

- ಮಹಾಬಲಮೂರ್ತಿ ಕೊಡ್ಲೆಕೆರೆ
ಕತೆ, ಕಾದಂಬರಿ, ವಿಮರ್ಶೆ ಹಾಗೂ ಚಿಂತನಗಳ ಮೂಲಕ ತಮ್ಮನ್ನು ಉತ್ತಮ ಬರಹಗಾರನಾಗಿ ಅನಾವರಣಗೊಳಿಸಿಕೊಂಡವರು ಲೇಖಕ, ಗೆಳೆಯ ಡಾ. ಸುರೇಶ ಪಾಟೀಲರು. ಇವರ ಹೊಸ ಕಾದಂಬರಿ 'ಸನ್ನಿಧಿ' ಈಗ ಹೊರಬರುತ್ತಿರುವ ಈ ಸಂದರ್ಭದಲ್ಲಿ ಕಾದಂಬರಿಯ ಕುರಿತಂತೆ ಕೆಲವು ಟಿಪ್ಪಣಿಗಳನ್ನು ಇಲ್ಲಿ ದಾಖಲಿಸುವುದು ನನಗೆ ಸಂತಸದ ವಿಚಾರವಾಗಿದೆ. ಈ ಹತ್ತು ವರ್ಷಗಳಲ್ಲಿ ಕಾದಂಬರಿಯನ್ನೇ ತಮ್ಮ ಪ್ರಮುಖ ಆಯ್ಕೆಯ ಆಶಯವನ್ನಾಗಿ ಮಾಡಿಕೊಂಡು ಒಂದಲ್ಲ, ಎರಡಲ್ಲ, ಒಟ್ಟಿಗೆ ಏಳು ಕಾದಂಬರಿಗಳನ್ನು ಹೊರತಂದಿದ್ದಾರೆ. ಪ್ರತಿಯೊಂದು ಕಾದಂಬರಿಯಲ್ಲೂ ಹಲ ಬಗೆಯ ಚಿಂತನೆಗಳ ಮೂಲಕ ಜೀವನ ಧರ್ಮದ ಹಲವು ಮಗ್ಗುಲುಗಳನ್ನು ವಿಶ್ಲೇಷಿಸುವುದಕ್ಕೆ ಉತ್ಸಾಹ ತೋರಿ ಗೆದ್ದಿದ್ದಾರೆ. ಹಾಗೆಯೇ ಭಾರತೀಯ ಮೀಮಾಂಸೆಗಳಲ್ಲಿನ ವೈಚಾರಿಕ ಘಟಕಗಳನ್ನು ತಮ್ಮ ಕಾದಂಬರಿಯ ಪಾತ್ರಗಳ ಮೂಲಕ ಒಂದಿಲ್ಲೊಂದು ಬಗೆಯ ಹೊಸ ತಂತ್ರಗಳ ನೆರವಿನೊಂದಿಗೆ ವ್ಯಾಖ್ಯಾನಿಸುತ್ತಾ ಬಂದಿದ್ದಾರೆ.
'ಸ್ವಧಾ' ಎಂಬ ಇವರ ಕಾದಂಬರಿ ಜೀವದ ಚೈತನ್ಯದ ವಿಷಯವನ್ನು ಕೇಂದ್ರವಾಗಿರಿಸಿಕೊಂಡು ಮರಣದಾಚೆಯ ಅಗೋಚರ ಚೈತನ್ಯದ ಕುರಿತು ಸ್ವಾರಸ್ಯವಾದ ಚಿಂತನ ಕಟ್ಟಿಕೊಟ್ಟು ಇತ್ತೀಚಿನ ಇವರ ಮಹತ್ವದ ಕಾದಂಬರಿಯಾಗಿ, ಹಿತದ ಓದಿಗೆ ಅವಕಾಶವನ್ನು ಚೆನ್ನಾಗಿ ಕಲ್ಪಿಸಿಕೊಟ್ಟಿತ್ತು ಎಂಬುದು ಗಮನಾರ್ಹವಾಗಿದೆ. ಹೀಗಾಗಿ ಕಾದಂಬರಿಯ ಒಳ ವಲಯಗಳನ್ನು ಶ್ರೀಮಂತಗೊಳಿಸುವ ಗಟ್ಟಿ ಶಕ್ತಿ ಇವರಿಗೆ ದತ್ತವಾಗಿದೆ. ಇಷ್ಟೇ ಅಲ್ಲ, ಹರ್ಮನ್ ಹಸ್ಸೆ ಅವರ ಕಾದಂಬರಿಯನ್ನು 'ಸಿದ್ಧಾರ್ಥ'ನನ್ನಾಗಿಸಿ, ಹೆಮಿಂಗ್ವೆ ಕಾದಂಬರಿಯನ್ನು 'ವೃದ್ಧ ಮತ್ತು ಸಮುದ್ರ'ವನ್ನಾಗಿ ಕನ್ನಡದಲ್ಲಿ ರೂಪಿಸಿದ್ದಾರೆ.
