

ಬೆಂಗಳೂರು : ವಿಶ್ವ ಸಂಸ್ಥೆಯು ಗೊತ್ತು ಮಾಡಿರುವ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ನೆರವಾಗಿವೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ತಿಳಿಸಿದರು.
ಅವರು ಇಂದು ಹೋಟೆಲ್ ತಾಜ್‍ನ ಟ್ರಿನಿಟಿ ಸಭಾಂಗಣದಲ್ಲಿ ವಿತ್ತೀಯ ಕಾರ್ಯನೀತಿ ಸಂಸ್ಥೆಯು ಐದು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಖಾತರಿ (ಗ್ಯಾರಂಟಿ) ಯೋಜನೆಗಳ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಾತ್ಮಕ ಕುರಿತು ಕೈಗೊಂಡಿರುವ ಅಧ್ಯಯನಗಳ ಫಲಿತಾಂಶಗಳನ್ನು ಮತ್ತು ಕಾರ್ಯನೀತಿ ಸಲಹೆಗಳನ್ನು ಭಾಗೀದಾರ (Stakeholders) ಸರ್ಕಾರಿ ಇಲಾಖೆಗಳೊಂದಿಗೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ತಜ್ಞರೊಂದಿಗೆ ಹಂಚಿಕೊಳ್ಳಲು ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ನಾವು ಕೈಗೊಳ್ಳುವ ಜನಗಣತಿ ಹಾಗೂ ಇತರೆ ಅಧ್ಯಯನಗಳನ್ನು ಪರಿಶೀಲಿಸಿದಾಗ ಸಂವಿಧಾನದಲ್ಲಿ ಹೇಳಲಾಗಿರುವ ಹಕ್ಕು ಹಾಗೂ ಗುರಿಗಳನ್ನು ನಾವು ಇನ್ನೂ ಸಾಧಿಸಬೇಕಾಗಿದೆ. ಬಡತನ ನಿರ್ಮೂಲನೆ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಮೊದಲನೆಯದಾಗಿದ್ದು, ಕರ್ನಾಟಕ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ತಲಾ ಆದಾಯ ಹೊಂದಿರುವ ರಾಜ್ಯವಾಗಿದೆ. ಇದು ಸಾಧ್ಯವಾಗಿರುವುದು ಗ್ಯಾರಂಟಿ ಯೋಜನೆಗಳಿಂದ ಎಂದರು.
ಹಸಿವು ಮುಕ್ತ, ಪೌಷ್ಟಿಕ ಆಹಾರ ಕೂಡ ಸುಸ್ಥಿರ ಅಭಿವೃದ್ಧಿಯ ಗುರಿಗಳಾಗಿದ್ದು, ಗ್ಯಾರಂಟಿ ಯೋಜನೆಗಳು ಹಾಗೂ ಇತರೆ ಯೋಜನೆಗಳ ಸಂಯೋಜನೆಯಿಂದ ರಾಜ್ಯದ ಅಪೌಷ್ಟಿಕತೆ ಮಟ್ಟ ಸುಧಾರಿಸಿದೆ. ಯುವನಿಧಿ ಮೂಲಕ ಗುಣಮಟ್ಟದ ಶಿಕ್ಷಣವನ್ನು ಅರ್ಥಪೂರ್ಣವಾಗಿದೆ. ಕೌಶಲ್ಯ ತರಬೇತಿ ಹಾಗೂ ಹಣಕಾಸಿನ ನೆರವು ಒದಗಿಸುವ ಮೂಲಕ ಶೇಕಡ ನೂರರಷ್ಟು ಉದ್ಯೋಗವನ್ನು ಖಾತ್ರಿ ಪಡಿಸಲಾಗುತ್ತಿದೆ ಎಂದರು.
ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ ಲಿಂಗ ಸಮಾನತೆಯೂ ಒಂದಾಗಿದೆ. ಸರ್ಕಾರ ಮಹಿಳಾ ಆಧಾರಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿರುವ ಕಾರಣ ಎರಡು ವರ್ಷಗಳಲ್ಲಿ ಮಹಿಳಾ ಸಹಭಾಗಿತ್ವ 37% ಗೆ ಏರಿಕೆಯಾಗಿದೆ. ಮಹಿಳೆಯರಿಗೆ ಹೊಣೆಗಾರಿಕೆ ಹಾಗೂ ಸಂಪನ್ಮೂಲಗಳನ್ನು ಒದಗಿಸಿದರೆ ಇಡೀ ಕುಟುಂಬ ಹಾಗೂ ಸಮಾಜವನ್ನು ನಿಭಾಯಿಸುತ್ತಾರೆ ಎನ್ನುವುದನ್ನು ಇದು ರುಜುವಾತು ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಎಷ್ಟರ ಮಟ್ಟಿಗೆ ಅನುμÁ್ಠನಗೊಂಡಿವೆ ಎಂಬುದನ್ನು ಪ್ರತಿಷ್ಠಿತ ಸಂಸ್ಥೆಗಳು ನಡೆಸಿದ ಸಂಶೋಧನೆಗಳ ವರದಿಯು ತಿಳಿಸಿದೆ ಎಂದರು.
ಕಾರ್ಯಕ್ರಮದ ಪ್ರಧಾನ ಭಾಷಣ ಮಾಡಿದ ಚೆನ್ನೈನ ಎಂ.ಎಸ್ ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ಡಾ. ಸೌಮ್ಯ ಸ್ವಾಮಿನಾಥನ್ ಅವರು ಗ್ಯಾರಂಟಿ ಯೋಜನೆಗಳು ಜನರನ್ನು ಸೋಮಾರಿಗಳಾಗಿ ಮಾಡುತ್ತದೆ ಎಂಬುದು ಸುಳ್ಳು. ಈ ಯೋಜನೆಗಳಿಂದ ಬರುತ್ತಿರುವ ಹಣವನ್ನು ಜನರು ಮಕ್ಕಳ ವಿದ್ಯಾಭ್ಯಾಸಕ್ಕೆ, ಆರೋಗ್ಯ ಕಾಪಾಡಿಕೊಳ್ಳಲು, ಮನೆಯ ಅಗತ್ಯ ವಸ್ತುಗಳನ್ನು ಖರೀದಿಸಲು ಬಳಸುತ್ತಿರುವುದು ಸಮೀಕ್ಷೆಯಿಂದ ಸಾಭೀತಾಗಿದೆ. ಶಕ್ತಿ ಯೋಜನೆಯು ಸರ್ಕಾರವು ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿರುವುದನ್ನು ತೋರಿಸುತ್ತದೆ. ಅನ್ನ ಭಾಗ್ಯವು ಬಡಜನರ ಹಸಿವನ್ನು ನಿವಾರಿಸಿದೆ. ಯುವನಿಧಿ ಯೋಜನೆಯು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಜೊತೆಗೆ ಉದ್ಯೋಗವನ್ನು ಅರಸಲು ನೆರವಾಗುತ್ತಿದೆ.
ಸಾರ್ವಜನಿಕರ ಮುಂದೆ ಸಂಶೋಧನೆಗಳನ್ನು ಹಂಚಿಕೊಳ್ಳುತ್ತಿರುವ ಕರ್ನಾಟಕ ಸರ್ಕಾರದ ನಡೆ ಪಾರದರ್ಶಕತೆ, ಕಲಿಕೆ ಹಾಗೂ ಉತ್ತರದಾಯಿತ್ವದೆಡೆಗೆ ಸರ್ಕಾರದ ಬದ್ಧತೆಯನ್ನು ಬಿಂಬಿಸುತ್ತದೆ. ಸಂಶೋಧನೆಗಳು ವರದಿಗಳಾಗಿ ಉಳಿಯದೇ ಜನರನ್ನು ತಲುಪುವುದು ಮುಖ್ಯ ಎಂದರು.
