ಕನ್ನಡ ನಾಡು | Kannada Naadu

ಕೆಯುಡಬ್ಲೂೃಜೆಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಸಮಾಜದ ಸ್ವಾಸ್ತ್ಯ ಕಾಪಾಡಿಕೊಳ್ಳಲು ಆದಿಚುಂಚನಗಿರಿ ಸ್ವಾಮೀಜಿ ಕರೆ

20 Nov, 2025



ಬೆಂಗಳೂರು: ಸಮಾಜದ ಸ್ವಾಸ್ತ್ಯ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
 
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂೃಜೆ) ವತಿಯಿಂದ ಮಂಡ್ಯ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಮಂಡ್ಯದ ಕರ್ನಾಟಕ ಸಂಘದ ಕೆ.ವಿ.ಶಂಕರೇಗೌಡ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಮಹಾಭಾರತದಲ್ಲಿ ಸಂಜಯ ಕೂಡ ಒಬ್ಬ ವರದಿಗಾರನ ರೀತಿಯಲ್ಲಿ ಅಲ್ಲಿ ನಡೆಯುತ್ತಿದ್ದ ಯುದ್ಧದ ಘಟನಾವಳಿಗಳನ್ನು ವರದಿ ಮಾಡುತ್ತಿದ್ದ. ಈಗ ಇದ್ದ ವಿಷಯ ಇದ್ದ ಹಾಗೆ ಹೇಳುವುದು ಕಡಿಮೆಯಾಗಿದೆ. ಸುದ್ದಿಗೆ ರೆಕ್ಕೆ ಪುಕ್ಕ ಕಟ್ಟಿ ತೇಲಿ ಬಿಡುವ ಮನೋಧೋರಣೆ ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆ. ಈ ಬಗ್ಗೆ ಮಾಧ್ಯಮಗಳು ಮತ್ತು ಪತ್ರಕರ್ತರು ಎಚ್ಚರವಹಿಸಬೇಕು  ಎಂದರು.
 
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ವಿಶ್ವಾಸರ್ಹತೆ ಪಡೆದುಕೊಳ್ಳುವ ನಿಟ್ಟಿನಲ್ಲಿ ವೃತ್ತಿ ಬದ್ದವಾಗಿ ಕೆಲಸ ಮಾಡಲು ಮುಂದಾಗಬೇಕು. ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಸಂಘ ಅವಿರತ ಹೋರಾಟ ಮಾಡುತ್ತಿದೆ ಎಂದು ಹೇಳಿದರು.
 
ರಾಜ್ಯದಲ್ಲಿ ಕೆಯುಡಬ್ಲೂೃಜೆ ರಾಜ್ಯ ಮತ್ತು ಜಿಲ್ಲಾ ಸಂಘದ ಚುನಾವಣೆ ಯಶಸ್ವಿಯಾಗಿ ನಡೆಯಲು ಕಾರಣಕರ್ತರಾದ ಎಲ್ಲ ಸದಸ್ಯರಿಗೂ ಮತ್ತು ನೂತನ ಆಡಳಿ ಮಂಡಳಿಗೂ ಶುಭ ಹಾರೈಸಿದರು.
 
ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಬಗ್ಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಂಶಿ ಪ್ರಸನ್ನಕುಮಾರ್ ಉಪನ್ಯಾಸ ನೀಡಿದರು.
 
ಜಿಲ್ಲಾಧಿಕಾರಿ ಕುಮಾರ್, ಶಾಸಕ ರವಿ ಗಣಿಗ, ರಾಜ್ಯ ಸಂಘದ ಉಪಾಧ್ಯಕ್ಷ ಮತ್ತಿಕೆರೆ ಜಯರಾಂ ಮಾತನಾಡಿದರು. ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಕಾರ್ಯದರ್ಶಿ ಸೋಮಶೇಖರ ಕೆರಗೋಡು, ಜಿಲ್ಲಾಧ್ಯಕ್ಷ ರಾಘವೇಂದ್ರ ಕೌಡ್ಲೆ ಮತ್ತಿತರರು ಹಾಜರಿದ್ದರು.
 
ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೊನೆಯ ತನಕ ಹಾಜರಿದ್ದ ಸ್ವಾಮೀಜಿ ಅವರು ನೂತನ ಸಾಲಿನ ಪದಾಧಿಕಾರಿಗಳಿಗೆ ಸನ್ಮಾನಿಸಿ ಶುಭ ಹಾರೈಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by