ಕನ್ನಡ ನಾಡು | Kannada Naadu

ದೇಶವನ್ನು ಬಲಿಷ್ಠಗೊಳಿಸುವಲ್ಲಿ ಮಾಧ್ಯಮ ಕ್ಷೇತ್ರದ ಕೊಡುಗೆ ಪ್ರಮುಖವಾದದ್ದು - ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಮಾಧ್ಯಮಗಳು ಜನರ ವಿಶ್ವಾಸಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು

18 Nov, 2025



ಬೆಂಗಳೂರು,: ದೇಶವನ್ನು ಬಲಿಷ್ಠಗೊಳಿಸುವಲ್ಲಿ ಮಾಧ್ಯಮ ಕ್ಷೇತ್ರದ ಕೊಡುಗೆ ಬಹಳ ಪ್ರಮುಖವಾಗಿದೆ. ಅದೇ ರೀತಿ ಮಾಧ್ಯಮಗಳು ಸಹ ಜನರ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ನಡೆದುಕೊಳ್ಳಬೇಕು ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಅವರು ತಿಳಿಸಿದರು.

ಇಂದು ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇವರ ಸಹಯೋಗದಲ್ಲಿ “ರಾಷ್ಟ್ರೀಯ ಪತ್ರಿಕಾ ದಿನಾಚರಣೆ” ಅಂಗವಾಗಿ ಹಮ್ಮಿಕೊಳ್ಳಲಾದ ‘ಹೆಚ್ಚುತ್ತಿರುವ ಸುಳ್ಳು ಸುದ್ದಿಗಳ ನಡುವೆ ಮಾಧ್ಯಮಗಳ ವಿಶ್ವಾಸಾರ್ಹತೆಯ ರಕ್ಷಣೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾನ್ಯ ಸಭಾಧ್ಯಕ್ಷರು, ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದೆ. ದೇಶದ ಸಂಸ್ಕøತಿ, ಸಾಹಿತ್ಯವನ್ನು ಎತ್ತಿ ಹಿಡಿಯುವಲ್ಲಿ ಮಾಧ್ಯಮ ಕ್ಷೇತ್ರವು ಮಹತ್ತರ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಮಾಧ್ಯಮಗಳು ಸಮಾಜದ ಸ್ವಾಸ್ಥ್ಯವನ್ನು ಕದಡುವ ಕೆಲಸ ಮಾಡದೇ, ಕಾಪಾಡುವಂತಹ ಕೆಲಸ ಮಾಡಬೇಕು. ಸುಳ್ಳು ಸುದ್ದಿಗಳನ್ನು ಹರಿಬಿಡದೆ ನಿಜ ಸ್ವರೂಪವಾದ ಸತ್ಯವಾದ ಸುದ್ದಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸಾಮಾಜಿಕ ಬದಲಾವಣೆ ತರುವಂತಹ ಕೆಲಸ ಮಾಡಬೇಕು. ಸುದ್ದಿಯು ಸುದ್ದಿಯ ರೂಪದಿಲ್ಲಿಯೇ ಇರಬೇಕು. ನೋಡುವುದೆಲ್ಲಾ ಸುದ್ದಿಯಾಗಬಾರದು “News Should be in News not views should be the News”. ರಾಜಕಾರಣ ಮತ್ತು ಮಾಧ್ಯಮವು ಸಮಾಜದ ಎರಡು ಕಣ್ಣುಗಳಿದ್ದಂತೆ. ಈ ಕಣ್ಣುಗಳಿಗೆ ಹಾನಿಯಾದಾಗ ಸಮಾಜ ಕತ್ತಲೆಗೆ ದೂಡುತ್ತದೆ ಎಂದು ತಿಳಿಸಿದರು.

