ಕನ್ನಡ ನಾಡು | Kannada Naadu

ಕಲಾ ಪ್ರಪಂಚದ ಅಳಿಸಲಾಗದ ಛಾಪು: ಕಣ್ಮರೆಯಾದರೂ ಕಣ್ಮುಂದೆ ಇರುವ ಕಲಾ ನಕ್ಷತ್ರ ಶಿವಾನಂದ ಮ್ಹಾಳ್ಸೇಕರ

02 Sep, 2025

ಪಶ್ಚಿಮ ಘಟ್ಟಗಳ ಮಡಿಲಿನ ಅರಬ್ಬಿ ಸಮುದ್ರದ ತೀರದಲ್ಲಿ ನೆಲೆಸಿರುವ ಕಾರವಾರ ತಾಲೂಕಿನಲ್ಲಿರು ಬಿಣಗಾ, ಕಲೆ ಮತ್ತು ಸಂಸ್ಕೃತಿಯಿಂದ ಸಮೃದ್ಧವಾಗಿರುವುದರೊಂದಿಗೆ, ಪಾರಂಪರಿಕ ಕಲೆಗಳಿಗೆ ಹೆಸರಾದಪುಟ್ಟ ಗ್ರಾಮ. ಇಲ್ಲಿನ ಶ್ರೀ ಮ್ಹಾಳಸಾ ನಾರಾಯಣಿ ದೇವಿ ದೇವಾಲಯದ ಸುತ್ತಮುತ್ತಲ ಪ್ರದೇಶ, ಕಲೆಗೆ ಜೀವ ತುಂಬಿರುವ ಕಲಾವಿದರಿಂದ ತುಂಬಿದೆ. ಇಲ್ಲಿನ ಜನಪದ ಕಲೆಗಳಾದ ಯಕ್ಷಗಾನ, ನಾಟಕ, ಮತ್ತು ಇತರ ರಂಗ ಕಲೆಗಳು ಇಲ್ಲಿನ ಕಲಾವಿದರ ಶ್ರಮ ಮತ್ತು ಪ್ರೀತಿಯಿಂದ ಇಂದಿಗೂ ಜೀವಂತವಾಗಿವೆ. ಇಂತಹ ಕಲಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಬಿಣಗಾದ ಕಲಾವಿದರ ಕೊಡುಗೆ ಅಪಾರ.
 ಅವರಲ್ಲಿ ತಮ್ಮ ಜೀವನವನ್ನೇ ಕಲೆಗೆ ಅರ್ಪಿಸಿಕೊಂಡ ಅಪರೂಪದ ವ್ಯಕ್ತಿ ದಿ. ಶಿವಾನಂದ ವಾಸು ಮ್ಹಾಳ್ಸೇಕರ. ಬಡತನದಲ್ಲೂ ಕಲೆಯ ಮೇಲಿನ ಪ್ರೀತಿಯಿಂದ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಈ ಮಹಾನ್ ಕಲಾವಿದರ ಜೀವನ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ಯಕ್ಷಗಾನ ಮತ್ತು ನಾಟಕಗಳಲ್ಲಿ ಶಿವಾನಂದರ ಕಲಾ ಪ್ರಯಾಣ

1935ರಲ್ಲಿ ಬಿಣಗಾದ ಬಡ ಕುಟುಂಬದಲ್ಲಿ ಜನಿಸಿದ ಶಿವಾನಂದರು, ಯಕ್ಷಗಾನದಲ್ಲಿ ನುರಿತ ಕಲಾವಿದರಾಗಿ ಬೆಳೆದರು. ಯಕ್ಷಗಾನದ ಯಾವುದೇ ಪಾತ್ರವಿರಲಿ - ಚಾರಕನಿಂದ ಪುಂಡ ವೇಷದವರೆಗೆ, ಸ್ತ್ರೀ ವೇಷ ದಿಂದ ಪ್ರಧಾನ ವೇಷದವರೆಗೆ ಮಿಂಚಿದ್ದವರು. ರಂಗದಮೇಲೆ ಸೇವಕ, ಮಂತ್ರಿ, ರಾಜ, ಋಷಿ, ನಾರದ, ರಾಕ್ಷಸ ಅಥವಾ ದೇವತೆ ಇತ್ಯಾದಿ ಪಾತ್ರಗಳಿಗೆ ಜೀವ ತುಂಬುವುದಕ್ಕೆಂದು ತಮ್ಮ ಹಾವಭಾವ, ಅಭಿನಯ ಮತ್ತು ನೃತ್ಯ ಕೌಶಲ್ಯದಿಂದ ಜೀವಂತಗೊಳಿಸುತ್ತಿದ್ದರು. ಅವರ ನೈಜ ಅಭಿನಯ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಿತ್ತು. ವಾಸ್ತವದಲ್ಲಿ ಅಂದಿನ ಕಾಲದಲ್ಲಿ  ಶಿವಾನಂದ ಮಾಳ್ಸೇಕರ ಅವರಲ್ಲಿ ಇರುವ ಕಲಾವಂತಿಕೆಗೆ ತಕ್ಕ ಮನ್ನಣೆ ಸಿಗದೇ ಇರುವುದು ಒಂದು ರೀತಿಯ ವಿಚಿತ್ರವೇ ಎನ್ನಬಹುದು. ಯಾವುದೇ ಪ್ರಚಾರದ ಆಸೆಗೆ ಬಿಳದ ಅವರು ಕಲೆಯನ್ನು ಜೀವಕ್ಕಿಂತವಾಗಿರಿಸುವುದು ಕಲಾವಿದನ ಕರ್ತವ್ಯ ಎನ್ನುವುದನ್ನ ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅದರ ಪರಿಣಾಮ ಕಾರವಾರ ಅಂಕೋಲಾ ಭಾಗದ ಕರಾ ರಸಿಕರ ಮನಸಿನಲ್ಲಿ ಮನೆ ಮಾಡಿಬಿಟ್ಟಿದ್ದರು.

