ಆ ಮಾರ್ಗದಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ… ಅಂತಹ ಸಂದರ್ಭಗಳಲ್ಲಿ ಗಾಯಾಳುಗಳನ್ನು ಬದುಕಿಸಿಕೊಳ್ಳಲು ಇರುವ ಸಮಯವೇ ‘golden hour’..! ದುರಂತಗಳು ಯಾವ ಕ್ಷಣದಲ್ಲಾದರೂ, ಯಾರಿಗಾದರೂ ಸಂಭವಿಸಬಹುದು. ಅಂತಹ ಕಾಲದಲ್ಲಿ ಈ golden hourನಲ್ಲಿ ಸೂಕ್ತ ಚಿಕಿತ್ಸೆ ಸಿಕ್ಕರೆ ಅಂಥವರಿಗೆ ಮರುಜೀವ ನೀಡಿದಂತಾಗುತ್ತದೆ. ಈ ಅಮೂಲ್ಯ ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸೂಕ್ತ ಚಿಕಿತ್ಸೆ ನೀಡಿದಾಗ ಸಾವಿರಾರು ಜೀವಗಳನ್ನು ಉಳಿಸಬಹುದು.
ಉತ್ತರ ಬೆಂಗಳೂರು ಭಾಗದ ಹಳೆ ಮದ್ರಾಸ್ ರಸ್ತೆ ನಿತ್ಯವೂ ಬ್ಯೂಸಿ ಟ್ರಾಫಿಕ್ ಇರುವ ಮಾರ್ಗ. ಜೊತೆಗೆ ಈ ಭಾಗದಲ್ಲಿ ಆಗಾಗ ಅಪಘಾತಗಳು ನಡೆಯುತ್ತಲೇ ಇರುತ್ತವೆ. ತಕ್ಷಣದಲ್ಲಿ ಸೂಕ್ತ ಚಿಕಿತ್ಸೆಗೆ ಇರುವ ದೊಡ್ಡ ಆಸ್ಪತ್ರೆ ಧಕ್ಷಿಣ ಬೆಂಗಳೂರಿನಲ್ಲಿ ಇರುವ ನಿಮ್ಹಾನ್ಸ್. ಅಲ್ಲಿಯವರೆಗೆ ಅಪಘಾತಕ್ಕೊಳಗಾದ ಅಥವಾ ಇತರ ಯಾವುದೇ ತುರ್ತು ರೋಗಿಗೆ ಕರೆದುಕೊಂಡು ಹೋಗುವವರೆಗೆ golden hour ಜಾರಿ ಹೋಗುತ್ತಿತ್ತು. ಪರಿಣಾಮ ಅನೇಕರನ್ನು ಉಳಿಸಿಕೊಳ್ಳಲಾಗದೆ ಕೈ ಚಲ್ಲಿ ಕುಳಿತ ಸಂದರ್ಭಗಳ ಉದಾಹರಣೆಗಳು ಸಾಕಷ್ಟು ಇವೆ. ಈ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎನ್.ಎಸ್.ನಂದೀಶ್ ರೆಡ್ಡಿʼ ಅವರು ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ಮುಂದಾದರು.
2012ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಮಾನ್ಯ ಶ್ರೀ ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದರು. ಉತ್ತರ ಬೆಂಗಳೂರು ಭಾಗದ, ವಾಸ್ತವಿಕ ಪರಿಸ್ಥಿತಿಯನ್ನು ಕಂಡ ಎನ್.ಎಸ್. ನಂದೀಶ್ ರೆಡ್ಡಿ ಅವರು ಸದಾನಂದ ಗೌಡ ಅವರಿಗೆ ಮನವರಿಕೆ ಮಾಡಿಸಿದರು. ಅಂದಿನ ಸರ್ಕಾರ ಜನರ ಈ ನಿಜವಾದ ಸಮಸ್ಯೆಯನ್ನು ಗುರುತಿಸಿ, ಹಲವಾರು ಆಡಳಿತಾತ್ಮಕ ಹಾಗೂ ಭೌಗೋಳಿಕ ಅಡೆತಡೆಗಳನ್ನು ದಾಟಿ, 39 ಎಕರೆ ಭೂಮಿಯನ್ನು ನಿಮ್ಹಾನ್ಸ್ ಉತ್ತರ ಕೇಂದ್ರಕ್ಕಾಗಿ ಮಂಜೂರು ಮಾಡಿತು. ವಾಸ್ತವದಲ್ಲಿ ಅದು ಕೇವಲ ಕಾಗದದ ಮೇಲಿನ ಯೋಜನೆಯಾಗಿರದೆ, ಜನರ ಪ್ರಾಣ ಉಳಿಸುವ ಮಹತ್ವದ ಸಂಕಲ್ಪದ ಸಂಕೇತವಾಗಿತ್ತು.
ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ಆ ಸಮಯದಲ್ಲಿ ಶಂಕುಸ್ಥಾಪನೆಯಾಗಿದ್ದ ಯೋಜನೆ, ಕಾಂಗ್ರೆಸ್‌ನ ಅವಗಣನೆಗೆ ಹಾಗೂ ಅಂದಿನ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಜನೋಪಯೋಗಿ ಯೋಜನೆ ನೆನೆಗುದಿಗೆ ಬಿದ್ದಿತು. ಪರಿಣಾಮ ಬಹು ನಿರೀಕ್ಷಿತ ಯೋಜನೆ ಮತ್ತು ಅದಕ್ಕೆ ಮಂಜೂರಾದ ಭೂಮಿ ಎರಡೂ ನಿರ್ಗತಿಕ ಸ್ಥಿತಿಗೆ ಬಂದುಬಿಟ್ಟವು. ಈ ಭಾಗದಲ್ಲಿ ಪಾಲಿಟ್ರಾಮಾ ಆಸ್ಪತ್ರೆಯ ಅವಶ್ಯಕತೆ ಅರಿತ ಹೃದ್ರೋಗ ತಜ್ಞರು, ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಅವರು ಕೇಂದ್ರ ಸರಕಾರಕ್ಕೆ ಮನವಲಿಕೆ ಮಾಡಿ, ಪ್ರಸ್ತುತ ಆಸ್ಪತ್ರೆಯ ಅವಶ್ಯಕತೆ ಮತ್ತು ಮಹತ್ವವನ್ನು ಅರಿಕೆ ಮಾಡಿಕೊಟ್ಟಿದ್ದರು.
ಜನಪರ ಯೋಜನೆಯನ್ನು ಜಾರಿಗೆ ತರಲೇ ಬೇಕೆಂದು ತ್ರಿವಿಕ್ರಮನಾಗಿ ಹೋರಾಟ ನಡೆಸಿದ ನಂದೀಶ್ ರೆಡ್ಡಿ ಅವರ ಶ್ರಮಕ್ಕೆ ಸದ್ಯ ಕೇಂದ್ರ ಸರ್ಕಾರ ಅಸ್ತು ಎಂದು, ಹಸಿರು ನಿಶಾನೆ ತೋರಿಸಿದೆ. ಈ ಯೋಜನೆಗೆ ಈಗ ಪುನಃ ಜೀವಕಳೆ ಸಿಕ್ಕಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವ ಶ್ರೀ ಜೆ.ಪಿ. ನಡ್ಡಾ ಅವರ ಮುತುವರ್ಜಿಯಿಂದ ₹498 ಕೋಟಿ ರೂಪಾಯಿಯ ಅನುದಾನವನ್ನು ಮಂಜೂರು ಮಾಡಲಾಗಿದೆ. ₹498 ಕೋಟಿ ವೆಚ್ಚದಲ್ಲಿ 300 ಹಾಸಿಗೆಗಳ ಪಾಲಿಟ್ರಾಮಾ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ 39 ಎಕರೆ ಭೂಮಿ ಈಗಾಗಲೇ ಮೀಸಲಿಡಲಾಗಿದೆ.
