ಕನ್ನಡ ನಾಡು | Kannada Naadu

ಕಲಾ ದರ್ಶಿನಿ ಟ್ರಸ್ಟ್‌ ವತಿಯಿಂದ 'ಸೃಷ್ಟಿ ಚಿತ್ರ ಸಂಭ್ರಮ'

29 Nov, 2025

 

ಬೆಂಗಳೂರಿನ ಸೃಷ್ಟಿ ಕಲಾ ಮಂದಿರದಲ್ಲಿ ಮೂಡಿಬರಲಿದೆ ಅದ್ಭುತ ಕಲಾ ಲೋಕ

ಕಲೆಯೆಂದರೆ ಬಣ್ಣ, ರಾಗ, ತಾಳ, ಭಾವದ ಅನಂತ ಲೋಕ. ಅದು ಬದುಕಿನ ಭವ ಬಂಧನಗಳಿಗೆ ಸಿಗದ ಸ್ವಚ್ಛಂದ ನದಿ. ಅಂತಹ ಭಾವ ಪ್ರಪಂಚವನ್ನು ಕಟ್ಟಿಕೊಡುವ ಮತ್ತು ಹೊಸ ತಲೆಮಾರಿಗೆ ಕಲೆಯನ್ನು ದಾಟಿಸುವ ಮಹೋನ್ನತ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಸಂಸ್ಥೆ ಕಲಾ ದರ್ಶಿನಿ ಟ್ರಸ್ಟ್‌ (ರಿ). ಈ ಟ್ರಸ್ಟ್‌ನ ವತಿಯಿಂದ ಈ ವರ್ಷ ಬೆಂಗಳೂರಿನ ಕಲಾ ಆಸಕ್ತರ ವಲಯದಲ್ಲಿ ಸಂಚಲನ ಮೂಡಿಸಲು 'ಸೃಷ್ಟಿ ಚಿತ್ರ ಸಂಭ್ರಮ' ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದೆ.

 ಸಂಸ್ಥೆಯ ಹಿನ್ನೆಲೆ ಮತ್ತು ಸೇವೆಗಳು

ಕಲಾ ದರ್ಶಿನಿ ಟ್ರಸ್ಟ್‌ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ `ಸೃಷ್ಟಿ ಕಲಾ ಮಂದಿರ'ವು, ತನ್ನ ನಿರ್ದೇಶಕರಾದ `ರೂಪ ಮೋಹನ್' ಅವರ ನೇತೃತ್ವದಲ್ಲಿ ಕಳೆದ 12 ವರ್ಷಗಳಿಂದ ಬೆಂಗಳೂರಿನ ಜೆ.ಪಿ. ನಗರದಲ್ಲಿ ಸಕ್ರಿಯವಾಗಿದೆ.
  ಈ ಸಂಸ್ಥೆಯು ಕೇವಲ ತರಬೇತಿ ಕೇಂದ್ರವಾಗಿರದೇ, ಕಲಿಕೆಯನ್ನು ಬೋಧಿಸುತ್ತಾ ಮಕ್ಕಳು ಮತ್ತು ದೊಡ್ಡವರಿಗಾಗಿ ಭರತನಾಟ್ಯ, ಸಂಗೀತ, ರಂಗಭೂಮಿ, ಚಿತ್ರಕಲೆ, ವೀಣೆ, ಕಥಕ್ ಸೇರಿದಂತೆ ಹಲವು ಕಲಾ ಪ್ರಕಾರಗಳಲ್ಲಿ ತರಬೇತಿ ನೀಡುತ್ತಿದೆ. ಸಂಸ್ಥೆಯು ಈಗಾಗಲೇ ನೂರಾರು ವಿದ್ಯಾರ್ಥಿಗಳಿಗೆ ಸ್ವತಂತ್ರ ಅಭ್ಯಾಸದಲ್ಲಿ ತೊಡಗಲು ವೇದಿಕೆ ಕಲ್ಪಿಸಿದೆ. ರೂಪ ಮೋಹನ್ ಮತ್ತು ತಂಡವು ಮಕ್ಕಳ ಸಾಹಿತ್ಯ ಅಭಿರುಚಿ ಬೆಳೆಸಲು ರಾಜ್ಯ ಮಟ್ಟದ 'ಮಕ್ಕಳ ಸಾಹಿತ್ಯ ಸಮ್ಮೇಳನ', ನಾಟಕೋತ್ಸವಗಳು ಮತ್ತು ಜಾನಪದ ಉತ್ಸವಗಳನ್ನು ಆಯೋಜಿಸುತ್ತಾ ಬಂದಿದೆ. ಪ್ರತಿ ವರ್ಷ 'ಸೃಷ್ಟಿ ಸಂಭ್ರಮ' ಕಾರ್ಯಕ್ರಮದ ಮೂಲಕ ಮಕ್ಕಳಿಗೆ ವೇದಿಕೆ ನೀಡಿ ಪ್ರೋತ್ಸಾಹಿಸಲಾಗಿದೆ ವಿಶೇಷವಾಗಿ, ಕರ್ನಾಟಕದ ಸಾಧನೆ ಮಾಡಿದ ಮೂರು ದಿವ್ಯಾಂಗಿಗಳನ್ನು ಗುರುತಿಸಿ ಅವರಿಗೆ ವೇದಿಕೆ ನೀಡಿ, ತಮ್ಮ ಕೈಲಾದ ಸಹಾಯವನ್ನು ರೂಪ ಮೋಹನ್ ರವರು ಮಾಡುತ್ತ ಬಂದಿರುತ್ತಾರೆ ಈ ರೀತಿಯ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಕಲೆಯನ್ನು ಹೊಸ ತಲೆಮಾರಿಗೆ ದಾಟಿಸುವ ಕೆಲಸ ಮಾಡಲಾಗುತ್ತಿದೆ.