ನನ್ನ ವಿದ್ಯಾರ್ಥಿ ಜೀವನದಿಂದ ರಾಜಕಾರಣ ಜೀವನದವರೆಗೂ ನನ್ನ ಸಮಸ್ಯೆಗಳನ್ನು ಬಗೆಹರಿಸಲು ಪತ್ರಕರ್ತರು ಪ್ರಮುಖ ಪಾತ್ರ ವಹಿಸಿದ್ದಾರೆ. ಪತ್ರಕರ್ತರ ಸಹಕಾರದಿಂದಲೇ ಜೀವನದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲಾಗಿದೆ. ಇಂದು ಸಾಮಾಜಿಕ ಮಾಧ್ಯಮಗಳು ಬಂದ ಮೇಲೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಕ್ಷೇತ್ರಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿದೆ. ಮಾಧ್ಯಮಗಳು ಅಳಿವಿನಂಚಿಗೆ ಹೋಗುತ್ತಿವೆ. ಮಾಧ್ಯಮಗಳನ್ನು ಉಳಿಸುವ ಕಾರ್ಯ ನಡೆಸಬೇಕಿದೆ. ಸಾಮಾಜಿಕ ಮಾಧ್ಯಮಗಳು ವಸ್ತು ಸ್ಥಿತಿಯನ್ನು ಅರಿಯದೇ ತತ್‍ಕ್ಷಣ ಸುದ್ದಿಗಳನ್ನು ಬಿತ್ತರಿಸುತ್ತವೆ. ಸುದ್ದಿಗಳ ನೈಜತೆಯನ್ನು ಸಹ ಗಮನಿಸುವುದಿಲ್ಲ. ಇಂತಹ ಕೆಲಸಗಳಾಗಬಾರದು. ಮುದ್ರಣ ಮಾಧ್ಯಮವಿರಲಿ ವಿದ್ಯುನ್ಮಾನ ಮಾಧ್ಯಮಗಳಿರಲಿ ಯಾವುದೇ ಮಾಧ್ಯಮಗಳಿರಲಿ ಸುದ್ದಿಯ ನೈಜತೆಯನ್ನು ಅರಿಯಬೇಕು. ಸಮಾಜದ ಶಾಂತಿಯನ್ನು ಕದಡುವ ಸುದ್ದಿಗಳನ್ನು ಬಿತ್ತರ ಮಾಡಬಾರದು. ಸತ್ಯವಾದ ಸುದ್ದಿಗಳನ್ನು ಪ್ರಕಟಿಸಿ ಜನತೆಯ ವಿಶ್ವಾಸವನ್ನು ಗಳಿಸಬೇಕು ಎಂದರು.

ರಾಜಕಾರಣಿಗಳು ಸಹ ಮಾಧ್ಯಮಗಳು ಮಾಡುವ ಟೀಕೆ ಮತ್ತು ಟಿಪ್ಪಣಿಗಳನ್ನು ಸಮ ಚಿತ್ತದಿಂದ ಸ್ವೀಕರಿಸಬೇಕು. ಟೀಕೆಗಳು ಬಂದಲ್ಲಿ ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ಅರಿತು ಕೆಲಸ ಮಾಡುವಂತರಾಗಬೇಕು. ಎಲ್ಲಾ ಅಭಿಪ್ರಾಯಗಳನ್ನು ಸಕರಾತ್ಮಕವಾಗಿ ಸ್ವೀಕರಿಸಬೇಕು ಎಂದರು.



