

ಬಿಹಾರ ವಿಧಾನಸಭಾ ಚುನಾವಣೆ 2025ರ ಅಂತಿಮ ಫಲಿತಾಂಶ ಪ್ರಕಟಗೊಂಡು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದ NDA (ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರಿಕೂಟ) ಸ್ಪಷ್ಟ ಬಹುಮತ ಗಳಿಸಿದೆ. ತೀವ್ರ ಪೈಪೋಟಿ ಮತ್ತು 'ಸ್ಥಿರತೆ v/s ಬದಲಾವಣೆ' ನಡುವಿನ ಕದನದಲ್ಲಿ, ಮತದಾರರು 'ಸುಶಾಸನ ಬಾಬು' ನಿತೀಶ್‌ರ ಹ್ಯಾಟ್ರಿಕ್ ನಾಯಕತ್ವದ ಮೇಲೆ ವಿಶ್ವಾಸವಿರಿಸಿದ್ದಾರೆ. ಫಲಿತಾಂಶದ ನಂತರದ ರಾಜಕೀಯ ಬೆಳವಣಿಗೆಗಳು, ಸರ್ಕಾರ ರಚನೆಯ ಸಿದ್ಧತೆಗಳು, ಮಹಾಘಟಬಂಧನದ ವೈಫಲ್ಯಕ್ಕೆ ಪ್ರಮುಖ ಕಾರಣಗಳು ಮತ್ತು ಪ್ರಶಾಂತ್ ಕಿಶೋರ್ ಅವರ ಪ್ಲಾನ್ ಉಲ್ಟಾ ಆದ ಬಗ್ಗೆ ರಾಜಕೀಯ ವಿಶ್ಲೇಷಣೆಗಳು ಜೋರಾಗುತ್ತಿದೆ.
ಬಿಹಾರದ ಚುನಾವಣಾ ಫಲಿತಾಂಶವು NDAಗೆ ಸ್ಪಷ್ಟ ಜನಾದೇಶ ನೀಡಿದ್ದು, ಈ ಮೈತ್ರಿಕೂಟವು ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್‌ನ್ನು ದಾಟಿದೆ. ಇಂದಿನ ಬೆಳವಣಿಗೆಗಳ ಪ್ರಕಾರ, NDA ಮಿತ್ರಪಕ್ಷಗಳ ನಾಯಕರು ಶೀಘ್ರದಲ್ಲೇ ಸಭೆ ಸೇರಿ, ಔಪಚಾರಿಕವಾಗಿ ನಿತೀಶ್ ಕುಮಾರ್ ಅವರನ್ನು ಮೈತ್ರಿಕೂಟದ ನಾಯಕರನ್ನಾಗಿ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಸರ್ಕಾರವು ಇನ್ನೆರಡು ದಿನಗಳಲ್ಲಿ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಎನ್‌ಡಿಎ ಮೈತ್ರಿಕೂಟದ ಈ ಗೆಲುವಿಗೆ ಪ್ರಧಾನಿ ಮೋದಿಯವರ ಬೆಂಬಲ ಮತ್ತು ನಿತೀಶ್ ಕುಮಾರ್ ಅವರ 'ಅದ್ಭುತ ಜನಪ್ರಿಯತೆ' ಹಾಗೂ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ನಿಭಾಯಿಸಿದ್ದು ಪ್ರಮುಖ ಕಾರಣವಾಯಿತು. ಚುನಾವಣಾ ಪೂರ್ವದಲ್ಲಿ ಆಡಳಿತ ವಿರೋಧಿ ಅಲೆ (Anti-Incumbency) ಇರಬಹುದೆಂಬ ಲೆಕ್ಕಾಚಾರವಿದ್ದರೂ, ಮಹಿಳಾ ಮತದಾರರು, EBC (Extremely Backward Classes) ಮತ್ತು ಕಾನೂನು-ಸುವ್ಯವಸ್ಥೆಯನ್ನು ಸುಧಾರಿಸಿದ ನಿತೀಶ್ ಅವರ ಇಮೇಜ್ ನಿರ್ಣಾಯಕವಾಗಿ ಕೆಲಸ ಮಾಡಿದೆ. ಬಿಹಾರದ ಮತದಾರರು ಸ್ಥಿರ ಆಡಳಿತಕ್ಕೆ ತಮ್ಮ ಮೊದಲ ಆದ್ಯತೆ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಈಗಾಗಲೇ ಚರ್ಚಿಸಿದಂತೆ ಚುನಾವಣಾ ಪೂರ್ವದಲ್ಲಿ ಆಡಳಿತ ವಿರೋಧಿ ಅಲೆ ನಿತೀಶ್ ಕುಮಾರ್ ಅವರ ವಿರುದ್ಧ ಇರಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ, ತಮ್ಮ ಇಮೇಜ್, ಸಾಮಾಜಿಕ ನ್ಯಾಯದ ಯೋಜನೆಗಳು ಮತ್ತು ಕಾನೂನು-ಸುವ್ಯವಸ್ಥೆಯನ್ನು ಗಟ್ಟಿಗೊಳಿಸಿದ ಇಮೇಜ್‌ಗಳ ಮೇಲೆ ನಿತೀಶ್ ಅವರು ಭಾರಿ ವಿಶ್ವಾಸ ಇಟ್ಟಿದ್ದರು. NDA ಮೈತ್ರಿಕೂಟವು ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ದೃಢವಾಗಿ ಬಿಂಬಿಸಿದ್ದರಿಂದ, ಬಿಹಾರದ ಜನರು ಮತ್ತೊಮ್ಮೆ 'ಸುಶಾಸನ ಬಾಬು' (Good Governance Man) ಎಂದು ಕರೆಯಲ್ಪಡುವ ಅವರ ನಾಯಕತ್ವದ ಮೇಲೆ ಭರವಸೆ ಇಟ್ಟಿದ್ದಾರೆ.
ಇನ್ನೂ ಮಹಾಘಟಬಂಧನದ ಯುವ ನಾಯಕ ʻತೇಜಸ್ವಿ ಯಾದವ್ʻ ಅವರು ಭಾರಿ ಜನಬೆಂಬಲಗಳಿಸಿ, ಹೆಚ್ಚು ರ‍್ಯಾಲಿಗಳನ್ನು ನಡೆಸಿದರೂ, ಆದರೂ ಎಲ್ಲಾ ಪ್ರಯತ್ನಗಳು ಸ್ಥಾನಗಳಾಗಿ ಪರಿವರ್ತನೆಯಾಗುವಲ್ಲಿ ವಿಫಲವಾಯಿತು. ಮುಖ್ಯವಾಗಿ, ಈ ಮೈತ್ರಿಕೂಟವು ನಿತೀಶ್ ಅವರ ಆಡಳಿತದ ಬದಲಿಗೆ 'ಉದ್ಯೋಗ' ಮತ್ತು 'ಬದಲಾವಣೆ'ಯ ಮಾತನ್ನು ಎತ್ತಿ ಜನರ ಮುಂದೆ ಹೋಗಿದ್ದರು. ಮತದಾರರು ಅಂತಿಮವಾಗಿ ಸ್ಥಿರ ಆಡಳಿತಕ್ಕೆ ಒತ್ತು ನೀಡಿದ್ದಾರೆ ಎನ್ನುವುದು ನಿನ್ನೆಯ ಬಿಹಾರ ಫಲಿತಾಂಶದಲ್ಲಿ ಅರ್ಥವಾಗುತ್ತದೆ.
