ಕನ್ನಡ ನಾಡು | Kannada Naadu

ಕನಸೊಂದು ನನಸಾಗಿದೆ.....!

13 Aug, 2025

 

‘ಕ್ಯಾಲೆಂಡರ್’ ಎಂಬ ಪದ ಮೊದಲು ಬಳಕೆಯಾಗಿದ್ದು ರೋಮ್ ನಲ್ಲಿ 26 ಶತಮಾನಗಳ ಕೆಳಗೆ,  ಲ್ಯಾಟಿನ್ ಭಾಷೆಯಲ್ಲಿ ‘ಕ್ಯಾಲರ್’ ಎಂದು ಕೂಗಿ ಹೇಳುವುದು ಎಂದು ಅರ್ಥ. ಸಾಲು ಕೊಡುವ ಮತ್ತು ತೆಗೆದು ಕೊಳ್ಳುವ ಪುಸ್ತಕವನ್ನು ಪ್ರಾಚೀನ ರೋಮ್ನಲ್ಲಿ ‘ಕ್ಯಾಲೆಂಡರ್’ ಎಂದು ಕರೆಯುತ್ತಿದ್ದರು. ಅದು ಕ್ರಮೇಣ ದಿನಗಣನೆಗೆ ಅನ್ವಯವಾಯಿತು.

ಜಗತ್ತಿನ ಪ್ರಾಚೀನ ನಾಗರೀಕತೆ ಆರಂಭವಾದ ಕಡೆಯೆಲ್ಲ ಕ್ಯಾಲಂಡರ್ ಕಾಣಿಸಿ ಕೊಂಡಿದೆ. ಈಜಿಪ್ಷಿಯನ್, ಬ್ಯಾಬಿಲೋನಿಯನ್, ರೋಮ್, ಮಯಾ, ಚೀನಾ, ಗ್ರೀಕ್ ನಮ್ಮ ಪ್ರಾಚೀನ ಕ್ಯಾಲೆಂಡರ್ ಗಳು. ಈ ಪಟ್ಟಿಯಲ್ಲಿ ನಮ್ಮ ಭಾರತೀಯ ಪಂಚಾಂಗ ಗಣಿತ ಕೂಡ ಸೇರುತ್ತದೆ,  ಈಗ ಇತಿಹಾಸದ ಪುಟ ಸೇರಿರುವ ಇಂದ್ರಪ್ರಸ್ಥ ಮತದಿಂದ ಆರಂಭವಾಗಿ ಆರ್ಯಭಟ, ಬ್ರಹ್ಮಗುಪ್ತ, ವರಾಹಮಿಹಿರ, ಭಾಸ್ಕರಾಚಾರ್ಯ, ನೀಲಕಂಠಾಚಾರ್ಯ ಮೊದಲಾದ ಖಗೋಳ ಶಾಸ್ತ್ರಜ್ಞರಿಂದ ಮಹತ್ತರ ಬೆಳವಣಿಗೆ ಕಂಡಿದೆ. ಭಾರತದಲ್ಲಿಗ ಸುಮಾರು 540 ಪಂಚಾಂಗಗಳು ಇದ್ದಾವೆ ಎಂಬ ಲೆಕ್ಕಾಚಾರವಿದ್ದು ಪ್ರತಿಯೊಂದಕ್ಕೂ ತನ್ನದೇ ಆದ ಸ್ವಂತಿಕೆ ಮತ್ತು ಮಹತ್ವವಿದೆ. ಭಾರತ ಸರ್ಕಾರ ಕೂಡ ‘ರಾಷ್ಟ್ರೀಯ ಪಂಚಾಂಗ’ವನ್ನು  ರೂಪಿಸಿ ಐಕ್ಯತೆಗೆ ಶ್ರಮಿಸಿದ್ದೂ ಇದೆ. 

ಹಿಬ್ರೋದಿಂದ ಆರಂಭವಾಗುವ ಚಾಂದ್ರ ಕ್ಯಾಲಂಡರ್ ಗಳು ಹಿಜರಿ ಮೂಲಕ ವ್ಯಾಪಕವಾಗಿ ಬೆಳೆದವು. ಸೌದಿ ಅರೇಬಿಯಾದ ಉಮ್-ಅಲ್-ಕ್ಯೂರಾ, ಟರ್ಕಿಯ ಸುರಳಿ ಕ್ಯಾಲಂಡರ್, ಕುವೈತ್ನ ಅಲ್ಗೋರಿದಂ, ಇಂಡೋನೇಷಿಯಾದ ಕ್ಯಾಲೆಂಡರ್, ಪರ್ಷಿಯದ ಕ್ಯಾಲೆಂಡರ್ ಗಳಿಂದ ಹಿಡಿದು ಬಾಂಗ್ಲದಲ್ಲಿ ಮತ್ತು ಭಾರತದ ಕೆಲವು ರಾಜ್ಯದ ಬೆಳಕೆಯಾಗುವ ಅಕ್ಬರ್ ಕ್ಯಾಲಂಡರ್ ವರೆಗೆ ಚಾಂದ್ರ ಕ್ಯಾಲಂಡರ್ಗಳ ವಿಸ್ತಾರವಿದೆ. 

ನಾವು ಇದು ವ್ಯಾಪಕವಾಗಿ ಬಳಸುತ್ತಿರುವ ಗ್ರಿಗೋರಿಯನ್ ಕ್ಯಾಲಂಡರ್ ರೋಮ್ನಿಂದ ಜೂಲಿಯನ್ ಹಂತ ದಾಟಿ ಬಂದಿದ್ದು. ಇತಿಹಾಸ ಪುಟಗಳಲ್ಲಿ ಇದನ್ನು ಪ್ರಶ್ನಿಸಿ ಧಾರ್ಮಿಕ ನೆಲೆ ಮೀರಿ ವೈಜ್ಞಾನಿಕವಾಗಿ ರೂಪುಗೊಂಡ ಫ್ರೆಂಚ್ ಕ್ಯಾಲಂಡರ್ನ ಪ್ರಯೋಗವಿದೆ. ಡೆನ್ಮಾರ್ಕ್, ಜಪಾನ್, ಸ್ವೀಡನ್ಗಳಲ್ಲಿ ಕೂಡ  ಗ್ರಿಗೋರಿಯನ್ ಕ್ಯಾಲೆಂಡೆರ್ ಪ್ರಶ್ನಿಸುವ ಪ್ರಯೋಗಗಳು ನಡೆದಿವೆ. ಲೀಗ್ ಆಫ್ ನೇಷನ್,  ಪರಿಷ್ಕರಣೆಗೆ ಮಾಡಿದ ಪ್ರಯತ್ನಗಳೂ ಇವೆ. ವಿಶ್ವಸಂಸ್ಥೆ ಕೂಡ ಪರಿಷ್ಕರಣೆಗೆ ಪ್ರಯತ್ನಿಸಿದ್ದು ಅದು ಕ್ಯಾಲಂಡರ್ ಭವಿಷ್ಯದ ನಿರ್ಧಾರಕವಾಗಲಿದೆ. 

