ಅವ್ವೆ ಹೇಳಿದ್ದು - 50
ಅವರನ್ನು ಕಂಡು ನನಗೆ ಪರಮಾಶ್ಚರ್ಯ! ಅವ್ವೆಯ ಅಂಗಳದಲ್ಲಿ ಅವರನ್ನು ಎಂದಿಗೂ ನಾನು ಕಂಡವನಲ್ಲ. ಹಿಂದೊಮ್ಮೆ ಮಂಗಳೂರು ಸುತ್ತಮುತ್ತ ಕಂಡಿದ್ದ ನೆನಪು. ನಮ್ಮ ಭಾಗದಲ್ಲಂತೂ ಕಂಡಿದ್ದೇ ಇಲ್ಲ! ಅದಕ್ಕೆ ಒಮ್ಮೆ ಗೊಂದಲಗೊಂಡು ಅವ್ವೆಯಲ್ಲಿಯೇ ಉತ್ತರ ಕೇಳಿದರಾಯ್ತು ಎಂದು ಓಡಿದೆ.
ಎಲ್ಲವನ್ನೂ ಬಲ್ಲವಳಾದ ಅವ್ವೆ ಎಂದಿನಂತೆ ಕಡಲಿಗೆ ಮುಖಮಾಡಿ ಧ್ಯಾನಾಸಕ್ತಳಾಗಿ ಕುಳಿತಿದ್ದಳು. "ಅವ್ವೆ..." ಎಂದಾಗ ಮಮತೆಯ ದೃಷ್ಟಿಯಿಂದ ಮೌನದಲ್ಲಿಯೇ ಸ್ವಾಗತಿಸಿದಳು. ಸುತ್ತಿ ಬಳಸದೆ ನಾನು "ಇಂದೆ ನಾ ಒಂದ ಇಸೆಸಾ ಕಂಡೆ.. ನಂಗೆ ಅದು ಅಜಾಬ್ ಅನಿಸ್ತು..!" ಎಂದು ಪ್ರಶ್ನೆ ಮಾಡಿದೆ. ಅದೇ ಮೌನದಲ್ಲಿ ಏನು ಎಂದು ಸನ್ನೆಯಲ್ಲಿಯೇ ಕೇಳಿದ್ದಳು. "ಇಂದೆ ನಮ್ಮಬದಿಗೆ ಈ 'ಚಿಕ್ಕಮೇಳಾ' ಕಂಡೆ" ಎಂದಾಗ.. "ಅಂದ್ರೆ.. ನಿಂಗೆ 'ಸಂಡಳ್ಳಿ ದೇವರಾಜ ಅಂಬಿಗ' ಮತ್ತು ಅವನ ಮೇಳದವರು ಸಿಕ್ಕಿದ್ರಾ..?" ಎಂದಳು.
"ಹೌದೆ.. ಈ ಮಳೆಗಾಲದಾಗೆ ಹಿಮ್ಮೇಳದ ಆವಾಜ್ ಕೆಳುಕು, ಎಲ್ಲೊ ತಾಳಮದ್ದಳಿ ನಡಿತೆ ಇದಯಾರ್ಬಲಾ ಅಂದ್ಕಂಡೆ. ಮುಂದೆ ಹೋಗಿ ನೋಡ್ತೆ ಮನಿಯೊಳಗೆ ಪ್ರಾಸಂಗ ನಡಿತೇ ಇತ್ತು." ಎಂದು ನಾನು ಕಂಡಿದ್ದನ್ನು ಅವ್ವೆಗೆ ತಿಳಿಸಿದೆ. ನನ್ನ ಗೊಂದಲ ದೂರಮಾಡಿದ ಅವ್ವೆ "ನೀನು ನೋಡಿದ್ದು ಖರೆ ʻಚಿಕ್ಕಮೇಳಾನೆʼಯಾ.. ಅವರಿಗೆ ʻಹೊವಿನಕೊಳʼದವರು ಅಂತಾನೂ ಹೇಳ್ತ್ರು. ನಮ್ಮ ಜಿಲ್ಲೆಲಿ ಇದು ಹಿಂದೆಲ್ಲಾ ಇತ್ತು. ಆದರೆ ಕಡಿಗೆ ಕಡಿಗೆ ನಾಪತ್ತೆಯಾಗಿತ್ತು. ಹಂಗಾಗೇ ಎಲ್ಲಾರೂ ಮರ್ತೆ ಬಿಟ್ಟಿದ್ರು." ಎಂದಳು.