 ಈ ವರ್ಷದ 'ಸೃಷ್ಟಿ ಚಿತ್ರ ಸಂಭ್ರಮ'ದ ಮಹತ್ವ

ಈ ವರ್ಷ ಮಕ್ಕಳ ಅಭ್ಯುದಯಕ್ಕೆ ಮತ್ತು ಕಲಾ ವಿದ್ಯಾರ್ಥಿಗಳ ಸರ್ವತೋಮುಖ ಸಾಧನೆಗಳನ್ನು ಸಮಾಜಕ್ಕೆ ತರುವ ಮಹತ್ವದ ಉದ್ದೇಶದಿಂದ "ಸೃಷ್ಟಿ ಚಿತ್ರ ಸಂಭ್ರಮ" ಎನ್ನುವ ಚಿತ್ರಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರದರ್ಶನದಲ್ಲಿ ಸೃಷ್ಟಿ ಕಲಾ ಮಂದಿರದ ಚಿತ್ರಕಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಾದ ಶ್ರೀಚಂದನ್ ರವರ ಚಿತ್ರಗಳು ಅನಾವರಣಗೊಳ್ಳಲಿವೆ.
ಈ ಪ್ರದರ್ಶನದ ಉದ್ಘಾಟನಾ ಸಮಾರಂಭವು ಡಿಸೆಂಬರ್ 5, 2025 ರಂದು ಸಂಜೆ 5:30 ಕ್ಕೆ ನಡೆಯಲಿದೆ. 'ಸೃಷ್ಟಿ ಚಿತ್ರ ಸಂಭ್ರಮ'ವು ಡಿಸೆಂಬರ್ 6 ಮತ್ತು 7, 2025 ರಂದು ಸಾರ್ವಜನಿಕರಿಗೆ ಮುಕ್ತ ಪ್ರವೇಶವನ್ನು ನೀಡಲಿದ್ದು, ಈ ಅವಧಿಯಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಚಿತ್ರಕಲಾ ಪ್ರದರ್ಶನವನ್ನು ಉಚಿತವಾಗಿ ವೀಕ್ಷಿಸಬಹುದು. ನಗರದ, ಜೆ.ಪಿ. ನಗರ 5 ನೇ ಹಂತದಲ್ಲಿರುವ 16 ನೇ ಕ್ರಾಸ್‌ನ ಸೃಷ್ಟಿ ಕಲಾ ಮಂದಿರದಲ್ಲಿ ಪ್ರಸ್ತುತ  ಕಲಾ ಲೋಕವನ್ನು ಏರ್ಪಡಿಸಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಈ ಸಂಭ್ರಮಕ್ಕೆ ಕಲಾ ಆಸಕ್ತರೆಲ್ಲರೂ ಆಗಮಿಸಿ, ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ರೂಪ ಮೋಹನ್ ಮತ್ತು ತಂಡವು ವಿನಂತಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9880882854 / 6360219497

Publisher: ಕನ್ನಡ ನಾಡು | Kannada Naadu

Login to Give your comment
Powered by