ವಂದೇ ಭಾರತ ರೈಲುಗಳ ಸಂಖ್ಯೆ ಹೆಚ್ಚಳ ಭಾರತ ಆರ್ಥಿಕತೆಯಲ್ಲಿ ಪ್ರಭಲವಾಗಿ ಮುನ್ನುಗ್ಗುತ್ತಿರುವ ಸಂಕೇತ:ಬಸವರಾಜ ಬೊಮ್ಮಾಯಿ
ಹಾವೇರಿ: ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಂದೇ ಭಾರತ ರೈಲು ಸಂಚರಿಸುತ್ತಿರುವುದು ಭಾರತ ಆರ್ಥಿಕತೆಯಲ್ಲಿ ಬಹಳ ಪ್ರಭಲವಾಗಿ ಮುನ್ನುಗುತ್ತಿದೆ ಎನ್ನುವುದರ ಸಂಕೇತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಇಂದು ಹಾವೇರಿಯ ರೇಲ್ವೆ ನಿಲ್ದಾಣದಲ್ಲಿ ಬೆಂಗಳೂರು - ಬೆಳಗಾವಿ ನೂತನ ವಂದೇ ಭಾರತ ರೈಲಿಗೆ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ರವರು ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದು, ಆ ರೈಲಿಗೆ ಹಾವೇರಿಯಲ್ಲಿ ಸ್ವಾಗತ ಮಾಡಿ, ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಹಾವೇರಿಗೆ ಇಂದು ಶುಭದಿನ ಎರಡನೇಯ ವಂದೇ ಭಾರತ ಎಕ್ಸ್‌ಪ್ರೆಸ್ ಹಾವೇರಿಯಲ್ಲಿ ನಿಲ್ಲುತ್ತಿದೆ. ಬೆಂಗಳೂರಿನಿಂದ ಬೆಳಗಾವಿಗೆ ಹೋಗುವ ಒಂದೇ ಭಾರತ ಎಕ್ಸ್‌ಪ್ರೆಸ್ ಹಾವೇರಿ ಜನರಿಗೂ ಸೇವೆ ಸಲ್ಲಿಸಲಿದೆ. ಅದಕ್ಕಾಗಿ ನಮ್ಮ ಪ್ರಧಾನಿ ನರೇಂದ್ರ ಮೋದಿ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಅಭಿನಂದನೆಗಳು ಎಂದು ಹೇಳಿದರು.
ಹಾವೇರಿಗೆ ವಂದೇ ಭಾರತ ರೈಲು ನಿಲ್ಲಬೇಕು ಎಂದು ಬಹಳಷ್ಟು ಒತ್ತಡ ಇತ್ತು. ಪಧಾನಿ ನರೇಂದ್ರ ಮೋದಿಯವರು ನಮಗೆ ಆಶೀರ್ವಾದ ಮಾಡಿ ಕೊಟ್ಟರು. ಪ್ರತಿ ದಿನ ಹುಬ್ಬಳ್ಳಿ ಬೆಂಗಳೂರು ನಡುವಿನ ವಂದೇ ಭಾರತ ರೈಲು ಪ್ರಯಾಣ ಮಾಡುತ್ತಿದೆ. ಹಾವೇರಿ ಜನತೆ ಒಂದು ವಂದೇ ಭಾರತ ರೈಲು ಕೇಳಿದರೆ, ಪ್ರಧಾನಿ ನರೇಂದ್ರ ಮೋದಿಯವರು ಎರಡು ವಂದೇ ಭಾರತ ರೈಲು ಕೊಟ್ಟಿದ್ದಾರೆ. ನಮಗೆಲ್ಲರಿಗೂ ಸಂತೋಷ ತಂದಿದೆ. ಆದರೆ, ಇದರ ಹಿಂದೆ ದೇಶ ಯಾವ ರೀತಿ ಪ್ರಗತಿ ಆಗುತ್ತಿದೆ ಎನ್ನುವ ಕಥೆ ಇದೆ. ರೈಲೆ ಮೊದಲು