ಕನ್ನಡ ನಾಡು | Kannada Naadu

ಡಿಜಿಟಲ್ ಮಾಧ್ಯಮ ಲೋಕದ ಭೀಷ್ಮ ಎಂದೇ ಪ್ರಸಿದ್ಧಿ ಪಡೆದ ಹಿರಿಯ ಪತ್ರಕರ್ತ ಎಸ್‌ ಕೆ ಶ್ಯಾಮ ಸುಂದರ್ ವಿಧಿವಶ

15 Apr, 2025

ಬೆಂಗಳೂರು :  ಕನ್ನಡ ಮಾಧ್ಯಮ ಲೋಕದ ಹಿರಿಯ ಪತ್ರಕರ್ತ, ಡಿಜಿಟಲ್ ಸುದ್ದಿ ಮಾಧ್ಯಮದ ದಿಗ್ಗಜ ಎಸ್‌ ಕೆ ಶ್ಯಾಮ ಸುಂದರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 72 ವರ್ಷದ ಶ್ಯಾಮ್ ಸುಂದರ್ ಏಷ್ಯಾನೆಟ್ ಸುವರ್ಣನ್ಯೂಸ್, ಒನ್ ಇಂಡಿಯಾ ಸೇರಿದಂತೆ ಹಲವಾರು ಡಿಜಿಟಲ್‌ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದ ಶ್ಯಾಮ ಸುಂದರ್‌ ಅವರು  ಕನ್ನಡ ಪತ್ರಿಕೋದ್ಯಮದಲ್ಲಿ ಸರಿಸುಮಾರು 39 ವರ್ಷಗಳಿಗೂ ಅಧಿಕ ಅನುಭವ ಹೊಂದಿದ್ದರು.  ಶ್ಯಾಮ್ ಸುಂದರ್ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಹಿರಿಯ ಹಾಗೂ ಖ್ಯಾತ ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ. 

ಕಳೆದ ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲಿದ ಶ್ಯಾಮ್ ಸುಂದರ್ ಬೆಂಗಳೂರಿನ ದಿಗ್ವಿಶ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆರೋಗ್ಯ ಕ್ಷೀಣಿಸಿ ಕೋಮಾಗೆ ತಲುಪಿದ್ದರು. ನಿರಂತ ಚಿಕಿತ್ಸೆ ಬಳಿಕವೂ ಎಸ್‌ ಕೆ ಶ್ಯಾಮ ಸುಂದರ್ ಚೇತರಿಸಿಕೊಂಡಿರಲಿಲ್ಲ. ಚಿಕಿತ್ಸೆ ನಡುವೆ ಹೃದಯಾಘಾತದಿಂದ ಶ್ಯಾಮ್ ಸುಂದರ್ ನಿಧನರಾಗಿದ್ದಾರೆ.  
ಕನ್ನಡದಲ್ಲಿ ಡಿಜಿಟಲ್ ಮಾಧ್ಯಮ ಜಗತ್ತು ಕಣ್ಣು ಬಿಡುವ ವೇಳೆ ಶ್ಯಾಮ್ ಸುಂದರ್ ತಮ್ಮ ಅನುಭವ, ಹೊಸತನವನ್ನು ಸ್ವೀಕರಿಸುವ ಹಾಗೂ ಅದಕ್ಕೆ ಒಗ್ಗಿ ಕೊಳ್ಳುವ ವಿಶೇಷ ಗುಣಗಳಿಂದ ಕನ್ನಡ ಡಿಜಿಟಲ್ ಮಾಧ್ಯಮವನ್ನು ಹೆಮ್ಮರವಾಗಿ ಬೆಳೆದಿದ್ದರು. 

ದಿನಪತ್ರಿಕೆಯಲ್ಲಿ ವರದಿಗಾರನಾಗಿ ಪತ್ರಿಕೋದ್ಯಮ ಆರಂಭಿಸಿದ ಶ್ಯಾಮ್ ಸುಂದರ್ ಬಳಿಕ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಸಂಪಾದಕರಾಗಿ ಬೆಳೆದಿದ್ದರು.  ಏಷ್ಯನ್ ಕಾಲೇಜು ಆಫ್ ಬೆಂಗಳೂರಿನಲ್ಲೂ ಕೆಲಸ ಮಾಡಿದ್ದಾರೆ. ಶ್ಯಾಮ್ ಸುಂದರ್ ಪದವಿ ಬಳಿಕ ನೇರವಾಗಿ ಪತ್ರಿಕೆ ಮೂಲಕ ಕೆಲಸ ಆರಂಭಿಸಿದ್ದರು. ಕನ್ನಡ ಸುದ್ದಿ ಮಾಧ್ಯಮ ಜಗತ್ತಿನಲ್ಲಿ ಶ್ಯಾಮ್ ಸುಂದರ್ ಅವರಿಗೆ ಅಪಾರ ಶಿಷ್ಯ ವರ್ಗವಿದೆ. ಕನ್ನಡ ಡಿಜಿಟಲ್ ಮಾಧ್ಯಮದಲ್ಲಿರುವ ಅನೇಕರು ಎಸ್‌ ಕೆ ಶ್ಯಾಮ್ ಸುಂದರ್ ಮಾರ್ಗದರ್ಶನದಲ್ಲಿ ಪಳಗಿದವರು. 

2012-13ರ ಸಾಲಿನಲ್ಲಿ ಶ್ಯಾಮ್ ಸುಂದರ್ ಕರ್ನಾಟಕ ಮಾಧ್ಯಮ ಅಕಾಡಮೆ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇದರ ಜೊತೆಗೆ ಹಲವು ಪ್ರಶಸ್ತಿಗಳು ಎಸ್‌ ಕೆ ಶ್ಯಾಮ್ ಸುಂದರ್ ಅವರನ್ನು ಅರಸಿ ಬಂದಿದೆ. ಸರಳ ವ್ಯಕ್ತಿತ್ವ, ಖಡಕ್ ಮಾತು, ಕೆಲಸದಲ್ಲಿ ಶ್ರದ್ಧೆ, ಡಿಜಿಟಲ್ ಮಾಧ್ಯಮದ ಎಲ್ಲಾ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದ ಎಸ್‌ ಕೆ ಶ್ಯಾಮ್ ಸುಂದರ್ ಇನ್ನು ನೆನಪು ಮಾತ್ರ.

ಶ್ಯಾಮ್ ಸುಂದರ್ ನಿಧನಕ್ಕೆ ಹಲವು ಹಿರಿಯ ಪತ್ರಕರ್ತರು, ಸಂಪಾದಕರು ಸಂತಾಪ ಸೂಚಿಸಿದ್ದಾರೆ. ಎಸ್.ಕೆ. ಶ್ಯಾಮಸುಂದರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, "ಹಿರಿಯ ಪತ್ರಕರ್ತ ಎಸ್.ಕೆ. ಶ್ಯಾಮಸುಂದರ್ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಬರಹವನ್ನೇ ಬದುಕಾಗಿಸಿಕೊಂಡಿದ್ದ ಶ್ಯಾಮಸುಂದರ್ ಅವರು ಸುದೀರ್ಘಕಾಲ ಪತ್ರಕರ್ತರಾಗಿ ದುಡಿದವರು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ." ಎಂದಿದ್ದಾರೆ.

 

Publisher: ಕನ್ನಡ ನಾಡು | Kannada Naadu

Login to Give your comment
Powered by