಟುನಿಟ್ಟಿನ ಸೆನ್ಸಾರ್‌ಶಿಪ್ ವಿರುದ್ಧ ಅತ್ಯಂತ ಚತುರತೆಯಿಂದ ಹೋರಾಡಿದ ಕ್ರಾಂತಿಕಾರಿ ಹೋರಾಟಗಾರರಾಗಿದ್ದರು," ಎಂದು ಗಡಿನಿಯಾ ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕಿ ಜೋವಾನ್ನಾ ವಪಿನ್ಸ್ಕಾ ಬಣ್ಣಿಸಿದರು.
17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (BIFFES) ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ “ಪೋಲಿಷ್ ಸಿನಿಮಾ ಮತ್ತು ಆಂಡ್ರೆ ವಾಜ್ದಾ ಅವರ ಪರಂಪರೆ” ಎಂಬ ವಿಶೇಷ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ವಾಜ್ದಾ ಅವರ ಸಿನೆಮಾ ಬದುಕನ್ನು ಮೆಲುಕು ಹಾಕಿದ ಜೋವಾನ್ನಾ, "ಅಂದಿನ ಕಾಲದಲ್ಲಿ ಬಹಿರಂಗವಾಗಿ ಮಾತನಾಡಲು ಸ್ವಾತಂತ್ರ್ಯವಿರಲಿಲ್ಲ. ಅಂತಹ ಸಂದರ್ಭದಲ್ಲಿ ವಾಜ್ದಾ ಅವರು ತಮ್ಮ ಚಿತ್ರಗಳ ಮೂಲಕ ಹೊಸ ಸಂಕೇತಗಳನ್ನು ಸೃಷ್ಟಿಸಿ, ಜನರಿಗೆ ತಿಳಿಸಬೇಕಾದ ಸತ್ಯವನ್ನು ಅತ್ಯಂತ ನಾಜೂಕಾಗಿ ತಲುಪಿಸುತ್ತಿದ್ದರು. ಅವರು ಪ್ರಾರಂಭಿಸಿದ 'ಪೋಲಿಷ್ ಫಿಲ್ಮ್ ಸ್ಕೂಲ್' ಎಂಬ ಆಂದೋಲನವು ಎರಡನೇ ಮಹಾಯುದ್ಧದ ನಂತರದ ಕಹಿ ಸತ್ಯಗಳನ್ನು ಜಗತ್ತಿಗೆ ಪರಿಚಯಿಸಿತು. ಇವರ 'ಕೆನಾಲ್' ಮತ್ತು 'ಆಶಸ್ ಅಂಡ್ ಡೈಮಂಡ್ಸ್' ಚಿತ್ರಗಳು ಇಂದಿಗೂ ವಿಶ್ವ ಸಿನಿಮಾದ ಪಠ್ಯಗಳಂತಿವೆ," ಎಂದು ತಿಳಿಸಿದರು.
ವಾಜ್ದಾ ಕೇವಲ ಚಿತ್ರಮಂದಿರಕ್ಕೆ ಸೀಮಿತವಾಗದೆ, 90ರ ದಶಕದಲ್ಲಿ ಸೆನೆಟರ್ ಆಗಿ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಅವರಲ್ಲಿದ್ದ ಹಂಬಲ ಅಪಾರವಾದುದು. ಅವರ 'ಮ್ಯಾನ್ ಆಫ್ ಮಾರ್ಬಲ್' ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಪೋಲೆಂಡ್‌ನಲ್ಲಿ ದೊಡ್ಡ ಜನಜಾಗೃತಿ ಆಂದೋಲನ ಆರಂಭವಾಗಿತ್ತು ಎನ್ನುವುದು ಅವರ ಸಿನಿಮಾಗಳ ಶಕ್ತಿಗೆ ಸಾಕ್ಷಿ ಎಂದು ಗೋಷ್ಠಿಯಲ್ಲಿ ವಿವರಿಸಲಾಯಿತು.
ಗೋಷ್ಠಿಯ ಸಮನ್ವಯಕಾರರಾದ ವಿದ್ಯಾಶಂಕರ್ ಮಾತನಾಡಿ, "ವಾಜ್ದಾ ಅವರು ಪ್ರತಿಭಟನೆಯ ಧ್ವನಿಯನ್ನು ದೃಶ್ಯ ವೈಭವದೊಳಗೆ ಅಡಗಿಸಿಡುತ್ತಿದ್ದರು. 1980ರ ದಶಕದ ಪ್ರಸಿದ್ಧ 'ಸಾಲಿಡಾರಿಟಿ' ಚಳುವಳಿಯ ಸಮಯದಲ್ಲಿ ಅವರು ನಾಗರಿಕ ಪ್ರತಿರೋಧದ ಪ್ರಮುಖ ಸಾಂಸ್ಕೃತಿಕ ಧ್ವನಿಯಾಗಿದ್ದರು," ಎಂದು ಸ್ಮರಿಸಿದರು.
ನವದೆಹಲಿಯ ಪೋಲಿಷ್ ಇನ್‌ಸ್ಟಿಟ್ಯೂಟ್ ನಿರ್ದೇಶಕಿ ಮಾಲ್ಗೊರ್ಝಾಟಾ ವೀಜಿಸ್-ಗೋಲೆಬಿಯಾಕ್ ಮಾತನಾಡಿ, ಸಂಸ್ಕೃತಿಯು ಗಡಿಗಳನ್ನು ಮೀರಿ ಜನರನ್ನು ಬೆಸೆಯುವ ಶಕ್ತಿಶಾಲಿ ಮಾಧ್ಯಮ ಎಂದರು. ಈ ಸಂವಾದದಲ್ಲಿ ಚಲನಚಿತ್ರ ಸಂಯೋಜಕ ಮೃತುಂಜಯ ಅಲಿ ಖಾನ್ ಮತ್ತು ಪೋಲೆಂಡ್ ಗೌರವ ರಾಯಭಾರಿ ರಘು ರಾಜಪ್ಪ ಉಪಸ್ಥಿತರಿದ್ದರು.
ಸಾಂಸ್ಕೃತಿಕ ರಾಯಭಾರಿಯ ಮಾತು"ಸಂಸ್ಕೃತಿಯು ಸಂವಹನದ ಅತ್ಯಂತ ಶಕ್ತಿಶಾಲಿ ಮಾಧ್ಯಮವಾಗಿದೆ. ಇದು ನಾವು ಭೌಗೋಳಿಕ ಗಡಿಗಳನ್ನು ಮೀರಿ ಪರಸ್ಪರ ಸಹಕರಿಸಲು ಮತ್ತು ಮಾನವೀಯ ಭಾವನೆಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ." — ಮಾಲ್ಗೊರ್ಝಾಟಾ ವೀಜಿಸ್-ಗೋಲೆಬಿಯಾಕ್ (ನಿರ್ದೇಶಕಿ, ಪೋಲಿಷ್ ಇನ್‌ಸ್ಟಿಟ್ಯೂಟ್, ನವದೆಹಲಿ)eader 1 |
|---|
Publisher: ಕನ್ನಡ ನಾಡು | Kannada Naadu