ಮಹಾಘಟಬಂಧನ ವೈಫಲ್ಯಕ್ಕೆ ಪ್ರಮುಖ ಕಾರಣವೆಂದರೆ, ಕಾಂಗ್ರೆಸ್‌ನ ದುರ್ಬಲ ಪ್ರದರ್ಶನ ಎನ್ನುವುದು ಸ್ಪಷ್ಟ. ಜನರಲ್ಲಿ ಒಂದು ಭಾವನೆ ಬಂದಿತ್ತು. ಅದೇನೆಂದರೆ, ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದು ದೊಡ್ಡ ತಪ್ಪು ಎನ್ನುವ ಲೆಕ್ಕಾಚಾರವಾಯಿತು. ಬಿಹಾರದಲ್ಲಿ ಕಾಂಗ್ರೆಸ್‌ನ ನೆಲೆಯು ದುರ್ಬಲವಾಗಿದ್ದು, ಹಲವು ಕ್ಷೇತ್ರಗಳಲ್ಲಿ ಕಳಪೆ ಪ್ರದರ್ಶನ ನೀಡಿ, ಆರ್‌ಜೆಡಿ ಗೆಲ್ಲಬಹುದಾದ ಹಲವಾರು ಸ್ಥಾನಗಳನ್ನು ಕೈತಪ್ಪಿಸಿತು. ಅಲ್ಲದೆ, ಮತದಾರರ ಒಂದು ವರ್ಗವು ಇನ್ನೂ 'ಲಾಲು ಯುಗದ' ದರ್ಪ ಮತ್ತು ದೌರ್ಬಲ್ಯವನ್ನು ಸಂಪೂರ್ಣವಾಗಿ ಮರೆತಿರಲಿಲ್ಲ. ಇದಕ್ಕೆ ವಿರುದ್ಧವಾಗಿ, ಎನ್‌ಡಿಎ ಮೈತ್ರಿಕೂಟವು OBC, EBC ಮತ್ತು ದಲಿತ ಮತದಾರರನ್ನು ಪರಿಣಾಮಕಾರಿಯಾಗಿ ಕ್ರೋಢೀಕರಿಸುವಲ್ಲಿ ಯಶಸ್ವಿಯಾಯಿತು.
ಬಿಹಾರದಲ್ಲಿ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಹೆಸರುವಾಸಿಯಾದ ʻಪ್ರಶಾಂತ್ ಕಿಶೋರ್ʻ ಅವರು ಈ ಚುನಾವಣೆಯಲ್ಲಿ ಯಾವುದೇ ಮೈತ್ರಿಕೂಟದ ಪರವಾಗಿ ಅಧಿಕೃತವಾಗಿ ಕೆಲಸ ಮಾಡದಿದ್ದರೂ, ಅವರು ನೀಡುತ್ತಿದ್ದ ವಿಶ್ಲೇಷಣೆಗಳು ಮಹತ್ವದ್ದಾಗಿದ್ದವು. ಅವರು ಆರಂಭದಲ್ಲಿ, ಬಿಹಾರದಲ್ಲಿ ಯಾವುದೇ ಪಕ್ಷದ ಪರವಾಗಿ ತೀವ್ರವಾದ ಅಲೆ ಇಲ್ಲ ಮತ್ತು ಆಡಳಿತ ವಿರೋಧಿ ಅಲೆ ನಿತೀಶ್‌ಗೆ ದೊಡ್ಡ ಸವಾಲು ಎಂದು ವಿಶ್ಲೇಷಿಸಿದ್ದರು. ಆದರೆ, ಅವರ ವಿಶ್ಲೇಷಣೆಯು ಒಂದು ಹಂತದಲ್ಲಿ ಎಡವಿತು. ಬಿಹಾರದಲ್ಲಿ ಮತದಾರರು ವ್ಯಕ್ತಿ ಮತ್ತು ಸ್ಥಿರತೆಯನ್ನು ಗಂಭೀರವಾಗಿ ಪರಿಗಣಿಸಿದರು. ಪ್ರಶಾಂತ್ ಕಿಶೋರ್ ಅವರು ಆಡಳಿತ ವಿರೋಧಿ ಅಲೆಯನ್ನು ಅತಿಯಾಗಿ ಅಂದಾಜು ಮಾಡಿದರು, ಆದರೆ ನಿತೀಶ್ ಅವರ 'ಅದ್ಭುತ ವೈಯಕ್ತಿಕ ಜನಪ್ರಿಯತೆ' ಮತ್ತು ಅವರ ಯೋಜನಾಗಳು ಜನರಲ್ಲಿ ಗಟ್ಟಿಯಾದ ನಿಲೆಯನ್ನು ಪ್ರತಿಷ್ಠಾಪಿಸಿತ್ತು. ಪರಿಣಾಮವಾಗಿ, ಕಿಶೋರ್ ಅವರ ಲೆಕ್ಕಾಚಾರ ತಲೆಕೆಳಕಾಯಿತು.