ಸದ್ಯ ಈಗ ಹೊರಬರುತ್ತಿರುವ 'ಸನ್ನಿಧಿ' ಕೂಡಾ ಅಂತರಂಗದಲ್ಲಿ ಮಧ್ವಾಚಾರ್ಯರ ಬಗೆಗಿನ ನಾವು ತಿಳಿದ ವಿಚಾರವನ್ನು ಮಂಡಿಸುತ್ತ ಹೋದಂತೆ ಕಂಡರೂ, ಅಪರೂಪದ್ದಾದ ಕಾದಂಬರಿಕಾರನ ಲವಲವಿಕೆಯ ಕಸುಬುಗಾರಿಕೆಯಿಂದಾಗಿ ಜನಮೇಜಯ ಎಂಬ ಕಾದಂಬರಿಯ ನಾಯಕನ ಮೂಲಕ ಆತ್ಮ ಮತ್ತು ಪರಮಾತ್ಮನ ಬಗೆಗಿನ ಅನೇಕ ಅಂಶಗಳನ್ನು ಇತಿಹಾಸ ಹಾಗೂ ವರ್ತಮಾನಕ್ಕೆ ಕೂಡಿಸಿದ ಕೊಂಡಿಯೊಂದರ ಬೆಸುಗೆಯಲ್ಲಿ ನಿರೂಪಿಸಲು ಮುಂದಾಗುತ್ತಾರೆ. ಕೆಲೈಡೋ ಸ್ಕೋಪ್‌ನ ಒಳಗಣ ಚಲನಶೀಲ ಬೆರಗು ವಿಧವಿಧವಾಗಿ ಉರುಳಿಸಲ್ಪಟ್ಟು ಪೃಥಕ್ಕರಣಗೊಳಿಸಿ ತೋರಿಸಿದಾಗ ಹೊಸ ಹೊಸ ಮಾದರಿಯ ಚಿತ್ತಾರ ಸುಂದರವಾಗಿ ಸ್ನಿಗ್ಧಗೊಳ್ಳುತ್ತ ಸರಳವಾಗಿ ಗೆಲ್ಲುತ್ತದೆ. ಹಾಗೆಯೇ ಕಾದಂಬರಿಯ ನಾಯಕನಾದ ಜನಮೇಜಯ ಗೆಲ್ಲುವ ಈ ಕಾದಂಬರಿಯ ಓಟಕ್ಕೆ ಕೇಂದ್ರ ಶಕ್ತಿಯಾಗುತ್ತ ಮಾನವನ ಜೀವನ ಶೂನ್ಯ ಆಗದ ಹಾಗೆ ಭಾರತೀಯ ಶಾಸ್ತ್ರ ಸಮ್ಮತ ಪೂರ್ವ ಮೀಮಾಂಸ, ಸಾಂಖ್ಯ, ಶಕ್ತ ವೇದಾಂತ ಇತ್ಯಾದಿಗಳ ದರ್ಶನ ಒದಗಿಸುತ್ತ ಹೋಗುತ್ತಾನೆ. ಈ ಅವನ ನಡೆ ಉತ್ತರದಿಂದ ಅವನು ದಕ್ಷಿಣಕ್ಕೆ ಚಿಮ್ಮುತ್ತ ಬರುವ ಬಗೆಯಿಂದಾಗಿ ಒಂದು ಆನಂದಮಯ ಸತ್ಯವನ್ನು ಅಖಂಡವಾಗಿ ಹಿಡಿಯಬೇಕು ಎನ್ನುವ ಅವನ ಹಸಿವಾಗಿ ಕಾದಂಬರಿಯ ಉದ್ದಕ್ಕೂ ಕಾಣಿಸುತ್ತದೆ. ಈ ಹಸಿವಿನ ಸುತ್ತಮುತ್ತ ಜನಮೇಜಯ ಜ್ಞಾನ ದಾಹಿಯೂ, ಅಗೋಚರವಾದ ದಿವ್ಯಕ್ಕಾಗಿನ ಯಾಚಕನಾಗಿಯೂ ಹಲವು ಮಗ್ಗುಲುಗಳಲ್ಲಿ ಹೆಜ್ಜೆ ಇರಿಸುತ್ತಾನೆ.
