ಕನ್ನಡ ನಾಡು | Kannada Naadu

ದಕ್ಷಿಣ ಭಾರತದ ಪ್ರಮುಖ ಆಚರಣೆ ವರಮಹಾಲಕ್ಷ್ಮಿ ವ್ರತ... ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರದ ವಿಶೇಷತೆಗಳು..

08 Aug, 2025

ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರವನ್ನು ವರಮಹಾಲಕ್ಷ್ಮೀ ಹಬ್ಬವೆಂದು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ.  ಈ ದಿನವನ್ನು ಸಂಪತ್ತು ಶುಕ್ರವಾರವೆಂದು ಕೂಡ ಕರೆಯುತ್ತಾರೆ.   ಸಕಲ ಸಂಪತ್ತಿಗಾಗಿ ಮನೆಯಲ್ಲಿ ಸಮೃದ್ಧಿಯನ್ನು ಪಡೆಯಲು ವರಮಹಾಲಕ್ಷ್ಮಿಯ ವ್ರತವನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಪ್ರಾಚೀನ ಕಾಲದಲ್ಲಿ ವಿಶೇಷ ಪೂಜೆಗಳನ್ನು ವ್ರತಗಳನ್ನು ನದೀ ತೀರಗಳಲ್ಲಿ ಆಚರಿಸುತ್ತಿದ್ದರು. ಅದರಲ್ಲಿ ಈ ವರಮಹಾಲಕ್ಷ್ಮಿಯ ವ್ರತವನ್ನು ಯುಮುನಾ ತೀರದಲ್ಲಿ ಆಚರಿಸಬೇಕೆಂದು ಹೇಳುತ್ತಾರೆ ನದೀ ತೀರಕ್ಕೆ ಅದರಲ್ಲೂ ಯಮುನಾ ತಟಕ್ಕೆ ಹೋಗಲು ಆಗದೇ ಇರುವ ಕಾರಣ ವ್ರತವನ್ನು ತುಳಸಿ ವೃಂದಾವನದ ಕೆಳಗೆ ಪೂಜೆಯನ್ನು ಮಾಡಬೇಕು.  

