ಕನ್ನಡ ನಾಡು | Kannada Naadu

ನಾಡಪ್ರಭು ಕೆಂಪೇಗೌಡರ ಜಯಂತಿಯಂದು ನಾಡಿನ ಜನತೆಗೆ ಶುಭಕೋರಿದ ಸಿಎಂ ಕೆಂಪೇಗೌಡರು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣದ ದೂರದೃಷ್ಟಿಯ ಮುತ್ಸದ್ದಿ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ

27 Jun, 2025

 

ಬೆಂಗಳೂರು : ಕೆಂಪೇಗೌಡರು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣದ ದೂರದೃಷ್ಟಿಯ ಮುತ್ಸದ್ದಿ ನಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು

ಇಂದು  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ವತಿಯಿಂದ ಬಾಬು ಜಗಜೀವನ ರಾಮ್ ಭವನ ದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಇಂದು ಸರ್ಕಾರದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಗುತ್ತಿದ್ದು, ನಾಡಿನ ಎಲ್ಲರಿಗೂ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯ ಶುಭಾಶಯಗಳನ್ನು  ತಿಳಿಸಿದ ಮುಖ್ಯಮಂತ್ರಿಗಳು, 2017ರಲ್ಲಿ ನಮ್ಮ ಸರ್ಕಾರ ಪ್ರತಿ ವರ್ಷ ಜೂನ್ 27 ರಂದು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸುವ ತೀರ್ಮಾನವನ್ನು ಕೈಗೊಂಡಿತು. ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಪ್ರಾರಂಭಿಸಲಾಯಿತು. ಮಾಗಡಿಯ ಕೆಂಪಾಪುರದಲ್ಲಿ ಕೆಂಪೇಗೌಡರ ಸಮಾಧಿಯ ಅಭಿವೃದ್ಧಿ ಕಾರ್ಯವನ್ನು ಸರ್ಕಾರ ಕೈಗೆತ್ತಿಗೊಂಡಿದೆ ಎಂದರು.

ಬೆಂಗಳೂರು ನಗರ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯಲು ಕೆಂಪೇಗೌಡರೇ ಮೂಲ ಕಾರಣ. ವಿಶ್ವಮಟ್ಟದಲ್ಲಿ ಬೆಂಗಳೂರು ಅತಿವೇಗದಲ್ಲಿ ಬೆಳೆಯುತ್ತಿರುವ ನಗರ. ಎಲ್ಲ ಜನರನ್ನೊಳಗೊಂಡ ಅಭಿವೃದ್ಧಿಗೊಳಿಸುವ, ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಅವರು ಕೈಗೊಂಡಿದ್ದರು. ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣವೇ ನಮ್ಮ ಸಂವಿಧಾನದ ಆಶಯ. 500 ವರ್ಷಗಳ ಹಿಂದೆಯೇ ನಾಡಪ್ರಭು ಕೆಂಪೇಗೌಡರು ಎಲ್ಲರನ್ನೊಳಗೊಂಡ ಸಮಾಜ ನಿರ್ಮಿಸುವ ದೂರದೃಷ್ಟಿಯನ್ನು ಹೊಂದಿದ್ದ ಮುತ್ಸದ್ದಿ ನಾಯಕರಾಗಿದ್ದರು. ವೃತ್ತಿಯಾಧಾರಿತ ಪೇಟೆಗಳನ್ನು ನಿರ್ಮಿಸಿ, ಬೆಂಗಳೂರನ್ನು ವಾಣಿಜ್ಯ ಕೇಂದ್ರವಾಗಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.

ಹಂಪಿ ಬಹಳ ಪ್ರವರ್ಧಮಾನಕ್ಕೆ  ಬಂದಿದ್ದ ಕಾಲದಲ್ಲಿ ಪ್ರೇರಣೆ ಪಡೆದು ಬೆಂಗಳೂರನ್ನು ಅಭಿವೃದ್ಧಿಪಡಿಸುವ ಉದ್ದೇಶ ಕೆಂಪೇಗೌಡರಿಗಿತ್ತು. ಹಾಗಾಗಿ ಬೆಂಗಳೂರು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ, ಸ್ಟಾರ್ಟ್ ಅಪ್ ರಾಜಧಾನಿ, ಶೈಕ್ಷಣಿಕ ಹಾಗೂ ಆರೋಗ್ಯ ಕೇಂದ್ರವಾಗಿದ್ದರೆ ಅದಕ್ಕೆ ಈ ನಗರದ ಅಡಿಪಾಯ ಹಾಕಿದ ಕೆಂಪೇಗೌಡರು ಕಾರಣ ಎಂದು ಹೇಳಿದರು.

