ಕನ್ನಡ ನಾಡು | Kannada Naadu

ನನ್ನ ಪಾತ್ರ ಇರುವುದು ಸಾಬೀತಾದ್ರೆ ಖುದ್ದು ರಾಜೀನಾಮೆ ನೀಡುವುದಾಗಿ ಹೇಳಿದ ಸಚಿವ ಜಮೀರ್ ಅಹಮದ್

24 Jun, 2025

ಬೆಂಗಳೂರು : ಬಡವರಿಗೆ ಕೊಡುವ ಮನೆಗೆ ಹಣ ಪಡೆದು ಬದುಕುವ ದರಿದ್ರ ನನಗೆ ಬಂದಿಲ್ಲ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬಡವರಿಗೆ ಮನೆ ಹಂಚಿಕೆ ಮಾಡಲು ನಾನು ಹಣ ಪಡೆದಿರುವುದು ಸಾಬೀತು ಮಾಡಿದರೆ ಬೇರೆಯವರು ಕೇಳುವುದು ಬೇಡ ನಾನೇ ಸ್ವಯಂ ಪ್ರೇರಿತವಾಗಿ ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳಿದ್ದಾರೆ.

ಬಡವರ ಮನೆಗೆ ಹಣ ಪಡೆಯುವುದು ಅಕ್ಷಮ್ಯ ಅಪರಾಧ. ಅದಕ್ಕೆ ನಮ್ಮ ಇಲಾಖೆ ಯಲ್ಲಿ ಅವಕಾಶ ಇಲ್ಲ. ಹಿರಿಯ ಶಾಸಕರಾದ ಬಿ. ಆರ್. ಪಾಟೀಲ್ ಅವರು ಮಾಡಿರುವ ಆರೋಪ ಸಂಬಂಧ ತನಿಖೆ ಗೆ ಆದೇಶಿಸಲಾಗುವುದು.ತನಿಖೆ ನಂತರ ಯಾರಾದರೂ ತಪ್ಪು ಮಾಡಿದ್ದರೆ ಕಠಿಣ ಕ್ರಮ ಕೈಗೊಳ್ಳ ಲಾಗುವುದು. ಬಿ. ಆರ್. ಪಾಟೀಲರ ಜತೆಯೂ ಮಾತನಾಡುತ್ತೇನೆ ಎಂದು ತಿಳಿಸಿದರು.

   ಬಿ. ಆರ್. ಪಾಟೀಲ್ ಅವರು ಸಹ ಸಚಿವರು ಹಣ ಪಡೆದಿದ್ದಾರೆ ಎಂದು ಹೇಳಿಲ್ಲ. ಅಧಿಕಾರಿಗಳ ಹೆಸರು ಸಹ ಹೇಳಿಲ್ಲ. ಪಂಚಾಯಿತಿಯಲ್ಲಿ ಯಾರಾದರೂ ಹಣ ಪಡೆದಿದ್ದರೆ ಮಾಹಿತಿ ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿಯವರಿಗೂ ಈ ವಿಚಾರದ ಬಗ್ಗೆ ಎಲ್ಲ ಮಾಹಿತಿ ತಿಳಿಸಿದ್ದೇನೆ. ನಾನು ಪ್ರವಾಸ ದಲ್ಲಿ ಇದ್ದ ಕಾರಣ ಮಾತನಾಡಲು ಸಾಧ್ಯವಾಗಿರಲಿಲ್ಲ. ಇದೀಗ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ರಾಜೀನಾಮೆ ಗೆ ಆಗ್ರಹ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರಿಗೆ ವಾಸ್ತವ ಬಗ್ಗೆ ಮಾಹಿತಿ ಇಲ್ಲ. ಮನೆ ಹಂಚಿಕೆ ವಿಚಾರದಲ್ಲಿ ನಮ್ಮ ಪಾತ್ರವೇ ಇರುವುದಿಲ್ಲ. ಫಲಾನುಭವಿ ಆಯ್ಕೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತದೆ. ಶಾಸಕರ ಪತ್ರದ ಆಧಾರದಲ್ಲೇ ಮನೆ ಹಂಚಿಕೆ ಮಾಡಲಾಗುವುದು. ಆಳಂದ ಕ್ಷೇತ್ರಕ್ಕೂ ಬಿ. ಆರ್. ಪಾಟೀಲ್ ಅವರ ಪತ್ರದ ಆಧಾರದಲ್ಲೇ ಮೆನೆಗಳನ್ನು ನೀಡಲಾಗಿದೆ. 950 ಮನೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by