ಕನ್ನಡ ನಾಡು | Kannada Naadu

ಆರ್‌ಟಿಐ ಕಾಯ್ದೆಯ ಅರಿವಿದ್ದರೆ ಮಾತ್ರ ಸಮರ್ಪಕ ಉತ್ತರ ಸಾಧ್ಯ: ಮಾಹಿತಿ ಆಯುಕ್ತ ಡಾ. ಮಹೇಶ್ ವಾಳ್ವೇಕರ್ ಸಲಹೆ

06 Jan, 2026

ಚಿಕ್ಕಮಗಳೂರು: ಮಾಹಿತಿ ಹಕ್ಕು ಕಾಯ್ದೆ 2005ರ ಬಗ್ಗೆ ಅಧಿಕಾರಿಗಳು ಸ್ಪಷ್ಟವಾದ ತಿಳುವಳಿಕೆ ಮತ್ತು ಅರಿವು ಹೊಂದಿದ್ದರೆ ಮಾತ್ರ ಸಾರ್ವಜನಿಕರಿಂದ ಮಾಹಿತಿಗಾಗಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಸಮರ್ಪಕವಾಗಿ ಉತ್ತರ ನೀಡಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರಾದ ಡಾ. ಮಹೇಶ್ ವಾಳ್ವೇಕರ್ ತಿಳಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಜಿ.ಪಂ. ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತಿ ಪಿ.ಡಿ.ಒ.ಗಳಿಗೆ ಆಯೋಜಿಸಲಾಗಿದ್ದ 'ಮಾಹಿತಿ ಹಕ್ಕು ಅಧಿನಿಯಮ 2005' ಕುರಿತ ಜಾಗೃತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಹಿತಿ ಆಯೋಗ ಹಾಗೂ ನ್ಯಾಯಾಲಯಗಳು ನೀಡಿರುವ ವಿವಿಧ ಆದೇಶ ಮತ್ತು ತೀರ್ಪುಗಳನ್ನು ಅಧಿಕಾರಿಗಳು ಹಾಗೂ ನೌಕರರು ಸರಿಯಾಗಿ ತಿಳಿದುಕೊಂಡಲ್ಲಿ ದಾಖಲೆಗಳನ್ನು ನೀಡಲು ಸಹಕಾರಿಯಾಗುತ್ತದೆ ಎಂದ ಅವರು, ಮಾಹಿತಿ ಕೋರಿದ ಅರ್ಜಿದಾರರಿಗೆ ವಿಳಂಬ ಮಾಡದೆ ನಿಗದಿತ ಸಮಯದೊಳಗೆ ಮಾಹಿತಿ ನೀಡಬೇಕು ಅಥವಾ ಸೂಕ್ತ ಹಿಂಬರಹ ನೀಡಬೇಕು ಎಂದು ಸೂಚಿಸಿದರು. ಅರ್ಜಿದಾರರಿಗೆ 30 ದಿನಗಳೊಳಗೆ ಮಾಹಿತಿ ಒದಗಿಸುವುದು ಕಡ್ಡಾಯವಾಗಿದ್ದು, ಒಂದು ವೇಳೆ ಸ್ವೀಕರಿಸಿದ ಅರ್ಜಿಯು ತಮ್ಮ ಇಲಾಖೆಯ ವ್ಯಾಪ್ತಿಗೆ ಒಳಪಡದಿದ್ದರೆ ಅಂತಹ ಅರ್ಜಿಯನ್ನು 5 ದಿನದೊಳಗೆ ಸಂಬಂಧಪಟ್ಟವರಿಗೆ ವರ್ಗಾಯಿಸಬೇಕು. ಈ ಪ್ರಕ್ರಿಯೆಗಳನ್ನು ಅನುಸರಿಸದೇ ವಿಳಂಬ ಅಥವಾ ನಿರ್ಲಕ್ಷ್ಯ ತೋರಿದಲ್ಲಿ ಅಧಿಕಾರಿಗಳು ದಂಡನೆ ಮತ್ತು ಶಿಸ್ತು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದು ಈ ಕಾಯ್ದೆಯ ಮೂಲ ಉದ್ದೇಶವಾಗಿದ್ದು, ಜನರ ಕೆಲಸಗಳು ಮುಕ್ತ ಹಾಗೂ ತ್ವರಿತವಾಗಿ ಆಗಲೆಂದೇ ಸಕಾಲ, ಮಾಹಿತಿ ಹಕ್ಕು ಹಾಗೂ ಲೋಕಾಯುಕ್ತದಂತಹ ವ್ಯವಸ್ಥೆಗಳು ಜಾರಿಯಲ್ಲಿವೆ. ಆದ್ದರಿಂದ ಅಧಿಕಾರಿಗಳು ಕಡತಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಮತ್ತು ಸಾರ್ವಜನಿಕರ ದೂರುಗಳಿಗೆ ಆದ್ಯತೆ ನೀಡಬೇಕು ಎಂದರು. ಆರ್‌ಟಿಐ ಮೂಲಕ ಮಾಹಿತಿಯನ್ನು ಕೇಳಿ ಪಡೆಯುವುದು ಪ್ರತಿಯೊಬ್ಬ ಭಾರತೀಯ ನಾಗರಿಕರ ಮೂಲಭೂತ ಹಕ್ಕಾಗಿದ್ದು, ಇದರಡಿ ಸರ್ಕಾರಿ ಕಾಮಗಾರಿಗಳ ವಿವರ, ಆದೇಶಗಳ ನಕಲು ಹಾಗೂ ಕಡತಗಳ ಪರಿಶೀಲನೆಗೂ ಅವಕಾಶವಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರಾದ ಡಾ. ಹರೀಶ್‌ಕುಮಾರ್ ಹಾಗೂ ಬದ್ರುದ್ದೀನ್ ಕೆ., ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣ ರೆಡ್ಡಿ ಕನಕರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ. ಜಯಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by