ಒಟ್ಟಿನಲ್ಲಿ ಮಹಿಳೆಯರ ಸವಾರ್ಂಗೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವ ಸರ್ಕಾರವು ಗ್ರಾಮೀಣ ಭಾಗದ ರೈತ ಮಹಿಳೆಯರು ಕೃಷಿಯಲ್ಲಿ ಬಳಸಲು ಅನುಕೂಲವಾಗುವಂತಹ ಯಂತ್ರೋಪಕರಣಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕು. ಈಗಿರುವ ಬಹುಪಾಲು ಕೃಷಿ ಯಂತ್ರೋಪಕರಣಗಳು ಪುರುಷ ರೈತರು ಬಳಸುವಂತಿವೆ. ರೈತರು ತಮ್ಮ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಅತಿಯಾಗಿ ಔಷಧಗಳನ್ನು ಸಿಂಪಡಣೆ ಮಾಡುತ್ತಿರುವುದರಿಂದ ಆರೋಗ್ಯದ ಮೇಲೆ ಪರಿಣಾಮವಾಗುತ್ತಿರುವುದರಿಂದ ಕೃಷಿ ವಿಶ್ವವಿದ್ಯಾನಿಲಯಗಳು ಅವರಿಗೆ ಸರಿಯಾದ ಮಾರ್ಗದರ್ಶ ನ ನೀಡುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.
ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಇನ್ನೂ ನಾಲ್ಕು ವರ್ಷಗಳು ಬಾಕಿ ಇದ್ದರೂ ಬಹುತೇಕ ದೇಶಗಳು ಇವುಗಳನ್ನು ತಲುಪುವಲ್ಲಿ ಹಿಂದುಳಿದಿವೆ. ಶೇ 30 ರಷ್ಟು ಸೂಚಕಗಳನ್ನು ಮಾತ್ರ ತಲುಪಿವೆ ಎಂದರು.
ಕೋವಿಡ್ ನಂತರದಲ್ಲಿ ಹವಾಮಾನ ಬದಲಾವಣೆ, ಆಹಾರ ಮತ್ತು ಪೌಷ್ಟಿಕತೆ, ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಾಧನೆಯಾಗಿಲ್ಲ. ಹವಾಮಾನ ಬದಲಾವಣೆಯಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಮಾನವನ ಹಸ್ತಕ್ಷೇಪದಿಂದ ಜಾಗತಿಕ ತಾಪಮಾನ 2.5% ಏರಿಕೆಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್ ಮತ್ತು ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಿತೇಶ ಕುಮಾರ್ ಸಿಂಗ್ ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುμÁ್ಠನದ ಉಪಾಧ್ಯಕ್ಷರುಗಳಾದ ಮೆಹರೂಜ್ ಖಾನ್, ಪುμÁ್ಪ ಅಮರನಾಥ್, ದಿನೇಶ್ ಗೂಳಿಗೌಡ ಅವರು ಹಾಜರಿದ್ದರು.
ಬೆಳಿಗ್ಗೆ ಸರ್ಕಾರದ ಖಾತರಿ ಯೋಜನೆಗಳ ಅನುಷ್ಠಾನÀದಲ್ಲಿ ಇ-ಆಡಳಿತದ ಪಾತ್ರ ಎಂಬ ವಿಷಯದಲ್ಲಿ ನಡೆದ ತಾಂತ್ರಿಕ ಅಧಿವೇಶನದಲ್ಲಿ ಜಿ.ಐ.ಎಫ್.ಟಿ ಯ ನಿರ್ದೇಶಕರಾದ ಡಾ. ಕೆ.ಜೆ.ಜೋಸೆಫ್ ಅವರು ಮಧ್ಯಾಹ್ನ ಜರುಗಿದ ತಾಂತ್ರಿಕ ಅಧಿವೇಶನದಲ್ಲಿ ಸರ್ಕಾರದ ಐದು ಖಾತರಿ ಯೋಜನೆಗಳ ಪರಿಣಾಮಾತ್ಮಕ ಮೌಲ್ಯಮಾಪನ ವಿಷಯ ಮುಂಬೈನ ಎಕ್ಸ್.ಕೆ.ಡಿ.ಆರ್ ಫೋರಂನ ಡಾ.ಸೂಸನ್ ಥಾಮಸ್, ಲಂಡನ್ ನ ಕಿಂಗ್ಸ್ ಕಾಲೇಜ್ ನ ಡಾ.ಪ್ರಭಾ ಕೋಟೀಸ್ವರನ್, ಲೋಕ್ ನೀತಿ-ಸಿ.ಎಸ್.ಡಿ.ಎಸ್ & ಇಂಡಸ್ ಆಕ್ಷನ್ ನ ತಾರ ಕೃಷ್ಣಸ್ವಾಮಿ ಅವರು ಭಾಗವಹಿಸಿದ್ದರು.