ಮುಂದಿನ ಅಧಿವೇಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿಶ್ವವಿದ್ಯಾನಿಲಯಗಳಲ್ಲಿ ಅಭ್ಯಾಸ ಮಾಡುತ್ತಿರುವ  50 ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸದನವನ್ನು ಸಂಪೂರ್ಣವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಅವಕಾಶವನ್ನು ಮಾಡಿಕೊಡುವ ಬಗ್ಗೆ ಚಿಂತನೆಯನ್ನು ನಡೆಸಲಾಗಿದೆ. ಅದೇ ರೀತಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಒಂದು ವರ್ಷದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಈ ತರಬೇತಿ ಕಾರ್ಯಕ್ರಮದಲ್ಲಿ 6 ತಿಂಗಳು ಥಿಯರಿ ಮತ್ತು 6 ತಿಂಗಳು ಪ್ರಾಯೋಗಿಕ ಕಾರ್ಯಕ್ರಮಗಳನ್ನು ನೀಡಲು ಅಲೋಚನೆ ಮಾಡಲಾಗಿದೆ. ಎಲ್ಲರ ವೈಯಕ್ತಿಕ ಸಲಹೆಗಳನ್ನು ನಾನು ಮುಕ್ತವಾಗಿ ಸ್ವೀಕರಿಸುತ್ತೇನೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂಸದೀಯ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದೆ ಎಂದು ಮಾನ್ಯ ಸಭಾಧ್ಯಕ್ಷರು ತಿಳಿಸಿದರು.

ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಷಾ ಖಾನಂ ಅವರು ಮಾತನಾಡುತ್ತಾ, ನಮ್ಮ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವ ಪತ್ರಿಕೆಗಳು ಹಾಗೂ ಸುದ್ದಿ ಸಂಸ್ಥೆಗಳ ಗುಣಮಟ್ಟವನ್ನು ಕಾಪಾಡುವ ಮತ್ತು ಸುಧಾರಿಸುವ ಉದ್ದೇಶದಿಂದ ಭಾರತೀಯ ಪತ್ರಿಕಾ ಮಂಡಳಿಯನ್ನು 1966ರ ನವೆಂಬರ್ 16ರಂದು ಸ್ಥಾಪಿಸಲಾಯಿತು. ಈ ಕಾರಣದಿಂದಾಗಿ ಪ್ರತಿ ವರ್ಷ ನವೆಂಬರ್ 16 ರಂದು ರಾಷ್ಟ್ರೀಯ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸುತ್ತಾ, ಯುವ ಪತ್ರಿಕೋದ್ಯಮಿಗಳೇ ಮುಂದಿನ ಮಾಧ್ಯಮದ ಭವಿಷ್ಯ. ಅವರು ತಮ್ಮ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
 