ಯಕ್ಷಗಾನದಷ್ಟೇ ಸಿಮಿತವಾಗಿರದ ಶಿವಾನಂದರು, ನಾಟಕ ರಂಗದಲ್ಲೂ ಮಿಂಚಿದ್ದರು. 1953ರಲ್ಲಿ ಆರಂಭವಾದ ಶ್ರೀ ಮ್ಹಾಳಸಾ ನಾಟ್ಯ ಕಲಾವೃಂದದ ಕೀರ್ತಿ ಪತಾಕೆ ಎತ್ತರದಲ್ಲಿ ಹಾರಲು ಅವರು ಪ್ರಮುಖ ಕಾರಣಕರ್ತರು. "ಕಿತ್ತೂರು ಕೇಸರಿ" ನಾಟಕದಲ್ಲಿ ರಾಣಿ ಚೆನ್ನಮ್ಮನ ಪಾತ್ರವನ್ನು ಅಮೋಘವಾಗಿ ನಿರ್ವಹಿಸಿ, ನಾಟ್ಯ ಕಲಾವೃಂದಕ್ಕೆ ರಾಜ್ಯ ಸರ್ಕಾರದ ಪ್ರಶಸ್ತಿ ತಂದುಕೊಟ್ಟರು. ತಮ್ಮ ಸಮಕಾಲೀನರ ಜೊತೆಗೆ, ಯುವ ಪೀಳಿಗೆಗೆ ಕಲೆಯ ಪಾಠ ಹೇಳಿಕೊಟ್ಟು, ನಾಟ್ಯ ಕಲಾವೃಂದಕ್ಕೆ ಹೊಸ ಕಲಾವಿದರನ್ನು ಸೇರಿಸಿದರು.

ಬಹುವಿಧದ ಕಲೆಗೆ ತಮ್ಮನ್ನು ಅರ್ಪಿಸಿದ ಕಲಾವಿದರು

ಯಕ್ಷಗಾನ ಮತ್ತು ನಾಟಕಗಳ ಜೊತೆಗೆ, ಶಿವಾನಂದರು ಬಿಣಗಾದ ಸಾಂಪ್ರದಾಯಿಕ ಕಲೆಗಳಾದ ಗುಮಟೆ ಪಾಂಗ, ಭಜನೆ, ಸುಗ್ಗಿ, ಕೋಲಾಟ, ಮತ್ತು ಜಾನಪದ ಗೀತೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಜೀವನದ ಕೊನೆಯವರೆಗೂ ಕಲೆಯ ಸೇವೆಯನ್ನು ಮುಂದುವರೆಸಿದರು. 2017ರಲ್ಲಿ ಅವರು ಈ ಕಲಾಜಗತ್ತನ್ನು ಬಿಟ್ಟು ನಮ್ಮಿಂದ ದೂರವಾದರು.. ಶಿವಾನಂದರಂತಹ ಕಲಾತಪಸ್ವಿಗಳ ಪ್ರೇರಣೆಯಿಂದ ಇಂದಿಗೂ ಬಿಣಗಾದ ಯುವ ಕಲಾವಿದರು ತಮ್ಮ ಸಾಂಪ್ರದಾಯಿಕ ಕಲಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಶಿವಾನಂದ ವಾಸು ಮ್ಹಾಳ್ಸೇಕರ ಅವರು ಬಿಣಗಾ ಕಲಾ ಜಗತ್ತಿನ ಅಮೂಲ್ಯ ರತ್ನ.

ಲೇಖಕರು:

ಶ್ರೀ ವಿನೋದ ಸುರೇಶ ಮ್ಹಾಳ್ಸೇಕರ
ಅಧ್ಯಕ್ಷರು, ಶ್ರೀ ಮ್ಹಾಳಸಾ ನಾಟ್ಯ ಕಲಾವೃಂದ (ರಿ.) ಬಿಣಗಾ,
ದೂ: 9986362027

Publisher: ಕನ್ನಡ ನಾಡು | Kannada Naadu

Login to Give your comment
Powered by