ವರಮಹಾಲಕ್ಷ್ಮಿ ಹಬ್ಬದ ದಿನ ಮನೆಯನ್ನು ಸ್ವಚ್ಛಗೊಳಿಸಿ ಪ್ರಾತಃಕಾಲದಲ್ಲಿ ಅಭ್ಯಂಗ ಮಾಡಿ ಪೂಜೆಯ ಸಿದ್ಧತೆಯನ್ನು ಮಾಡಬೇಕು ಸಾಮಾನ್ಯ ದಿನದಲ್ಲಿ ತೈಲ ಅಭ್ಯಂಗವನ್ನು ಏಕಾದಶಿ ಇದ್ದರೆ ತುಪ್ಪವನ್ನು ಹಚ್ಚಿಕೊಂಡು ಅಭ್ಯಂಗವನ್ನು ಮಾಡಬೇಕು ಮನೆಯನ್ನು ತಳಿರು ತೋರಣಗಳಿಂದ ಸುಂದರವಾದ ರಂಗೋಲಿಗಳಿಂದ ಮನೆಯನ್ನು ದೇವರ ಮನೆಯನ್ನು ವರಮಹಾಲಕ್ಷ್ಮಿಯನ್ನು ಸ್ಥಾಪಿಸುವ ಸ್ಥಳದ ಅಲಂಕಾರವನ್ನು ಮಾಡಬೇಕು. ಎತ್ತರದ ಸ್ಥಳದಲ್ಲಿ ಮನೆಯಲ್ಲಿ ಪೂಜಿಸುವ ತುಳಸಿ ವೃಂದಾವನವನ್ನು ತಂದು ಸ್ಥಾಪಿಸಬೇಕು. ಅದಕ್ಕಿಂತ ಸ್ವಲ್ಪ ಕೆಳಗೆ ಕಳಶದಲ್ಲಿ ಲಕ್ಷ್ಮಿದೇವಿಯ ಮುಖವಾಡವನ್ನು ಮಾಡಿ ಕಳಶಕ್ಕೆ ಸೀರೆಯನ್ನು ಉಡಿಸಿ ಬಂಗಾರದ ಆಭಗಣಗಳಿಂದ ಅಲಂಕರಿಸಬೇಕು. ನಂತರ ಕಳಶದ ಸ್ಥಾಪನೆಯನ್ನು ಮಾಡಿ ಕಳಶ ಪೂಜಾ ಗಣೇಶನ ಪೂಜೆಯನ್ನು ಕೂಡ ಮಾಡಬೇಕು. ಕಳಶದಲ್ಲಿ ಪ್ರಾಣ ಪ್ರತಿಷ್ಠಾಪನೆಯನ್ನು ಕೂಡ ಮಾಡಬೇಕು ಪೂಜೆಯ ನಂತರ ಧರಿಸುವ ದೋರಗಳನ್ನು 9 ಅಥವಾ 12 ಗ್ರಂಥಿಗಳುಳ್ಳ ದಾರವನ್ನು ಅರಿಶಿನ ಕುಂಕುಮದಿಂದ ಪೂಜಿಸಬೇಕು. ಶ್ರೀವರ ಸಮೇತ ಮಹಾಲಕ್ಷ್ಮಿಗೆ ಆಸನವನ್ನು ಕೊಟ್ಟು ಅರ್ಘ್ಯ ಪಾದ್ಯಗಳನ್ನು ಕೊಟ್ಟು ಆವಾಹಿಸಬೇಕು.  ಈ ಬಾರಿ ಏಕಾದಶಿ ಇರುವುದರಿಂದ ಇಲ್ಲಿಯವರೆಗಿನ ಪೂಜೆಯನ್ನು ಮಾಡಬೇಕು, ಗೆಜ್ಜೆ ವಸ್ತ್ರ ಏರಿಸಬಹುದು ಅಷ್ಟೋತ್ತರ ಶತನಾಮವಳಿಗಳಿಂದ ಕುಂಕುಮಾರ್ಚನೆಯನ್ನು ಕೂಡ ಮಾಡಬಹುದು, ಹೂವುಗಳಿಂದ ಪೂಜಿಸಬಹುದು, ಧರಿಸುವ ದೋರದ ಪೂಜೆಯನ್ನು ಕೂಡ ಮಾಡಬಹುದು ಆದರೆ ಆರತಿಯನ್ನು ಕೇವಲ ದೀಪದಿಂದ ಮಾತ್ರ ಮಾಡಬೇಕು. ಪಂಚಾಮೃತ ಆರತಿ ನೈವೇದ್ಯಗಳನ್ನು ಶನಿವಾರದಂದು ಅಂದರೆ ದ್ವಾದಶಿಯಂದು ಮುಂದುವರೆಸಬೇಕು . ದ್ವಾದಶಿಯದಿನ ದೇವಿಗೆ ಷೋಡಶೋಪಚಾರ ಪೂಜೆಯನ್ನು ಮಾಡಿ, ಪಂಚಾಮೃತ ಅಭಿಷೇಕ ಮಾಡಿ ಮತ್ತೆ ಕುಂಕುಮ ಹೂವುಗಳಿಂದ ಪೂಜೆಯನ್ನು ಮಾಡಿ ಹೋರಣದ ಆರಿಯನ್ನು ಮಾಡಿ ನೈವೇದ್ಯವನ್ನು ಮಾಡಿ , ದೇವಿಗೆ ಉಡಿ ತುಂಬಿ ದೋರವನ್ನು ಕಟ್ಟಿಕೊಂಡು ಬ್ರಾಹ್ಮಣಣರಿಗೆ ಭೋಜನ ಮಾಡಿಸಿ ವಾಯನದಾನವನ್ನು ಕೊಟ್ಟು ನಂತರ ಊಟವನ್ನು ಮಾಡಬೇಕು