ಇಂದು ಸುಳ್ಳು ಸುದ್ದಿಗಳ ನಡುವೆ ಮಾಧ್ಯಮಗಳ ವಿಶ್ವಾಸಾರ್ಹತೆ ಕಳೆದು ಹೋಗುತ್ತಿದೆ. ಎಲ್ಲರ ವಿಶ್ವಾಸವನ್ನು ಗಳಿಸುವಂತೆ ರಕ್ಷಣೆ ಮಾಡಬೇಕು. ಸತ್ಯದ ಪರವಾಗಿ ನ್ಯಾಯದ ಪರವಾಗಿ ಕೆಲಸ ಮಾಡಬೇಕು. ಯಾರ ಒತ್ತಡಕ್ಕೂ ಮಣಿಯಬಾರದು. ನಿಜವಾದ, ಸತ್ಯವಾದ ಸುದ್ದಿಯನ್ನು ಜನರ ಮುಂದಿಡಲು ಹಿಂಜರಿಯಬಾರದು. ರಾಷ್ಟ್ರಪತಿಗಳ ಅವಧಿ 4 ವರ್ಷಗಳಾದರೇ ಪತ್ರಕರ್ತರ ಅವಧಿ ನಿರಂತರವಾಗಿರುತ್ತದೆ. ಸುಳ್ಳು ಸುದ್ದಿಗಳಿಂದ ಮಾಧ್ಯಮಗಳನ್ನು ರಕ್ಷಿಸುವ ಹೊಣೆ ನಿಜವಾದ ಪತ್ರಕರ್ತನ ಕೆಲಸ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಸಹ ಸುಳ್ಳು ಸುದ್ದಿಗಳ ಬಗ್ಗೆ ಬಹಳ ಕಳವಳ ವ್ಯಕ್ತಪಡಿಸಿದ್ದಾರೆ. ಸುಳ್ಳು ಸುದ್ದಿಗಳನ್ನು ಹರಿ ಬಿಡುವವರ ವಿರುದ್ದ ಹೋರಾಡಬೇಕು. ಯಾರೇ ಆಗಲಿ ಸುಳ್ಳು ಸುದ್ದಿಗಳನ್ನು ಹರಿಬಿಡಬಾರದು. ನಿಜವಾದ ಸುದ್ದಿಗಳನ್ನು ನೀಡುವುದರ ಮೂಲಕ ಜನರ ವಿಶ್ವಾಸರ್ಹತೆಯನ್ನು ಗಳಿಸಿ, ಸಮಾಜದಲ್ಲಿ ಸುಧಾರಣೆ ತನ್ನಿ ಎಂದು ಯುವ ಪತ್ರಕರ್ತರಿಗೆ ಸಲಹೆಯಿತ್ತರು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನ ಅಧ್ಯಕ್ಷರಾದ ಆರ್. ಶ್ರೀಧರ್ ಅವರು ಮಾತನಾಡುತ್ತಾ, ಸತ್ಯವನ್ನು ಹೇಗೆ ಹೊರತರಬೇಕು ಎಂಬ ಪಾಠ ನಾವು ಕಲಿಯಬೇಕು. ಇಂದಿನ ಡಿಜಿಟಲ್ ಮಾಧ್ಯಮಗಳ ಯುಗದಲ್ಲಿ ನಾವುಗಳು ನಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಮಾತ್ರ ಮಾಧ್ಯಮಗಳು ಹೆಚ್ಚು ಸುದ್ದಿಯನ್ನು ನೋಡುತ್ತಿವೆ. ಆದರೆ ಇದು ಯಾಕೆ ರಾಜಸ್ಥಾನ, ಉತ್ತರ ಪ್ರದೇಶ ಇನ್ನಿತರೆ ಉತ್ತರ ಭಾರತದ ಕಡೆ ಇಲ್ಲ ಎಂದು ಪ್ರಶ್ನಿಸಿದರು. ಮಾಧ್ಯಮ ಸಂಸ್ಥೆಗಳ ಮಾಲಿಕತ್ವದ ಒತ್ತಡ ಇಂದು ನಿಜವಾದ ಪತ್ರಕರ್ತರನ ಮೇಲೆ ಬೀರುತ್ತಿದೆ. ಇದರಿಂದ ಹೊರಬರಬೇಕು. ತಪ್ಪನ್ನು ತಪ್ಪು ಸರಿಯಾದದ್ದನ್ನು ಸರಿ ಎಂದು ಹೇಳಬೇಕು. ಅದು ನಿಜವಾದ ಮಾಧ್ಯಮದ ಕೆಲಸವಾಗಿದೆ. ಒಂದು ಉತ್ತಮವಾದ ದೇಶವನ್ನು ಕಟ್ಟುವ ಜವಾಬ್ದಾರಿ ಮಾಧ್ಯಮದ ಮೇಲೆದೆ ಎಂದು ಅವರು ತಿಳಿಸಿದರು.

ಎನ್.ಡಿ.ಟಿ.ವಿಯ ಹಿರಿಯ ಹೆಸರಾಂತ ಹಾಗೂ ಹಿರಿಯ ಪತ್ರಕರ್ತೆ ಶ್ರೀಮತಿ ನೂಪೂರ್ ಬಸು ಅವರು ಮಾತನಾಡಿ, ಮಾಧ್ಯಮವಿಲ್ಲದೇ ಪ್ರಜಾಪ್ರಭುತ್ವ ಇಲ್ಲ. ಮಾಧ್ಯಮಗಳೇ ಸಮಾಜದ ಕಣ್ಣು, ನಿಜ ಸ್ವರೂಪವಾದ ವಸ್ತು ನಿಷ್ಠವಾದ ಸುದ್ದಿಗಳನ್ನು ಕಾಲಕಾಲಕ್ಕೆ ಜನರಿಗೆ ತಲುಪಿಸುವ ಕೆಲಸ ಮಾಧ್ಯಮಗಳು ಮಾಡುತ್ತಿವೆ. ಮಾಧ್ಯಮಗಳಿಂದ ಜನರು ಶಿಕ್ಷಿತರಾಗುತ್ತಾರೆ. ದೇಶದಲ್ಲಿ, ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳನ್ನು ಅರಿಯಲು ಪ್ರಯತ್ನಿಸುತ್ತಾನೆ ಎಂದರು.

