

ಇಂದಿಗೆ ನನ್ನ ʼನಾದದ ನೆರಳುʼ ಕಾದಂಬರಿ ಪ್ರಕಟವಾಗಿ ಐದು ವರ್ಷ..!!
2020ರಲ್ಲಿ ಕರೋನ ಕಾರಣದಿಂದ ನನ್ನ ಬಿಡುವಿರದ ಓಡಾಟದ ಜೀವನಕ್ಕೆ ಅನಿರೀಕ್ಷಿತ ಬ್ರೇಕ್ ಸಿಕ್ಕಿತ್ತು. ಇದೇ ಸಮಯಕ್ಕೆ ನನ್ನ ಜೆ.ಸಿ.ಬಿ.ಎಂ ಕಾಲೇಜಿನ ಸಹಪಾಠಿಗಳು ಒಂದು ವಾಟ್ಸಪ್ ಗ್ರೂಪ್ ಮಾಡಿದರು. ಅದನ್ನು ನೋಡುತ್ತಾ ಹಳೆಯ ದಿನಗಳು ನೆನಪಾದವು. ನಾನು ಅರ್ಧಕ್ಕೆ ನಿಲ್ಲಿಸಿದ್ದ ಕಾದಂಬರಿಯನ್ನು ಮುಂದುವರೆಸ ಬಹುದು ಎನ್ನಿಸಿತು. ನಾನು ಮೊದಲು ಬರೆಯಲು ಆರಂಭಿಸಿದಾಗ ಅದು ಹರಿಹರಪುರಕ್ಕೆ ಮಾತ್ರ ಸೀಮಿತವಾಗಿತ್ತು. ಈಗ ವಾಟ್ಸಪ್ ಗ್ರೂಪ್ ನೋಡುತ್ತಾ ನಾರ್ವೆ ಕಾಡಲು ಆರಂಭಿಸಿತು. ನಾನು ನಾರ್ವೆಯಲ್ಲಿ ಓದಿದ್ದು ನಾಲ್ಕನೆಯ ತರಗತಿಯವರೆಗೆ ಮಾತ್ರ, ಆದರೆ ಅಲ್ಲಿ ಕಾಡುವ ನೆನಪುಗಳಿದ್ದವು. ಕರೋನದ ದಿನಗಳಲ್ಲಿ ಅಲ್ಲಿಗೆ ಹೋಗುವಂತಿರಲಿಲ್ಲ. ನನ್ನ ಸಹಪಾಠಿ ಸತ್ಯಭಾಮ ಮತ್ತು ನಾರ್ವೆಯ ನನ್ನ ಪಕ್ಕದ ಮನೆಯವರಾಗಿದ್ದ ಜಯಂತಿ ಸಾಕಷ್ಟು ಮಾಹಿತಿ ಕೊಟ್ಟರು. ಮೊದಲ ನೂರುಪುಟಗಳ ಬರವಣಿಗೆ ಬಹಳ ವೇಗವಾಗಿ ಸಾಗಿತು. ನನಗೆ ಇನ್ನೊಂದು ಕೊಪ್ಪ, ಹರಿಹರಪುರಗಳಿಂದ ಭಿನ್ನವಾದ ಮಲೆನಾಡಿನ ಊರು ಬೇಕಿತ್ತು. ತೀರ್ಥಹಳ್ಳಿ, ಕಮ್ಮರಡಿ ನನ್ನ ಮೊದಲ ಆಯ್ಕೆಗಳಾಗಿದ್ದವು. ಸಾಂಸ್ಕೃತಿಕ ಕಾರಣಕ್ಕೆ ಜಯಪುರ ಆಗ ಬಹುದು ಎನ್ನಿಸಿತು. ಆಗ ಅಲ್ಲಿದ್ದ ನನ್ನ ಸಹಪಾಠಿ ಸುನಿತಾ, ಅಲ್ಲಿನ ಮಾಹಿತಿ, ವಿಡಿಯೋಗಳನ್ನು ಕಳುಹಿಸಿ ಕಥೆ ಕಟ್ಟಲು ನೆರವಾದರು.
