ಕನ್ನಡ ನಾಡು | Kannada Naadu

ಮದುವೆ ಸರ್ಟಿಫಿಕೇಟ್ ಮಾರಾಟ ಆರೋಪ: ಏಕಕಾಲಕ್ಕೆ 8 ಸಬ್ ರಿಜಿಸ್ಟರ್ ಕಚೇರಿಗಳ ಮೇಲೆ ಲೋಕಾ ದಾಳಿ

05 Nov, 2025

ಉತ್ತರ ಕನ್ನಡ ಜಿಲ್ಲೆಯ ಎಂಟು ಉಪನೋಂದಣಾಧಿಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ಬುಧವಾರ ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ಬೆಳಿಗ್ಗೆ 11 ಗಂಟೆಯಿಂದಲೇ ಕಾರವಾರ, ಕುಮಟಾ, ಶಿರಸಿ, ಸಿದ್ದಾಪುರ, ಹಳಿಯಾಳ, ಜೋಯಿಡಾ, ಯಲ್ಲಾಪುರ ಹಾಗೂ ಭಟ್ಕಳ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಉತ್ತರ ಕನ್ನಡ ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯ ವೇಳೆ ವಿವಾಹ ನೋಂದಣಿಗೆ ನಕಲಿ ದಾಖಲೆಗಳನ್ನು ಬಳಸಿದ ಪ್ರಕರಣಗಳು ಹಾಗೂ ಹಣ ಪಡೆದು ಪ್ರಮಾಣಪತ್ರ ನೀಡಿದ ಆರೋಪಗಳ ತನಿಖೆ ನಡೆದಿದೆ.

ಕಳೆದ ತಿಂಗಳು ಅಂಕೋಲಾ ಹಾಗೂ ಹೊನ್ನಾವರ ಕಚೇರಿಗಳಲ್ಲಿ ನಡೆದ ಲೋಕಾಯುಕ್ತ ದಾಳಿಯ ವೇಳೆ ಹಲವು ಲೋಪಗಳು ಬಹಿರಂಗವಾದ ಹಿನ್ನೆಲೆಯಲ್ಲಿ, ಈ ಬಾರಿ ಉಳಿದ 8 ಕಚೇರಿಗಳ ಮೇಲೂ ಅಚ್ಚರಿ ದಾಳಿ ನಡೆದಿದೆ.

ವಿವಾಹ ನೊಂದಣಿಯ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಸಾರ್ವಜನಿಕರಿಂದ ನಿರಂತರವಾಗಿ ಬಂದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ಅಧಿಕಾರಿಗಳು, ಈ ಬಾರಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by