ಒಂದು ಅಂದಾಜಿನ ಪ್ರಕಾರ ಸುಮಾರು 120 ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಈ ಚಿಕ್ಕಮೇಳದವರು ಕಂಡುಬರುತ್ತಿದ್ದರಂತೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಊರ-ಕೇರಿಯ ಮನೆಗಳಿಗೆ ತೆರಳಿ ಸಣ್ಣ ಪ್ರಮಾಣದ ಯಕ್ಷಗಾನ ಪ್ರದರ್ಶನ ಮಾಡುವುದೇ ಇವರ ಮೂಲ ಉದ್ದೇಶವಾಗಿತ್ತು. ಒಂದು ಕಡೆಯಿಂದ ಮನರಂಜನೆಯೇ ಆಗಿದ್ದರೂ ದೈವಾರಾಧನೆ ಮತ್ತು ಕಲಾರಾಧನೆಗೆ ಒತ್ತು ನೀಡುವ ನಿಟ್ಟಿನಲ್ಲಿ ತನ್ನದೇ ಪಾತ್ರವನ್ನು ಈ ತಂಡಗಳು ವಹಿಸುತ್ತಿದ್ದವು. ವಾಸ್ತವದಲ್ಲಿ ಚಿಕ್ಕಮೇಳ ಎಂದರೆ ಯಕ್ಷಗಾನದ ಒಂದು ಪ್ರಕಾರವೇ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಕಂಡುಬರುವ ಇವರನ್ನು 'ಹೊವಿನಕೊಳ', 'ಗಜ್ಜೆನಾದ ಸೇವೆಯವರು' ಎಂದೆಲ್ಲಾ ಕರೆಯುವುದುಂಟು. ಕಳೆದ ಮೂರು-ನಾಲ್ಕು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಭಾಗದಲ್ಲಿ ಮಾಸಿಹೋಗಿದ್ದ ಈ ಪರಂಪರೆ ಮತ್ತೆ ಹುಟ್ಟಿಕೊಂಡಿದೆ. ಮನೆಮನೆಗೆ ತೆರಳಿ ಯಕ್ಷ ಪ್ರದರ್ಶನ ನೀಡುವ ಸಣ್ಣ ತಂಡವನ್ನು ಕುಮಟಾ ತಾಲೂಕಿನ ಯಾಣ ಸಮೀಪದ ಸೊಂಡೆಳ್ಳಿಯ ದೇವರಾಜ್ ಅಂಬಿಗ ಅವರು ಕಟ್ಟಿಕೊಂಡಿದ್ದಾರೆ. ಅವರ ಈ ಪ್ರಯತ್ನವು ಶತಮಾನಗಳ ಹಿಂದೆಯೇ ಮಾಯವಾಗಿದ್ದ ಪರಂಪರೆಯನ್ನು ಮತ್ತೆ ಜೀವಂತಗೊಳಿಸಿದೆ ಎಂದು ಅಭಿಮಾನದಿಂದಲೇ ಅವ್ವೆ ಮಾಹಿತಿ ನೀಡಿದಳು.
"ಈ ತಂಡದಾಗೆ ಎಷ್ಟು ಮಂದಿ ಇರ್ತಿರು..? ಯಾವದೆಲ್ಲಾ ಆಟಾ ಮಾಡ್ತಿರು..?" ಎಂಬ ನನ್ನ ಪ್ರಶ್ನೆಗೆ ಉತ್ತರಿಸಿದ ಅವ್ವೆ "ಐದ್ರಿಂತೆ ಆರ ಮಂದಿ ಇರ್ತಿರು. ದೇವರಾಜ್‌ನ ತಂಡದಾಗೆ ನಂಗೆ ಕಬ್ರಿದ್ದಹಂಗೆ ಭಾಗ್ವತಿಗಿಗೆ ಸರಳಗಿ ಅಶೋಕ, ಮಂಜು ಬಂಡಾರಿ ಮದ್ಲಗೆ, ಚಂಡೆಗೆ ಗುಣವಂತೆ ಸುಬ್ಬಇವ್ರು. ಕಲಾವಿದ್ರಾಗಿ ಶೆಡ್ಡಿಗದ್ದೆ ಕಮಲಾಕರ, ಸಂಡಳ್ಳಿ ದೇವರಾಜ ಇಬಿರು" ಎಂದಳು.