ನಾನು ಬಳಸಿ ಕೊಂಡ ಇನ್ನೊಂದು ಆಯಾಮ ಸಂಗೀತದ್ದು, ಅದು ಕಾದಂಬರಿಗೆ ಅಗತ್ಯ ತಾತ್ವಿಕತೆ ಒದಗಿಸಿತು. ಇದು ನನ್ನ ನಾಲ್ಕನೆಯ ಕಾದಂಬರಿ ಆಗಿದ್ದರೂ ಲ್ಯಾಪ್ ಟಾಪ್ ಮೂಲಕ ಮೂಡಿಸಿದ ಮೊದಲ ಕಾದಂಬರಿ ಇದಾಗಿತ್ತು. ಕರೋನದ ದಿನಗಳಿದ್ದರೂ ಬರೆದ ಪುಟಗಳನ್ನು ಬೇರೆ ಊರಿನಲ್ಲಿದ್ದವರಿಗೆ ಹಂಚಿ ಕೊಳ್ಳುವುದು ಇದರಿಂದ ಸಾಧ್ಯವಾಯಿತು. ನನ್ನ ಗುರುಗಳಾದ ಎಚ್.ಎಲ್.ಸುಬ್ರಹ್ಮಣ್ಯ ಅವರ ಮಗ ಎಚ್.ಎಸ್.ನಂದ ಕುಮಾರ್, ನನ್ನ ಬರವಣಿಗೆಗಳನ್ನು ಸದಾ ಆಪ್ತವಾಗಿ ಓದುತ್ತಾ ಬಂದ ಬರಹಗಾರ್ತಿ ನಂದಿನಿ ಹೆದ್ದುರ್ಗ, ನನ್ನ ಸಹಪಾಠಿ ಮತ್ತು ಗಾಯಕಿ ಸುಜಾತ ರಾವ್ ಅವರಿಗೆ ಬರೆಯುತ್ತಲೇ ಕಳುಹಿಸುತ್ತಾ ಬಂದೆ. ಸಂಗೀತ ಮತ್ತು ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿರುವ ಶ್ರೀಪತಿ ಮಂಜನ ಬೈಲು ಕಾದಂಬರಿಯನ್ನು ಒಪ್ಪಗೊಳಿಸಿದರು. ಕರೋನಾದ ಕಾರಣದಿಂದ ಓಡಾಡಲು ಸಾಧ್ಯವಿಲ್ಲದ ಕಾಲದಲ್ಲಿ ಇದೆಲ್ಲವೂ ಇ ಮೇಲ್ ಮೂಲಕವೇ ನಡೆದಿದ್ದು ವಿಶೇಷ. ಇನ್ನೂ ಕಾದಂಬರಿಯ ಎರಡು ಅಧ್ಯಾಯದ ಬರವಣಿಗೆಯ ಬಾಕಿ ಇದ್ದಾಗ ಸಪ್ನ ಬುಕ್ ಹೌಸ್‌ನ ದೊಡ್ಡೇಗೌಡರು ಪೋನ್ ಮಾಡಿ ʼನಿಮ್ಮದೊಂದು ಪುಸ್ತಕ ಕೊಡಿʼ ಎಂದು ಕೇಳಿದರು. ಕಾದಂಬರಿ ವಿಷಯ ಹೇಳಿದಾಗ ʼಅದನ್ನೇ ಕೊಡಿʼ ಎಂದರು. ʼಇನ್ನೂ ಬರೆದು ಮುಗಿದಿಲ್ಲ. ನೀವೊಂದು ಸಲ ನೋಡ ಬೇಕಲ್ಲʼ ಎಂದರೆ ʼನಿಮ್ಮದು ಗಟ್ಟಿ ಬರವಣಿಗೆ, ಮುಗಿದ ಕೂಡಲೇ ಕಳುಹಿಸಿ ನೇರವಾಗಿ ಮದ್ರಣಕ್ಕೆ ಹೋಗುತ್ತದೆʼ ಎಂದರು. ಹಾಗೆ ನಡೆದು ಕೊಂಡರೂ ಕೂಡ. ನಾನು ಕಾದಂಬರಿ ಮುಗಿಸಿದ ಒಂದೇ ತಿಂಗಳಲ್ಲಿ ಅದು ಪ್ರಕಟವೂ ಆಯಿತು.