ಬೆಂಗಳೂರಿನ ಅಭಿವೃದ್ಧಿ ಸರ್ಕಾರದ  ಕರ್ತವ್ಯ ಮತ್ತು ಜವಾಬ್ದಾರಿ :

ಬೆಂಗಳೂರನ್ನು ಇನ್ನಷ್ಟು ಅಭಿವೃದ್ಧಿ ಮಾಡುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಅದನ್ನು ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದ್ದು ನಮ್ಮ ಸರ್ಕಾರ. ಸರ್ಕಾರದ ವತಿಯಿಂದ 33 ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಜಯಂತಿಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿರುವ ಬಗ್ಗೆ  ಅಭಿಮಾನ, ಗೌರವವಿದೆ. ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಕೃಷ್ಣ ಜಯಂತಿ, ಮಹಾವೀರ ಜಯಂತಿ, ವಾಮನ ಜಯಂತಿ ಸೇರಿದಂತೆ ಮುಖ್ಯವಾದ ಜಯಂತಿಗಳ ಆಚರಣೆಯನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ.

ಕೆಂಪೇಗೌಡರ ಆಡಳಿತ ಜನಪರವಾಗಿದ್ದು, ಅವರನ್ನು ನೆನೆದು ಸ್ಪೂರ್ತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಕೆಂಪೇಗೌಡರ ಬಗ್ಗೆ ಅಗಾಧ ಗೌರವವನ್ನು ಇಟ್ಟುಕೊಂಡಿದ್ದು, ಅವರ ಆಡಳಿತದ  ವೈಖರಿ ನಮ್ಮೆಲ್ಲರಿಗೂ ಸ್ಪೂರ್ತಿ. ಎಲಾ ಜಾತಿಗಳಿಗೂ ಸಾಮಾಜಿಕ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು.

ಪ್ರಶಸ್ತಿಗೆ ಭಾಜನವಾಗಿದೆ ಸಂಸ್ಥೆಗಳಿಗೆ ಅಭಿನಂದನೆ :

ಐಐಎಸ್ಸಿ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮೈಸೂರು ಸೋಪ್ಸ್ ಅಂಡ್ ಡಿಟಜೆಂಟ್ಸ್  ಸಂಸ್ಥೆ ಪ್ರಶಸ್ತಿಗೆ ಭಾಜನವಾಗಿದೆ. ಈ ಸಂಸ್ಥೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಮುಖ್ಯಮಂತ್ರಿಗಳು ಅಭಿನಂದಿಸಿದರು.

ಕೆಂಪೇಗೌಡ  ಭವನಕ್ಕೆ ಶಂಕುಸ್ಥಾಪನೆ :