ಅಂತ್ಯದಲ್ಲಿ ತನ್ನ ಇಡೀ ಹೊರಟ ಹುಡುಕಾಟದ ಚೌಕಟ್ಟಿನ ಒಳಗೆ ಯಾವ ಮೌಲಿಕ ಸಿದ್ಧಾಂತ ಅಥವಾ ಅನುಪಮ ಆತ್ಮದ ಧ್ವನಿ ಶಕ್ತಿಯ ಭಿನ್ನ, ವಿಭಿನ್ನ ಜೀವಂತಿಕೆಯ ಚಿತ್ರವನ್ನು ಕೂರಿಸಲು ಸಫಲನಾಗುತ್ತಾನೆ ಎಂಬುದಕ್ಕಾಗಿನ ಉತ್ತರಕ್ಕಾಗಿ ಓದುಗನ ಕುತೂಹಲ ಕೆರಳಿಸುತ್ತಾನೆ. ಈ ಉತ್ಸಾಹವನ್ನು ಓದುಗನಲ್ಲಿ ಕೆರಳಿಸುವ ಪ್ರಾಧಾನ್ಯತೆ ಕಾದಂಬರಿಕಾರ ಕಾದಂಬರಿಯನ್ನು ಕಟ್ಟುವಲ್ಲಿ ಬಳಕೆ ಮಾಡಿದ ತಂತ್ರದ ಮೂಲಕ ಎಂಬುದು ಗ್ರಹಿಕೆಗೆ ಒದಗುತ್ತದೆ. ಕಡಲು, ಕಾಡು, ನಾಡು, ಪರಿಸರ, ಪರಾತ್ಪರ, ಪರಶುರಾಮ ಸೃಷ್ಟಿ, ಕಳಸದ ಗಿರಿಯಲ್ಲಿನ ತುದಿಯಿಂದ ಉರುಳಿಸಿದ ಬೃಹದ್ ಬಂಡೆಯನ್ನು ನೀರಿಗೆ ಅಡ್ಡಲಾಗಿ ಇಟ್ಟ ಪವಾಡದ ಬೆರಗು, ಹಸಿರ ಮೆದೆ, ಪೊದೆ, ಗಿಡ, ಮರ ಕಾಂಡಗಳ ದಟ್ಟ ತೋಪಿನ ಚೆಲುವು, ದಾರಿಯಲ್ಲಿ ಕಳ್ಳರು ಸಿಗಬಹುದೆ, ಸಿಕ್ಕರೆ ಕಷ್ಟ ಎಂಬ ಅನಿಯಂತ್ರಿತ ಭಯ, ಭಯದಲ್ಲೇ ಮುಂದರಿಯುವ ದಾರಿ!! ಕಡೆಗೂ ತಲುಪಬೇಕಾದದ್ದು ದಿವ್ಯದ ಮೋಹನ ಮುರಳಿಯ ತಾಣವಾದ ಉಡುಪಿಯನ್ನು ಎಂಬ ಉತ್ಸಾಹ ಎದ್ದು ಆವರಿಸುವ ಧೈರ್ಯ ಇತ್ಯಾದಿ ಅನುಭವಗಳ ಜತೆ ಜನಮೇಜಯನ ಹೆಜ್ಜೆಯ ಹಿಂದೆಯೇ ಆತ್ಮೀಯವಾಗಿ ಹೆಜ್ಜೆ ಹಾಕಿ ಬಂದ ಗೆಳೆಯರ ಗುಂಪು ಸುರೇಶ ಪಾಟೀಲರ ಲೇಖನಿಯಲ್ಲಿ ಹಾದಿಯ ಉದ್ದದ ಲವಲವಿಕೆಯೊಡನೆ ಓದುಗನ ಪಾಲಿಗೆ ಕಥನದ ಉದ್ದವೂ ಆಕರ್ಷಕವಾಗುತ್ತದೆ.