ಬಹು ಅಂಗಾಂಗ ಗಾಯಗಳಿಗೆ ತ್ವರಿತ, ಸಮಗ್ರ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ನಿಮ್ಹಾನ್ಸ್ ಉತ್ತರ ಕೇಂದ್ರದಲ್ಲಿ ಪಾಲಿಟ್ರಾಮಾ ಕೇಂದ್ರವನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಒಂದೇ ಸ್ಥಳದಲ್ಲಿ ಎಲ್ಲಾ ರೀತಿಯ ಪರಿಹಾರಗಳು ಲಭ್ಯವಾಗುವ ಜೊತೆಗೆ ತುರ್ತು ಚಿಕಿತ್ಸೆಯ ಸಂಪೂರ್ಣ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಲು ಸೌಕರ್ಯ ಕಲ್ಪಿಸಲಾಗುತ್ತಿದೆ. ಅಂತರಾಷ್ಟ್ರೀಯ ಗುಣಮಟ್ಟದ ಚಿಕಿತ್ಸಾ ವ್ಯವಸ್ಥೆ ಇರಲಿರುವ ಈ ಪಾಲಿಟ್ರಾಮಾ ಕೇಂದ್ರದಲ್ಲಿ ದರ ಪಟ್ಟಿಯೂ ಸಾಮಾನ್ಯರ ಕೈಗೆಟಕುವಂತೆ ಇರುತ್ತದೆ ಮತ್ತು ಸಕಾಲಿಕ ಚಿಕಿತ್ಸೆ ಲಭ್ಯವಾಗುವ ಎಲ್ಲಾ ವ್ಯವಸ್ಥೆಗಳು ಇರಲಿವೆ.
ನಿಮ್ಹಾನ್ಸ್ ಎಂಬುದು ಈಗಾಗಲೇ ಭಾರತದ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಅತ್ಯುನ್ನತ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ಪ್ರತಿದಿನ 2,500ಕ್ಕೂ ಹೆಚ್ಚು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನೂತನ ಕೇಂದ್ರವು ಹತ್ತಿರದ ಪ್ರದೇಶಗಳಲ್ಲಿ ತುರ್ತು ಚಿಕಿತ್ಸೆ ಪಡೆಯಲು ಹೆಚ್ಚು ಸಹಾಯಕವಾಗಲಿದೆ. ಮಾನಸಿಕ ಆರೋಗ್ಯದ ಹೊರತಾಗಿಯೂ — ತುರ್ತು ಗಾಯಗಳು, ಅಪಘಾತ ಚಿಕಿತ್ಸೆ, ನರವಿಜ್ಞಾನ ಆಧಾರಿತ ಚಿಕಿತ್ಸೆಗಳ ಅಗತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಈ ಯೋಜನೆ ಕಾರ್ಯಗತಗೊಳ್ಳಲಿದೆ.
ಬೆಂಗಳೂರು ನಗರದ ಒಲ್ಡ್ ಮದ್ರಾಸ್ ರಸ್ತೆಯಲ್ಲಿ ಇರುವ ಬೆನ್ನಿಗಾನಹಳ್ಳಿ ಮತ್ತು ಮೇಡಹಳ್ಳಿ ನಡುವಿನ 7 ಕಿಮೀ ಉದ್ದದ ಭಾಗವನ್ನು ಅತಿಹೆಚ್ಚು ಅಪಾಯಕಾರಿಯಾದ ರಸ್ತೆ ಎಂದು ಗುರುತಿಸಲಾಗಿದೆ. ಲೆಕ್ಕಾಚಾರದಂತೆ, 2014ರಿಂದ 2016ರ ಅವಧಿಯಲ್ಲಿ ಇಲ್ಲಿ 208 ಅಪಘಾತಗಳು ಸಂಭವಿಸಿದ್ದು, 54 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ರಸ್ತೆ 2019ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಮತ್ತೆ 37 ಅಪಘಾತಗಳು ಹಾಗೂ 38 ಸಾವುಗಳು ಸಂಭವಿಸಿದ್ದು, ಅದೇ ಪ್ರಮಾಣದಲ್ಲಿ ಗಾಯಗಳಾದವರೂ ಇದ್ದಾರೆ ಎಂಬುದು ದಾಖಲೆಗಳಲ್ಲಿ ಸಿಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣ ಚಿಕಿತ್ಸೆ ಲಭಿಸುವ ಪಾಲಿಟ್ರಾಮಾ ಕೇಂದ್ರದ ಅವಶ್ಯಕತೆ ಅತ್ಯಗತ್ಯವಾಗಿದೆ ಎಂಬುದು ಬಹುಜನರ ಅಭಿಪ್ರಾಯವಾಗಿದೆ.
