ಕನ್ನಡ ನಾಡು | Kannada Naadu

ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯೋತ್ಸವ: ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ಗೌರವಪೂರ್ಣ ನಮನ ಸಮರ್ಪಣೆ

27 Jun, 2025

 

ಬೆಂಗಳೂರು : ಸರ್ವಶ್ರೇಷ್ಠ ದಾರ್ಶನಿಕ, ಅಪ್ರತಿಮ ಆಡಳಿತಗಾರ, ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಅವರ ದೂರದೃಷ್ಟಿಯುಳ್ಳ ಕ್ರಾಂತಿಕಾರಕ ಆಡಳಿತ ವೈಖರಿಯಿಂದ ಇಂದು ಬೆಂಗಳೂರು ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಸಂದೇಶದಲ್ಲಿ ಬಣ್ಣಿಸಿದ್ದಾರೆ.

ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಉತ್ಸವದ ಅಂಗವಾಗಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ಹಂಪಿಯ ವೈಭವ ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಟಿಯಿಂದ ನಿರ್ಮಿಸಿರುವ ಬೆಂಗಳೂರು ನಗರ ಇಂದು ಬಹುವಾಗಿ ಬೆಳೆದು ಜಾಗತಿಕ ನಕ್ಷೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಕೆಂಪೇಗೌಡರು ನಿರ್ಮಿಸಿರುವ ಕೆರೆಗಳು, ದೇವಾಲಯಗಳು, ಕೋಟೆ ಕೊತ್ತಲಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ. ಬೆಂದಕಾಳೂರು ಎಂಬ ನಾಮದಿಂದ ಕರೆಯುತ್ತಿದ್ದ ನಗರ ಇಂದು ಬೆಂಗಳೂರು ನಗರವಾಗಿ ರೂಪುಗೊಂಡಿದ್ದು, ಕೆಂಪೇಗೌಡರ ದೂರದೃಷ್ಟಿಯ ಫಲ ಎಂದು ಶ್ರೀ ಬಸವರಾಜ ಹೊರಟ್ಟಿ ಅಭಿಮಾನದಿಂದ ತಿಳಿಸಿದರು.

ಕೆಂಪೇಗೌಡರ ಬದುಕು, ಹೋರಾಟ ಅವರ ದೂರದೃಷ್ಟಿಯುಳ್ಳ ಪರಿಣಾಮಕಾರಿ ಆಡಳಿತ ಇಂದಿಗೂ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಹ ಕೆಂಪೇಗೌಡರ ಅನುಯಾಯಿಯಾಗಿದ್ದು, ಅವರಿಂದ ಪ್ರೇರಣೆ ಪಡೆದು ಕೆಂಪೇಗೌಡರ ಕನಸಿನ ಬೆಂಗಳೂರು ನಗರದ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ, ಕೆಂಪೇಗೌಡರ ಹೆಸರನ್ನು ಸ್ವತಃ ತಮ್ಮ ಮಗನಿಗೆ ನಾಮಕರಣ ಮಾಡಿರುವ ಡಿ.ಕೆ. ಶಿವಕುಮಾರ್, ಕೆಂಪೇಗೌಡರ ಬಗೆಗೆ ತಮಗಿರುವ ಭಕ್ತಿ, ಶ್ರದ್ದೆ ಹಾಗೂ ಬದ್ಧತೆಯನ್ನು ಸಾಕ್ಷೀಕರಿಸಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಮಾನ ವ್ಯಕ್ತಪಡಿಸಿದರು.

ಸಾವಿರ ಕೆರೆಗಳ ನಾಡು ಎಂದು ಖ್ಯಾತಿ ಪಡೆದಿರುವ ಬೆಂಗಳೂರನ್ನು ವ್ಯವಸ್ಥಿತ ನಗರವನ್ನಾಗಿ ಬೆಳೆಸುವ ಕನಸು ಹೊತ್ತಿದ್ದ ಕೆಂಪೇಗೌಡರ ದೂರದರ್ಶಿತ್ವ ಇಂದು ನಮಗೆಲ್ಲರಿಗೂ ಮೇಲ್ಪಂಕ್ತಿಯಾಗಿದ್ದು ಕೆಂಪೇಗೌಡರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ, ಬೆಂಗಳೂರಿನ ಸೌಂದರ್ಯವನ್ನು ಉಳಿಸಿ ಅಚ್ಚುಕಟ್ಟಾಗಿ ಬೆಳೆಸುವ ಮೂಲಕ ಕೆಂಪೇಗೌಡರ ಕನಸನ್ನು ನನಸನ್ನಾಗಿಸುವುದು ನಾವೆಲ್ಲರೂ ನಾಡಪ್ರಭುಗಳಿಗೆ ಸಲ್ಲಿಸುವ ನೈಜ ಗೌರವವಾಗಿದೆ. ಈ ನಿಟ್ಟಿನಲ್ಲಿ ಇಂದಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಮುಂದಡಿ ಇಟ್ಟಿದ್ದಾರೆ ಎನ್ನುವ ವಿಶ್ವಾಸ ನನ್ನದಾಗಿದೆ ಎಂದು ಬಸವರಾಜ ಹೊರಟ್ಟಿ ನುಡಿದರು.

 

Publisher: ಕನ್ನಡ ನಾಡು | Kannada Naadu

Login to Give your comment
Powered by