ಮನೆಯಲ್ಲಿ ತಾಳ ನುಡಿಬೇಕು, ಮೃದಂಗ ನಲಿಬೇಕು, ಚಂಡೆ ಆರ್ಭಟಿಸಬೇಕು, ಗೆಜ್ಜೆ ಕುಣಿಯಬೇಕು, ಮನೆತುಂಬಾ ಬೆಳಕಾಗಬೇಕು, ಮನೆಮಂದಿ ಕುಳಿತು ನೋಡಬೇಕು, ಅದ್ರಿಂದ ಮನಿಲಿದ್ದ ದರಿದ್ರ ನಾಶವಾಗಬೇಕು.. ಎಂಬ ನಂಬಿಕೆಯಿದೆ ಎಂದು ವಿವರಿಸಿದ ಅವ್ವೆ, "ಚಿಕ್ಕ ಮೇಳ ಅಂಬುದು ರಾಶಿ ಹಿಂದಿದಾರ್ಬೆ ಚಾಲ್ತಿಲ್ಲಿದ್ದ ಸಾಂಸ್ಕೃತಿಕ ಕಾರ್ಯಕ್ರಮ. ಚಿಕ್ಕಮೇಳದಾಗೆ ಇದ್ದ ಕಲಾವಿದರು ಸಣ್ಣ ಸಣ್ಣ ಪ್ರಯತ್ನ ಮಾಡ್ತೆ ಮಾಡ್ತೆ ದೊಡ್ಡ ಕಲಾವಿದರಾತೇರು. ಆ ಕಾಲದಾಗೇ ಅವರು ಸಾಕಷ್ಟು ಪಟ್ಟು ಕಲಿತೇರು. ಸ್ಪಷ್ಟ ಹೆಜ್ಜೆ, ಶುದ್ಧ ಮಾತು ಕಲ್ತಕಂಡೆ ಪ್ರಾಸಂಗದ ಮ್ಯಾನೆ ಹಿಡ್ತಾನೂ ಸಾದಿಸ್ತಿರು. ಎಲ್ಲಾದ್ರಿಕಿಂತಾ ದೊಡ್ಡದು ಅಂದ್ರೆ ಹೂವಿನಕೊಳ ಅಂಬು ಚಿಕ್ಕಮೇಳ ಪ್ರದರ್ಶನದಿಂದೆ ಆ ಮನೆಯ ಕೇಡೆಲ್ಲಾ ದೂರಾಗಿ ಮನಿನಾಗೆ ಶಾಂತಿ ನೆಲಿಸಿ ಗನಾತಿದು... ಅದ್ರಾಗು ಈ ಆಟಾ ಕುಣುಮಂದಿಗೆ ಈ ಟೈಮ್‌ನಾಗೆ ಅಷ್ಟಾಗಿ ದುಡಿಮಿನೂ ಇರುವುದಿಲ್ಲ. ಇದ್ರಿಂತೆ ಕಲಿತೇ ಕಲಿತೇ ಜೀವನಾ ನಡ್ಸೂಕಾತಿದು" ಎಂದು ಸೈದ್ಧಾಂತಿಕ ಉತ್ತರವನ್ನು ಅವ್ವೆ ನೀಡಿದಳು.