ಈ ಯೋಜನೆ ಜಾರಿಯಾಗುವುದರಿಂದ ಕರ್ನಾಟಕದ ಆರೋಗ್ಯ ವ್ಯವಸ್ಥೆ ಮತ್ತಷ್ಟು ಬಲವರ್ಧಿತವಾಗಲಿದೆ. ಜೊತೆಗೆ ನಿಮ್ಹಾನ್ಸ್ ಸಂಸ್ಥೆಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಸ್ಥಾನ ಗಿಟ್ಟಿಸಿಕೊಳ್ಳಲಿದೆ. ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿರುವ ಬೆಂಗಳೂರು ನಗರಕ್ಕೆ ತಕ್ಕಂತೆ ಮೂಲಭೂತ ಸೌಕರ್ಯಗಳ ಅಗತ್ಯವೂ ಹೆಚ್ಚಾಗಿದೆ. ಈ ಹಿನ್ನೆಲೆ ತುರ್ತು ಚಿಕಿತ್ಸಾ ವ್ಯವಸ್ಥೆಯ ಜೊತೆಗೆ ವೈದ್ಯಕೀಯ ಮೂಲಸೌಕರ್ಯವನ್ನು decentralize ಮಾಡುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಈ ಯೋಜನೆ ಪ್ರಮುಖ ಹೆಜ್ಜೆಯಾಗಿದೆ.
ಹೀಗಾಗಿ ನಿಮ್ಹಾನ್ಸ್ ಬೆಂಗಳೂರು ಉತ್ತರ ಕೇಂದ್ರ ಕೇವಲ ಉತ್ತರ ಬೆಂಗಳೂರಿಗಷ್ಟೇ ಸೀಮಿತವಿರದೆ, ಸಮಸ್ತ ಕರ್ನಾಟಕದ ಹಾಗೂ ಭಾರತದ ಜನತೆಗೆ ರಾಷ್ಟ್ರಮಟ್ಟದ ಆರೋಗ್ಯ ಸೌಲಭ್ಯ ನೀಡಬಲ್ಲ ಮಹತ್ವದ ಕೇಂದ್ರವಾಗಲಿದೆ.
ನಿಮ್ಹಾನ್ಸ್ ಬೆಂಗಳೂರು ಉತ್ತರ ಕೇಂದ್ರ ಆಸ್ಪತ್ರೆಯ ಶಿಲಾನ್ಯಾಸದಿಂದ ಕೇವಲ ಕಟ್ಟಡ ನಿರ್ಮಾಣವಲ್ಲ, ಇಲ್ಲಿ ಜೀವದಾನ ನೀಡಬಲ್ಲ ಸಂಜೀವಿನಿ ಕೇಂದ್ರ ಹುಟ್ಟಿಕೊಳ್ಳಲಿದೆ. ಇದಕ್ಕೆ ಕಾರಣ ಬಿಜೆಪಿ ಸರ್ಕಾರದ ನಿಷ್ಠೆ, ಕೇಂದ್ರದ ಸ್ಪಂದನೆ ಮತ್ತು ಪ್ರಜೆಗಳ ನಿರೀಕ್ಷೆಗಳು. ಈ ಯೋಜನೆ ಕೇವಲ ರಾಜಕೀಯ ಶ್ಲಾಘನೆಯವಲ್ಲ. ಇದು ಸರ್ವಸಾಮಾನ್ಯರ ಗೆಲುವಿನ ಕಥೆ ಎಂದು ಸಾರ್ವಜನಿಕರು ಬಣ್ಣಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ವ್ಯವಸ್ಥಿತ ಯೋಜನೆ, ದೃಢ ನಿರ್ಧಾರ ಮತ್ತು ಸಮರ್ಪಿತ ಪ್ರಯತ್ನದಿಂದ ಸಂಕಲ್ಪಿತ ಯೋಜನೆಗಳು ಜಾರಿಗೆ ಬರುತ್ತಿವೆ. ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಿ ಪ್ರಗತಿಪಥದಲ್ಲಿ ಸಾಗಲಿದೆ. ಜನರ ಪ್ರಾಣ ರಕ್ಷಣೆಗಾಗಿ ರೂಪಿಸಲಾದ ಈ ಯೋಜನೆ ಶೀಘ್ರದಲ್ಲೇ ಪೂರ್ಣಗೊಂಡು, ಸಾವಿರಾರು ಬಡವರು ಹಾಗೂ ಅಪಘಾತ ಸಂತ್ರಸ್ತರಿಗೆ ಜೀವದೀಪವಾಗಲಿ ಎಂಬುದು ನಮ್ಮ ಆಶಯ.
Publisher: ಕನ್ನಡ ನಾಡು | Kannada Naadu