ಕನ್ನಡ ನಾಡು | Kannada Naadu

ಆರ್‌ಎಸ್‌ಎಸ್‌ನ್ನು ತಾಲಿಬಾನಿಗೆ ಹೋಲಿಸುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು:ಬಸವರಾಜ ಬೊಮ್ಮಾಯಿ

17 Aug, 2025

ರಾಹುಲ್ ಗಾಂಧಿ ಮೆಚ್ಚಿಸಲು ಆರ್‌ಎಸ್‌ಎಸ್ ವಿರುದ್ಧ ಸಿಎಂ ಹೇಳಿಕೆ:ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಆರ್‌ಎಸ್‌ಎಸ್‌ನ್ನು ತಾಲಿಬಾನಿಗೆ ಹೋಲಿಸುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು. ಕಾಂಗ್ರೆಸ್‌ನವರು ಅಂದು ಟಿಪ್ಪುವನ್ನು ಹಿರೋ ಮಾಡಿದ್ದರು. ಈಗ ಎಸ್‌ಡಿಪಿಐ ಜೊತೆಗೆ ಸೇರಿ ರಾಜಕೀಯ ಮಾಡುತ್ತಿರುವುದನ್ನು ನೋಡಿದಾಗ ನಿಜವಾದ ತಾಲಿಬಾನಿಗಳ ಜೊತೆಗೆ ಕಾಂಗ್ರೆಸ್ ಗೆಳತನ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆರ್‌ಎಸ್‌ಎಸ್‌ಗೆ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆಗಸ್ಟ್ 15 ರಂದು ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನಾರ್ಹ ಭಾಷಣ ಮಾಡಿರುವುದಕ್ಕೆ ಕಾಂಗ್ರೆಸ್ ತೀವ್ರವಾಗಿ ವಿರೋಧ ಮಾಡುತ್ತಿದ್ದು ಕಾಂಗ್ರೆಸ್‌ಗೆ ಇರಿಸು ಮುರುಸಾಗಿದೆ. ಸ್ವಾತಂತ್ರ್ಯ ಹೋರಾಟದ ಸಂಪೂರ್ಣ ಲಾಭವನ್ನು ಕಾಂಗ್ರೆಸ್ ಪಡೆಯಲು ಪಯತ್ನಿಸುತ್ತಿದೆ. ಆದರೆ, ಸ್ವಾತಂತ್ರ್ಯಕ್ಕಾಗಿ ನಿಜವಾದ ಹೋರಾಟ ಮಾಡಿದವರು ಅನಾಮಧೇಯ ಹಲವಾರು ಸ್ವತಂತ್ರ ಸೇನಾನಿಗಳು ತಮ್ಮ ಪಾಣ ತ್ಯಾಗ ಮಾಡಿರುವುವುದು ಎಲ್ಲರಿಗೂ ಗೊತ್ತಿರುವ ಸತ್ಯ. ರೈತರು, ಕೂಲಿಕಾರರು, ಎಲ್ಲ ವರ್ಗದ ಜನರು ಒಕ್ಕಟ್ಟಾಗಿ ಸ್ವಾತಂತ್ರಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಅದರ ಶ್ರೇಯಸನ್ನು ಕಾಂಗ್ರೆಸ್‌ನವರು ತೆಗೆದುಕೊಳ್ಳಲು ಪಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಸ್ವಾತಂತ್ರ್ಯ ಹೋರಾಟದ ಫಲಾನುಭವಿಗಳು ಎಂದು ಆರೋಪಿಸಿದ್ದಾರೆ. 

ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯ ನಂತರ ಕಾಂಗ್ರೆಸನ್ನು ವಿಸರ್ಜನೆ ಮಾಡಿ ಎಂದು ಹೇಳಿದರೂ ಕೂಡ ಕಾಂಗ್ರೆಸ್‌ನವರು ತಮ್ಮ ಸ್ವಾರ್ಥಕ್ಕೆ, ಅಧಿಕಾರದ ದಾಹಕ್ಕೆ ಅದನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಎಪ್ಪತ್ತೆಂಟು ವರ್ಷದಲ್ಲಿ ಅವರು ಮಾಡಿರುವಂತಹ ಆಡಳಿತ ಈ ದೇಶವನ್ನು ಅತ್ಯಂತ ಹಿನ್ನಡೆಗೆ ತಂದಿದೆ. ಇವತ್ತು ಕಾಂಗ್ರೆಸ್ ನಾಯಕರ ದೇಶ ವಿರೋಧಿ ಹೇಳಿಕೆಗಳನ್ನು ನೋಡಿದಾಗ ಇವರು ಸ್ವಾತಂತ್ರ್ಯ ಹೋರಾಟಗಾರರ ಪಕ್ಷಕ್ಕೆ ಸೇರಿದ್ದಾರಾ ಎನ್ನುವ ಸಂಶಯ ಮೂಡುತ್ತದೆ ಎಂದು ಹೇಳಿದ್ದಾರೆ. 

ಆರ್‌ಎಸ್‌ಎಸ್‌ನ್ನು ತಾಲಿಬಾನಿಗೆ ಹೋಲಿಸುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು. ಕಾಂಗ್ರೆಸ್‌ನವರು ಅಂದು ಟಿಪ್ಪುವನ್ನು ಹಿರೋ ಮಾಡಿದ್ದರು. ಈಗ ಎಸ್‌ಡಿಪಿಐ ಜೊತೆಗೆ ಸೇರಿ ರಾಜಕೀಯ ಮಾಡುತ್ತಿರುವುದನ್ನು ನೋಡಿದಾಗ ನಿಜವಾದ ತಾಲಿಬಾನಿಗಳ ಜೊತೆಗೆ ಕಾಂಗ್ರೆಸ್ ಗೆಳತನ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ ಕೊಡುತ್ತಿರುವುದು ರಾಹುಲ್ ಗಾಂಧಿಗೆ ಸಂದೇಶ ಕೊಡಲು ಪಯತ್ನ ಮಾಡುತ್ತಿದ್ದಾರೆ. ಏಕೆಂದರೆ ಅವರು ಮೂಲ ಕಾಂಗ್ರೆಸಿಗರು ಅಲ್ಲ. ರಾಜನಿಗಿಂತ ತಾವು ಹೆಚ್ಚು ನಿಷ್ಠರು ಎನ್ನುವುದನ್ನು ತೋರಿಸಿಕೊಳ್ಳುವ ಪಯತ್ನವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿರುವುದು ಬಹಳ ಸ್ಪಷ್ಟ. ಆರ್‌ಎಸ್‌ಎಸ್ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ನಾವೆಲ್ಲ ಒಂದಾಗಿ ಕೆಲಸ ಮಾಡುವ ಅವಶ್ಯಕತೆ ಇದೆ. ಆ ಕೆಲಸವನ್ನು ಮಾಡೋಣ ಎಂದು ಎಲ್ಲ ಭಾರತೀಯರಿಗೆ ವಿನಂತಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by