ಕಲಿದ್ದಿಲಿನಿಂದ ನಡೆಯುತ್ತಿತ್ತು. ಡಿಸೆಲ್ ಬಂತು. ಈಗ ವಿದ್ಯುದೀಕರಣ ಆಗಿವೆ. ಕರ್ನಾಟಕದಲ್ಲಿ ಶೇ 99 ರಷ್ಟು ವಿದ್ಯುದೀಕರಣ ಮತ್ತು ಡಬಲ್‌ಗೇಜ್ ಆಗಿವೆ. ಹೈಸ್ಪೀಡ್ ರೈಲುಗಳು ನರೇಂದ್ರ ಮೋದಿಯವರ ಕಾಲದಲ್ಲಿ ಪಾರಂಭ ಆಗಿವೆ. ಹಿಂದೇಕೆ ಆಗಲಿಲ್ಲ. ಈಗೇಕೆ ಆಗುತ್ತಿವೆ ಎನ್ನುವುದಕ್ಕೆ ನರೇಂದ್ರ ಮೋದಿಯವರ ದೂರದೃಷ್ಟಿ, ಭಾರತವನ್ನು ವಿಕಸಿತ ಭಾರತ, ಅತ್ಯಂತ ಪ್ರಭಲ ಭಾರತ ಮಾಡಲು ರೈಲ್ವೆ, ರಸ್ತೆ, ಸುಗಮವಾಗಿ ಇರಬೇಕೆಂದು ಅತಿ ಹೆಚ್ಚು ರೈಲುಗಳನ್ನು ಬಿಡುತ್ತಿದ್ದಾರೆ. ರೈಲು ಸುರಕ್ಷತೆಗೆ ಹೆಚ್ಚಿನ ಆದ್ಯತೆ, ರೈಲಿನಲ್ಲಿ ಊಟ, ಸೇವೆ ಉತ್ತಮಗೊಂಡಿದೆ. ರೈಲ್ವೆ ಚಿತ್ರಣವೇ ಬದಲಾಗಿದೆ ಎಂದರು.
ರಾಜ್ಯ ಸರ್ಕಾರದ ಸಹಕಾರ ಅಗತ್ಯ
ಹಾವೇರಿಗೆ ಎರಡನೇ ವಂದೇ ಭಾರತ ಬಂದಿರುವುದು ಭಾರತ ಆರ್ಥಿಕತೆಯಲ್ಲಿ ಬಹಳ ಪ್ರಭಲವಾಗಿ ಮುನ್ನುಗ್ಗುತ್ತಿದೆ ಎನ್ನುವುದರ ಸಂಕೇತ. ಕೇವಲ ನಾಲ್ಕೂವರೆ ತಾಸಿನಲ್ಲಿ ಬೆಂಗಳೂರಿನಿಂದ ಹಾವೇರಿಗೆ ಬರಬಹುದು. ಇದರಿಂದ ಬಹಳ ಜನರು ಸಂತೋಷಗೊಂಡಿದ್ದಾರೆ. ಇದರ ಜೊತೆಗೆ ರೈಲ್ವೆ ನಿಲ್ದಾಣಗಳನ್ನು ಆಧುನೀಕರಣ ಮಾಡಿದ್ದಾರೆ. ಹಾವೇರಿ, ಬ್ಯಾಡಗಿ ಸ್ಟೇಷನ್ ಆಧುನೀಕರಣವಾಗಿದೆ. ಹಾವೇರಿಗೆ ಒಂದು ಗೂಡ್‌ಸೆಡ್ ಮಾಡಬೇಕು. ರೈತರು ಬೆಳೆದ ಗೋವಿನ ಜೋಳ ಸೇರಿದಂತೆ ಇತರ ಉತ್ಪನ್ನಗಳನ್ನು ಸಾಗಾಣಿಕೆ ಮಾಡಲು ಗುಡ್‌ಸೆಡ್ ಮಾಡಬೇಕು. ರಾಣೆಬೆನ್ನೂರು ಗುಡ್‌ಸೆಡ್ ವಿಸ್ತರಣೆ ಮಾಡಬೇಕು. ಶಿವಮೊಗ್ಗ ರಾಣೆಬೆನ್ನೂರು ರೈಲು ಮಾರ್ಗ ಆದಷ್ಟು ಬೇಗ ಭೂಸ್ವಾದಿನ ಪ್ರಕ್ರಿಯೆ ಮಾಡಬೇಕು. ರಾಜ್ಯ ಸರ್ಕಾರ ಸಹಕಾರ ನೀಡದರ ಮಾತ್ರ ರೈಲ್ವೆ ಯೋಜನೆ ಪೂರ್ಣಗೊಳ್ಳಲು ಸಾಧ್ಯ- ಸಿಎಂ, ಡಿಸಿಎಂ ಸುಮ್ಮನೇ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದರೆ ಸಾಲದು, ಗದಗ ಯಲವಿಗೆ ಯೋಜನೆಗೆ ರಾಜ್ಯ ಸರ್ಕಾರ ಭೂಸ್ವಾಧೀನವನ್ನು ಮಾಡಿಕೊಟ್ಟರೆ ಅದು ಆರಂಭವಾಗಲಿದೆ. ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಸಂಪರ್ಕ ಕಲ್ಪಿಸುವ ಯೋಜನೆ ಆಗಲಿದೆ. ಅಲ್ಲದೇ ಶಿವಮೊಗ್ಗ ರಾಣೆಬೆನ್ನೂರು ರೈಲ್ವೆ ಯೋಜನೆ ಆದರೆ, ಮಲೆನಾಡಿನಿಂದ ಕಿತ್ತೂರು ಕರ್ನಾಟಕ, ಅಲ್ಲಿಂದ ಕಲ್ಯಾಣ ಕರ್ನಾಟಕ ಸಂಪರ್ಕ ಆಗುತ್ತದೆ. ಎಲ್ಲ ಕಾಮಗಾರಿಗಳು ನಿಗದಿತ ಸಮಯದಲ್ಲಿ ಆಗಬೇಕು. ಹಾವೇರಿಯಲ್ಲಿ ಕನಿಷ್ಠ ಲಿಫ್ಟ್‌ನ್ನು ಕೂಡಲೇ ಮಾಡಬೇಕೆಂದು ವಿನಂತಿಸಿದರು.
ಭಾರತ ನಂಬರ್ ಒನ್
ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟಿಂಪ್ ಭಾರತದ ಆರ್ಥಿಕ ವ್ಯವಸ್ಥೆ ಸತ್ತಿದೆ ಅಂತ ಹೇಳಿದ್ದಾರೆ. ಅವರು ಭಾರತಕ್ಕೆ ಬಂದು ನೋಡಬೇಕು. ಬರುವ ದಿನಗಳಲ್ಲಿ ಭಾರತ ಅಮೇರಿಕಾವನ್ನೂ ಮೀರಿ ನಂಬರ್ ಒನ್ ಆಗುತ್ತದೆ ಎನ್ನುವ ವಿಶ್ವಾಸವಿದೆ. ನಾವು ಇನ್ನಷ್ಟು ವೇಗದಲ್ಲಿ ನಮ್ಮ ವಿಕಾಸ, ಅಭಿವೃದ್ಧಿ ಮಾಡುತ್ತೇವೆ. ಪ್ರತಿ ದಿನ 18 ತಾಸು ಕೆಲಸ ಮಾಡುವ ಪ್ರಧಾನಿ ನಮಗೆ ಸಿಕ್ಕಿದ್ದಾರೆ. ಒಬ್ಬ ದಿಟ್ಟ ಧೀಮಂತ ವಿಕಾಸಪುರುಷ ನರೇಂದ್ರ ಮೋದಿಯವರು ನಮಗೆ ಸಿಕ್ಕಿದ್ದಾರೆ. ಎಲ್ಲ ಅಭಿವೃದ್ಧಿ ಕಾರ್ಯದಲ್ಲಿ ಅವರಿಗೆ ಬೆಂಬಲ ಕೊಡಬೇಕು. ಅಭಿವೃದ್ಧಿ ಪ್ರತಿಯೊಬ್ಬ ಭಾರತೀಯರಿಗೆ ಮುಟ್ಟಬೇಕು. ಎಲ್ಲ ಬಡವರಿಗೆ ಮುಟ್ಟಬೇಕು. ವಂದೇ ಭಾರತ ರೈಲನ್ನು ಅತ್ಯಂತ ಹೃದಯ ಪೂರ್ವಕವಾಗಿ ಹಾವೇರಿಯಲ್ಲಿ ಸ್ವಾಗತ ಮಾಡಿದ್ದೇನೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ ಸಂಕನೂರ, ಡಿ.ಆರ್.ಎಂ ಮುದಿತ್ ಮಿತ್ತಲ್, ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ, ನಗರಸಭೆ ಅಧ್ಯಕ್ಷರಾದ ಶಶಿಕಲಾ ಮಾಳಗಿ, ಅಪರ ಜಿಲ್ಲಾಧಿಕಾರಿಗಳಾದ ನಾಗರಾಜ ಎಲ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ಶಿರಕೋಳ ಸೇರಿದಂತೆ ರೇಲ್ವೆ ಇಲಾಖೆಯ ಅಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu