ಕನ್ನಡ ನಾಡು | Kannada Naadu

ಇಡೀ ರಾಜ್ಯಕ್ಕೆ ಸುಭಿಕ್ಷೆ, ಶಾಂತಿ, ನೆಮ್ಮದಿ, ಮಳೆ- ಬೆಳೆ-ರೈತರ ಸಮೃದ್ಧಿಗಾಗಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ: ಸಿ.ಎಂ.ಸಿದ್ದರಾಮಯ್ಯ 

15 Oct, 2025

  • ಶ್ರಮಿಕ ವರ್ಗದ ಭಕ್ತರಿಗೆ ಸುಗಮ ದರ್ಶನದ ವ್ಯವಸ್ಥೆ: ಮುಖ್ಯಮಂತ್ರಿಗಳ ಎದುರಿಗೇ ಅಪಾರ ಮೆಚ್ಚುಗೆ
  • ಕಳೆದ ವರ್ಷಕ್ಕಿಂತ ದುಪ್ಪಟ್ಟು ಭಕ್ತರಿಂದ ಸುಗಮವಾಗಿ ದೇವಿ ದರ್ಶನ: ಸಚಿವ ಕೃಷ್ಣಬೈರೇಗೌಡರ ಪ್ರಯತ್ನಕ್ಕೆ ಸಿಎಂ ಮೆಚ್ಚುಗೆ
  • VIP ವ್ಯವಸ್ಥೆ ಇಲ್ಲದ ಶ್ರೀಸಾಮಾನ್ಯರ ದರ್ಶನಕ್ಕೆ ಆಧ್ಯತೆ:  ಪ್ರಯತ್ನದ ಯಶಸ್ಸಿಗೆ ಜಿಲ್ಲೆಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳಿಗೆ ಅಭಿನಂದಿಸಿದ ಸಿಎಂ 

ಹಾಸನ : ಹಾಸನಾಂಭ ಜಾತ್ರೆಯಲ್ಲಿ ಯಾವುದೇ ರೀತಿಯ VIP ಪ್ರತಿಷ್ಠೆಗೆ ಮಣೆ ಹಾಕದೆ,  ಶ್ರೀಸಾಮಾನ್ಯರ ದರ್ಶನಕ್ಕೆ ಆಧ್ಯತೆ ನೀಡಿದ ಸರ್ಕಾರದ ಪ್ರಯತ್ನದ ಯಶಸ್ಸಿಗೆ ಸಹಕರಿಸಿದ ಜಿಲ್ಲೆಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳಿಗೆ, ಅಧಿಕಾರಿ ವರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದರು. 

ಹಾಸನಾಂಭ ದೇವಿ ಮತ್ತು ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು. 

ನಾನು ಕಳೆದ ವರ್ಷವೂ ದರ್ಶನ ಪಡೆದಿದ್ದೆ. ಈ ವರ್ಷವೂ ದರ್ಶನ‌ ಪಡೆದಿದ್ದೇನೆ. ಇಡೀ ರಾಜ್ಯಕ್ಕೆ ಸುಭಿಕ್ಷೆ, ಶಾಂತಿ, ನೆಮ್ಮದಿಗಾಗಿ, ಮಳೆ- ಬೆಳೆ-ರೈತರ ಸಮೃದ್ಧಿಗಾಗಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

ಈ ಬಾರಿ ಅಗತ್ಯಕ್ಕಿಂತ ಹೆಚ್ವು ಮಳೆ ಬಿದ್ದು ರೈತರಿಗೆ ಆಗಿರುವ ನಷ್ಟ ಭರಿಸಲು NDRF ನಿಧಿ ಜೊತೆಗೆ ರಾಜ್ಯ ಸರ್ಕಾರವೂ ಹೆಚ್ಚುವರಿ ಪರಿಹಾರ ನೀಡುತ್ತಿದ್ದೇವೆ. ಹಿಂದೆಂದೂ ಯಾರೂ ನೀಡದಷ್ಟು ಬೆಳೆ ಹಾನಿ ಪರಿಹಾರವನ್ನು ನಾವು ನೀಡಿದ್ದೇವೆ. ಮುಂದಿನ ವರ್ಷ ಬೆಳೆ ಹಾನಿ ಪರಿಸ್ಥಿತಿ ಬರದಿರಲಿ ಎಂದು ಹಾಸನಾಂಭ ಮತ್ತು ಸಿದ್ದೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.  

ನಮ್ಮದು ಕುವೆಂಪು ಅವರ ಆಶಯದ "ಸರ್ವ ಜನಾಂಗದ ಶಾಂತಿಯ ತೋಟ" ಆಗಿದೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸೋಣ.  ಎಲ್ಲಾ ಧರ್ಮದ ದೇವರ ಆಶಯವೂ ಮನುಷ್ಯ ಪ್ರೀತಿ ಮತ್ತು ಸೌಹಾರ್ದದ ಬದುಕು. ಇದಕ್ಕೆ ತಕ್ಕಂತೆ ನಾವೆಲ್ಲರೂ ಸಹೃದತೆಯಿಂದ ಮನುಷ್ಯ ಧರ್ಮವನ್ನು ಪಾಲಿಸಬೇಕು ಎಂದರು.

ಅಗತ್ಯ ಬಿದ್ದರೆ ಹೆಚ್ಚುವರಿ ಅನುದಾನ

ಹಾಸನಾಂಭ ಜಾತ್ರೆಗೆ ಹೆಚ್ಚುವರಿ ಅನುದಾನವನ್ನು ರಾಜ್ಯ ಬಜೆಟ್ ನಲ್ಲಿ ಘೋಷಿಸುತ್ತೀರಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಜಿಲ್ಲಾಳಿತದ ಜೊತೆ ಚರ್ಚಿಸುತ್ತೇನೆ. ಅಗತ್ಯಬಿದ್ದರೆ ಅನುದಾನ, ಹಣಕಾಸಿನ ನೆರವು ನೀಡಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಶಾಸಕ ಶಿವಲಿಂಗೇಗೌಡರು, ಸಂಸದ ಶ್ರೇಯಸ್ ಪಟೇಲ್, ಹೂಡ ಅಧ್ಯಕ್ಷ ಶಿವಪ್ಪ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by