ಮೇಲ್ನೋಟಕ್ಕೆ ಜನಮೇಜಯನ ಇಡೀ ಪ್ರವಾಸದ ಗುಂಪಿನ ಗೆಳೆಯರು ಕೇಳುವ ಹಲವಾರು ಪ್ರಶ್ನೆಗಳು ಆಳವಿರದ ಅರಿವಿಗಾಗಿ ಎದ್ದ ಪ್ರಶ್ನೆಗಳಾಗಿ ಕಂಡುಬಂದರೂ, ಒಬ್ಬರು ಪರಸ್ಪರ ಇನ್ನೊಬ್ಬನಿಗೆ ಕೊಟ್ಟ ಉತ್ತರಗಳೇ, ಜನಮೇಜಯನು ಅರಿತು ಒದಗಿಸುವ ವ್ಯಾಖ್ಯಾನಗಳಿಗೆ ನೆಲೆ ಒದಗಿಸುತ್ತ ಹೋಗುತ್ತದೆ. ದಾರಿಯ ಹಲವು ಊರುಗಳ ಪೌರಾಣಿಕ ಐತಿಹ್ಯಗಳನ್ನು, ಶೈವ ಹಾಗೂ ಮಾಧ್ವ ಮೀಮಾಂಸೆಗಳ ಒಳನೋಟಗಳನ್ನು ಒಗ್ಗೂಡಿಸುತ್ತ ಅದ್ವೈತ ಸಿದ್ಧಾಂತಗಳನ್ನು ಒಂದು ಇನ್ನೊಂದನ್ನು ಬಿಡಲಾಗದ ಕೊಂಡಿಯೊಂದಿಗೆ ಕೂಡಿ ಹೊರಟಂತೆ ವರ್ತಮಾನವನ್ನು ಜನಮೇಜಯನ ಚಕ್ಷುಗಳಲ್ಲಿ ಅಕ್ಷ ಒಂದನ್ನು ಅನಾವರಣವಾಗುತ್ತ ಹೋಗುತ್ತವೆ.
ಅದ್ವೈತದ ಅರಿವು ಜಗದ ನಿರ್ವಾತಕ್ಕೆ ಮಿಥ್ಯೆಯ ಆವರಣ ತೊಡಿಸಿ ಪರಬ್ರಹ್ಮನೇ ಅಂತ್ಯದ ಸತ್ಯ ಎಂದು ಕೂಗಿ ಹೇಳಿದರೆ, ದ್ವೈತದ ಅರಿವು ಜಗದ ನಿರ್ವಾತದ ಒಳಗೆ ಅನಾವರಣವಾದ ವಾಯು ಜೀವೋತ್ತಮವಾದ ಸತ್ಯವನ್ನು ಕೂಗಿಯೇ ಘೋಷಿಸುತ್ತದೆ. ಈ ಎರಡರ ನಡುವಣ ದಾರಿಯ ಬೆಂಬಲ ಬಯಸಿ ಜನಮೇಜಯ ಊರಲ್ಲಿ ತನ್ನ ಮನೆತನದ ಜತೆಗಿನ ಲಾಗಾಯ್ತಿನ ನಂಟಿನಲ್ಲಿ ಹಿತ ಹೊಂದಿದ್ದ ಸ್ವರ್ಣ ಭಂಡಾರ ಮನೆತನದ ಎಳೆಯ ಮೂಲಕವೇ ಒಂದು ರೀತಿಯಲ್ಲಿ ಗ್ರಹಿಸಲು ಶುರು ಮಾಡಿದವನಿದ್ದ. ಘನತೆಯ ವಿಷಯವಾಗದನ್ನು ಗ್ರಹಿಸಲು ಆರಂಭಿಸಿದವನಾಗಿದ್ದ. ಅಂದರೆ ತನ್ನ ಬದುಕಿನ ವಿಷಯದಲ್ಲಿ ನಿರಾಳತೆಯನ್ನು ಜನಮೇಜಯ ಹೊಂದಿದ್ದೇ, ಸ್ವರ್ಣ ಭಂಡಾರ ಮನೆತನದ ಗೋವಿಂದ ಭಟ್ಟರ ಮೂಲಕವಾಗಿ ದೊರೆತ ಮಮತೆಯಿಂದ ಎನ್ನಬಹುದು. ಈ ಮನೆತನ, ಜಂಬುಖಂಡಿ ಮಂಡಳಿಯ ಆಡಳಿತಕ್ಕೆ ಎಂದೇ ಲಾಗಾಯ್ತಿನ ಕಾಲಾವಧಿಯಿಂದ ನಿಯೋಜಿತಗೊಂಡಿದ್ದಿತ್ತು. ಹಾಗೆಯೇ ಈ ಆಡಳಿತ ಹೊಂದಿದ್ದ ಮನೆತನಕ್ಕೆ ರಾಜ ವೈದ್ಯರು ಇವರು ಎಂದು ಜನಮೇಜಯನ ಮನೆತನ ನಿಯೋಜನೆ ಹೊಂದಿದ್ದಿತ್ತು. ಜತೆಗೆ ಈ ಎರಡೂ ಮನೆತನಗಳು ಶಾಸ್ತ್ರ ವೇದಾಂತ, ಆಗಮ, ವ್ಯಾಕರಣಾದಿ ಓದು, ಹಾಗೆಯೇ ಇತರ ಯಾವುದೇ ಅರಸು ಮನೆತನಗಳ ಕಾಲಾವಧಿ ಇದ್ದಾಗಲೂ, ಸಾಮ್ರಾಜ್ಯದ ಸಾಮಾಜಿಕ ವ್ಯವಹಾರಿ ವಿಚಾರ, ನಿಷ್ಪಕ್ಷಪಾತ ನಿಷ್ಕರ್ಷಗಳ ಅಂಶ ತೀರ್ಮಾನ ಆಗಬೇಕಾದರೂ ಗಟ್ಟಿ ಆದ ತಮ್ಮ ನಿಲುವುಗಳನ್ನು ತಿಳಿಸಿ ಹೇಳಲು ಮಾನ್ಯತೆ ಪಡೆದಂತವೇ ಇದ್ದವು.
ಜನಮೇಜಯನಿಗೆ ಮನೆತನದ ವೈದ್ಯ ಶಾಸ್ತ್ರಾಭ್ಯಾಸದೊಂದಿಗೆ ವೇದ, ವೇದಾಂಗ, ಸಾಂಖ್ಯ ತತ್ವಗಳಲ್ಲಿ ಕೂಡಾ ಜ್ಞಾನ ಸಂವೇದನೆ ಇತ್ತು. ಈ ಎಲ್ಲಾ ಮೂಲ ಸಂವೇದನೆಗಳೊಂದಿಗೆ ಅನಂತವನ್ನೂ ಅರಿಯುವ ಕಾರಣಕ್ಕಾಗಿನ ಗುರಿ ಇತ್ತು. ಇತ್ಯಾದಿಗಳ ಜತೆಗೇ ಈ ಗುರಿಯ ಕುರಿತೇ ದಟ್ಟ ಬೆಳಕನ್ನು ಹೆಚ್ಚು ವಿಸ್ತರಿಸಬಹುದಾದ ಗುರುವಿನ ತಾಣಕ್ಕಾಗಿ, ಅಂತಹ ತಾಣ ದೊರಕಿದರೆ ಗುರುವಿನ ಸನ್ನಿಧಿಯಲ್ಲಿ ಜಿನುಗಬಹುದಾದ ಜ್ಞಾನ ಧಾರೆಗಾಗಿನ ದಾಹವಿತ್ತು. ಇಂತಹ ದಾಹ ಹೊತ್ತವನು ಎಲ್ಲವನ್ನೂ ತೊರೆಯುವ ಸನ್ಯಾಸಿಯೇ ಆಗುತ್ತಾನೆ ಎಂಬುದನ್ನು ಜನಮೇಜಯ ತಿಳಿಯದವನೇನಲ್ಲ.