ಈ ಭಾರಿ ಬಿಹಾರ ಚುನಾವಣೆ ವಿವಿಧ ಆಯಾಮಗಳಲ್ಲಿ ಹಲವರಿಗೆ ತಕ್ಕ ಪಾಠ ಕಲಿಸಿದೆ ಎನ್ನುವುದು ವಾಸ್ತವದ ಸಂಗತಿಯಾಗಿದೆ. ಬಿಹಾರದ ಕಣದಲ್ಲಿ ಮತದಾರರು ಹಲವು ಘಟಾನುಘಟಿ ನಾಯಕರಿಗೆ ಆಘಾತ ನೀಡಿದ್ದಾರೆ ಎನ್ನುವುದು ಜಗತ್‌ಜಾಹಿರ. ಕೆಲವು ಪ್ರಭಾವಿ, ಪ್ರಮುಖ ಮತ್ತು ಪರಿಚಿತ ಮುಖಗಳು ಚುನಾವಣೆಯಲ್ಲಿ ಸೋಲು ಅನುಭವಿಸಿರುವುದು ಆಶ್ಚರ್ಯವನ್ನು ಉಂಟುಮಾಡುತ್ತಿದೆ. ಫಲಿತಾಂಶವನ್ನು ಕೂಲಂಕಷವಾಗಿ ವಿಶ್ಲೆಷಿಸುವ ಪ್ರಯತ್ನ ಮಾಡಿದಾಗ ಸಾಕಷ್ಟು ಅನಿರೀಕ್ಷಿತ ತಿರುವು ಕಂಡು ಬರುತ್ತಿದೆ. ಹಿರಿಯ ನಾಯಕರು ಮತ್ತು ಹಾಲಿ ಶಾಸಕರು ಸೋತಿರುವುದು, ಮತದಾರರು ಈ ಬಾರಿ ವ್ಯಕ್ತಿಗಿಂತ ಹೆಚ್ಚಾಗಿ ಮೈತ್ರಿಕೂಟ ಮತ್ತು ಸ್ಥಿರ ಆಡಳಿತಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ ಎಂಬುದನ್ನು ಖಾತ್ರಿಯಾಗಿ ತೋರಿಸುತ್ತದೆ. ಈ ಸೋಲುಗಳು, ಬಿಹಾರದ ರಾಜಕೀಯದಲ್ಲಿ ಕೇವಲ ವ್ಯಕ್ತಿಯ ಹಿಡಿತಕ್ಕಿಂತ, ಮೈತ್ರಿಕೂಟಗಳ ಬಲ ಮತ್ತು ಸೂಕ್ಷ್ಮ ಜನಾಂಗೀಯ ಸಮೀಕರಣಗಳು ನಿರ್ಣಾಯಕವಾಗಿವೆ ಎಂಬುದನ್ನು ಮತ್ತೇ ಮತ್ತೇ ಪುನರುಚ್ಚರಿಸುತ್ತಿದೆ.