ಅಸಲಿಗೆ ಕೆಲವು ಯಕ್ಷಗಾನ ಕಲಾವಿದರು ಸೇರಿ ಮಳೆಗಾಲದ ಸಂದರ್ಭಕ್ಕಾಗಿಯೇ ಈ ಚಿಕ್ಕಮೇಳ ಕಟ್ಟಿಕೊಳ್ಳುತ್ತಾರೆ. ಆ ಮೂಲಕ ಮನೆಮನೆಗೆ ಹೋಗಿ ಯಕ್ಷಗಾನದ ಸಣ್ಣ ಪ್ರಸಂಗಗಳನ್ನು ಮಾಡ್ತಾರೆ. ಈ ತಂಡದಲ್ಲಿ ಇಬ್ಬರೇ ವೇಷಧಾರಿಗಳು, ಹಾಗೂ ಒಂದು ಹಿಮ್ಮೇಳದ ಜೊತೆ ಒಬ್ಬ ವ್ಯವಸ್ಥಾಪಕ ಇರ್ತಾರೆ. ಇವರು ಒಂದೆರಡು ದಿನ ಮುಂಚಿತವಾಗಿ ಆಯಾ ಊರಿಗೆ ಬಂದು ಮನೆಯವರಿಗೆ ಮಾಹಿತಿ ನೀಡುತ್ತಾರೆ. ಮಾಹಿತಿ ಪಡೆದ ಮನೆಯವರು ಇವರನ್ನು ಕರೆಸಿಕೊಳ್ಳುತ್ತಾರೆ. ಅಕ್ಕಿ, ಕಾಯಿ, ಹಣ್ಣು, ತಾಂಬೂಲದ ಜೊತೆ ಪೂಜೆಗಾಗಿ ಕಡ್ಡಿ, ಕರ್ಪೂರ, ದೀಪದೊಂದಿಗೆ ಯಥಾನುಶಕ್ತಿ ದಕ್ಷಿಣೆಯನ್ನು ಮನೆಯವರಿಂದ ಇವರು ಬಯಸುತ್ತಾರೆ. ಈ ಕಲಾವಿದರು ಇಂತಿಷ್ಟೆ ಹಣ ಬೇಕೆಂದು ಪಟ್ಟು ಹಿಡಿಯೋದಿಲ್ಲ. ಕಾರಣ ಇವರು ಸಂಭಾವನೆ ಬಯಸುವವರಲ್ಲ. ಆದರೂ ಚಿಕ್ಕಮೇಳದ ಮೂಲಕ ಮನೆಮನೆಗೆ ತೆರಳಿ ಗೆಜ್ಜೆಸೇವೆ ಮಾಡಿ ಮಳೆಗಾಲದಲ್ಲಿ ಯಕ್ಷಗಾನ ಪರಂಪರೆಯನ್ನು ಹಸಿರಾಗಿರಿಸುವುದರೊಂದಿಗೆ ತಮ್ಮ ಬದುಕಿನ ನಿರ್ವಹಣೆಯನ್ನು ಮಾಡಿಕೊಳ್ಳುವ ಸ್ವಾಭಿಮಾನಿಗಳು. ಸಂಜೆ 6 ರಿಂದ ರಾತ್ರಿ 10ರ ವರೆಗೆ ಸರಿ ಸುಮಾರು ಹತ್ತಾರು ಮನೆಗಳಿಗೆ ತೆರಳಿ, ನಡುಮನೆಯಲ್ಲೋ, ಚಾವಡಿಯಲ್ಲೋ ಈ ಯಕ್ಷಗಾನ ಸೇವೆ ನೀಡುತ್ತಾರೆ. ಕಡ್ಡಾಯವಾಗಿ ಪೌರಾಣಿಕ ಪ್ರಸಂಗಗಳನ್ನೇ ಆಯ್ದುಕೊಳ್ಳುವ ಇವರು, ಪ್ರತಿ ಮನೆಯಲ್ಲಿ ಗಣಪತಿ ಪೂಜೆಯಿಂದ ಆರಂಭಿಸಿ, ಪ್ರಸಂಗದ ಒಂದೆರಡು ಸನ್ನಿವೇಶಗಳನ್ನು ಪ್ರದರ್ಶಿಸಿದ ನಂತರ ಮನೆಯಲ್ಲಿ ಮಂಗಳಾರತಿ ಮಾಡಿ ಮನೆಯವರಿಗೆಲ್ಲಾ ಹರಸಿ ಪ್ರಸಾದ ನೀಡುವ ಮೂಲಕ ಈ ಗೆಜ್ಜೆಸೇವೆ ಸಂಪನ್ನಗೊಳಿಸುತ್ತಾರೆ.