ಮುಂದೆ ನಡೆದಿದ್ದು ನಾನು ಊಹಿಸಿದ ವಿದ್ಯಮಾನ. ನನ್ನ ಹಿಂದಿನ ಮೂರು ಕಾದಂಬರಿಗಳು ಎರಡನೇ ಮುದ್ರಣ ಕಂಡಿಲ್ಲ. ಆದರೆ ʼನಾದದ ನೆರಳುʼ ಪ್ರಕಟವಾದ ಆರೇ ತಿಂಗಳಿನಲ್ಲಿ ಎರಡನೆಯ ಮುದ್ರಣ ಕಂಡಿತು. ಇದುವರೆಗೂ ನಾಲ್ಕು ಮುದ್ರಣಗಳನ್ನು ಕಂಡಿದೆ. ಡಾ.ಎಸ್.ಎಲ್.ಭೈರಪ್ಪ. ಡಾ.ಎಚ್.ಎಸ್.ವೆಂಕಟೇಶ ಮೂರ್ತಿ, ಡಾ.ಕೆ.ಸತ್ಯನಾರಾಯಣ, ವಿದ್ವಾನ್ ಆರ್.ಕೆ.ಪದ್ಮನಾಭ, ಹಂಸಲೇಖ ಹೀಗೆ ಹಲವರು ಮೆಚ್ಚಿ ಕೊಂಡರು. ಚೈತನ್ಯ ಮಜಲಕೊಡಿ ʼಕನ್ನಡದಲ್ಲಿ ಸಂಗೀತದ ಕುರಿತು ಬಂದ ಮುಖ್ಯ ಕಾದಂಬರಿʼಗಳ ಕುರಿತ ಪುಸ್ತಕದಲ್ಲಿ ಈ ಕುರಿತು ವಿಶೇಷವಾಗಿ ಬರೆದರು. ಶ್ರೀಪತಿ ಮಂಜನ ಬೈಲು, ವಿದ್ಯಾ ಭರತನ ಹಳ್ಳಿ, ಸಿಂಧುಚಂದ್ರ ಹೆಗಡೆ, ಪ್ರೊ.ಹಯವದನ ಉಪಾಧ್ಯ ಹೀಗೆ ಹಲವರು ವಿಸ್ತಾರವಾದ ವಿಮರ್ಶೆಗಳನ್ನು ಬರೆದರು. ಇದರ ಸಂಗೀತದ ನೆಲೆ ಹೆಚ್ಚಾಗಿ ಚರ್ಚಿತವಾಯಿತು. ಆದರೆ ಇದು ಬದಲಾಗುತ್ತಿರುವ ಮಲೆನಾಡಿನ ಕುರಿತೂ ಇತ್ತು. ಈ ಮುಖ ಹೆಚ್ಚಾಗಿ ಚರ್ಚಿತವಾಗಲಿಲ್ಲ.
ಮುಂದಿನ ಕಾದಂಬರಿ ಆಗಲೇ ಇನ್ನೂರು ಪುಟಗಳ ಬರವಣಿಗೆ ಆಗಿದೆ. ಆದರೆ ಈಗ ಕರೋನದಂತಹ ಬಿಡುವಿಲ್ಲ. ಮನಸ್ಸಿಟ್ಟು ಬರೆಯಲು ಆಗುತ್ತಿಲ್ಲ. ನಡುವೆ ಮುಗಿಸ ಬೇಕಾದ ಇನ್ನೂ ಮೂರು ಪುಸ್ತಕಗಳಿವೆ. ಹೀಗಾಗಿ ಎಂದು ಮುಗಿಯುತ್ತದೆ ಹೇಳಲಾರೆ.
ʼನಾದದ ನೆರಳುʼ ನನ್ನ ಸೃಜನಶೀಲ ಬರವಣಿಗೆಯಲ್ಲಿ ಮುಖ್ಯ ತಿರುವಾಗಿದ್ದಂತೂ ನಿಜ.

-ಎನ್.ಎಸ್.ಶ್ರೀಧರ ಮೂರ್ತಿ
Publisher: ಕನ್ನಡ ನಾಡು | Kannada Naadu