ಶಕ್ತಿ ಯೋಜನೆಯ ಪರಿಣಾಮಾತ್ಮಕ ಮೌಲ್ಯಮಾಪನ ಎಂಬ ವಿಷಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಅಬ್ದುಲ್ ರವೂಫ್ ಪಿಂಚಾರಿ, ಜಸ್ಟ್ ಜಾಬ್ಸ್ ನೆಟ್ ವಕ್ರ್ಸ್ ನ ಡಾ.ಸಬೀನಾ ದಿವಾನ್ ಮತ್ತು ಡಾ. ಶಿಪ್ರ ನಿಗಮ್, ಅಜೀಂ ಪ್ರೇಮ್ ಜಿ. ವಿಶ್ವವಿದ್ಯಾಲಯದ ಡಾ. ಅರ್ಜುನ್ ಜಯದೇವ್ ಉಪಸ್ಥಿತರಿದ್ದರು.
ಇನ್ನು ಸಂಜೆ ನಡೆದ ತಜ್ಞರ ಚರ್ಚೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಟಿ.ಎಂ ವಿಜಯ ಬಾಸ್ಕರ್, ಎನ್‍ಐಎಎಸ್‍ನ ಪ್ರಾಧ್ಯಾಪಕರಾದ ಡಾ. ನರೇಂದ್ರ ಪಾಣಿ, ಡಿ.ಬಿ.ಪಿ.ಎಸ್ ನ ನಿರ್ದೇಶಕರಾದ ಡಾ.ನಿವೇದಿತಾ ಮೆನನ್, ಐ.ಎಸ್.ಇ.ಸಿ ಯ ಪ್ರಾಧ್ಯಾಪಕರಾದ ಡಾ. ಕಲಾ ಎಸ್. ಶ್ರೀಧರ್, ಜಿ.ಐ.ಎಫ್ ನ ಮಾಜಿ ನಿರ್ದೇಶಕರಾದ ಡಾ.ಡಿ.ನಾರಾಯಣ ಭಾಗವಹಿಸಿದ್ದರು.
ಬೆಳಗ್ಗಿನಿಂದ ಸಂಜೆ ತನಕ ಜರುಗಿದ ಈ ಕಾರ್ಯಗಾರದಲ್ಲಿ ಖಾತರಿ ಯೋಜನೆಗಳ ಭಾಗೀದಾರ (Stakeholders) ರಾದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ವಿವಿಧ ವಿಶ್ವವಿದ್ಯಾಲಯಗಳ ಪ್ರೊಫೆಸರ್ ಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ತಜ್ಞರುಗಳು ಉಪಸ್ಥಿತರಿದ್ದು ಚರ್ಚೆಯಲ್ಲಿ ಭಾಗವಹಿಸಿದರು.
ಆರ್ಥಿಕ ಇಲಾಖೆಯ ಕಾರ್ಯದರ್ಶಿ ಗಳಾದ ಡಾ. ವಿಶಾಲ್ ಆರ್ ಅವರು ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.
ಸಮೀಕ್ಷೆಯಲ್ಲಿ ಕಂಡುಬಂದ ಪ್ರಮುಖ ಅಂಶಗಳು:
ಕಿಂಗ್ಸ್ ಕಾಲೇಜ್ ಲಂಡನ್ ಅವರು ಮಾಡಿರುವ ಸಮೀಕ್ಷೆಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಶೇಕಡಾ 99.8ರಷ್ಟು ಫಲಾನುಭವಿಗಳು ತಮಗೆ ಸರ್ಕಾರ ನೀಡುತ್ತಿರುವ ಮಾಸಿಕ ರೂ 2000 ನಗದು ಸಂಪೂರ್ಣವಾಗಿ ಬರುತ್ತಿದೆ ಎಂದಿದ್ದಾರೆ. ಶೇಕಡಾ 78ರಷ್ಟು ಫಲಾನುಭವಿಗಳು ಹಣ ಒಂದು ಅಥವಾ ಅದಕ್ಕಿಂತ ಹೆಚ್ಚು ತಿಂಗಳಷ್ಟು ವಿಳಂಬವಾಗಿ ಬರುತ್ತಿದೆ ಎಂದಿದ್ದಾರೆ. ಹಾಗೆಯೇ ಶೇಕಡಾ 99ರಷ್ಟು ಫಲಾನುಭವಿಗಳು ತಮಗೆ ಬರುವ ಹಣವನ್ನು ಖರ್ಚು ಮಾಡುವ ಅಧಿಕಾರ ತಮಗೇ ಇದೆ ಎಂದಿದ್ದಾರೆ.