"ನಾನೊಂದು ಕುತೂಹಲಕ್ಕೆ ಪ್ರಶ್ನೆ ಕೇಳ್ತೆ ಅವ್ವೆ.. ಏಕಾಏಕಿ ನಮ್ಮ ಜಿಲ್ಲಾದಾಗೆ ಈ ಪದ್ಧತಿ ಯಾಕೆ ನಿಂತು ಹೋಯ್ತೆ..?" ಎಂದಾಗ "ಪೋರ್ನೆ ಈ ಪದ್ಧತಿ ಅಂಬುದು ಇದು ನೋಡು... ಅದು ನಡಿತೇ ಇದ್ರೆ ಉಳಿತಿದು. ಇಲ್ಲಾ ಅಂದ್ರೆ ನಾಪತ್ತೆ ಆತಿದು. ನಮ್ಮ ಈ ನೆಲದಾಗೆ ಇತ್ತೀಚಿಗೆ ಈ ಚಿಕ್ಕಮೇಳದಂಗೆ ರಾಶಿ ಪದ್ಧತಿ ನಾಪತೆ ಆತೇ ಇದು. ಹಿಂದೆ ಚೌತಿಲ್ಲಿ ಮಾಂಡ, ಫುಗಡಿ, ಚೌಪಾಡಿ ಇರ್ತಿತ್ತು. ಸಂಗ್ತಿಗೆ ಗುಮ್ಮಂಟೆ ಫಾಂಗು..ಹರ್ಗಣ, ದಾಲುಮಾಂಡ, ಭಜನ ಸಪ್ತಾಹ ಹಿಂಗೆ ಬಹುತೇಕ ಎಲ್ಲಾ ನಾಪತ್ತೆ ಆಗೇ ಬಿಟ್ಟಿದು. ಗದ್ದೆಕೆಲಸಾ ಮುಗಿದಮ್ಯಾನೆ ಸಾಬಾರ್ ಮಾಡ್ತಿದ್ರು.. ಈಗೆಲ್ಲಾ ಗದ್ದೆನೇ ಮಾಡುದಿಲ್ಲಾ ಮತ್ತ ಸಾಬಾರ್ ಎಲ್ಲಿಂತೆ ಬಂತು..? ಸಂತಿಗೆ ಮನಿ ಮನಿ ಹೋಗಿ ಆಟಾ ಕುಣುದು ಅಂದ್ರೆ ಮಂದಿಗೆ ಸಣ್ಣತನಾನೂ ಕಾಂಬುಕೆ ತಾಗಿತ್ತು. ಆಗೆಲ್ಲಾ ಆಟದವ್ರು ಅಂದ್ರೆ ಬ್ಯಾರೆ ನಮೂನಿನಾಗೆ ನೋಡ್ತಿದ್ರು. ಇಂದೆ ಇದ್ದಷ್ಟು ಗೌರವಾ ಆಗೆಲ್ಲಾ ಇಲ್ಲಾ ಆಗಿತ್ತು.. ಎಷ್ಟೇ ಆದ್ರೂ ಆಟದವ್ರು ಅಂತಿದ್ರು.. ಅದೇ ಬ್ಯಾಜಾರಕ್ಕೆ ಎಷ್ಟೆಲ್ಲಾ ಪದ್ಧತಿ ನಿಂತೇ ಹೋಗಿದು.." ಎಂಬ ವಿಷಾದ ಹೊರಹಾಕಿದಳು.
