ಕನ್ನಡ ನಾಡು | Kannada Naadu

ಅಸಮರ್ಪಕ ಜಾತಿ ಜನಗಣತಿ ವಿರುದ್ಧ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಕ್ರೋಶ

20 Sep, 2025

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜಾತಿ ಜನಗಣತಿ ವರದಿ ಅಸಮರ್ಪಕವಾಗಿದ್ದು, ಬ್ರಾಹ್ಮಣ ಸಮುದಾಯ ಸೇರಿದಂತೆ ಹಲವು ವರ್ಗಗಳ ಅಂಕಿ–ಅಂಶಗಳನ್ನು ಸರಿಯಾಗಿ ಪ್ರತಿಬಿಂಬಿಸುತ್ತಿಲ್ಲ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಸಮೀಕ್ಷೆಯು ಅವೈಜ್ಞಾನಿಕ ಮತ್ತು ಅಸಮರ್ಪಕವಾಗಿದೆ ಎಂದು ಆರೋಪಿಸಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (AKBMS) ಅಧ್ಯಕ್ಷ ರಘುನಾಥ್ ಅವರು ನಗರದ ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾ ಗೋಷ್ಟಿ ನಡೆಸಿದರು.

ಸಮೀಕ್ಷೆಯ ಆಕ್ಷೇಪಣೆಗೆ ಕಾರಣಗಳು:  ಜಾತಿ ಆಧಾರಿತ ಸಮೀಕ್ಷೆ: 1995ರ ಹಿಂದುಳಿದ ವರ್ಗಗಳ ಕಾಯ್ದೆ ಪ್ರಕಾರ, ಸಮೀಕ್ಷೆಯನ್ನು ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಆಧಾರದ ಮೇಲೆ ನಡೆಸಬೇಕು. ಆದರೆ, ಸರ್ಕಾರವು ಕಾನೂನಿಗೆ ವಿರುದ್ಧವಾಗಿ ಜಾತಿ ಆಧಾರದ ಮೇಲೆ ಸಮೀಕ್ಷೆ ನಡೆಸಲು ಹೊರಟಿದೆ ಎಂದು ಅವರು ಆರೋಪಿಸಿದರು.

ಜಾತಿಗಳ ಪಟ್ಟಿಯಲ್ಲಿ ಗೊಂದಲ: ಪ್ರಾರಂಭದಲ್ಲಿ 1,400 ಜಾತಿಗಳು ಮತ್ತು ಉಪಜಾತಿಗಳನ್ನು ಸೇರಿಸಲಾಗುವುದು ಎಂದು ಹೇಳಲಾಗಿದ್ದರೂ, ಈಗಿನ ಕೈಪಿಡಿಯಲ್ಲಿ 1,561 ಜಾತಿಗಳನ್ನು "ಮುಖ್ಯ ಜಾತಿ"ಗಳೆಂದು ಸೂಚಿಸಲಾಗಿದೆ. ಅಲ್ಲದೆ, "ಬ್ರಾಹ್ಮಣ ಕ್ರಿಶ್ಚಿಯನ್" ಮತ್ತು "ವ್ಯಾಸ ಬ್ರಾಹ್ಮಣ ಕ್ರಿಶ್ಚಿಯನ್" ನಂತಹ ಹೊಸ ವಿಭಾಗಗಳನ್ನು ಸೃಷ್ಟಿಸಿರುವುದರ ಬಗ್ಗೆ ಸಮುದಾಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಸಮೀಕ್ಷಾ ಪ್ರಕ್ರಿಯೆಯಲ್ಲಿನ ಲೋಪಗಳು: ಆರಂಭದಲ್ಲಿ ಮತದಾರರ ಪಟ್ಟಿಗಳ ಆಧಾರದ ಮೇಲೆ ಸಮೀಕ್ಷೆ ನಡೆಸಲು ಆದೇಶಿಸಲಾಗಿತ್ತು. ಆದರೆ, ಆಗಸ್ಟ್‌ 22ರ ಹೊಸ ಆದೇಶದಲ್ಲಿ ವಿದ್ಯುತ್ ಮೀಟರ್ ಪಟ್ಟಿಗಳನ್ನು ಆಧಾರವಾಗಿ ಬಳಸಲು ನಿರ್ಧರಿಸಲಾಗಿದೆ. ಒಟ್ಟು 60 ಪ್ರಶ್ನೆಗಳಿರುವ ಸಮೀಕ್ಷೆಯನ್ನು ಕೇವಲ 15 ದಿನಗಳಲ್ಲಿ ಪೂರ್ಣಗೊಳಿಸುವುದು ಅಸಾಧ್ಯ. ಅದೇ ವೇಳೆ, ನವರಾತ್ರಿ ಹಬ್ಬದ ಸಮಯದಲ್ಲಿ ಅನೇಕ ಕುಟುಂಬಗಳು ಮನೆಯಲ್ಲಿ ಇರುವುದಿಲ್ಲ, ಇದರಿಂದ ಸಮೀಕ್ಷೆಯ ನಿಖರತೆ ಕುಂಠಿತವಾಗಲಿದೆ ಎಂದು ಅವರು ವಾದಿಸಿದರು.