ಇಂದಿನ ಡಿಜಿಟಲ್ ಮೀಡಿಯಾಗಳ ಹಾವಳಿಯಿಂದ ಬಹುತೇಕ ಮುದ್ರಣ ಮಾಧ್ಯಮಗಳು ಮುಚ್ಚುವ ಸ್ಥಿತಿ ಉಂಟಾಗಿದೆ. ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ಭಾರತ ದೇಶದ ಪತ್ರಿಕಾ ಸ್ವಾತಂತ್ರ್ಯದ ಇಂಡೆಕ್ಸ್ ಕ್ರಮೇಣವಾಗಿ ಕುಸಿಯುತ್ತಿದೆ ಎಂದು ತಿಳಿಸಿದರು.

ಕಳೆದ 3 ತಿಂಗಳಲ್ಲಿ 350 ಕ್ಕೂ ಹೆಚ್ಚು ಪತ್ರಕರ್ತರ ಮೇಲೆ ಹಲ್ಲೆಗಳಾಗಿವೆ. 2012ರಿಂದ 2023ರ ಅವಧಿಯಲ್ಲಿ ಸುಮಾರು 423 ಮೊಕ್ಕದ್ದಮೆಗಳು 427 ಪತ್ರಕರ್ತರ ಮೇಲೆ ದಾಖಲಾಗಿವೆ. ಇವನ್ನೆಲ್ಲಾ ನೋಡಿದರೆ ಪತ್ರಕರ್ತರ ಸ್ಥಿತಿ ಶೋಚನೀಯ ಸ್ಥಿತಿಯಾಗಿದೆ. ಇಂದು ನಾವು ಪತ್ರಿಕಾ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.



ಇಂದಿನ ಮಾಧ್ಯಮಗಳು ಕಾರ್ಪೋರೇಟ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಟಿ.ಆರ್.ಪಿ ವ್ಯವಸ್ಥೆಗೆ ಮಾರುಹೊಗಿವೆ. ಇವು ನಿಲ್ಲಬೇಕು. ನಿಜವಾದ ಸುದ್ದಿಯನ್ನು ಬಿತ್ತರಿಸಲು ಹೆದರಬಾರದು ಎಂದು ತಿಳಿಸಿದರು.

ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅವರು ಮಾತನಾಡಿ, ಪ್ರೆಸ್ ಕ್ಲಬ್ ಆಫ್ ಇಂಡಿಯಾ ಸ್ಥಾಪನೆಯ ದಿನವನ್ನು ರಾಷ್ಟ್ರೀಯ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ಒಂದೊಂದು ಘೋಷವಾಕ್ಯದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇಂದಿನ ವರ್ಷದ ಘೋಷವಾಕ್ಯ – “ಹೆಚ್ಚುತ್ತಿರುವ ಸುಳ್ಳುಸುದ್ದಿಗಳ ನಡುವೆ ಮಾಧ್ಯಮಗಳ ವಿಶ್ವಾಸಾರ್ಹತೆಯ ರಕ್ಷಣೆ” ಈ ವರ್ಷ ಆತಂಕಕರವಾದ ಘೋಷವಾಕ್ಯವನ್ನು ನೀಡಿದ್ದಾರೆ. ಇಂದು ನಾವು ಆಂತಕದ ಸನ್ನಿವೇಶದಲ್ಲಿದ್ದೇವೆ. ಮಾಧ್ಯಮಗಳ ವಿಶ್ವಾಸಾರ್ಹತೆಯ ಬಗ್ಗೆ ಯೋಚಿಸಬೇಕಾಗಿದೆ. ಇದು ಸಂಭ್ರಮ ಮತ್ತು ಸಡಗರ ಪಡುವ ವಿಷಯವಲ್ಲ. ಇಡೀ ಮಾಧ್ಯಮ ಕ್ಷೇತ್ರವೇ ಈ ಬಗ್ಗೆ ಚಿಂತನೆ ಮಾಡೇಕಾಗಿದೆ. ಸತ್ಯ ಎನ್ನುವ ಸಂಚಾರಿ ಶೂ, ಚಪ್ಪಲಿ ಹಾಕುವ ಸ್ಥಿತಿಯಲ್ಲಿದ್ದಾಗ ಸುಳ್ಳು ಎನ್ನುವ ಸಂಚಾರಿ ಇಡೀ ಅರ್ಧ ಜಗತ್ತನ್ನೇ ಸುತ್ತಿ ಬಂದಂತಿದೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ನಾವು ತಾಂತ್ರಿಕತೆಗೆ ಮಾರುಹೋಗಿ ನಿಜವಾದ ಸತ್ಯವಾದ ಸುದ್ದಿಗಳನ್ನು ಅರಿಯಲು ವಿಫಲರಾಗುತ್ತಿದ್ದೇವೆ. ವಾಸ್ತವೀಕತೆಯನ್ನು ಮರೆತು ಯಾವುದು ನಿಜ ಯಾವುದು ಸುಳ್ಳು ಎಂಬುದನ್ನು ಅರಿಯದೆ ಸುಳ್ಳು ಸುದ್ದಿಗಳಿಗೆ ಬೇಗ ಮಾರುಹೋಗುತ್ತಿದ್ದೇವೆ. ತಾಂತ್ರಿಕತೆ ಅರಿತವರು ಸುಳ್ಳು ಸುದ್ದಿಗಳನ್ನು ಬಹಳ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು.

ಮೊದಲು ಸತ್ಯವನ್ನು ಅರಿತು ಸುದ್ದಿಗಳನ್ನು, ಲೇಖನಗಳನ್ನು ಬರೆಯಲಾಗುತ್ತಿತ್ತು. ಅದಕ್ಕೆ ಪೂರಕವಾದ ದಾಖಲೆಗಳು ಸಹ ಹೊಂದಿಸಿಕೊಳ್ಳಲಾಗುತ್ತಿತ್ತು. ಆದರೆ ಇಂದು ಸುದ್ದಿ ಸತ್ಯವೋ ಅಥವಾ ಸುಳ್ಳೋ ಎಂಬುದನ್ನು ಸಹ ಅರಿಯದೇ ಕ್ಷಣ ಮಾತ್ರದಲ್ಲಿ ಸುದ್ದಿಗಳನ್ನು ಅರಿಬಿಟ್ಟು ಸಮಾಜದ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತಿದ್ದಾರೆ. ಸುದ್ದಿಯು ಸುಳ್ಳೋ ಅಥವಾ ಸತ್ಯವೋ ಎಂಬುದರ ಬಗ್ಗೆ ಇಂದು ಪ್ಯಾಕ್ಟ್ ಚೆಕ್ ಮಾಡುವ ಸ್ಥಿತಿ ಬಂದೊದಗಿದೆ. ಪ್ಯಾಕ್ಟ್ ಚೆಕ್ ಮಾಡುವಷ್ಟರಲ್ಲಿ ಅನೇಕ ಅವಗಡಗಳು ಸಹ ನಡೆದು ಹೋಗಿರುತ್ತವೆ. ಆದ್ದರಿಂದ ಪ್ರತಿಯೊಬ್ಬ ಪತ್ರಕರ್ತನು ಸಹ ಇದರ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರಬೇಕು. ನಿಜ ಸುದ್ದಿಯನ್ನು ಮಾತ್ರ ತಿಳಿಸಲು ಪ್ರಯತ್ನಿಸಬೇಕು. ನಿಜ ಸುದ್ದಿಗೆ ಪ್ರಾಮುಖ್ಯತೆ ನೀಡಿ ಸಮಾಜದಲ್ಲಿ ಶಾಂತಿ ಕಾಪಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿವಾಜಿನಗರ ವಿಧಾನ ಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರು ಮಾತನಾಡಿ, ಭಾರತವು ಸಂವಿಧಾನ ರಾಷ್ಟ್ರವಾಗಿದೆ. ಮಾಧ್ಯಮ ಕ್ಷೇತ್ರಕ್ಕೆ ನಮ್ಮ ಸಂವಿಧಾನದಲ್ಲಿ ಒಂದು ವಿಶೇಷವಾದ ಸ್ಥಾನವಿದೆ. ಸ್ವತಂತ್ರ ಮಾಧ್ಯಮವಿಲ್ಲದೆ ಪ್ರಜಾಪ್ರಭುತ್ವ ಇಲ್ಲ ಎಂದು ತಿಳಿಸಿದರು.