"ಇವರದೆಲ್ಲಾ ಇತಿಹಾಸ ಎಂಥಾದ್ದೆ..?" ಎಂದು ಅವ್ವೆಯಲ್ಲಿ ಪ್ರಶ್ನೆ ಮಾಡಿದೆ. ಹತ್ತಾರು ಮನೆಗಳಿಗೆ ತೆರಳಿ, ನಡುಮನೆಯಲ್ಲೋ, ಚಾವಡಿಯಲ್ಲೋ ಈ ಯಕ್ಷಗಾನ
"ಝಗಮಗ ಅಂಬು ಬೆಳಕಿಲ್ಲ. ಅದಕ್ಕೇ ಅಂಬು ರಂಗಸ್ಥಳ ಇಲ್ಲ. ಚೌಕಿ ಅಂತೂ ಇಲ್ಲವೇ ಇಲ್ಲ. ಆದ್ರೂ ಮನೆ ಮನೆಲಿ ಆಟಾ ಮಾಡ್ತಿರು, ಅಂಥವರೇ ಈ ಚಿಕ್ಕಮೇಳದವರು. ಇವರು ಗಜಮೇಳದಹಂಗೆ ದುಡ್ಡು ಕಾಸು ಕೇಳುದಿಲ್ಲ. ಸಾರಿಗೆ ಸೌಲತ್ತು ಬೇಕಂಬುದಿಲ್ಲ. ವಸತಿ, ಕ್ಯಾಂಪು, ಟ್ಯಾಂಟು, ಲೈಟು, ಜನರೇಟರು, ಸೌಂಡು ಅಂಬು ಯಾವ ತಲೆಬಿಸಿನೂ ಇಲ್ಲ. ದೇವರು ಹೆಸರ ಹೇಳಕಂಡೆ ಮನಿ ಮಂದಿಗೆಲ್ಲಾ, ಊರಜನ್ರಿಗೆಲ್ಲಾ ಗನಾದ ಆಗ್ಲಿ ಅಂತೇ, ಪುರಾಣ ಪುಣ್ಯ ಕಥಿ ಹೇಳ್ತೆ, ಊರಿಂದೆ ಊರಿಗೆ ಹೋಗ್ತೆರು." ಎಂದು ವಿವರಿಸಿದಳು. ಪುರುಷ ಹಾಗೂ ಸ್ತ್ರೀ ವೇಷದ ಇಬ್ಬರೇ ಪಾತ್ರಧಾರಿಗಳು ಹಿಮ್ಮೇಳಕ್ಕೆ ತಕ್ಕಂತೆ ಮನೆಯಲ್ಲಿ ನಾಟ್ಯ ಮಾಡುತ್ತ, ಪದ್ಯವಿಸ್ತಾರಕ್ಕಾಗಿ ಅರ್ಥಗಾರಿಕೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ತಮ್ಮ ಕಲಾಭವಿಷ್ಯದಲ್ಲಿ ಇದೊಂದು ತರಹದ ತಾಲೀಮು ಎನ್ನುವಂತೆ ನಿಷ್ಠೆಯಿಂದಲೇ ಕೆಲಸ ಮಾಡುವುದು ಈ ಚಿಕ್ಕಮೇಳದಲ್ಲಿ ಕಂಡುಬರುತ್ತದೆ.
ಅದಕ್ಕೆ ಚಿಕ್ಕಮೇಳಗಳು ಮಹತ್ವಾಕಾಂಕ್ಷೆಯ ಯಕ್ಷಗಾನ ಕಲಾವಿದರಿಗೆ ಸೂಕ್ತವಾದ ಅಭ್ಯಾಸ ತಾಣವಾಗಿದೆ. ಇದು ಪಕ್ಕಾ ಅನೌಪಚಾರಿಕ ರಂಗ ಪ್ರಾಕಾರ. ದೊಡ್ಡ ನಾಟಕಗಳಿಗೆ ಪೂರ್ವಾಭ್ಯಾಸ ಎನ್ನುವಂತೆ ಕಾರ್ಯನಿರ್ವಹಿಸುತ್ತದೆ. ಯುವ ಮತ್ತು ಉದಯೋನ್ಮುಖ ಕಲಾವಿದರು ಉತ್ಸಾಹದಿಂದ ಚಿಕ್ಕಮೇಳದಲ್ಲಿ ಭಾಗವಹಿಸಿ ಯಕ್ಷಗಾನದ ಜಟಿಲತೆಗಳನ್ನು ತಿಳಿದುಕೊಳ್ಳುತ್ತಾರೆ. ಚಿಕ್ಕಮೇಳದಿಂದ ಪ್ರಾರಂಭಿಸಿ ಯಕ್ಷಗಾನದಲ್ಲಿ ಶ್ರೇಷ್ಠತೆ ಗಳಿಸಿದ ಅನೇಕ ಕಲಾವಿದರಿದ್ದಾರೆ. ಆದ್ದರಿಂದ ಚಿಕ್ಕಮೇಳ ಪ್ರದರ್ಶನಗಳನ್ನು ಯಕ್ಷಗಾನ ಶಿಕ್ಷಣದ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಕುಟುಂಬಗಳು ತಮ್ಮ ಮಕ್ಕಳಿಗೆ ಮಹಾಕಾವ್ಯಗಳು ಮತ್ತು ಪೌರಾಣಿಕ ಪಾತ್ರಗಳೊಂದಿಗೆ ಪರಿಚಯ ಮಾಡಿಕೊಳ್ಳಲು ಇದು ಒಂದು ಅತ್ಯುತ್ತಮ ಮಾರ್ಗವಾಗಿದೆ. ಇದೊಂದು ರೀತಿಯ ಪರಿಚಯಾತ್ಮಕ ಅಂಶ ಎನ್ನುವ ಮಾಹಿತಿಯನ್ನು ಅವ್ವೆ ನೀಡಿದ್ದಳು.
ಯಕ್ಷಗಾನಾಸಕ್ತರು ಅಲ್ಲಿಯ ಮುಖವರ್ಣಿಕೆ ಮತ್ತು ವೇಷಭೂಷಣಗಳಿದ್ದ ಪಾತ್ರದ ಸಾಮೀಪ್ಯ ಬಯಸುತ್ತಾರೆ. ಈ ನಿಟ್ಟಿನಲ್ಲಿ ಚಿಕ್ಕಮೇಳಗಳು ತನ್ನ ವ್ಯಾಪ್ತಿಯನ್ನು ಮನೆ ಮನೆಗಳಲ್ಲಿ ಪ್ರದರ್ಶನ ನೀಡುವುದಕ್ಕೆ ಸೀಮಿತಗೊಳಿಸಿದ್ದರೂ, ಯಾವುದೇ ಪ್ರದರ್ಶನವು ಸಾಮಾಜಿಕ, ಸಾಂಸ್ಕೃತಿಕ, ಕಾಲೋಚಿತ ಸ್ತರಗಳು ಬದಲಾದರೆ ಅದರ ವಿಶಾಲತೆ ಮತ್ತು ವ್ಯಾಪ್ತಿ ಹೆಚ್ಚಾಗುವುದಕ್ಕೆ ಸಾಧ್ಯ ಎನ್ನುತ್ತಿದ್ದ ಅವ್ವೆ, "ಈ ಕಲಾವಿದ್ರಿಗೂ ಸರಕಾರ ಕಣ್ನೆತ್ತ ಕಂಡೆ ನೋಡಬೇಕು. ಚಿಕ್ಕಮೇಳ ಅಂಬುದು ದಾಖಲೆಲಿ ಇಲ್ಲ. ಹಂಗೆ ಆಗುಕಿಲ್ಲ. ಅವರಿಗೂ ಒಂದು ಗೌರವ ಸಿಕ್ಕಿದ್ರೆ, ಈ ಪದ್ಧತಿ ಉಳಿಯುಕೆ ಸಾಧ್ಯ ಇದು.. ಇಲ್ಲಾದ್ರೆ ನೂರಾರು ವರ್ಷದ ಹಿಂದೆ ನಾಪತ್ತೆ ಆಗಿದ್ದು ಮತ್ತೆ ಯಾವಾಗ ಏನಾತಿಯಾಬಲಾ..?" ಎಂದು ಭವಿಷ್ಯದ ಗಂಭೀರತೆಯನ್ನು ವಿವರಿಸಿದಳು.
(ಮುಂದುವರಿಯುವುದು)
ಶ್ರೀನಾಥ್ ಜೋಶಿ. ಸಿದ್ದರ
9060188081
Publisher: ಕನ್ನಡ ನಾಡು | Kannada Naadu