ಕಳೆದ ಸಚಿವ ಸಂಪುಟದಲ್ಲಿ  ತೀರ್ಮಾನಿಸಿ ಸುಮನಹಳ್ಳಿ ವೃತ್ತದಲ್ಲಿ ಕೆಂಪೇಗೌಡ ಭವನವನ್ನು ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆದಷ್ಟೂ ಶೀಘ್ರವಾಗಿ ಕಟ್ಟಡವನ್ನು ನಿರ್ಮಾಣ ಮಾಡಿ ತಾವೇ ಉದ್ಘಾಟಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಕೆಂಪೇಗೌಡರು ಹುಟ್ಟಿದ್ದು ಒಕ್ಕಲಿಗರಾಗಿ, ಬದುಕು ನಡೆಸಿದ್ದು ವಿಶ್ವಮಾನವರಾಗಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಹುಟ್ಟಿದಾಗ ಭೂಮಿ ಮೇಲಿರುತ್ತೇವೆ. ಸತ್ತಾಗ ಭೂಮಿ ಕೆಳಗಿರುತ್ತೇವೆ. ಆದರೆ ನಮ್ಮ ಸಾಧನೆಗಳು ಮೇಲಿರುತ್ತವೆ. ಅದೇ ರೀತಿ ಕೆಂಪೇಗೌಡರ ಸಾಧನೆಗಳು ಶಾಶ್ವತ. ಕೆಂಪೇಗೌಡರು ಹುಟ್ಟಿದ್ದು ಒಕ್ಕಲಿಗರಾಗಿ ಆದರೆ ಬದುಕು ನಡೆಸಿದ್ದು, ಸಮಾಜಕ್ಕೆ ಸಂದೇಶ ನೀಡಿದ್ದು ವಿಶ್ವಮಾನವರಾಗಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ವಿಶ್ವದೆಲ್ಲೆಡೆ ಬೆಂಗಳೂರಿನ ಕೀರ್ತಿ ಹರಡಿದೆ. ಈ ನಗರದ ಅಭಿವೃದ್ಧಿಗೆ ಕೆಂಪೇಗೌಡರೇ ಸ್ಫೂರ್ತಿ ಎಂಬುದನ್ನು ನಾವು ಮರೆಯಬಾರದು. 500 ವರ್ಷಗಳ ಹಿಂದೆಯೇ ಮಾದರಿ ಆಡಳಿತಕ್ಕೆ ಅಡಿಪಾಯ ಹಾಕಿದವರು. ಎಲ್ಲಾ ಜಾತಿ, ಧರ್ಮಗಳಿಗೆ ಅವಕಾಶ ನೀಡಿ ಸಮಾಜಕ್ಕೆ ಸಂದೇಶ ನೀಡಿದವರು ಎಂದು ತಿಳಿಸಿದರು.

ನಮ್ಮ ಸಮುದಾಯದವರಿಗೆ ಒಂದು ಸಂದೇಶ ನೀಡಲು ಬಯಸುತ್ತೇನೆ. ನಾವುಗಳು ಯಾರೂ ಸಹ ಇಂತಹದ್ದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ರಾಜಕೀಯದಲ್ಲಿ ಧರ್ಮ ಇರಬೇಕೆ ಹೊರತು, ಧರ್ಮದಲ್ಲಿ ರಾಜಕೀಯ ಇರಬಾರದು ಎನ್ನುವ ಮಾತನ್ನು ಮರೆಯಬಾರದು. ಕೆಂಪೇಗೌಡರು ಎಲ್ಲಾ ಸಮುದಾಯಕ್ಕೆ ಸೇರಿದವರು. ಇವರು ನಾಡಿನ ಆಸ್ತಿ, ಎಲ್ಲಾ ಸಮಾಜದ ಆಸ್ತಿ ಎಂದು ಹೇಳಿದರು.

ಬೆಂಗಳೂರು ನಗರದ ಅಭಿವೃದ್ಧಿ ತುಂಬಾ ಸರಳವಾದ ಕೆಲಸವಲ್ಲ. ಇಲ್ಲಿನ ಜನಸಂಖ್ಯೆ, ವಾಹನಗಳ ಸಂಖ್ಯೆ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಹೊಸ ರೂಪ ನೀಡಬೇಕು ಎಂದು ನಾನು ಸಚಿವನಾದ ದಿನದಿಂದ ಪ್ರಯತ್ನ ಮಾಡುತ್ತಿದ್ದೇನೆ. ಸುಮಾರು 40 ಕಿಲೋ ಮೀಟರ್ ನಷ್ಟು ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ರೂ. 17 ಸಾವಿರ ಕೋಟಿ ವೆಚ್ಚದಲ್ಲಿ ಟೆಂಡರ್‍ಗೆ ಸಿದ್ಧತೆ ಮಾಡುತ್ತಿದ್ದೇವೆ. 118 ಕಿ.ಮೀ ಮೇಲ್ಸೇತುವೆ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದೇವೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸುಮಾರು 1 ಲಕ್ಷ ಕೋಟಿ ಮೊತ್ತದ ಯೋಜನೆಗಳಿಗೆ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ. ಮನೆ ಬಾಗಿಲಿಗೆ ‘ನಂಬಿಕೆ ನಕ್ಷೆʼ ಎನ್ನುವ ಯೋಜನೆ ತಲುಪಿಸುತ್ತಿದ್ದೇವೆ. ಸುಮಾರು 25 ಲಕ್ಷ ಆಸ್ತಿ ದಾಖಲೆಗಳನ್ನು ಡಿಜೀಟಲೀಕರಣ ಮಾಡಿ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲಾಗುತ್ತಿದೆ. ಕೃಷ್ಣ ಭೈರೇಗೌಡರ ಕ್ಷೇತ್ರದಲ್ಲಿ ಪ್ರಾಯೋಗಿಕ ಕೆಲಸ ನಡೆಯುತ್ತಿದೆ ಎಂದರು.

60 ಸಾವಿರ ಪ್ರೇಕ್ಷಕರ ಸ್ಥಳಾವಕಾಶದ ನೂತನ ಸ್ಟೇಡಿಯಂ ನಿರ್ಮಾಣ:

ನಗರದಲ್ಲಿ ಕಸದ ಮಾಫಿಯಾವನ್ನು ತಡೆಗಟ್ಟಲು ಪ್ರಯತ್ನ ಮಾಡಲಾಗುತ್ತಿದೆ. ನಗರದಲ್ಲಿ ಏನೂ ಕೊರತೆಯಾಗದಂತೆ ಯೋಜನೆ ರೂಪಿಸಲಾಗುತ್ತಿದೆ. 60 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವಂತಹ ನೂತನ ಸ್ಟೇಡಿಯಂ ನಿರ್ಮಾಣ ಮಾಡಲಾಗುವುದು ಇದಕ್ಕಾಗಿ 50 ಎಕರೆ ಜಾಗ ಗುರುತಿಸಲಾಗಿದೆ. ಕಾವೇರಿ 5ನೇ ಹಂತದ ಯೋಜನೆ ಪೂರ್ಣಗೊಳಿಸಿ 110 ಹಳ್ಳಿಗಳಿಗೆ ನೀರು ನೀಡುತ್ತಿದ್ದೇವೆ. 6ನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗೆ ಬೇಕಾದಷ್ಟು ಶ್ರಮ ಪಡುತ್ತಿದ್ದೇವೆ. ಸಿಕ್ಕಿರುವ ಅವಕಾಶದಲ್ಲಿ ಸಾಕ್ಷಿಗುಡ್ಡೆ ನಿರ್ಮಾಣ ಮಾಡಲಾಗುವುದು ಎಂದರು.

ನಾವು ಮೂರು ‘ಕೆʼಗಳನ್ನು ಮರೆಯಬಾರದು ಬೆಂಗಳೂರು ಕಟ್ಟಿದ ಕೆಂಪೇಗೌಡರು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಅವರು, ವಿಕಾಸ ಸೌಧ ಕಟ್ಟಿದ ಎಸ್.ಎಂ.ಕೃಷ್ಣ ಅವರು. ಬೆಂಗಳೂರು ಎಲ್ಲರಿಗೂ ಸೇರಿದ್ದು ಎಂದು ಹೇಳಿದರು.