ಮಾಸ ಮಹಾಲಕ್ಷ್ಮಿ ಪೂಜೆಯನ್ನು ಮಾಡುವವರು ಸಂಪತ್ತು ಶುಕ್ರವಾರದ ಪೂಜೆ ಮಾಡುವವರು ಕೂಡ ವಿಶೇಷ ಪೂಜೆ ಮಾಡುತ್ತಾರೆ. ಮಾಸ ಮಹಾಲಕ್ಷ್ಮಿ ಯನ್ನು ಮೊದಲವಾರವೇ ಪ್ರತಿಷ್ಠಾಪನೆ ಮಾಡಿದ ಕಾರಣ  ಪೂಜೆಯನ್ನು ಆರತಿಯನ್ನು ನೈವೇದ್ಯವನ್ನು ವಿಶೇಷ ಭಕ್ಷ್ಯಗಳನ್ನು ಮಾಡುವುದರ ಜೊತೆಗೆ ಸಂಜೆ ಶ್ರಾವಣ ಶುಕ್ರವಾರದ ಹಾಡಿನ ಜೊತೆಗೆ ಸಂಪತ್ತು ಶುಕ್ರವಾರದ ಹಾಡನ್ನು ಕೂಡ ಹೇಳುತ್ತಾರೆ. ಈ ಬಾರೀ ಏಕಾದಶಿ ಪ್ರಯುಕ್ತ ಹೂರಣದ ಆರತಿ ಹಾಗೂ ನೈವೇದ್ಯ ಶನಿವಾರದಂದು ಮಾಡಿ ನೈವೇದ್ಯಕ್ಕೆ ಸಂಪತ್ತು ಶುಕ್ರವಾರ ಮಾಡುವ ಆಹಾರ ನೈವೇದ್ಯವನ್ನೇ ಮಾಡುತ್ತಾರೆ. ಇಲ್ಲದೇ ಹೋದರೆ ಶನಿವಾರದ ನೈವೇದ್ಯ ನುಚ್ಚು ಅಂಬಲಿ ಜೋಳದ ರೊಟ್ಟಿ ಇರುತ್ತದೆ.

ವ್ರತ ಕಥೆ :
ಸೂತರಿಗೆ ಶೌನಕರು ದಾರಿದ್ರ್ಯ ಕಷ್ಟಗಳು ಇವುಗಳ ಉಪಾಯವೇನು ಎಂದು ಕೇಳಿದಾಗ ಸೂತರು  ಶ್ರೀಲಕ್ಷಿನಾರಾಯರಣರ ಅನುಗ್ರಹಕ್ಕೆ ಪಾತ್ರರನ್ನಾಗಿ ಮಾಡುವ ಶ್ರೀವರಮಹಾಲಕ್ಷ್ಮಿ ವ್ರತವನ್ನು ಭಕ್ತರು ಆಚರಿಸಿದರೆ ಭೂಲೋಕದಲ್ಲಿ ಸಂಪತ್ತು ಸಮೃ‍ದ್ದಿಯನ್ನು ಪಡೆದು ನಂತರ ಪರಲೋಕದಲ್ಲಿ ಕೂಡ ಸುಖವು ದೊರೆಯುವುದು ಎಂದು ಹೇಳುತ್ತಾರೆ.  ಸೂತರು ವ್ರತದ ವಿಧಾನಗಳನ್ನು ವಿಧಿವತ್ತಾಗಿ ಹೇಳಿ ಪೂಜೆಯನ್ನು ಮಾಡಿದ ವ್ರತದ ಕಥೆಯನ್ನು ಹೇಳುತ್ತಾರೆ.  ವಿದರ್ಭ ದೇಶದಲ್ಲಿ ಚಾರುಮತಿ ಎಂಬ ಪತಿವ್ರತಾ ಬ್ರಾಹ್ಮಣ ಸ್ತ್ರೀ ವಾಸವಾಗಿದ್ದಳು ಉತ್ತಮ ಗುಣಗಳನ್ನು ಹೊಂದಿದ್ದ ಅವಳಿಗೆ ಒಂದು ಬಾರಿ ಸ್ವಪ್ನದಲ್ಲಿ  ಲಕ್ಷ್ಮೀಯು ಬಂದು ವ್ರತ ಮಾಡಲು ಹೇಳಿದ ಮೇಲೆ ಅವಳು ಶ್ರೀವರ ಮಹಾಲಕ್ಷ್ಮಿ ವ್ರತವನ್ನು ಭಕ್ತಿಯಿಂದ ಆಚರಿಸಿ ಸಕಲ ಸಂಪತ್ತು ಐಶ್ವರ್ಯಗಳನ್ನು ಪಡೆದಳು.