ಗೃಹಲಕ್ಷ್ಮಿ ಹಣವನ್ನು ಹೆಚ್ಚಿನ ಫಲಾನುಭವಿಗಳು ಆಹಾರ (78%), ಕುಟುಂಬ ನಿರ್ವಹಣೆ ವೆಚ್ಚಗಳು (54%), ಔಷಧಿಗಳು (48%) ಹಾಗೂ ಮಕ್ಕಳ ಶಿಕ್ಷಣ ವೆಚ್ಚಗಳಿಗೆ (28%) ಬಳಸುತ್ತಿರುವುದು ಕಂಡುಬಂದಿದೆ.
ಫಲಾನುಭವಿ ಮಹಿಳೆಯರಲ್ಲಿ ಯೋಜನೆ ಜಾರಿಯ ನಂತರ ಬ್ಯಾಂಕ್ ಖಾತೆ ಹೊಂದಿದವರ ಸಂಖ್ಯೆ ಶೇಕಡಾ 8ರಷ್ಟು ಜಾಸ್ತಿಯಾಗಿದೆ. ಹಾಗೆಯೇ, ತಮ್ಮ ಬ್ಯಾಂಕ್ ಖಾತೆಯನ್ನು ತಾವೇ ನಿರ್ವಹಿಸುತ್ತಿರುವವರ ಸಂಖ್ಯೆ ಶೇಕಡಾ 15ರಷ್ಟು ಹೆಚ್ಚಳವಾಗಿದೆ.
ಅನ್ನಭಾಗ್ಯ ಯೋಜನೆ:
ಶೇಕಡಾ 95ರಷ್ಟು ಫಲಾನುಭವಿ ಮಹಿಳೆಯರು ನಗದು ರೂಪದಲ್ಲಿ ಹಣ ನೀಡುವುದಕ್ಕಿಂತ ಆಹಾರ ಧಾನ್ಯದ ರೂಪದಲ್ಲೇ ನೆರವು ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂದಿರಾ ಕಿಟ್ ನೀಡುವ ಸರ್ಕಾರದ ಇತ್ತೀಚಿನ ನಿರ್ಧಾರ ಸೂಕ್ತ ಎಂದಿದ್ದಾರೆ.
ಗೃಹ ಜ್ಯೋತಿ ಯೋಜನೆ:
ಶೇಕಡಾ 89ರಷ್ಟು ಫಲಾನುಭವಿಗಳು ಯೋಜನೆಯಿಂದಾಗಿ ವಿದ್ಯುತ್ ಬಿಲ್ ಗಾಗಿ ಪಾವತಿಸುತ್ತಿದ್ದ ಹಣ ಉಳಿತಾಯವಾಗುತ್ತಿದೆ ಎಂದಿದ್ದಾರೆ. ಶೇಕಡಾ 94ರಷ್ಟು ಫಲಾನುಭವಿಗಳು ಉಳಿತಾಯದ ಹಣವನ್ನು ಕುಟುಂಬ ನಿರ್ವಹಣೆ ವೆಚ್ಚಕ್ಕಾಗಿ ಬಳಸುತ್ತಿರುವುದಾಗಿ ತಿಳಿಸಿದ್ದಾರೆ.
ಶಕ್ತಿ ಯೋಜನೆ:
ಶಕ್ತಿ ಉಚಿತ ಬಸ್ ಸೇವೆ ಯೋಜನೆಯಿಂದಾಗಿ ಶೇಕಡಾ 43.1ರಷ್ಟು ಮಹಿಳೆಯರಿಗೆ ಹಣದ ಉಳಿತಾಯ ಸಾಧ್ಯವಾಗಿದೆ. ಹೀಗೆ ಉಳಿದ ಹಣವನ್ನು ಮುಖ್ಯವಾಗಿ ಕುಟುಂಬ ನಿರ್ವಹಣೆ ವೆಚ್ಚ ಹಾಗೂ ಮಕ್ಕಳಿಗಾಗಿ ಬಳಸುತ್ತಿದ್ದಾರೆ.