ಬಿಹಾರದಲ್ಲಿ ಜಾತಿ ಸಮೀಕ್ಷೆಯ ನಂತರ ನಡೆದ ಮೊದಲ ಚುನಾವಣೆ ಇದಾಗಿದ್ದು, ಮೈತ್ರಿಕೂಟಗಳು ಟಿಕೆಟ್ ಹಂಚಿಕೆಯಿಂದಲೇ ಇಬಿಸಿ (Extremely Backward Classes) ಮತದಾರರನ್ನು ಕೇಂದ್ರೀಕರಿಸಿದ್ದವು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 36ರಷ್ಟು ಇರುವ ಇಬಿಸಿಗಳು ಮತ್ತು ಶೇ 19.65ರಷ್ಟಿರುವ ದಲಿತ ಸಮುದಾಯದ ಮತಗಳು ನಿರ್ಣಾಯಕವಾಗಿದ್ದವು. ಈ ನಿರ್ಣಾಯಕ ವರ್ಗವು ನಿತೀಶ್ ಕುಮಾರ್ ಮತ್ತು ಪ್ರಧಾನಿ ಮೋದಿಯವರ ಡಬಲ್ ಎಂಜಿನ್ ಸರ್ಕಾರದ ಯೋಜನೆಗಳತ್ತ ಹೆಚ್ಚು ಆಕರ್ಷಿತರಾಗಿದ್ದಾರೆ ಎಂದು ಫಲಿತಾಂಶವು ತೋರಿಸಿದೆ. ಮಹಾಘಟಬಂಧನವು ತಮ್ಮ ಸಾಂಪ್ರದಾಯಿಕ 'ಎಂ-ವೈ' (ಮುಸ್ಲಿಂ-ಯಾದವ್) ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡಿದ್ದರಿಂದ, ಅತೀ ಹಿಂದುಳಿದ ವರ್ಗಗಳು (ಇಬಿಸಿ) ಮತ್ತು ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಸೆಳೆಯುವಲ್ಲಿ ವಿಫಲವಾಯಿತು. ಈ ರೀತಿ, ಸಮೀಕರಣವನ್ನು ಸಾಧಿಸುವಲ್ಲಿ ಎನ್‌ಡಿಎ ಮೈತ್ರಿಕೂಟವು ತೋರಿದ ಚಾಣಾಕ್ಷತೆ, ಮತದಾನದ ದಿನದಂದು ಪ್ರಬಲ ಸಂಘಟನಾ ಶಕ್ತಿಯಾಗಿ ಪರಿವರ್ತನೆಯಾಯಿತು.
ಒಟ್ಟಾರೆಯಾಗಿ, ಬಿಹಾರ ವಿಧಾನಸಭಾ ಚುನಾವಣೆಯ 2025ರ ಫಲಿತಾಂಶವು ದೇಶದ ರಾಜಕೀಯಕ್ಕೆ ಒಂದು ಸ್ಪಷ್ಟ ಸಂದೇಶ ನೀಡಿದೆ. ಸ್ಥಿರತೆ ಮತ್ತು ಫಲಾನುಭವಿಗಳನ್ನು ತಲುಪಿದ ಕಲ್ಯಾಣ ಯೋಜನೆಗಳು ಇಂದಿಗೂ ಮತದಾರರ ಮನಸ್ಸಿನಲ್ಲಿ ಪ್ರಬಲ ಸ್ಥಾನ ಪಡೆದಿವೆ. ತೇಜಸ್ವಿ ಯಾದವ್ ಅವರು 'ಉದ್ಯೋಗ'ದಂತಹ ಪ್ರಬಲ ವಿಷಯದೊಂದಿಗೆ ಬಂದಿದ್ದರೂ, ಸುದೀರ್ಘ ಕಾಲದಿಂದ ಸ್ಥಾಪಿತವಾಗಿರುವ ನಿತೀಶ್ ಕುಮಾರ್ ಅವರ 'ಗುಡ್ ಗವರ್ನೆನ್ಸ್' (ಸುಶಾಸನ) ಇಮೇಜ್ ಅನ್ನು ಮತದಾರರು ಧಿಕ್ಕರಿಸಲು ತಯಾರಿರಲಿಲ್ಲ. ಈ ಪ್ರಚಂಡ ಗೆಲುವು ನಿತೀಶ್ ಕುಮಾರ್ ಅವರ ನಾಯಕತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದರೆ, ಇನ್ನು ಮುಂದೆ NDA ಸರ್ಕಾರವು ಮಹಿಳೆಯರು ಮತ್ತು ಯುವಕರ ಅಪೇಕ್ಷೆಗಳನ್ನು ಈಡೇರಿಸುವ ಮಹತ್ತರ ಜವಾಬ್ದಾರಿಯನ್ನು ಹೊರಬೇಕಿದೆ. ಬಿಹಾರದ ರಾಜಕೀಯ ಚರಿತ್ರೆಯಲ್ಲಿ ಈ ಚುನಾವಣೆಯು ಮಹಿಳಾ ಮತದಾರರ ಜಾಗೃತಿ ಮತ್ತು ಪ್ರಾದೇಶಿಕ ನಾಯಕತ್ವದ ಮೌಲ್ಯವನ್ನು ಪುನಃ ಸ್ಥಾಪಿಸಿದ ಮೈಲಿಗಲ್ಲಾಗಿದೆ.
