ಕನ್ನಡ ನಾಡು | Kannada Naadu

ಸೆಂಟ್ ಇಗ್ನೇಷಿಯಸ್ ನರ್ಸಿಂಗ್ ವಿದ್ಯಾರ್ಥಿಗಳಿಂದ ಲಯನ್ಸ್ ಕಣ್ಣಿನ ಆಸ್ಪತ್ರೆ ಭೇಟಿ

25 Sep, 2025

ಕುಮಟಾ: ನಗರದ ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಗೆ ಹೊನ್ನಾವರದ ಸೆಂಟ್ ಇಗ್ನೇಷಿಯಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ನರ್ಸಿಂಗ್ ವಿದ್ಯಾರ್ಥಿಗಳು ಶಿಕ್ಷಣಾತ್ಮಕ ಭೇಟಿಯ ಮೂಲಕ ಹೊಸ ಅನುಭವ ಗಳಿಸಿದರು.

ಪ್ರಿನ್ಸಿಪಾಲ್ ಸಿಸ್ಟರ್ ಡೈಯಾನಾ ಮತ್ತು ಆಡಳಿತಾಧಿಕಾರಿ ಸಿಸ್ಟರ್ ಜ್ಯುಲಿಯಟ್ ಲೊಬೊ ಅವರ ನೇತೃತ್ವದಲ್ಲಿ ನಾಲ್ಕನೇ ಸೆಮಿಸ್ಟರ್‌ನ 59 ನರ್ಸಿಂಗ್ ವಿದ್ಯಾರ್ಥಿಗಳು ಕಳೆದ ಸೆ.23 ಮಂಗಳವಾರ ಮತ್ತು ಸೆ.24 ಬುಧವಾರ ಗಳಂದು ಪ್ರಪ್ರತ್ಯೇಕ ಎರಡು ಬ್ಯಾಚ್‌ಗಳಲ್ಲಿ ಆಸ್ಪತ್ರೆಗೆ ಭೇಟಿ ನೀಡಿದರು. ಅಧ್ಯಾಪಕರಾದ ಶಿವಲಿಂಗ ಸರ್ ಮತ್ತು ಕಾವ್ಯಾ ಮೇಡಂ ವಿದ್ಯಾರ್ಥಿಗಳ ಜೊತೆಗಿದ್ದರು.

ವಿದ್ಯಾರ್ಥಿಗಳು ಕಣ್ಣಿನ ಆಸ್ಪತ್ರೆಯ ದೈನಂದಿನ ಕಾರ್ಯವಿಧಾನಗಳನ್ನು ಸಮೀಪದಿಂದ ಗಮನಿಸಿ, ಆಧುನಿಕ ಯಂತ್ರೋಪಕರಣಗಳ ಬಳಕೆ, ತಪಾಸಣೆ ವಿಧಾನಗಳು ಮತ್ತು ಚಿಕಿತ್ಸಾ ಕ್ರಮಗಳ ಕುರಿತು ವಿವರ ಮಾಹಿತಿ ಪಡೆದರು.ಇದು ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ ವೃದ್ಧಿಗೆ ಪೂರಕವಾಯಿತು.

ನೇತ್ರತಜ್ಞರಾದ ಡಾ. ಮನೋಜ್ ಮತ್ತು ಡಾ. ರಾಜಶೇಖರ್ ಅವರು ಕಣ್ಣಿನ ವಿವಿಧ ರೋಗಗಳು, ಮುಂಜಾಗ್ರತಾ ಕ್ರಮಗಳು ಹಾಗೂ ಆರೈಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾರ್ಗದರ್ಶನ ನೀಡಿದರು. ನೇತ್ರದಾನದ ವಿಧಿ ವಿಧಾನಗಳ ಕುರಿತಾಗಿ ವಿವರಿಸುತ್ತ ಸಮಾಜದಲ್ಲಿ ನೇತ್ರದಾನದ ಜಾಗೃತಿ ಮೂಡಿಸುವ ಅವಶ್ಯಕತೆ ಕುರಿತು ವಿವರಿಸಿದರು. ವಿದ್ಯಾರ್ಥಿಗಳು ನೇತ್ರ ತಜ್ಞ ರ ಬಳಿ ಪ್ರಶ್ನೆಗಳನ್ನು ಕೇಳಿ ಅವರಿಂದ ತೃಪ್ತಿಕರ ಉತ್ತರಗಳನ್ನು ಪಡೆದುಕೊಂಡರು.

ಲಯನ್ಸ್ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಅವರು ಆತ್ಮೀಯವಾಗಿ  ಸ್ವಾಗತಿಸಿ ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಅಗತ್ಯ ಪೂರಕ ವ್ಯವಸ್ಥೆಯ ಸಹಕಾರ ಒದಗಿಸಿದರು.ಆಸ್ಪತ್ರೆಯ ಕಾರ್ಯಚಟುವಟಿಕೆಗಳು ಹಾಗೂ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪೂರಕವಾಗುವ ಈ ಭೇಟಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಆಸ್ಪತ್ರೆಯ ಆಡಳಿತಕ್ಕೆ, ಸೆಂಟ್ ಇಗ್ನೇಷಿಯಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಪರವಾಗಿ ಪ್ರಿನ್ಸಿಪಾಲ್ ಸಿಸ್ಟರ್ ಡೈಯಾನಾ ಸಂತಸ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by