ಶೇಕಡಾ 98.7ರಷ್ಟು ಮಹಿಳೆಯರು ಯೋಜನೆಯು ಪ್ರಯಾಣ ನಿರ್ಧಾರಕ್ಕೆ ಸಂಬಂಧಿಸಿದ ತಮ್ಮ ಸ್ವಾತಂತ್ರ್ಯವನ್ನು ಹೆಚ್ಚಿಸಿದೆ ಎಂದಿದ್ದಾರೆ. ಶೇಕಡಾ 92.9ರಷ್ಟು ಮಹಿಳೆಯರು ಪ್ರಯಾಣಕ್ಕಾಗಿ ಕುಟುಂಬದ ಮೇಲಿನ ಅವಲಂಬನೆಯ ತಗ್ಗಿದೆ ಎಂದಿದ್ದಾರೆ.
ಶೇಕಡಾ 61.1ರಷ್ಟು ಮಹಿಳೆಯರು ಉದ್ಯೋಗಕ್ಕಾಗಿ ಮುಂಚೆಗಿಂತ ಈಗ ಹೆಚ್ಚು ಬಾರಿ ಪ್ರಯಾಣಿಸುತ್ತಿರುವುದಾಗಿ, ಶೇಕಡಾ 59ರಷ್ಟು ಮಹಿಳೆಯರು ಉದ್ಯೋಗಕ್ಕಾಗಿ ಹೆಚ್ಚು ದೂರ ಪ್ರಯಾಣಿಸುತ್ತಿರುವುದಾಗಿ ಹಾಗೂ ಶೇ 18.4ರಷ್ಟು ಮಹಿಳೆಯರು ಹೊಸ ಸ್ಥಳಗಳಿಗೆ ಹಾಗೂ ವಿವಿಧ ಉದ್ಯೋಗ ಸ್ಥಳಗಳಿಗಾಗಿ ಪ್ರಯಾಣಿಸುತ್ತಿರುವುದಾಗಿ ತಿಳಿಸಿದ್ದಾರೆ.
ಹಾಗೆಯೇ ಶೇಕಡಾ 10.5ರಷ್ಟು ಮಹಿಳೆಯರು ಶಕ್ತಿ ಯೋಜನೆ ಜಾರಿಯಾದ ನಂತರ ಉದ್ಯೋಗಕ್ಕೆ ತೆರಳುತ್ತಿರುವುದಾಗಿ ಹೇಳಿದ್ದಾರೆ.
ಉದ್ಯೋಗಕ್ಕಾಗಿ ಜಿಲ್ಲಾ ವ್ಯಾಪ್ತಿಯ ಹೊರಗಿನ ತಾಲ್ಲೂಕುಗಳಿಗೆ ತೆರಳುತ್ತಿರುವವರ ಮಹಿಳೆಯರ ಪ್ರಮಾಣವು ಶೇಕಡಾ 14.2ರಿಂದ ಶೇಕಡಾ 24.3ಕ್ಕೆ ಹೆಚ್ಚಾಗಿದೆ. ಹೊರಗಿನ ಜಿಲ್ಲೆಗಳಿಗೆ ತೆರಳುತ್ತಿರುವವರ ಪ್ರಮಾಣವು ಶೇಕಡಾ 6.7ರಿಂದ ಶೇಕಡಾ 8.4ಕ್ಕೆ ಏರಿಕೆಯಾಗಿದೆ.