ಮಂಗಲ ಎಂಬ ರಾಜನು ಚಿಲ್ಲಾದೇವಿ ಎಂಬ ರಾಣಿಯೊಂದಿಗೆ ಸುಖವಾಗಿ ಇದ್ದನು . ರಾಣಿಯಲ್ಲಿ ಸಂತಾನವಾದಾಗ ಚೋಲಾದೇವಿಯೆಂಬುವವಳನ್ನು ಮದುವೆಯಾಗಿ ಸಂತಾನ ಪಡೆದನು. ಸಂತಾನವಾದ ನಂತರ ಸಂತಾನ ಕೊಟ್ಟ  ರಾಣಿಗೆಂದು ಸುಂದರ ಉದ್ಯಾನವನ್ನು ನಿರ್ಮಿಸಿದನು. ಒಂದು ಹಂದಿಯು ಬಂದು ಆ ಉದ್ಯಾನವನ್ನು ನಾಶ ಮಾಡಿತು. ಕ್ರೋಧದಿಂದ ರಾಜನು ಆ ಹಂದಿಯ ನಿಗ್ರಹ ಮಾಡಲು ಹೊರಟನು. ಆ ಹಂದಿಯನ್ನು ಕೊಂದನು ಆಗ ಆ ಹಂದಿಯು ತನ್ನ ಮೂಲ ಗಂಧರ್ವರೂಪದಲ್ಲಿ ಬಂದು ಬ್ರಹ್ಮದೇವರ ಶಾಪದಿಂದ ಹಂದಿಯಾಗಿದ್ದೆನು ಈಗ ನಿನ್ನಿಂದ ಮುಕ್ತಿ ದೊರಕಿದ ಕಾರಣ ದುರ್ಲಭವಾದ ಲಕ್ಷ್ಮೀವ್ರತವನ್ನು ಉಪದೇಶಿಸುವೆನೆಂದು ಹೇಳಿ ರಾಜನ ಮೂಲಕ ಪೂಜೆ ಮಾಡಿಸಿದನು. ಪೂಜೆಯ ನಂತರ ದೋರವನ್ನು ಧರಿಸಿದ ರಾಜನು ಅರಮನೆಗೆ ಹೋದಾಗ ಚೋಲಾ ದೇವಿಯು ಚಿಲ್ಲಾ ದೇವಿ ಕಟ್ಟಿದ ದಾರವೆಂದು ಅದನ್ನು ಅವಮಾನ ಮಾಡಿ ಹೊರಗೆ ಎಸೆದಳು. ಆದರೆ ಚಿಲ್ಲಾದೇವಿಯು ಆ ಪವಿತ್ರ ದೋರವನ್ನು ಧರಿಸಿ ಸಕಲ ಸಂಪತ್ತನ್ನು ಪಡೆದಳು. ಚೋಲಾ ದೇವಿಯು ಶ್ರೀವರ ಲಕ್ಷ್ಮೀದೇವಿಯನ್ನು ಅವಮಾನ ಮಾಡಿದ ಕಾರಣ ಹಂದಿಯ ಮುಖವನ್ನು ಪಡೆದಳು.  ಎಂಧು ಸೂತ ಪುರಾಣಿಕರು ಶೌನಕರಿಗೆ ಹೇಳಿದ ಈ ಕಥೆಯನ್ನು ಕೇಳಿದವರಿಗೆ, ಪೂಜೆ ಮಾಡಿ ಕೇಳಿದವರಿಗೆ ಶ್ರೀವರ ಮಹಾಲಕ್ಷಮಿಯ ಆಶೀರ್ವಾದವು ಪ್ರಾಪ್ತವಾಗಿ ಸುಖದಿಂದ ಬಾಳುವರು.

 ಕರ್ನಾಟಕ, ಆಂಧ್ರ ಪ್ರದೇಶ, ತಮಿಳು ನಾಡು, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳಲ್ಲಿ ಆಚರಿಸಲಾಗುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಅರಿಶಿನ ಕುಂಕುಮ ಕೊಡುತ್ತಾರೆ. ವಾಯನದಾನ ಮತ್ತು ಬಾಗಿನ ಕೊಡುವುದು ಹಬ್ಬದ ವಿಶೇಷವಾಗಿದೆ.

ಮಾಧುರಿ ದೇಶಪಾಂಡೆ, ಬೆಂಗಳೂರು

Publisher: ಕನ್ನಡ ನಾಡು | Kannada Naadu

Login to Give your comment
Powered by