ಯುವ ಜನರು ಆದಷ್ಟು ಪತ್ರಿಕೆಗಳನ್ನು ಓದಬೇಕು. ಸತ್ಯವಾದ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಬೇಕು. ನಾನು ಚಿಕ್ಕವನಿದ್ದಾಗಿನಿಂದಲೂ ಇಂದಿನವರೆಗೂ ಪತ್ರಿಕೆಗಳನ್ನು ಮಾತ್ರ ಓದುತ್ತೇನೆ. ಬೇರೆ ಯಾವುದೇ ಡಿಜಿಟಲ್ ಅಥವಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನಲ್ಲ. ಕೆಲವೇ ಕ್ಷಣಗಳಲ್ಲಿ ನೀಡುವ ಸುದ್ದಿಗಳು ಸುದ್ದಿಗಳಾಗಿರುವುದಿಲ್ಲ. ಕೇವಲ ಟಿ.ಆರ್.ಪಿ ಗಾಗಿ ಸುದ್ದಿಗಳನ್ನು ಪ್ರಕಟಿಸಲಾಗುವುದು. ಯಾರೇ ಇರಲಿ ನಿಜ ಸುದ್ದಿಯನ್ನು ನೀಡಲು ಪ್ರಯತ್ನಿಸಬೇಕು. ಸುಳ್ಳು ಸುದ್ದಿಗಳನ್ನು ಹರಡಿ ಸಮಾಜದಲ್ಲಿ ಕಲಹ ತರುವ ಕೆಲಸ ಮಾಡಬಾರದು. ಇಂದು ಮಾಧ್ಯಮಗಳು ಕಾರ್ಪೋರೇಟ್ ವ್ಯವಸ್ಥೆಯಲ್ಲಿ ಸಿಲಿಕಿಕೊಂಡಿದ್ದು, ಅದರಿಂದ ಹೊರಬರಬೇಕು. ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕು. ಸಾಧ್ಯವಾದಷ್ಟು ಸತ್ಯವಾದ ನಿಜಸ್ವರೂಪವಾದ ಸುದ್ದಿಗಳು ಭಿತ್ತರಿಸಬೇಕು. ಸಾರ್ವಜನಿಕರ ವಿಶ್ವಾಸವನ್ನು ಗಳಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾದ ಶಿವಾನಂದ ತಗಡೂರು, ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಸಿದ್ದರಾಜು, ಸದಸ್ಯರಾದ ಉಷಾರಾಣಿ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿಗಳಾದ ಸಹನಾ ಎಂ ಸೇರಿದಂತೆ, ಹಿರಿಯ ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by