ಕೆಂಪೇಗೌಡರ ಭವನ ನಿರ್ಮಾಣಕ್ಕೆ ಐದು ಎಕರೆ ಜಮೀನನ್ನು ಒಂದೇ ವಾರದಲ್ಲಿ ಕ್ಯಾಬಿನೆಟ್ ಮುಂದೆ ತಂದು ಒಪ್ಪಿಗೆ ಪಡೆಯಲಾಯಿತು. ಸಮಾಜಕಲ್ಯಾಣ ಇಲಾಖೆಗೆ ಸೇರಿದ ಜಾಗವನ್ನು ಸಚಿವರಾದ ಮಹದೇವಪ್ಪ ಅವರಿಂದ ಒಪ್ಪಿಗೆ ಪಡೆದು ಈಗ ಭವ್ಯ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸುಮನಹಳ್ಳಿಯಲ್ಲಿ ಮೆಟ್ರೋ ಮಾರ್ಗ ಕೂಡ ಹಾದು ಹೋಗಲಿದೆ ಎಂದು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 100 ಕೋಟಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ಕೂಡ ನಿರ್ಮಾಣ ಮಾಡಲಾಗುತ್ತಿದೆ. ಕೆಂಪೇಗೌಡರ ಹೆಸರಿನಲ್ಲಿ ಭವ್ಯ ಕಟ್ಟಡ ನಿರ್ಮಾಣಕ್ಕೆ ಜಿಬಿಸಿಯಿಂದ 100 ಕೋಟಿ ಮೀಸಲಿಟ್ಟಿದ್ದೇವೆ. ಮೂರ್ನಾಲ್ಕು ಜನ ಕಟ್ಟಡ ವಾಸ್ತುಶಿಲ್ಪಿಗಳು ವಿನ್ಯಾಸ ನೀಡಿದ್ದಾರೆ. ಇದರ ಬಗ್ಗೆ ನಿರ್ಮಲಾನಂದನಾಥ ಶ್ರೀಗಳ ಗಮನಕ್ಕೂ ತರಲಾಗುವುದು ಎಂದರು.

ಕೆಂಪೇಗೌಡರ ಹೆಸರಿನಲ್ಲಿ ಇರುವ ನಮ್ಮ ವಿಮಾನ ನಿಲ್ದಾಣ ವಿಶ್ವಕ್ಕೆ ಮಾದರಿ. ಕೆಂಪೇಗೌಡರ ಹೆಸರಿನಲ್ಲಿ ಸ್ಥಾಪನ ಮಾಡಿ ಅವರ ಹೆಸರನ್ನು ಉಳಿಸಿದ್ದೇವೆ. ಕೆಂಪೇಗೌಡರ ಹೆಸರಿನಲ್ಲಿ ಸಂಘಸಂಸ್ಥೆಗಳಿಗೆ ಪ್ರಶಸ್ತಿ ನೀಡುವ ವೇಳೆ ನಾನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೂ ನೀಡಿ ಎಂದು ಹೇಳಿದ್ದೆ. ಅದರಂತೆ ಅವರನ್ನು ಅಭಿನಂದಿಸಲಾಗಿದೆ ಎಂದು ತಿಳಿಸಿದರು.

ಈ ಹಿಂದೆ ನಾನು ಇಂಧನ ಸಚಿವನಾಗಿದ್ದಾಗ ಕೆಂಪೇಗೌಡರ ಜಯಂತಿಯ ಬಗ್ಗೆ ರೂಪುರೇಸೆಗಳನ್ನು ತಯಾರಿಸಲಾಯಿತು. ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿವರಿಗೆ ಕೆಂಪೇಗೌಡರ ಜನನದ ದಿನಾಂಕದ ಬಗ್ಗೆ ಇರುವ ಗೊಂದಲವನ್ನು ತಿಳಿಸಿದಾಗ ಅವರು ಜೂನ್ 27 ಎಂದು ಸೂಚನೆ ನೀಡಿದರು. ಈ ವಿಚಾರವನ್ನು ಸಾರ್ವಜನಿಕವಾಗಿ ಪ್ರಕಟಣೆ ಮಾಡಿ ಕೆಂಪೇಗೌಡರ ಜಯಂತಿಗೆ ಮುನ್ನುಡಿ ಬರೆಯಲಾಯಿತು. ಕೆಂಪೇಗೌಡರ ಜಯಂತಿ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಬಾರದು ಇಡೀ ರಾಜ್ಯದೆಲ್ಲೆಡೆ ಆಚರಿಸುವಂತಾಗಬೇಕು ಎಂಬುದು ನಮ್ಮ ಅಭಿಲಾಸೆಯಾಗಿತ್ತು. ಬಿಬಿಎಂಪಿಯಿಂದ ಜಯಂತಿ ಆಚರಣೆಗೆ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಸುತ್ತೂರು ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದ ಸ್ವಾಮೀಜಿ, ಶ್ರೀ ಸ್ಪತಿಕಪುಟಿ ಮಹಾಸಂಸ್ಥಾನದ ಪೀಠಾಧ್ಯಕ್ಷ ರಾದ ನಂಜಾವಧೂತ ಸ್ವಾಮೀಜಿ, ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by