ಇದೊಂದು ರೋಚಕ ಇತಿಹಾಸ.. ಎಲ್ಲವನ್ನೂ ನನ್ನ ಅರಿವಿಗೆ ನಿಲುಕಿದಷ್ಟು ಪರಿಚಯಿಸಲು ಪ್ರಯತ್ನಿಸಿದ್ದೇನೆ. ಈ ಪುಸ್ತಕವನ್ನು ನಮಗೇ ಕೊಡಿ ಎಂದು ಒತ್ತಾಯಿಸಿ, ಅದಕ್ಕಾಗಿ ಆಗಾಗ ನೆನಪಿಸಿ ಶೀಘ್ರವಾಗಿ ಬಲು ಪ್ರೀತಿಯಿಂದ ಪ್ರಕಟಿಸುತ್ತಿರುವ ‘ಅಂಕಿತ ಪುಸ್ತಕ’ದ ಪ್ರಕಾಶ್ ಕಂಬತ್ತಳ್ಳಿ ಮತ್ತು ಪ್ರಭಾ ಕಂಬತ್ತಳ್ಳಿ, ಕ್ಯಾಲೆಂಡರ್ ಕುರಿತ ನನ್ನ ಕನಸಿನ ಮೂಲಸೆಲೆ “ಬೆಂಗಳೂರು ಮುದ್ರಣಾಲಯ” ಅದರ ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್.ಅನಂತ್, ನನಗೆ ಶಾಸ್ತ್ರೋಕ್ತವಾಗಿ ಸೂರ್ಯ ಸಿದ್ದಾಂತ ಕಲಿಸಿದ ಆಸ್ಥಾನ ವಿದ್ವಾನ್ ಎಸ್.ಎನ್.ಕೃಷ್ಣಾ ಜೋಯಿಸ್, ದಾಂತೆ ಕ್ರಮ ಕಲಿಸಿದ ವಿದ್ವಾನ್ ರಾಜೇಶ್ವರ ಶಾಸ್ತ್ರಿ, ವಾಕ್ಯ ಕಲಿಸಿದ ಸಿದ್ದಾಂತಿ ವಿ.ರಾಮಕೃಷ್ಣ ಶಾಸ್ತ್ರಿ, ದೃಗ್ಗಣಿತ ಕಲಿಸಿದ ಪಾರಂಪಳ್ಳಿ ನರಸಿಂಹ ಅಡಿಗ, ಹಿಜರಿ ಕಲಿಸುವ ಜೊತೆಗೆ ಜಗತ್ತಿನ ವಿವಿಧ ಕ್ಯಾಲೆಂಡರ್ಗಳ ಕಡೆ ಗಮನ ಸೆಳೆದ ಡಾ.ಜಾಹಿರ್, ಆರ್ಚ್ ಬಿಷಪ್ ಇಗ್ನೇಷಿಯಸ್ ಪಿಂಟೋ, ಪಂಚಾಂಗದ ಲೆಕ್ಕಾಚಾರಗಳ ಹಿಂದಿನ ವೈಜ್ಞಾನಿಕತೆ ಹೇಳಿ ಕೊಟ್ಟ ಡಾ.ಬಿ.ಎಸ್.ಶೈಲಜ, ಈ ವಿಷಯದ ಕುರಿತು ನನ್ನ ಉಪನ್ಯಾಸ ಏರ್ಪಡಿಸಿ ಆರಂಭಿಕ ಬಿಂದು ಒದಗಿಸಿದ ಕಂನಾಡಿಗ ನಾರಾಯಣ, ಪುಸ್ತಕಕ್ಕೆ ಒತ್ತಾಯಿಸಿ ಅದು ರೂಪುಗೊಳ್ಳುವವರೆಗೂ ಬೆಂಗಾವಲಾಗಿ ನಿಂತ ಪ್ರೊ.ಮಲ್ಲೇಪುರಂ.ಜಿ.ವೆಂಕಟೇಶ್, ಪುಸ್ತಕ ರಚನೆಯುದ್ದಕ್ಕೂ ಮಾರ್ಗದರ್ಶನ ನೀಡಿ, ನನ್ನ ಉತ್ಸಾಹದ ಸೆಲೆ ಬತ್ತದಂತೆ ಕಾಪಾಡಿ ಅರ್ಥಪೂರ್ಣ ಬೆನ್ನುಡಿಯನ್ನೂ ಬರೆದಿರುವ ಡಾ.ಟಿ.ಆರ್.ಅನಂತ ರಾಮು , ‘ವಿಶ್ವವಾಣಿ ಕ್ಲಬ್ ಹೌಸ್’ನಲ್ಲಿ ಈ ಕುರಿತು ನನ್ನ ಮೂರು ಉಪನ್ಯಾಸಗಳನ್ನು ಏರ್ಪಡಿಸಿ ನನಗೆ ನಾನೇ ಸ್ಪಷ್ಟವಾಗಲು ಕಾರಣರಾದ ರೂಪಾ ಗುರುರಾಜ್, ಅರ್ಥಪೂರ್ಣ ಮುಖಪುಟ ರಚಿಸಿದ ರೂಪಶ್ರೀ ಕಲ್ಲಿಗನೂರು.. ಹೀಗೆ ಕೃತಿರೂಪುಗೊಳ್ಳವಲ್ಲಿ ಹಲವರ ಋಣವಿದೆ. ಅದು ಬರೆಯಲು ಹೊರಟರೆ ಮುಗಿಯದ ಪಟ್ಟಿ.

  

ಇದೇ ಆಗಸ್ಟ್ 17ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಎನ್.ಆರ್.ಕಾಲೋನಿಯ ಬಿ.ಎಂ.ಶ್ರೀ ಪ್ರತಿಷ್ಟಾನದಲ್ಲಿ ಪುಸ್ತಕ ಬಿಡುಗಡೆಯಾಗಲಿದೆ. ಇಷ್ಟೆಲ್ಲಾ ಇದ್ದ ಮೇಲೆ. ನೀವು ಬರದಿದ್ದರೆ ಹೇಗೆ.. ಬಂದೇ ಬರುತ್ತೀರಲ್ಲ.. 

-ಎನ್.ಎಸ್.ಶ್ರೀಧರ ಮೂರ್ತಿ

Publisher: ಕನ್ನಡ ನಾಡು | Kannada Naadu

Login to Give your comment
Powered by