ನ್ಯಾಯ ಮತ್ತು ಸಮಾನತೆಗಾಗಿ ನಿಖರ ಜನಗಣತಿ ಅಗತ್ಯ:
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರಘುನಾಥ್ ಅವರು, “ಜನಗಣತಿ ಪ್ರಕ್ರಿಯೆಯಲ್ಲಿ ಅಸ್ಪಷ್ಟತೆ ಮತ್ತು ದೋಷಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಸಮುದಾಯದ ನಿಜವಾದ ಸಂಖ್ಯೆ, ಸಾಮಾಜಿಕ-ಆರ್ಥಿಕ ಸ್ಥಿತಿ, ಶಿಕ್ಷಣ ಮತ್ತು ಉದ್ಯೋಗದ ಹಿನ್ನಲೆ ಯಾವುದೇ ಅಂಶಗಳು ನಿಖರವಾಗಿ ದಾಖಲಿಸಲ್ಪಟ್ಟಿಲ್ಲ. ಇದು ಭವಿಷ್ಯದಲ್ಲಿ ನೀತಿ ರೂಪಿಸುವ ಸಂದರ್ಭದಲ್ಲಿ ದೊಡ್ಡ ಅನ್ಯಾಯಕ್ಕೆ ಕಾರಣವಾಗಬಹುದು” ಎಂದು ಎಚ್ಚರಿಸಿದರು.

ಬ್ರಾಹ್ಮಣ ಸಮುದಾಯದ ಹಿತಾಸಕ್ತಿಗೆ ನಿಖರ ಜನಗಣತಿ ಅಗತ್ಯವೆಂದು ಒತ್ತಿಹೇಳಿದ ಅವರು, “ನ್ಯಾಯ, ಸಮಾನ ಹಕ್ಕು ಮತ್ತು ಸಮಾಜದ ಸಮಗ್ರ ಅಭಿವೃದ್ಧಿ ಕೇವಲ ನಿಖರ ಅಂಕಿ–ಅಂಶಗಳಿಂದಲೇ ಸಾಧ್ಯ” ಎಂದರು. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕು, ಜನಗಣತಿ ಪ್ರಕ್ರಿಯೆಯನ್ನು ಮರು ಪರಿಶೀಲಿಸಬೇಕು ಮತ್ತು ಸಮುದಾಯ ಪ್ರತಿನಿಧಿಗಳನ್ನು ಭಾಗಿಯಾಗಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಹಾಸಭೆಯ ಹಿರಿಯರು ಹಾಗೂ ಅನೇಕ ಕಾರ್ಯಕರ್ತರು ಹಾಜರಿದ್ದರು. ಜೊತೆಗೆ, ಈ ವಿಷಯವಾಗಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿರುವುದಾಗಿ ಅವರು ಮಾಹಿತಿ ನೀಡಿದರು.

 

ಹನುಮೇಶ್‌ ಯಾವಗಲ್‌
9844030946

Publisher: ಕನ್ನಡ ನಾಡು | Kannada Naadu

Login to Give your comment
Powered by