ಮಹಿಳಾ ಮತದಾರರೇ 'ಸೈಲೆಂಟ್ ಗೇಮ್ ಚೇಂಜರ್'
ಬಿಹಾರದ ಸ್ಥಳೀಯ ಮಾಧ್ಯಮಗಳು ಮತ್ತು ರಾಜಕೀಯ ವಿಶ್ಲೇಷಕರಲ್ಲಿ ಈ ಬಾರಿ ತೀವ್ರ ಚರ್ಚೆಯಾಗಿದ್ದು, ಮಹಿಳಾ ಮತದಾರರ ಪಾತ್ರ. ಈ ಚುನಾವಣೆಯಲ್ಲಿ ಮಹಿಳಾ ಮತದಾರರ ಪಾಲು ಪುರುಷರಿಗಿಂತ ಶೇ. 9 ರಷ್ಟು ಅಧಿಕ. ಈ ಪೈಕಿ ಸುಮಾರು 71.6% ಮಹಿಳೆಯರು ಮತ ಚಲಾಯಿಸಿದ್ದಾರೆ. ಇದು ಬಿಹಾರ ರಾಜ್ಯದ ಚುನಾವಣಾ ಇತಿಹಾಸದಲ್ಲಿಯೇ ಒಂದು ದಾಖಲೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಳೆದ ಎರಡು ದಶಕಗಳಿಂದ ಜಾರಿಗೆ ತಂದ, ಪಂಚಾಯತ್ ರಾಜ್‌ನಲ್ಲಿ ಮೀಸಲಾತಿ, ಸೈಕಲ್ ಯೋಜನೆ, ಮತ್ತು ಇತ್ತೀಚೆಗೆ ಮಹಿಳಾ ಉದ್ಯಮಿಗಳಿಗೆ ₹10,000 ಧನಸಹಾಯ ನೀಡಿದ ನೇರ ವರ್ಗಾವಣೆ ಯೋಜನೆಗಳು ಮಹಿಳೆಯರ ಮೇಲೆ ಅಸಾಧಾರಣ ಪರಿಣಾಮ ಬೀರಿದ್ದವು. ಮಹಾಘಟಬಂಧನವು ಉದ್ಯೋಗ ಭರವಸೆ ನೀಡಿದ್ದರೂ, ಎನ್‌ಡಿಎ ಸರ್ಕಾರವು ಈಗಾಗಲೇ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ 'ಮಾತನ್ನು ಉಳಿಸಿಕೊಂಡಿದೆ' ಎಂಬ ವಿಶ್ವಾಸವು ಈ ವರ್ಗವನ್ನು ಹೆಚ್ಚು ಗಟ್ಟಿಗೊಳಿಸಿತು. ಹೀಗಾಗಿ, ಈ ಚುನಾವಣೆಯಲ್ಲಿ ಮಹಿಳಾ ಮತದಾರರು 'ಸೈಲೆಂಟ್ ಗೇಮ್ ಚೇಂಜರ್' ಆಗಿ ಎನ್‌ಡಿಎ ಪರ ನಿರ್ಣಾಯಕ ಪಾತ್ರ ವಹಿಸಿದರು ಎಂಬುದು ಬಿಹಾರದ ರಾಜಕೀಯ ವಲಯದ ಗಂಭೀರ ವಿಶ್ಲೇಷಣೆಯಾಗಿದೆ.

ಶ್ರೀನಾಥ್ ಜೋಶಿ, ಸಿದ್ದರ.
9060188081
Publisher: ಕನ್ನಡ ನಾಡು | Kannada Naadu