ಇಂತಹ ವೇಳೆಯಲ್ಲಿ ವರ್ತಮಾನದ ಘಟ್ಟ ದೂರದ ದಕ್ಷಿಣ ಭಾಗದ ಉಡುಪಿ ಊರಲ್ಲಿ ಜ್ಞಾನ, ವಿವೇಕ, ಶಾಸ್ತ್ರ ಸಂಬಂಧೀ ಧರ್ಮ ಸೂಕ್ಷ್ಮಗಳ ವ್ಯಾಖ್ಯಾನ ಮಂಡನೆಗಳಲ್ಲಿ ಗಟ್ಟಿತನ ಸ್ಥಾಪಿಸಿದ್ದ ಮಹಾ ಮಹಿಮರ ಕುರಿತು ನಾಡಲ್ಲಿ ಘನತರವಾದ ವಿಚಾರ ಪಸರಿಸುತ್ತಿದ್ದಾಗ ಸ್ವರ್ಣ ಮನೆತನದ ಗೋವಿಂದ ಭಟ್ಟರು ದೈವ ಸ್ವರೂಪಿಯಾದ ಆಚಾರ್ಯರ ದಿವ್ಯ ದರ್ಶನ ಪಡೆದು ಬರಲು ಹೋದವರು, ಆಚಾರ್ಯರ ಹಾಗೂ ಆಚಾರ್ಯರು ಸಂಸ್ಥಾಪಿಸಿದ ಕೃಷ್ಣನ ಸೆಳೆತಕ್ಕೆ ಸಿಕ್ಕು ಹರಿ ದೀಕ್ಷೆ ಪಡೆದು ಲೌಕಿಕದ ಬಂಧವನ್ನೇ ತೊರೆದು ಸಂಪೂರ್ಣ ಸಿದ್ಧಾಂತಿಗಳಾಗಿದ್ದ ವಿಚಾರದಿಂದ ಚಕಿತನಾದ ಜನಮೇಜಯ ತನ್ನೂರಿನ ಈ ಶ್ರೇಷ್ಠರನ್ನು ಗುರುತಿಸಿ ಆ ಮೂಲಕವಾಗಿ ಆಚಾರ್ಯ ಮಧ್ವರ ದಿವ್ಯ ಬೋಧನ ಸಾರದ ದಿವ್ಯ ಚೂರ್ಣಿಕೆಯನ್ನು ಪಡೆಯಲೆತ್ನಿಸಿದವನಾಗಿ ತನ್ನೂರಿನ ಇತರ ಕೆಲ ಗೆಳೆಯರ ಗುಂಪಿನೊಂದಿಗೆ ಯಾನ ಹೊರಟಲ್ಲಿಂದ ಡಾ. ಸುರೇಶ ಪಾಟೀಲರ ಹೊಸ ಕಾದಂಬರಿಯಾದ 'ಸನ್ನಿಧಿ' ಪ್ರಾರಂಭಗೊಳ್ಳುತ್ತದೆ. ಈ ಕಥನ ವಿಶೇಷವಾಗಿ ದ್ವೈತ ಮತ ಸಿದ್ಧಾಂತದ ನೆಲೆಯಲ್ಲಿಯೇ ಲೌಕಿಕವನ್ನು ಚೂರೂ ನಿರಾಕರಿಸದೇ ಅಲೌಕಿಕವನ್ನು ತಿಳಿಯಲೆಣಿಸುವ ಜೀವಾತ್ಮದ ಸಾರ್ಥಕ ಚಲನವಲನಗಳನ್ನು, ದೈವತ್ವದ ಪರಮಾರ್ಥವನ್ನೂ ಸಾಂದ್ರಗೊಳಿಸುತ್ತಲೇ ಸಾಗುತ್ತದೆ. ಸನ್ನಿಧಿಯಲ್ಲಿ ಒಂದು ಇನ್ನೊಂದಕ್ಕೆ ಕನ್ನಡಿ ಹಿಡಿಯುತ್ತ ಗೋಚರಕ್ಕೆ ಸಿಗುವ, ಅಗೋಚರಕ್ಕೆ ಮನಸ್ಸು ಮಂಥನ ನಡೆಸುವ ಅನೇಕ ಪದರುಗಳಲ್ಲಿ ವಿಶಿಷ್ಟವೆನಿಸುತ್ತದೆ. ಕ್ಲಿಷ್ಟಕರವಾದ ವಿಷಯವನ್ನು ಅರ್ಥಪೂರ್ಣವಾಗಿಸುವ ಗಟ್ಟಿಯಾದ ವಿವರಗಳನ್ನು ಕಟ್ಟಿಕೊಟ್ಟ ಗೆಲುವಿಗೆ 'ಸನ್ನಿಧಿ' ಪಾತ್ರವಾಗುತ್ತದೆ.
ಡಾ. ಸುರೇಶ ಪಾಟೀಲರಿಗೆ ಶುಭಾಶಯಪೂರ್ವಕ ಅಭಿನಂದನೆಗಳು.
Publisher: ಕನ್ನಡ ನಾಡು | Kannada Naadu