ಲೋಕನೀತಿ-ಸಿಎಸ್ ಡಿಎಸ್ ಮತ್ತು ಇಂಡಸ್ ಆಕ್ಷನ್ ಸಹಭಾಗಿತ್ವದಲ್ಲಿ ತಾರಾ ಕೃಷ್ಣಸ್ವಾಮಿ ಅವರು ನಡೆಸಿದ ಅಧ್ಯಯನದ ಪ್ರಕಾರ ಗ್ಯಾರಂಟಿ ಯೋಜನೆಗಳಿಂದಾಗಿ ಉಳಿತಾಯವಾಗುತ್ತಿರುವ ಹಣವನ್ನು ಶೇಕಡಾ 85 ರಿಂದ 91ರಷ್ಟು ಮಂದಿ ಪೌಷ್ಟಿಕ ಆಹಾರಗಳು ಹಾಗೂ ಕುಟುಂಬ ಸದಸ್ಯರ ಆರೋಗ್ಯ ಸೇವೆಗಳಿಗಾಗಿ ಬಳಸುತ್ತಿರುವುದಾಗಿ ಹೇಳಿದ್ದಾರೆ ಶಕ್ತಿ ಯೋಜನೆಯಿಂದಾಗಿ ಶೇಕಡಾ 75ರಷ್ಟು ಫಲಾನುಭವಿ ಮಹಿಳೆಯರಿಗೆ ವಾರಕ್ಕೆ ರೂ 500ರವರೆಗೆ ಉಳಿತಾಯವಾಗುತ್ತಿದ್ದರೆ, ಗೃಹ ಜ್ಯೋತಿಯಿಂದ ಶೇಕಡಾ 74 ರಷ್ಟು ಕುಟುಂಬಗಳಿಗೆ ತಿಂಗಳಿಗೆ ರೂ 500ರವರೆಗೆ ಉಳಿತಾಯವಾಗುತ್ತಿದೆ.
ಆರೋಗ್ಯಸೇವೆ ಹಾಗೂ ಪೌಷ್ಟಿಕಾಂಶದ ಲಭ್ಯತೆಯು ಸುಧಾರಣೆಗೊಂಡಿದ್ದು, ಉಳಿತಾಯವಾಗುತ್ತಿರುವ ಹಣವನ್ನು ಹಾಲು, ತರಕಾರಿ, ಮೊಟ್ಟೆ, ಮಾಂಸ ಕೊಳ್ಳಲು ಬಳಸಲು ಸಾಧ್ಯವಾಗುತ್ತಿದೆ ಎಂದಿದ್ದಾರೆ. ಶೇಕಡಾ 88 ರಷ್ಟು ಫಲಾನುಭವಿಗಳು ಈಗ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದ ಊಟ ಸೇವಿಸಲು ಸಾಧ್ಯವಾಗುತ್ತಿದೆ ಹಾಗೂ ಆಹಾರ ಪ್ರಮಾಣ ಕೊರತೆಯಾಗುವ ಆತಂಕವೂ ದೂರವಾಗಿದೆ ಎಂದಿದ್ದಾರೆ.
ಶೇಕಡಾ 83ರಷ್ಟು ಮಹಿಳೆಯರು ವೈದ್ಯರು, ಆಸ್ಪತ್ರೆಗಳು, ತಪಾಸಣೆಗಳು ಹಾಗೂ ಔಷಧಿಗಳನ್ನು ಪಡೆಯಲು ಅನುಕೂಲವಾಗಿದೆ ಎಂದಿದ್ದಾರೆ. ಶೇಕಡಾ 43ರಷ್ಟು ಮಹಿಳೆಯರು ಹೀಟರ್, ಮಿಕ್ಸಿ, ಫ್ರಿಜ್ ನಂತಹ ಉಪಕರಣಗಳನ್ನು ಹೊಸದಾಗಿ ಖರೀದಿಸಿರುವುದಾಗಿ ತಿಳಿಸಿದ್ದಾರೆ.
ಶಕ್ತಿ ಯೋಜನೆಯು ಮಹಿಳೆಯರ ಉದ್ಯೋಗ ಹಾಗೂ ಆದಾಯಕ್ಕೆ ಉತ್ತೇಜನ ನೀಡಿದಂತಾಗಿದೆ. ಕಡಿಮೆ-ಆಧಾಯದ ಮಹಿಳೆಯರಲ್ಲಿ ಸರಾಸರಿ ಶೇಕಡಾ 19ರಷ್ಟು ಮಂದಿ ಹೊಸ ಉದ್ಯೋಗ ಪಡೆಯಲು ಸಾಧ್ಯವಾಗಿದೆ ಹಾಗೂ ಉತ್ತಮ ವೇತನಕ್ಕಾಗಿ ಬೇರೊಂದು ಜಿಲ್ಲೆಗೆ ಹೋಗಲು ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.
ಎಕ್ಸ್.ಕೆ.ಡಿ.ಆರ್. ಫೋರಂ ಅಧ್ಯಯನದಲ್ಲಿ 2024ರ ಅಂಕಿಅಂಶದ ಪ್ರಕಾರ, ಈ ಎಲ್ಲಾ ಯೋಜನೆಗಳಿಂದಾಗಿ, ಸರ್ಕಾರದಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸರಾಸರಿ ರೂ 2425 ಪಾವತಿಯಾಗುತ್ತಿದೆ. ಯೋಜನೆ ಜಾರಿಗೆ ಮುನ್ನ 2023ರಲ್ಲಿ ಸರ್ಕಾರದಿಂದ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸರಾಸರಿ ರೂ 170 ಪಾವತಿಯಾಗುತ್ತಿತ್ತು.
ಸರ್ಕಾರದಿಂದ ಯಾವುದಾದರೊಂದು ಯೋಜನೆಯ ಹಣ ಪಡೆಯುವ ಕುಟುಂಬಗಳ ಸಂಖ್ಯೆ 2022ರಲ್ಲಿ ರಾಜ್ಯದಲ್ಲಿ ಶೇಕಡಾ 9.3ರಷ್ಟು ಇತ್ತು. ಆದರೆ ಗ್ಯಾರಂಟಿ ಯೋಜನೆ ಜಾರಿಗೊಂಡ ನಂತರ ಶೇಕಡಾ 72.7ಕ್ಕೆ ಹೆಚ್ಚಾಗಿದೆ. ಅನ್ಯಭಾಗ್ಯ ಯೋಜನೆ ಜಾರಿಗೊಂಡ ನಂತರ ಕುಟುಂಬಗಳು ಆಹಾರಕ್ಕಾಗಿ ಮಾಡುವ ವೆಚ್ಚವು ತಗ್ಗಿದೆ. ಗೃಹಜ್ಯೋತಿ ಯೋಜನೆಯಿಂದಾಗಿ ರಾಜ್ಯದ ಶೇಕಡಾ 63.1ರಷ್ಟು ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಲಭ್ಯವಾಗುತ್ತಿದೆ.
ಅಜೀಂ ಪ್ರೇಮ್ ಜಿ ವಿಶ್ವ ವಿದ್ಯಾಲಯದ ಅಧ್ಯಯನದ ಪ್ರಕಾರ ಗ್ಯಾರಂಟಿ ಯೋಜನೆ ಜಾರಿಗೊಂಡ ಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದೆ. ಮಹಿಳೆಯರು ಹಾಗೂ ಪುರುಷ ಪ್ರಯಾಣಿಕರ ಅನುಪಾತವು 60:40 ರಷ್ಟಿದೆ. ಇದು ಮಹಿಳೆಯರಿಗೆ ಸಾರ್ವಜನಿಕ ಸಂಚಾರದ ಲಭ್ಯತೆ ಹೆಚ್ಚಾಗಿರುವುದುನ್ನು ಸೂಚಿಸುತ್ತದೆ.
ಜಸ್ಟ್ ಜಾಬ್ಸ್ ನೆಟ್ ವರ್ಕ್ ಸಮೀಕ್ಷೆಯ ಪ್ರಕಾರ ಗ್ಯಾರಂಟಿ ಯೋಜನೆಯು ಅತ್ಯಂತ ದುರ್ಬಲ ವರ್ಗದ ಮಹಿಳೆಯರಿಗೆ ಹೆಚ್ಚಿನ ಮಟ್ಟದಲ್ಲಿ ಸಬಲೀಕರಣಕ್ಕೆ ಹಾಗೂ ಸಂಚಾರ ಅನುಕೂಲಗಳನ್ನು ಉಂಟುಮಾಡಿದೆ.
ಮುಖ್ಯವಾಗಿ ಕಡಿಮೆ ಆದಾಯವಿರುವವರು, ಅಸಂಘಟಿತ ವಲಯದ ಕೆಲಸಗಾರರು ಹಾಗೂ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರು ಅಧಿಕ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಕುಟುಂಬಗಳ ನಿರ್ವಹಣಾ ವೆಚ್ಚವು ಕಡಿಮೆಯಾಗಿದೆ. ಮಹಿಳೆಯರು ಉದ್ಯೋಗ ಬಿಡುತ್ತಿರುವ ಪ್ರಮಾಣ ಕಡಿಮೆಯಾಗಿದೆ.
Publisher: ಕನ್ನಡ ನಾಡು | Kannada Naadu